-ಡಾ. ವೈ.ಎಸ್. ಗಾಯತ್ರೀ
ವಾಲ್ಮೀಕಿಗಿರಿಸಂಭೂತಾ ರಾಮಸಾಗರಗಾಮಿನೀ |
ಪುನಾತು ಭುವನಂ ಪುಣ್ಯಾ ರಾಮಾಯಣಮಹಾನದೀ ||
"ವಾಲ್ಮೀಕಿ ಎಂಬ ಪರ್ವತದಲ್ಲಿ ಜನಿಸಿ, ರಾಮನೆಂಬ ಸಾಗರದೆಡೆಗೆ ಸಾಗುತ್ತಿರುವ ರಾಮಾಯಣವೆಂಬ ಪುಣ್ಯಕರವಾದ ಮಹಾನದಿಯು ಸಕಲ ಪ್ರಪಂಚವನ್ನು ಪಾವನಗೊಳಿಸಲಿ."
ರಾಮಾಯಣವು ಇಂದಿಗೂ ಜೀವಂತವಾಗಿ ಪ್ರಚಲಿತವಾಗಿರಲು ಕಾರಣವೆಂದರೆ ಅದು ನಮ್ಮ ದೈನಂದಿನ ಜೀವನಕ್ಕೆ ಬಹಳ ಹತ್ತಿರವಾಗಿರುವುದು; ಅದರಲ್ಲೂ. ನಮ್ಮ ಮನಸ್ಸಿನ ಭಾವನೆಗಳ ಪ್ರತಿಬಿಂಬವನ್ನು ಯಾವುದೋ ಒಂದು ಪಾತ್ರದಲ್ಲಿ ನಾವು ಕಾಣತ್ತೇವೆ. ಇಂದಿನ ಸಮಾಜದ ಜಿಜ್ಞಾಸೆಗೆ ಈ ಕಾವ್ಯದ ಯಾವುದೋ ಒಂದು ಘಟನೆ ಉತ್ತರವಾಗಿರುತ್ತದೆ. ಇಲ್ಲಿನ ಪಾತ್ರಗಳೆಲ್ಲವೂ ಪವಿತ್ರ; ಒಂದೊಂದೂ ಆದರ್ಶಪ್ರಾಯ; ಎಲ್ಲ ಕಾಲದಲ್ಲೂ ಅನುಸರಿಸಲು ಯೋಗ್ಯ. ಆದ ಕಾರಣ ಭಾಸ, ಕಾಳಿದಾಸ, ಕುಮಾರದಾಸ, ಭವಭೂತಿ, ರಾಜಶೇಖರ, ಮುಂತಾದ ಅನೇಕ ಮಹಾಕವಿಗಳು ಇದನ್ನು ಆಧಾರವಾಗಿರಿಸಿಕೊಂಡು ತಮ್ಮ ತಮ್ಮ ಕಾವ್ಯಗಳನ್ನು ರಚನೆ ಮಾಡಿ, ರಾಮಾಯಣಕ್ಕೆ, ತನ್ಮೂಲಕ ಅದರ ಕರ್ತೃವಾದ ವಾಲ್ಮೀಕಿಮಹರ್ಷಿಗಳಿಗೆ ಚಿರಋಣಿಗಳಾಗಿದ್ದಾರೆ.
ಕಾಳಿದಾಸ ಕಾಲಘಟ್ಟ ಕಂಡ ಒಬ್ಬ ಅದ್ಭುತ ಕವಿ. ಅವನ ಚಿಂತನಾಶೈಲಿ, ಕಾವ್ಯರಚನಾ ಸಾಮರ್ಥ್ಯ, ಅವನಿಗೆ ಅನೇಕಶಾಸ್ತ್ರಗಳಲ್ಲಿದ್ದಂತಹ ಅಪರಿಮಿತ ಪಾಂಡಿತ್ಯ, ಅವನಿಗೆ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿದ್ದ ಶ್ರದ್ಧಾಗೌರವಗಳು, ಜೀವನ ಮೌಲ್ಯಗಳ ಪಾಲನೆಯಲ್ಲಿ ಅವನಿಗಿದ್ದ ಬದ್ಧತೆ, ಇವೆಲ್ಲವೂ ಅವನಿಗೆ "ಕವಿಕುಲಗುರುʼʼ ಎನ್ನುವ ಪ್ರಸಿದ್ಧಿಯನ್ನು ತಂದುಕೊಟ್ಟಿವೆ. "ರಘುವಂಶʼʼ ಮಹಾಕಾವ್ಯವು ರಾಮಾಯಣವನ್ನು ಆಧರಿಸಿ ರಚಿತವಾಗಿರುವಂತಹುದು.
ಕವಿಯು 19 ಸರ್ಗಗಳಲ್ಲಿ ರವಿಕುಲದ 21 ರಾಜರ ಚರಿತ್ರೆಯನ್ನು ನಮ್ಮ ಮುಂದೆ ವಿವರಿಸುತ್ತಾ ಹೋಗುತ್ತಾನೆ. ಮೋದಲ 9 ಸರ್ಗಗಳಲ್ಲಿ ಶ್ರೀರಾಮನ ಪೂರ್ವಜರ ಚರಿತ್ರೆಯನ್ನೂ, 10ರಿಂದ - 15ನೆಯ ಸರ್ಗದವರೆಗೆ ರಾಮಕಥೆಯನ್ನೂ, ನಂತರದ ನಾಲ್ಕು ಸರ್ಗಗಳಲ್ಲಿ ರಾಮನ ನಂತರದ ರಾಜರ ವಿವರಗಳನ್ನು ಕಾಣಬಹುದು.
ಶಿವಪಾರ್ವತಿಯರನ್ನು ನಮಿಸಿ ಕವಿಯು ರಘುವಂಶದ ರಾಜರ ಸಾಮಾನ್ಯಗುಣಗಳನ್ನು ವರ್ಣಿಸುವನು. ಪ್ರಥಮ ಸರ್ಗದ ಐದು ಶ್ಲೋಕಗಳು ಈ ರಾಜರ ವರ್ಣನೆಗೆ ಮುಡಿಪಾಗಿವೆ. ಸೂರ್ಯವಂಶದ ಎಲ್ಲ ರಾಜರೂ ಜನ್ಮತಃ ಶುದ್ಧರಾಗಿರುವವರು, ಎಂದರೆ ತ್ರಿಕರಣ ಶುದ್ಧಿಯುಳ್ಳವರು; ತಾವು ಕೈಗೊಂಡ ಕಾರ್ಯ ಸಮರ್ಪಕವಾಗಿ ಫಲಿಸುವವರೆಗೂ ಅದನ್ನು ಬಿಡದವರು, ಎಂದರೆ ತಾವು ಹಿಡಿದ ಕಾರ್ಯವನ್ನು ಸಾಧಿಸುವವರು; ಸಮುದ್ರಪರ್ಯಂತ ಭೂಮಿಯನ್ನು ತಮ್ಮ ಆಳ್ವಿಕೆಗೆ ಒಳಪಡಿಸಿದವರು, ಎಂದರೆ ಭುಜಬಲ ಪರಾಕ್ರಮಿಗಳು; ಸ್ವರ್ಗದವರೆಗೂ ರಥವನ್ನು ಕೊಂಡೊಯ್ಯುತ್ತಿದ್ದವರು, ಪರಾಕ್ರಮಿಗಳಾದ ಕಾರಣದಿಂದಲೇ ಇಂದ್ರನಿಗೆ ದೇವಾಸುರ ಯುದ್ಧದಲ್ಲಿ ಸಹಾಯಕರಾಗಿ ನಿಲ್ಲುತ್ತಿದ್ದುದು; ಪ್ರತಿನಿತ್ಯವೂ ವಿಧಿಪೂರ್ವಕವಾಗಿ ಅಗ್ನಿಯ ಆರಾಧನೆಯನ್ನು ಮಾಡುತ್ತಿದ್ದವರು; ಬೇಡಿ ಬಂದವರಿಗೆ ಅವರ ಇಷ್ಟಾರ್ಥಗಳನ್ನು ಪೂರೈಸುತ್ತಿದ್ದವರು; ಅಪರಾಧಕ್ಕೆ ತಕ್ಕ ದಂಡನೆಯನ್ನು ವಿಧಿಸುತ್ತಿದ್ದವರು; ಸಮಯಕ್ಕೆ ಸರಿಯಾಗಿ ಜಾಗರೂಕರಾಗಿರುತ್ತಿದ್ದವರು; ತ್ಯಾಗ ಮಾಡಲೆಂದೇ ಸಂಪತ್ತನ್ನು ಕೂಡಿಡುತ್ತಿದ್ದವರು; ತಮ್ಮ ಸ್ವಾರ್ಥಕ್ಕಾಗಿ ಅಲ್ಲ; ಸತ್ಯಕ್ಕಾಗಿಯೇ ಮಿತಭಾಷಿಗಳಾಗಿದ್ದವರು; ಕೀರ್ತಿಗಾಗಿ ಜಯವನ್ನು ಆಶಿಸುತ್ತಿದ್ದವರು; ತಮ್ಮ ವಂಶಾಭಿವೃದ್ಧಿಗಾಗಿಯೇ ಗೃಹಸ್ಥಾಶ್ರಮವನ್ನು ಸ್ವೀಕರಿಸುತ್ತಿದ್ದವರು; ಬಾಲ್ಯದಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದವರು; ಯೌವನದಲ್ಲಿ ವಿಷಯ ಸುಖಗಳನ್ನು ಅನುಭವಿಸುತ್ತಿದ್ದವರು; ವಾರ್ಧಕ್ಯದಲ್ಲಿ ವನಕ್ಕೆ ತೆರಳಿ ಅಲ್ಲಿ ಮುನಿವೃತ್ತಿಯನ್ನು ಕೈಗೊಳ್ಳುತ್ತಿದ್ದವರು; ಕೊನೆಯಲ್ಲಿ ಯೋಗಮಾರ್ಗದಿಂದ ದೇಹ ತ್ಯಾಗ ಮಾಡುತ್ತಿದ್ದವರು; ಇಂತಹ ಅಪರಿಮಿತ ಸದ್ಗುಣಗಳ ಗಣಗಳುಳ್ಳ ರಘುವಂಶದ ರಾಜರ ಚರಿತ್ರೆಯನ್ನು ವರ್ಣಿಸುತ್ತೇನೆ ಎನ್ನುತ್ತಾನೆ ಕಾಳಿದಾಸ.
ಸೂರ್ಯನಿಂದ ಪ್ರಾರಂಭವಾದ ಈ ವಂಶವೆಲ್ಲಿ? ಅಲ್ಪಮತಿಯಾದ ನಾನೆಲ್ಲಿ? ನನ್ನ ಈ ಪ್ರಯತ್ನ ಒಂದು ಸಣ್ನ ದೋಣಿಯ ಮೂಲಕ ಸಮುದ್ರವನ್ನು ದಾಟುವಂತಿದೆ. ಕವಿಯಾಗಬೇಕೆಂಬ ಕೀರ್ತಿಯ ಅಭಿಲಾಷೆಯನ್ನು ಹೊಂದಿರುವ ನಾನು. ಉದ್ದವಾಗಿರುವ ಮನುಷ್ಯರ ಮೂಲಕ ಪಡೆಯಬಹುದಾದ ಎತ್ತರದಲ್ಲಿರುವ ಹಣ್ಣಿಗೆ ಕುಳ್ಳನಾದ ವ್ಯಕ್ತಿಯು ಲೋಭದಿಂದ ಕೈ ಮೇಲೆತ್ತಿದಂತೆ ನಗೆಗೀಡಗುತ್ತೇನೆ ಎಂಬುದು ನನಗೆ ತಿಳಿದಿರುವ ವಿಷಯವೇ. ಆದರೂ ಈ ರಾಜರ ಸದ್ಗುಣಗಳಿಂದ ಪ್ರೇರಿತನಾದ ನನಗೆ ಅವರ ವಂಶಾವಳಿಯನ್ನು ವಿವರಿಸಬೇಕೆಂಬ ಚಪಲ ಎನ್ನುತ್ತಾನೆ.
ಇಲ್ಲಿ ನಾವು ಗಮನಿಸಲೇಬೇಕಾದ ಎರಡು ಅಂಶಗಳಿವೆ. ಇನ್ನೊಬ್ಬರ ತಪ್ಪನ್ನೇ ಬೆಟ್ಟು ಮಾಟಿ ತೋರಿಸುತ್ತ, ಅವರನ್ನು ದೂಷಿಸುತ್ತಿರುವ ಇಂದಿನ ಸಮಾಜವು, ಇತರರ ಸದ್ಗುಣಗಳನ್ನೂ ಕಂಡು, ಅವುಗಳನ್ನು ಪ್ರಶಂಸಿಸುವುದಷ್ಟೇ ಅಲ್ಲದೆ, ಅದರಲ್ಲಿ ಒಂದೆರೆಡನ್ನಾದರೂ ನಮ್ಮ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು.
ಇನ್ನೊಂದು ಅಂಶವೆಂದರೆ ನಾಲ್ಕಕ್ಷರ ಕಲಿತರೆ, ನನ್ನ ಸಮಾನವಾದ ಪಂಡಿತನಿಲ್ಲ ಎಂದು ಮೆರೆಯುವ ಜನಕ್ಕೆ ಆದರ್ಶಪ್ರಾಯವಾದುದು ಕಾಳಿದಾಸನ ನಮ್ರತೆ; ವಿನಯ. ಇದನ್ನು ನಾವು ಕಲಿಯಲೇಬೇಕು.
ಹತ್ತನೆಯ ಸರ್ಗದಿಂದ ರಾಮಕಥೆಯ ಪರಾರಂಭವಾಗುತ್ತದೆ. ಬಹುವರ್ಷಗಳ ಕಾಲ ಸಂತಾನ ಭಾಗ್ಯಕಾಣದ ದಶರಥ ಮಹಾರಾಜನು ಋಷ್ಯಶೃಂಗ ಮಹರ್ಷಿಗಳ ನೇತೃತ್ವದಲ್ಲಿ ಪುತ್ರಕಾಮೇಷ್ಟಿಯಾಗವನ್ನು ಪ್ರಾರಂಭಿಸುತ್ತಾನೆ. ಅದೇ ಸಮಯದಲ್ಲಿ ರಾವಣನ ದುಷ್ಕೃತ್ಯಗಳಿಂದ ಬೇಸತ್ತು, ಭಯಭೀತರಾಗಿದ್ದ ದೇವತೆಗಳು ಒಂದುಗೂಡಿ, ವಿಷ್ಣುವಿನ ಬಳಿಸಾರಿ, ಯೋಗನಿದ್ರೆಯಲ್ಲಿದ್ದ ಅವನನ್ನು ಎಚ್ಚರಗೊಳಿಸಿ ಈ ರೀತಿ ಸ್ತುತಿಸುತ್ತಾರೆ–
ಅಮೇಯೋ ಮಿತಲೋಕಸ್ತ್ವಂ ಅನರ್ಥೀ ಪ್ರಾರ್ಥನಾವಹಃ |
ಅಜಿತೋ ಜಿಷ್ಣುರತ್ಯಂತಂ ಅವ್ಯಕ್ತೋ ವ್ಯಕ್ತಕಾರಣಂ ||
(ರಘುವಂಶ ೧೦/೧೮)
ಹೇ ವಿಷ್ಣುವೇ, ನೀನು ಅಮೇಯನಾದರೂ, ಪ್ರಪಂಚವನ್ನು ಅಳೆಯುವವನು, ನೀನು ಸ್ವತಃ ನಿಃಸ್ಪೃಹನಾದರೂ, ಪ್ರಾರ್ಥಿಸದಿದ್ದರೂ, ಬೇರೆಯವರ ಕಾಮನೆಗಳನ್ನು ಪೂರೈಸುವವನು, ನೀನು ಯಾರಿಂದಲೂ ಗೆಲ್ಲಲ್ಪಡದಿದ್ದರೂ ಎಲ್ಲವನ್ನೂ ಗೆದ್ದವನು, ನೀನು ಸ್ವತಃ ಅವ್ಯಕ್ತನಾದರೂ, ಸೂಕ್ಷ್ಮ ರೂಪನಾದರೂ ಸ್ಥೂಲರೂಪಕ್ಕೆ ಕಾರಣನಾದವನು.
ಹೀಗೆ ಅನೇಕ ವಿಧವಾಗಿ ಸ್ತುತಿಸಿದ ದೇವತೆಗಳಿಗೆ ಪ್ರಸನ್ನನಾಗಿ, ತಾನು ಭೂಲೋಕದಲ್ಲಿ ದಶರಥನ ಸುತನಾಗಿ ಜನಿಸಿ, ರಾವಣನ ತಲೆಯನ್ನು ತನ್ನ ಬಾಣಗಳಿಗೆ ಆಹುತಿ ತೆಗೆದುಕೊಳ್ಳುತ್ತೇನೆಂದು ಅವರನ್ನು ಸಮಾಧಾನ ಪಡಿಸಿ, ನಿರ್ಭೀತರಾಗಿಯೂ, ನಿಶ್ಚಿಂತರಾಗಿಯೂ ಇರುವಂತೆ ಅವರಿಗೆ ಅಭಯವನ್ನು ನೀಡುತ್ತಾನೆ. ಸಂತುಷ್ಟರಾದ ದೇವತೆಗಳು ತಮ್ಮ ತಮ್ಮ ಸ್ಥಾನಗಳಿಗೆ ಮರಳುತ್ತಾರೆ.
ಇತ್ತ ಪುತ್ರ ಕಾಮೇಷ್ಟಿಯಾಗದಲ್ಲಿ ದಶರಥನ ಯಾಗಾಚರಣೆಯಿಂದ ಸಂತುಷ್ಟಗೊಂಡ ಯಜ್ಞಪುರುಷನು, ಅಗ್ನಿಯ ಮಧ್ಯದಿಂದ ಬಂದು ದಶರಥನಿಗೆ ಒಂದು ಪಾಯಸದ ಪಾತ್ರೆಯನ್ನು ನೀಡಿ, ಅದನ್ನು ಅವನ ರಾಣಿಯರಿಗೆ ಕೊಡುವಂತೆ ಆಜ್ಞಾಪಿಸಿ, ಅಂತರ್ಧಾನನಾಗುತ್ತಾನೆ. ಅದನ್ನು ಸ್ವೀಕರಿಸಿದ ರಾಣಿಯರು ಗರ್ಭವತಿಯರಾಗಿ ಸುಮುಹೂರ್ತದಲ್ಲಿ ತಮ್ಮ ಮಕ್ಕಳಿಗೆ ಜನ್ಮ ನೀಡುತ್ತಾರೆ. ಹೀಗೆ ಪಟ್ಟದರಾಣಿಯಾದ ಕೌಸಲ್ಯೆಯಲ್ಲಿ ರಾಮನೂ, ಕೈಕಯಿಯ ಉದರದಲ್ಲಿ ಭರತನೂ, ಸುಮಿತ್ರೆಯು ಲಕ್ಷ್ಮಣ– ಶತ್ರುಘ್ನರಿಗೂ ಕ್ರಮವಾಗಿ ಜನ್ಮ ನೀಡುತ್ತಾರೆ.
ಈ ಪುತ್ರರತ್ನಗಳ ಜನನದಿಂದ ಪ್ರಪಂಚವೆಲ್ಲವೂ ದೋಷರಹಿತವಾಗಿ ಸದ್ಗುಣಗಳಿಂದ ತುಂಬಿಹೋಯಿತು ಎನ್ನತ್ತಾನೆ ಕವಿ; ಕಾರಣ ಇಲ್ಲಿ ಜನ್ಮವೆತ್ತಿರುವುದು ದೋಷರಹಿತನಾದ, ಗುಣಪರಿಪೂರ್ಣನಾದ ಮಹಾವಿಷ್ಣುವೇ ಅಲ್ಲವೇ?
ನಿರ್ದೋಷಂ ಅಭವತ್ ಸರ್ವಂ ಆವಿಷ್ಕೃತಗುಣಂ ಜಗತ್ |
ಅನ್ವಗಾದಿವ ಹಿ ಸ್ವರ್ಗೋ ಗಾಂ ಗತಂ ಪುರುಷೊತ್ತಮಂ ||
(ರಘುವಂಶ ೧೦/೭೨)
ಇವರೆಲ್ಲರ ಜನನದಿಂದ ಸಮಸ್ತ ಭೂಮಂಡಲವು ಸಂಪೂರ್ಣವಾಗಿ ದೋಷರಹಿತವಾಯಿತು. ಗುಣಗಳ ಬೀಡಾಯಿತು. ಪುರುಷೋತ್ತಮನಾದ ಮಹಾವಿಷ್ಣುವೇ ಭೂಮಿಯಲ್ಲಿ ಅವತರಿಸರಬೇಕಾದರೆ ಅವನನ್ನು ಬಿಟ್ಟು ಸ್ವರ್ಗವಿರಲು ಸಾಧ್ಯವೇ? ಅದೂ ಸಹ ಅವನನ್ನನುಸರಿಸಿ ಭೂಲೋಕವನ್ನು ಸೇರಿತು. ಎಂದರೆ, ದಶರಥನ ರಾಜ್ಯವು ಸಂತಸ, ಸಂಪತ್ತು, ಸಮೃದ್ಧಿಗಳಿಂದ ಸ್ವರ್ಗದಂತೆ ಕಂಗೊಳಿಸುತ್ತಿದ್ದಿತು.
ಅವರಿಗೆ ಮಾಡಲೇಬೇಕಾದ ಜಾತಕರ್ಮಾದಿ ಸಂಸ್ಕಾರಗಳನ್ನು ನಡೆಸಿದ ನಂತರ ದಶರಥ ಮಹಾರಾಜನು ಅವರ ವಿದ್ಯಾಭ್ಯಾಸಕ್ಕಾಗಿ ಅವರನ್ನು ಗುರುಕುಲಕ್ಕೆ ಕಳುಹಿಸಿದನು.ಅಗ್ನಿಯ ತೇಜಸ್ಸು ಆಜ್ಯಾದಿ ಹವಿಸ್ಸಿನಿಂದ ಉಜ್ವಲಗೊಳ್ಳುವಂತೆ, ಮೊದಲೇ ವಿನಯವಂತರಾಗಿದ್ದ ಆ ರಾಜಕುಮಾರರ ವಿನಯವು ಉತ್ತಮ ಶಿಕ್ಷಣದಿಂದ ಮತ್ತಷ್ಟು ಹೆಚ್ಚಾಯಿತು.
ಈ ಅಂಶಕ್ಕೆ ಇಂದಿನ ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚು ಒತ್ತು ಕೊಡಬೇಕೆಂಬುದು ನನ್ನ ಅನಿಸಿಕೆ. ವಿದ್ಯಾರ್ಥಿಗಳು ತಮ್ಮನ್ನು ಹೆಚ್ಚು ಹೆಚ್ಚು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು; ಕಾರಣ ʼಅಭ್ಯಾಸಾನುಸಾರಿಣೀ ವಿದ್ಯಾʼ ಅಲ್ಲವೇ? ವಿದ್ಯೆ ಹೆಚ್ಚಿದಷ್ಟೂ ಅವರ ವಿನಯವೂ ಹೆಚ್ಚಾಗಬೇಕು. ಇಲ್ಲದಿದ್ದರೆ ಅದು ವಿದ್ಯಾಭ್ಯಾಸವೇ ಅಲ್ಲ ಎಂಬುದು ಕವಿಯ ಅಭಿಪ್ರಾಯ.
ವಿಶ್ವಾಮಿತ್ರರು ತಮ್ಮ ಯಾಗರಕ್ಷಣೆಗಾಗಿ ದಶರಥನ ಅಪ್ಪಣೆ ಪಡೆದು ರಾಮಲಕ್ಷ್ಮಣರನ್ನು ತಮ್ಮೊಡನೆ ಕರೆದೊಯ್ದರು. ದಾರಿಯಲ್ಲಿ ಪ್ರಜೆಗಳಿಗೆ ತೊಂದರೆ ಕೊಡುತ್ತಿದ್ದ ತಾಟಕಿಯ ಸಂಹಾರವಾಯಿತು. ಅವರಿಗೆ ಮಾರ್ಗಾಯಾಸವಾಗದಂತೆ, ಇತಿಹಾಸದ ಕಥೆಗಳನ್ನು ತಿಳಿಸುತ್ತ, ಅವರನ್ನು ಮನರಂಜಿಸುತ್ತ, ಅವರೊಡನೆ ತಮ್ಮ ಆಶ್ರಮದತ್ತ ತೆರಳಿದರು. ನಮ್ಮ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಕೊಡಬೇಕೆಂಬ ವಾಲ್ಮೀಕಿಗಳ ಧ್ಯೇಯವನ್ನು ಕಾಳಿದಾಸನೂ ಎತ್ತಿ ಹಿಡಿದಿರುವನು. ಇದು ಇಂದಿನ ಹಿರಿಯರಿಗೆ ಮಾರ್ಗದರ್ಶಕವಾಗಬೇಕು. ರಾಮಲಕ್ಷ್ಮಣರು ಮಾರೀಚ- ಸುಬಾಹುಗಳನ್ನು ದಂಡಿಸಿ, ವಿಶ್ವಾಮಿತ್ರರ ಯಾಗವನ್ನು ರಕ್ಷಣೆಮಾಡಿದಂತೆ, ಇಂದಿನ ಯುವಪೀಳಿಗೆಯು ಸಾಮಾಜಿಕ ತೊಡಕುಗಳನ್ನು ದೂರಮಾಡಿ, ಪ್ರಜಾರಕ್ಷಣೆಗೆ ಕೈಜೋಡಿಸಬೇಕೆಂಬ ಸಂದೇಶವನ್ನುಈರ್ವರು ಕವಿಗಳೂ ನೀಡುತ್ತಿರುವರು.
ನಂತರ ಮಿಥಿಲೆಯಲ್ಲಿ ಸೀತಾಸ್ವಯಂವರದಲ್ಲಿ ಶಿವಧನುಸ್ಸಿನ ಪರೀಕ್ಷೆಯಲ್ಲಿ ಜಯಳಿಸಿದ ಶ್ರೀರಾಮನಿಗೆ ಜನಕ ಮಹಾರಾಜನು ತನ್ನ ಮಗಳಾದ ಸೀತೆಯನ್ನು ಒಪ್ಪಿಸುತ್ತಾನೆ. ಕವಿಯು ಜನಕನಿಗೆ ʼಸತ್ಯ ಪ್ರತಿಜ್ಞʼ ಎಂಬ ವಿಶೇಷಣವನ್ನು ಬಳಸುತ್ತಾನೆ. ಇದು ಇಂದು ರಾಜಕೀಯ ಕ್ಷೇತ್ರದಲ್ಲಿ ಇರುವವರೆಲ್ಲರಿಗೂ ಮೇಲ್ಪಂಙ್ಕ್ತಿಯಾಗಬೇಕು.
ದಾಂಪತ್ಯ ಜೀವನ ಹೇಗಿರಬೇಕೆಂಬುದನ್ನು ಕಾಳಿದಾಸನ ಪದಗಳಲ್ಲಿ ಕೇಳೋಣವೆ?
ಸೀತಾ-ರಾಮ, ಊರ್ಮಿಳೆ -ಲಕ್ಷ್ಮಣ, ಮಾಂಡವಿ-ಭರತ, ಶ್ರುತಕೀರ್ತಿ- ಶತ್ರುಘ್ನರ ವಿವಾಹ ನೆರವೇರಿತು. ಈ ರಾಜಕುಮಾರ, ರಾಜಕುಮಾರಿಯರು ಒಬ್ಬರನ್ನೊಬ್ಬರು ಪದೆದ ಕಾರಣ ಧನ್ಯತೆಯನ್ನು ಅನುಭವಿಸಿದರು. ಅದಕೆ ಕವಿ ಕೊಡುವ ಉಪಮೆಯನ್ನು ನೋಡಿ- ಶಬ್ದಗಳ ಮೂಲರೂಪದಲ್ಲಿ ಪ್ರತ್ಯಯಗಳು ಬೇರೆ ಬೇರೆ ಆಗಿದ್ದಾಗ ಅವು ಯಾವುದಾದರೂ ವಾಚಾರ್ಥವನ್ನು ಹೇಳಲು ಅಸಮರ್ಥವಾದಾಗ ನಿರರ್ಥಕವಾದಂತೆ ಭಾಸವಾಗುತ್ತದೆ. ಅಂತೆಯೇ ಅವೆರಡೂ ಸೇರಿದಾಗ ಸಾರ್ಥಕವಾಗುತ್ತದೆಯೋ ಅಂತೆಯೇ ಆ ವಧೂವರರ ಮಿಲನವಾಯಿತು ಎನ್ನುತ್ತಾನೆ ಕವಿ. ಇಂದಿನ ದಂಪತಿಗಳಿಗೆ ಇದಕ್ಕಿಂತಲೂ ಉತ್ತಮವಾದ ಕಿವಿ ಮಾತು ಬೇಕಿಲ್ಲ. ಅಲ್ಲವೆ?
ಹೀಗೆ ಕಾವ್ಯದುದ್ದಕ್ಕೂ ಕವಿಯು ತನ್ನ ಕಥಾ ನಿರೂಪಣಾ, ಚಾತುರ್ಯವನ್ನೂ ಜೊತೆ ಜೊತೆಗೇ ಇಂದಿನ ಸಮಾಜಕ್ಕೆ ಎಲ್ಲ ಕ್ಷೇತ್ರಗಳಲ್ಲೂ ಯಾವ ಯಾವ ಮೌಲ್ಯಗಳನ್ನು ಅನುಸರಿಸಬೇಕೆಂಬುದನ್ನೂ ತೋರಿಕೊಟ್ಟಿದ್ದಾನೆ. ಅದರಲ್ಲಿ ಒಂದಂಶವನ್ನಾದರೂ ನಮ್ಮ ಜೀವನದಲ್ಲಿ ನಾವು ಪಾಲಿಸಿಕೊಂಡು ಬಂದರೆ ಅದು ನಾವು ಆ ಮಹಾಕವಿಗೆ ತೋರುವ ಗೌರವ ಎಂಬುದು ನನ್ನ ಅಭಿಮತ.
-ಡಾ. ವೈ. ಎಸ್. ಗಾಯತ್ರಿ
*****
ಡಾ. ವೈ. ಎಸ್. ಗಾಯತ್ರಿ ಅವರು ಸಂಸ್ಕೃತದಲ್ಲಿ ಖ್ಯಾತ ವಿದ್ವಾಂಸರು. ಸಂಸ್ಕೃತ ವಿದ್ವಾಂಸರ ಕುಟುಂಬದಿಂದ ಬಂದಿರುವ ಅವರು ವಿದ್ವತ್, ಎಂಎ ಮತ್ತು ಪಿಎಚ್‌ಡಿ ಪಡೆದಿದ್ದಾರೆ. ಬೆಂಗಳೂರಿನ ಶ್ರೀ ಬಾಲಾಜಿ ಪಿಯು ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕಿಯಾಗಿ 31 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಅವರು ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವುದರಿಂದ ಅವರು ಸಂಸ್ಕೃತ ಭಾರತಿ, ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕ, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ, ನಾದ ವೇದ ಅಧ್ಯಯನ ಕೇಂದ್ರ ಮತ್ತು ಇತರ ಅನೇಕ ಎನ್‌ಜಿಒಗಳ ಭಾಗವಾಗಿದ್ದಾರೆ. ಅವರು ಸಾರ್ವಜನಿಕರಿಗಾಗಿ 20 ಕ್ಕೂ ಹೆಚ್ಚು ಸಂಸ್ಕೃತ ಸಂಭಾಷಣ ಶಿಬಿರಗಳನ್ನು ನಡೆಸಿದ್ದಾರೆ. ಅವರು ವಿವಿಧ ಸ್ಥಳಗಳಲ್ಲಿ ಸಂಸ್ಕೃತ ಸಾಹಿತ್ಯ ಮತ್ತು ಭಾರತೀಯ ಸಂಸ್ಕೃತಿಯ ಕ್ಷೇತ್ರಗಳಲ್ಲಿ ಅನೇಕ ಸಾರ್ವಜನಿಕ ಉಪನ್ಯಾಸಗಳನ್ನು ನೀಡಿದ್ದಾರೆ. ಅವರು ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ವೇದ ಗಣಿತ, ಭಾರತೀಯ ಗಣಿತ ಮತ್ತು ಭಾರತೀಯ ವೈಜ್ಞಾನಿಕ ಪರಂಪರೆಯ ಇತರ ಕ್ಷೇತ್ರಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಅವರು ಸಂಸ್ಕೃತದ ವೈಜ್ಞಾನಿಕ ಸಾಹಿತ್ಯದ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಅವರು ನಮ್ಮ ಸಂಸ್ಕೃತಿ ಮತ್ತು ಸಂಸ್ಕೃತ ಸಾಹಿತ್ಯದ ವಿವಿಧ ಆಯಾಮಗಳಿಗೆ ಸಂಬಂಧಿಸಿದಂತೆ ಬಾಗಿಲು ದರ್ಶನದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರು ಪ್ರಾಚೀನ ಭಾರತದಲ್ಲಿ ಭಾರತೀಯ ಸಂಸ್ಕೃತಿ, ಭಾರತೀಯ ಗಣಿತ, ವಿಜ್ಞಾನ ಮತ್ತು ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಸ್ಕೃತ ಮತ್ತು ಹಿಂದಿ ಭಾಷೆಗಳಿಂದ ಕನ್ನಡ, ಇಂಗ್ಲಿಷ್ ಮತ್ತು ಪ್ರತಿಯಾಗಿ ಭಾಷಾಂತರಿಸುವ ಮೂಲಕ ಸಮಾಜವು ಅವಳನ್ನು ಉತ್ತಮ ಅನುವಾದಕಿ ಎಂದು ಗುರುತಿಸಿದೆ. ಅವರು 2018-2022 ರಿಂದ ರಾಮಯ್ಯ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಮತ್ತು 2023 ರಲ್ಲಿ ಚಿತ್ರ ಕಲಾ ಪರಿಷತ್ತಿಗೆ ಕೆಲಸ ಮಾಡಿದ್ದಾರೆ. ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸೆಮಿನಾರ್‌ಗಳನ್ನು ಆಯೋಜಿಸಿದ್ದಾರೆ ಮತ್ತು ಜ್ಞಾನ ವ್ಯವಸ್ಥೆಯ ಹಲವು ಕ್ಷೇತ್ರಗಳಲ್ಲಿ 50 ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರು ಭಾರತೀಯ ವೈಜ್ಞಾನಿಕ ಪರಂಪರೆಯ ಕ್ಷೇತ್ರದಲ್ಲಿ ಅಕ್ಷರ ಎಂಬ ಹೆಸರಿನ ಕನ್ನಡದಲ್ಲಿ ಇ-ಪತ್ರಿಕೆಗೆ ನಿಯಮಿತವಾಗಿ ಕೊಡುಗೆ ನೀಡುತ್ತಿದ್ದಾರೆ. ಅವರು ಪಾಲಿ-ಕನ್ನಡ ಕೋಶ ಯೋಜನೆಯಲ್ಲಿ ಸಂಪಾದಕೀಯ ಸಮಿತಿಯ ಸದಸ್ಯರಾಗಿದ್ದಾರೆ. ಅವರು ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಭೌತಶಾಸ್ತ್ರದ ಕುರಿತು NIVS ಸಹಯೋಗದೊಂದಿಗೆ YouTube ನಲ್ಲಿ ಉಪನ್ಯಾಸಗಳ ಸರಣಿಯನ್ನು ನೀಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ