ಶ್ರೀರಾಮ ಕಥಾ ಲೇಖನ ಅಭಿಯಾನ-110: ರಾಮಾಯಣದಲ್ಲಿ ಕಂಡುಬರುವ ಮಹಾವಾಕ್ಯಗಳು

Upayuktha
0

 ಡಾ. ವಿ ರಂಗನಾಥ್ 

ರಾಮಾಯಣ ಈ ದೇಶದ ಅಸ್ಮಿತೆ. ರಾಮಾಯಣವನ್ನು ಶ್ರದ್ಧೆಯಿಂದ ಓದುವವರು ತಪ್ಪುಗಳನ್ನು ಮಾಡಲು ಸಾಧ್ಯವಿಲ್ಲ ಹಾಗೂ ಅವರಲ್ಲಿ ಕೆಟ್ಟ ವಿಚಾರಗಳೂ ಕಂಡುಬರುವುದಿಲ್ಲ. ಇಡೀ ಜೀವನಕ್ಕೆ ದಿಕ್ಕು ತೋರಬಹುದಾದಂತಹ ಅನೇಕ ಪಾತ್ರಗಳು ಹಾಗೂ ಮಹಾವಾಕ್ಯಗಳು ಅಲ್ಲಿ ಕಂಡುಬರುತ್ತವೆ. ಒಂದೊAದು ವಾಕ್ಯವೂ ಪಾತ್ರದ ಗೌರವ ಹೆಚ್ಚಿಸುವುದಲ್ಲದೆ, ನಮ್ಮ ಜೀವನಕ್ಕೂ ಅವು ಮಾರ್ಗದರ್ಶಕವಾಗುತ್ತವೆ. ಅಂತಹ ಕೆಲವು ವಾಕ್ಯಗಳು ಕೆಳಕಂಡಂತಿವೆ.


1. ಯದ್ಯಪಿ ಏಷಾ ಮಮಪ್ರೀತಿರ್ಹಿತಮನ್ಯದ್ವಿಚಿಂತ್ಯತಾಮ್

ಅನ್ಯಾಮಧ್ಯಸ್ಥ ಚಿಂತಾತು ವಿಮರ್ದಾಭ್ಯದಿಕೋದಯಾ||


 ದಶರಥ ಮಹಾರಾಜನು ತನ್ನ ಮಗ ಶ್ರೀರಾಮಚಂದ್ರನಿಗೆ ರಾಜ್ಯಾಭಿಷೇಕ ಮಾಡುವುದೆಂದು ನಿಶ್ಚಯಿಸುತ್ತಾನೆ. ಅದನ್ನು ತನ್ನ ಮಂತ್ರಿಮಂಡಳದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದಾಗ ಎಲ್ಲರೂ ಅದನ್ನು ಸಂತಸದಿಂದ ಒಪ್ಪುತ್ತಾರೆ. ಆದರೆ ತನ್ನ ಈ ನಿರ್ಣಯವನ್ನು ತನ್ನ ಪ್ರಜೆಗಳು ಹೇಗೆ ಸ್ವೀಕರಿಸುತ್ತಾರೆ? ಎಂಬುದನ್ನು ಅರಿಯಲು ದಶರಥ ಬಯಸುತ್ತಾನೆ. ಇದನ್ನು ಪ್ರಜಾಪ್ರಭುತ್ವದ ಸೊಬಗು ಎಂದು ಹೇಳಬಹುದು. ರಾಜನಿಗೆ ಅಧಿಕಾರವಿದೆ, ರಾಜನ ಬಗ್ಗೆ ಜನರಿಗೆ ಒಲವಿದೆ, ಗೌರವವಿದೆ, ರಾಜನ ಮಾತನ್ನು ತೆಗೆದು ಹಾಕುವವರು ಯಾರೂ ಇಲ್ಲ ಎಂಬಂತಹ ಸಂದರ್ಭದಲ್ಲೂ ತನ್ನ ಪ್ರಜೆಗಳು ಏನು ಹೇಳುತ್ತಾರೆ ಎಂದು ತಿಳಿಯಲು ದಶರಥ ಬಯಸುತ್ತಾನೆ. ರಾಮನ ಪಟ್ಟಭಿಷೇಕದ ವಿಚಾರ ನನಗೆ ಹೆಚ್ಚು ಪ್ರಿಯಕರವಾದ ವಿಚಾರವಾದರೂ, ಎಲ್ಲರ ಹಿತಕ್ಕಾಗಿ ಬೇರೆ ಯಾವುದಾದರೂ ಸಂಗತಿ ಇದ್ದರೆ ನೀವು ಯೋಚಿಸಿ ಹೇಳಿ. ಏಕೆಂದರೆ ಮಧ್ಯಸ್ಥರ ವಿಚಾರ ಏಕಪಕ್ಷೀಯವಾಗಿರದೆ, ಅದು ವಿಲಕ್ಷಣವೂ ಆಗಬಹುದು. ಆದ್ದರಿಂದ ಪ್ರಜಾ ಅಭಿಪ್ರಾಯ ಸೂಕ್ತವಾದುದು ಎಂದು ಹೇಳುತ್ತಾನೆ. ಇದು ನಿಜವಾದ ಅರ್ಥದ ಪ್ರಜಾಪ್ರಭುತ್ವ ಮನೋಭಾವ ಎಂದು ಹೇಳಬಹುದು.


2. ಯಸ್ತ್ವಯಾ ಸಹಸ ಸ್ವರ್ಗೋ ನಿರಯೋ ಯಸ್ತ್ವಯಾ ವಿನಾ

ಇತಿ ಜಾನಾನ್ ಪರಾಂಪ್ರೀತಿಂ ಗಚ್ಛರಾಮ ಮಯಾಸಹ||


 ಶ್ರೀರಾಮನು ತಂದೆಯ ಮಾತಿನಂತೆ ವನವಾಸಕ್ಕೆ ಹೊರಡಲು ತಯಾರಾಗುತ್ತಾನೆ. ತಂದೆಯ ಮಾತಿನಂತೆ ತಾನೊಬ್ಬನೇ ವನವಾಸಕ್ಕೆ ಹೋಗುವ ಇಚ್ಛೆ ಅವನದು. ಆದರೆ ಸೀತೆಯೂ ಅವನೊಡನೆ ವನವಾಸಕ್ಕೆ ಹೊರಟು ನಿಂತಾಗ ರಾಮ ಬೇಡ ಎನ್ನುತ್ತಾನೆ. ತಂದೆಯ ಅಜ್ಞೆ ತನಗೆ ಮಾತ್ರ ಅನ್ವಯವಾಗುವಂತಹುದು. ಸೀತೆಯಾದರೋ ರಾಜಕುಮಾರಿ. ಆಕೆಗೆ ಏಕೆ ವನವಾಸದ ಶಿಕ್ಷೆ? ಆದ್ದರಿಂದ ಸೀತೆಯನ್ನು ತಡೆಯಲು ರಾಮನು ಬಯಸಿದಾಗ ಸೀತೆ ಹೇಳುವ ಮಾತುಗಳಿವು. 'ನಿಮ್ಮ ಜೊತೆಯಲ್ಲಿ ಇರುವುದೇ ನನಗೆ ಸ್ವರ್ಗ ಸಮಾನ. ನೀವು ಇಲ್ಲದಿರುವ ಸ್ಥಾನವು ನನಗೆ ನರಕವೆನಿಸುತ್ತದೆ. ಶ್ರೀರಾಮಾ! ನನ್ನ ಈ ನಿಶ್ಚಯವನ್ನು ತಿಳಿದು ನನ್ನನ್ನು ಕರೆದುಕೊಂಡು ವನವಾಸಕ್ಕೆ ತೆರಳಬೇಕು. ಅಲ್ಲಿ ನಾನು ಸಂತೋಷದಿಂದ ಇರುತ್ತೇನೆ' ಎನ್ನುತ್ತಾಳೆ. ಸತಿಯಾದವಳಿಗೆ ಪತಿಯೊಡನೆ ಇರುವುದೇ ಸ್ವರ್ಗ ಎಂದು ಭಾವಿಸಿದ ಈ ರೀತಿ ಅನನ್ಯವಾದುದು. ಪತಿಯಿಲ್ಲದ ಅರಮನೆಯಲ್ಲಿ ಎಲ್ಲ ರೀತಿಯ ವೈಭೋಗವೂ ತೃಣಸಮಾನ. ಆದ್ದರಿಂದ ಅದೆಂತಹ ಕಷ್ಟವಾದರೂ ಪತಿಯೊಡನೇ ಇರಬೇಕು ಎಂಬ ಈ ಮಾತುಗಳು ಇಂದಿಗೂ ಪ್ರಸ್ತುತ ಎನಿಸುತ್ತದೆ. 


3. ರಾಮಂ ದಶರಥಂವಿದ್ಧಿ ಮಾಂ ವಿದ್ಧಿ ಜನಕಾತ್ಮಜಮ್

ಅಯೋಧ್ಯಂ ಅಟವೀಂ ವಿದ್ಧಿ ಗಚ್ಛತಾತ ಯಥಾಸುಖಮ್ ||


 ವನವಾಸಕ್ಕೆ ಹೊರಟ ಶ್ರೀರಾಮನೊಂದಿಗೆ ತಾನೂ ಹೋಗುವುದಾಗಿ ಲಕ್ಷ್ಮಣ ತೀರ್ಮಾನಿಸುತ್ತಾನೆ. ಇದನ್ನು ಮೊದಲು ತಾಯಿ ಸುಮಿತ್ರೆಯ ಬಳಿ ಪ್ರಸ್ತಾಪಿಸುತ್ತಾನೆ. ಅಣ್ಣ ರಾಮನೊಡನೆ ಹೋಗಲು ಅನುಮತಿ ಕೊಡಿ ಎಂದು ಕೇಳಿಕೊಳ್ಳುತ್ತಾನೆ. ಆಗ ತಾಯಿ ಸುಮಿತ್ರೆ ಹೇಳುವ ಮಾತುಗಳಿವು. ಮಗು ಲಕ್ಷ್ಮಣ! ಶ್ರೀರಾಮನನ್ನೇ ತಂದೆ ದಶರಥನೆಂದು ತಿಳಿ. ಜನಕ ನಂದಿನಿ ಸೀತೆಯನ್ನು ನಿನ್ನ ತಾಯಿ ಎಂದು ತಿಳಿ. ವನವನ್ನೇ ಅಯೋಧ್ಯೆ ಎಂದು ತಿಳಿ. ಈಗ ಸಮಾಧಾನದಿಂದ ಇಲ್ಲಿಂದ ಹೊರಡು ಎನ್ನುತ್ತಾಳೆ. ರಾಮನೊಡನೆ ಲಕ್ಷ್ಮಣ ಇರುವುದು ಸೂಕ್ತ ಎಂದು ಭಾವಿಸಿದ ತಾಯಿ ಮರು ಮಾತಿಲ್ಲದೇ ಒಪ್ಪಿಗೆ ಸೂಚಿಸುತ್ತಾಳೆ, ಅಲ್ಲದೆ ಲಕ್ಷ್ಮಣನಿಗೆ ಮೇಲ್ಕಂಡಂತೆ ತಿಳಿಸುತ್ತಾಳೆ.


4. ಅಭಿಮಾನಂ ಚ ಮಾನಂ ಚ ತ್ಯಕ್ತ್ವಾ ವರ್ತಸ್ವ ಮಾತೃಷು

ಅನುರಾಜಾನಮಾ ಮಾರ್ಯಂ ಚ ಕೈಕೇಯಿಮಂಬ ಕಾರಯ ||

 ಶ್ರೀರಾಮನು ತಂದೆಯ ಅಣತಿಯಂತೆ ವನವಾಸಕ್ಕೆ ಹೊರಡುತ್ತಾನೆ. ತಾಯ್ನಾಡಿಗೆ ಬಂದ ಭರತನಿಗೆ ರಾಮನ ವನವಾಸದ ಕಥೆಯ ಅರಿವಾಗಿ ದುಃಖಿಸುತ್ತಾನೆ. ಇದಕ್ಕೆ ಕಾರಣಳಾದ ತನ್ನ ತಾಯಿ ಕೈಕೈಯಿಯನ್ನು ದೂಷಿಸುತ್ತಾನೆ. ರಾಮನಿಲ್ಲದ ಊರು ತನಗೂ ಬೇಡ. ರಾಮನನ್ನು ಮತ್ತೆ ಅಯೋಧ್ಯೆಗೆ ಕರೆತರುತ್ತೇನೆ ಎಂದು ಶಪಥ ಮಾಡಿ ರಾಮನನ್ನು ಅರಸಿ ಚಿತ್ರಕೂಟಕ್ಕೆ ಹೊರಡುತ್ತಾನೆ. ಅಲ್ಲಿ ರಾಮನನ್ನು ಸಂಧಿಸಿದಾಗ ರಾಮನು ಭರತನನ್ನು ಸಮಾಧಾನಪಡಿಸಿ ಅಯೋಧ್ಯೆಗೆ ಮರಳುವಂತೆ ಮಾಡುತ್ತಾನೆ. ಆ ಸಮಯದಲ್ಲಿ ರಾಮನು ಕಳುಹಿಸಿದ ಸಂದೇಶವಿದು. ಅಭಿಮಾನ ಮತ್ತು ದೊಡ್ಡಸ್ತಿಕೆ ತ್ಯಜಿಸಿ ಎಲ್ಲ ತಾಯಂದಿರ ಕುರಿತು ಸಮಾನವಾಗಿ ವರ್ತಿಸಬೇಕು. ಅವರೊಂದಿಗೆ ಬೆರೆತು ಬಾಳಬೇಕು, ಮಹಾರಾಜರ ಅನುರಾಗವುಳ್ಳ ಕೈಕೇಯಿಯನ್ನು ಶ್ರೇಷ್ಠಳೆಂದೇ ತಿಳಿದು ಆಕೆಯನ್ನು ಸತ್ಕರಿಸಬೇಕು! ಎಂಬ ಸಂದೇಶವನ್ನು ಕಳುಹಿಸುತ್ತಾನೆ. ಯಾರನ್ನೂ ದ್ವೇಷಿಸಬಾರದು ಎಂಬುದು ರಾಮನ ಸಿದ್ಧಾಂತ. ತನ್ನ ವನವಾಸಕ್ಕೆ ಕೈಕೇಯಿಯೇ ಕಾರಣಳಾದರೂ ಸಹಾ ಆಕೆಯನ್ನು ದ್ವೇಷಿಸದೆ ಸತ್ಕರಿಸಬೇಕು ಎಂದು ತಿಳಿಸುತ್ತಾನೆ. ಇಂತಹ ಗುಣಗಳಿಂದಲೇ ಅವನು ಮರ್ಯಾದಾ ಪುರುಷೋತ್ತಮ ಎನಿಸಿಕೊಳ್ಳುತ್ತಾನೆ. 


5. ದೇಶೇದೇಶೇ ಕಳತ್ರಾಣಿ ದೇಶೇದೇಶೇ ಚ ಬಾಂಧವಾಃ

ಪರಂತು ತಂ ದೇಶಂ ನ ಪಶ್ಯಾಮಿ ಯತ್ರಭ್ರಾತಾ ಸಹೋದರಾಃ ||


 ಭರತನು ಚಿತ್ರಕೂಟಕ್ಕೆ ಹೋಗಿ ರಾಮನನ್ನು ಅಯೋಧ್ಯೆಗೆ ಮರಳುವಂತೆ ಪ್ರಾರ್ಥಿಸುತ್ತಾನೆ. ಆದರೆ ತಂದೆಯ ಮಾತಿಗೆ ಕಟ್ಟುಬಿದ್ದು ವನವಾಸಕ್ಕೆ ಬಂದಿರುವ ರಾಮ ಅವಧಿಗೆ ಮುಂಚೆ ಬರಲಾಗದು ಎಂದು ತಿಳಿಸುತ್ತಾನೆ. ಆ ಸಮಯದಲ್ಲಿ ರಾಮನಿಲ್ಲದ ಅಯೋಧ್ಯೆಯನ್ನು ನಾನು ಹೇಗೆ ಆಳಲಿ? ಎಂದು ದುಃಖತಪ್ತನಾದ ಭರತನನ್ನು ರಾಮನೇ ಸಮಾಧಾನ ಪಡಿಸುತ್ತಾನೆ. ಕೊನೆಗೆ ರಾಮನ ಪಾದುಕೆಗಳನ್ನು ಪಡೆದು ಅದನ್ನೇ ಸಿಂಹಾಸನದಲ್ಲಿರಿಸಿ ರಾಜ್ಯದ ಆಡಳಿತ ನಡೆಸುವುದಾಗಿ ಭರತ ತಿಳಿಸುತ್ತಾನೆ. ಇದನ್ನು ಕಂಡ ಅಲ್ಲಿದ್ದ ಋಷಿಮುನಿಗಳು, ಈ ಸಹೋದರರ ಪ್ರೀತಿ ವಿಶ್ವಾಸವನ್ನು ಕಂಡು ಈ ರೀತಿ ಉದ್ಗರಿಸುತ್ತಾರೆ. ಎಲ್ಲ ದೇಶಗಳಲ್ಲೂ ಹೆಂಡತಿ, ಮಕ್ಕಳು, ಬಾಂಧವರು ಇರುವರಾದರೂ ಇಂತಹ ಅಣ್ಣತಮ್ಮಂದಿರು/ಸಹೋದರರು ಇರುವ ದೇಶ ಇನ್ನೊಂದು ಇಲ್ಲವೇನೋ ಎನ್ನುತ್ತಾರೆ. ಇಲ್ಲಿ ರಾಮ, ಭರತರ ಸೌಹಾರ್ದತೆ ಹಾಗೂ ಭ್ರಾತೃಪ್ರೇಮ ಲೋಕವಿಖ್ಯಾತವಾಗವಂತೆ ಕಂಡುಬರುತ್ತದೆ. ಇಂದಿಗೂ ಇಂತಹ ಸಹೋದರರು ಇದ್ದರೆ ಅಂತಹ ದೇಶವು ಪರಮಸೌಲಭ್ಯವನ್ನು ಹೊಂದುತ್ತದೆ ಎಂದು ಹೇಳಬಹುದು.


6. ಅವಿಸ್ತರಮ್ ಅಸಂದಿಗ್ಧಮ್ ಅವಿಲಂಬಿತಮ್, ಆವ್ಯಥಮ್

ಉದರಸ್ಥಂ ಕಂಠಗಂ ವಾಕ್ಯಂ ವರ್ತತೇ ಮದ್ಯಮ ಸ್ವರಮ್ ||


ಸೀತೆಯನ್ನು ಕಳೆದುಕೊಂಡ ಶ್ರೀರಾಮ ಆಕೆಯನ್ನು ಅರಸುತ್ತಾ ಪರಿಭ್ರಮಿಸುತ್ತಾನೆ. ಕೊನೆಗೆ ಅವನು ಕರ್ನಾಟಕದ ಕಿಷ್ಕಿಂದೆಗೆ ಬರುತ್ತಾನೆ. ಅಲ್ಲಿಯವರೆಗೆ ಶ್ರೀರಾಮ ಯಾರು ಎಂಬುದು ಹನುಮಂತನಿಗೆ ಗೊತ್ತಿರುವುದಿಲ್ಲ. ಈ ಅಣ್ಣತಮ್ಮಂದಿರು ತಮ್ಮ ಪ್ರಾಂತ್ಯಕ್ಕೆ ಬಂದಾಗ ಸಹಜವಾಗಿಯೇ ಸುಗ್ರೀವನಿಗೆ ಅನುಮಾನ ಬರುತ್ತದೆ. ಅವರು ಯಾರು ಎಂಬುದನ್ನು ಕಂಡುಹಿಡಿದುಕೊಂಡು ಬರುವಂತೆ ಹನುಮಂತನಿಗೆ ಸೂಚಿಸುತ್ತಾನೆ. ಹನುಮಂತ ಬಹಳ ವಿವೇಕಿ ಹಾಗೂ ಬುದ್ಧಿವಂತ. ಅವನು ರಾಮನ ಬಳಿ ಬಂದು ಅತ್ಯಂತ ವಿನಯದಿಂದ ಅವನು ಯಾರು, ಏನು? ಎಂಬುದನ್ನು ವಿಚಾರಿಸುತ್ತಾನೆ. ಅವನ ನಡೆನುಡಿಗಳು ಶ್ರೀರಾಮನಿಗೆ ಬಹಳ ಮೆಚ್ಚುಗೆಯಾಗುತ್ತದೆ ಹಾಗೂ ರಾಮನನ್ನು ಆಕರ್ಷಿಸುತ್ತದೆ. ಆಗ ಶ್ರೀರಾಮನು ಹೇಳುವ ಮಾತುಗಳಿವು. 'ಸ್ವಲ್ಪದರಲ್ಲೇ ಬಹಳ ಸ್ಪಷ್ಟವಾಗಿ ತಡವರಿಸದೆ ಮಧುರವಾಗಿ, ಮದ್ಯಮ ಸ್ವರದಲ್ಲೇ ಎಲ್ಲಾ ವಿಷಯಗಳನ್ನು ನಿವೇದಿಸಿರುವ' ಹನುಮನ ಬಗ್ಗೆ ಅಭಿಮಾನದಿಂದ ಈ ಮಾತುಗಳನ್ನು ಆಡುತ್ತಾನೆ. ಹನುಮಂತ ಮಹಾ ಬಲಶಾಲಿಯಾದರೂ ಅವನ ವಿಧೇಯತೆ ಹಾಗೂ ಅವನ ಸೌಜನ್ಯಯುತ ನಡವಳಿಕೆ ಎಲ್ಲ ಕಾಲಕ್ಕೂ ಆದರ್ಶವನ್ನೇ ಬಿಂಬಿಸುತ್ತದೆ.


7. ನಾಹಂ ಜಾನಾಮಿ ಕೇಯೂರೇ ನಾಹಂ ಜಾನಾಮಿ ಕುಂಡಲೇ

ನೂಪುರೇತ್ ಅಭಿಜಾನಾಮಿ ನಿತ್ಯಂ ಪಾದಾಭಿವಂದನಾತ್ ||


ಲಕ್ಷ್ಮಣನು ರಾಮ ಸೀತೆಯರೊಂದಿಗೆ ವನವಾಸಕ್ಕೆ ಹೋಗುವುದು ಅವರ ಸೇವೆ ಮಾಡಲು ಹಾಗೂ ಅವರನ್ನು ರಕ್ಷಣೆ ಮಾಡಲು. ಸೀತಾಪಹರಣದ ನಂತರ ರಾವಣನು ಪುಷ್ಪಕ ವಿಮಾನದಲ್ಲಿ ಸೀತೆಯನ್ನು ಕರೆದುಕೊಂಡು ಹೋಗುವಾಗ ಕೆಳಗೆ ಸುಗ್ರೀವಾದಿಗಳನ್ನು ಕಾಣುತ್ತಾಳೆ. ಅವರು ಯಾರೆಂದು ತಿಳಿಯದಿದ್ದರೂ, ಮುಂದೆ ರಾಮನಿಗೆ ತನ್ನ ಬಗ್ಗೆ ಗೊತ್ತಾಗಲಿ ಎಂದು ತನ್ನ ಆಭರಣಗಳನ್ನು ಕೆಳಗೆ ಹಾಕುತ್ತಾಳೆ, ರಾಮನು ಸಿಕ್ಕಾಗ ಸುಗ್ರೀವ ಅವುಗಳನ್ನು ರಾಮನಿಗೆ ತೋರಿಸುತ್ತಾನೆ. ರಾಮನು ಅವು ಸೀತೆಯದ್ದೇ ಅಲ್ಲವೇ? ಎಂದು ಲಕ್ಷ್ಮಣನನು ಕೇಳಿದಾಗ ಲಕ್ಷ್ಮಣ 'ತನಗೆ ಬೇರೆ ಆಭರಣಗಳ ಬಗ್ಗೆ ತಿಳಿಯದು. ಆದರೆ ತಾನು ಪ್ರತಿದಿನ ಆಕೆಗೆ ಪಾದಾಭಿವಂದನೆ ಮಾಡುತ್ತಿದ್ದುದರಿಂದ ಗೆಜ್ಜೆಗಳನ್ನು ಮಾತ್ರ ಗಮನಸಿದ್ದು, ಈ ಗೆಜ್ಜೆಗಳು ಸೀತೆಯದ್ದೇ' ಎಂದು ಕಂಡುಹಿಡಿಯುತ್ತಾನೆ. ಅಣ್ಣನ ಹೆಂಡತಿಯನ್ನು ಕಣ್ಣೆತ್ತಿಯೂ ನೋಡದೆ ಆಕೆಗೆ ನಮಸ್ಕಾರ ಮಾಡುವಾಗ ಆಕೆಯ ಗೆಜ್ಜೆಯನ್ನು ಮಾತ್ರ ಗಮನಿಸಿದ್ದನ್ನು ತಿಳಿಸುತ್ತಾನೆ. ಇದು ಸೀತೆಯ ಬಗ್ಗೆ ಅವನು ಹೊಂದಿದ್ದ ಸಂಬಂಧ ಹಾಗೂ ಗೌರವವನ್ನು ಸೂಚಿಸುತ್ತದೆ.


8. ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿರ್ಯದಿ

ಪೌರುಷ ಚ ಅಪ್ರತಿದ್ವಂದ್ವ ಸ್ವದೈನಂ ಜಹಿ ರಾವಣಿಮ್ ||


ಸೀತೆಯನ್ನು ಹುಡುಕುತ್ತಾ ಲಂಕೆಗೆ ಬಂದ ನಂತರ ರಾವಣನ ಸೈನ್ಯದೊಂದಿಗೆ ಯುದ್ಧ ಪ್ರಾರಂಭವಾಗುತ್ತದೆ. ಯುದ್ಧದಲ್ಲಿ ಲಕ್ಷ್ಮಣನಿಗೆ ಇಂದ್ರಜಿತು ಎದುರಾಗುತ್ತಾನೆ. ಇಂದ್ರಜಿತು ಅಪ್ರತಿಮ ವೀರ. ಅವನ್ನು ಮಣಿಸುವುದು ಸುಲಭದ ಮಾತಾಗಿರಲಿಲ್ಲ. ಅವನ್ನು ಕೊಲ್ಲಬೇಕಾದರೆ ಐಂದ್ರಾಸ್ತ್ರದಿಂದ ಮಾತ್ರ ಸಾಧ್ಯ ಎಂದು ಲಕ್ಷ್ಮಣ ಕಂಡುಕೊಂಡು ಅದನ್ನು ಪ್ರಯೋಗಿಸಲು ಉದ್ದೇಶಿಸುತ್ತಾನೆ. ಐಂದ್ರಾಸ್ತ್ರ ಸಫಲವಾಗಬೇಕು ಎಂಬ ಉದ್ದೇಶದಿಂದ ಅದನ್ನು ಕುರಿತು ಹೇಳುತ್ತಾನೆ. ನನ್ನ ಅಣ್ಣ ರಾಮನು ನಿಜವಾಗಿ ಸತ್ಯಸಂಧನು, ಧರ್ಮಾತ್ಮನೂ ಆಗಿದ್ದರೆ, ಪೌರುಷತ್ವದಲ್ಲಿ ಅಪ್ರತಿಮನೂ ಆಗಿದ್ದರೆ ಎಲೈ ಐಂದ್ರಾಸ್ತ್ರವೇ ಇಂದ್ರಜಿತುವನ್ನು ಸಂಹರಿಸು ಎಂದು ಹೇಳುತ್ತಾನೆ. ತನ್ನ ಅಣ್ಣ ರಾಮನು ಮಹಾ ಪೌರುಷಶಾಲಿ ಎಂಬುದು ತನಗೆ ತಿಳಿದಿದೆ. ಅದು ಈ ಅಸ್ತ್ರಕ್ಕೂ ಇನ್ನಷ್ಟು ಬಲತುಂಬಲಿ ಎಂಬ ಉದ್ದೇಶದಿಂದ ಈ ಮಾತುಗಳನ್ನು ಹೇಳುತ್ತಾನೆ. ಈ ಅಸ್ತ್ರ ಫಲಿಸುತ್ತದೆ. ಇಂದ್ರಜಿತುವಿನ ವಧೆಯಾಗುತ್ತದೆ.


9. ಕರ್ಮಣಾ ಮನಸಾ ವಾಚಾ ಯಥಾ ನಾತಿಚರಾಮ್ಯಹಮ್

ರಾಘವಂ ಸರ್ವಧರ್ಮಜ್ಞಂ ತಥಾ ಮಾಂ ಪಾತು ಪಾವಕಃ ||


ರಾವಣನನ್ನು ಸಂಹರಿಸಿದ ನಂತರ ಸೀತೆಯನ್ನು ಸ್ವೀಕರಿಸುವ ಮುಂಚೆ ಆಕೆಗೆ ಅಗ್ನಿಪರೀಕ್ಷೆಯನ್ನು ರಾಮನು ಒಡ್ಡುತ್ತಾನೆ. ಸೀತೆ ಪವಿತ್ರಳು ಎಂದು ತಿಳಿದಿದ್ದರೂ, ಮುಂದೆ ಲೋಕಾಪವಾದ ಬರಬಾರದು ಎಂಬುದು ರಾಮನ ಉದ್ದೇಶವಾಗಿರುತ್ತದೆ. ರಾಮನ ಮನದಿಂಗಿತವನ್ನು ಅರಿತ ಸೀತೆ ಅಗ್ನಿಪರೀಕ್ಷೆಗೆ ಸಿದ್ಧಳಾಗುತ್ತಾಳೆ. ಆ ಸಮಯದಲ್ಲಿ ಆಕೆ ಅಗ್ನಿದೇವನಿಗೆ ಹೇಳುವ ಮಾತುಗಳಿವು. 'ನಾನು ಕಾಯಾ, ವಾಚಾ, ಮನಸಾ, ಕ್ರಿಯೆಯಿಂದ ಎಂದಿಗೂ ಧರ್ಮಜ್ಞನಾದ ಶ್ರೀರಾಮನನ್ನು ಅತಿಕ್ರಮಿಸಿಲ್ಲವಾದರೆ ಎಲೈ ಅಗ್ನಿದೇವನೇ ನನ್ನನ್ನು ರಕ್ಷಿಸು' ಎಂದು ಹೇಳಿ ಅಗ್ನಿ ಪ್ರವೇಶ ಮಾಡುತ್ತಾಳೆ. ಹಾಗೂ ಅದರಲ್ಲಿ ಯಶಸ್ವಿಯೂ ಆಗುತ್ತಾಳೆ.

 ರಾಮಾಯಣದಲ್ಲಿ ಇಂತಹ ಹಲವು ಮಹಾ ವಾಕ್ಯಗಳು ಕಂಡುಬರುತ್ತವೆ. ಹಾಗಾಗಿ ಇಷ್ಟು ವರ್ಷಗಳ ನಂತರವೂ ಈ ಮಹಾಕಾವ್ಯ ಭಾರತದ ಜನತೆಗೆ ಮಾರ್ಗದರ್ಶನ ಮಾಡುತ್ತಿದೆ. 


10. ಜ್ಞೇಯಾ ಸರ್ವೇ ಚ ವೃತ್ತಾಂತಾ ಭರತಸ್ಯ ಇಂಗಿತಾನಿ ಚ

ತತ್ವೇನ ಮುಖವರ್ಣೇನ ದೃಷ್ಟ್ವಾ ವ್ಯಾಧಿಕ್ಷತೇನ ಚ ||


 ಶ್ರೀರಾಮನು 14 ವರ್ಷಗಳ ವನವಾಸ ಮುಗಿಸಿ ವಾಪಸ್ಸು ಅಯೋಧ್ಯೆಗೆ ಹೊರಡುತ್ತಾನೆ. ಹೀಗೆ ಹೊರಡುವ ಪೂರ್ವದಲ್ಲಿ ಭರತನ ಮನಸ್ಥಿತಿ ಹೇಗಿದೆ? ಎಂದು ತಿಳಿಯಲು ಬಯಸುತ್ತಾನೆ. ಅದಕ್ಕಾಗಿ ಹನುಮಂತನನ್ನು ಕರೆದು, 'ನೀನು ನಂದಿ ಗ್ರಾಮಕ್ಕೆ ಹೋಗಿ, ಭರತನ ಎಲ್ಲಾ ಸೌರ್ಯ ವೃತ್ತಾಂತಗಳನ್ನು ಯಥಾರ್ಥವಾಗಿ ತಿಳಿಯಬೇಕು. ಮುಖಭಾವ, ದೃಷ್ಠಿ, ಮಾತುಕತೆಯಿಂದ ಅವನ ಮನೋಭಾವವನ್ನು ತಿಳಿಯಲು ಪ್ರಯತ್ನಿಸು' ಎನ್ನುತ್ತಾನೆ. ಭರತನ ಭೇಟಿಯಾಗಿ ಹಲವು ವರ್ಷಗಳು ಕಳೆದಿದೆ. ಭರತ ಈಗ ತನಗೇ ರಾಜ್ಯಭಾರ ಇರಲಿ ಎಂದು ಅಪೇಕ್ಷಿಸಬಹುದು. ಹಾಗಾಗಿ ತಾನು ಏಕಾಏಕಿ ಹೋಗದೆ ಭರತನ ಮನಸ್ಥಿತಿ ಅರಿತು ನಂತರ ಅಯೋಧ್ಯೆಗೆ ಹೋಗುವುದು ಸೂಕ್ತ ಎಂದು ರಾಮನು ಭಾವಿಸುತ್ತಾನೆ. ಇದು ರಾಮನ ಆದರ್ಶ ಮನೋವಿಜ್ಞಾನಕ್ಕೆ ಹಿಡಿದ ಕೈಗನ್ನಡಿಯಂತೆ ಕಂಡುಬರುತ್ತದೆ.


11.ಸುಲಭಾಃ ಪರುಷಾ ರಾಜನ್ ಸತತಂ ಪ್ರಿಯವಾದಿನಃ

ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಾಃ ||


 ರಾಮಾಯಣದಲ್ಲಿ ವಿಭೀಷಣನದು ವಿಶೇಷ ವ್ಯಕ್ತಿತ್ವ. ಅವನು ರಾಕ್ಷಸ ಕುಲಕ್ಕೆ ಸೇರಿದವನಾದರೂ ಧರ್ಮ, ಅಧರ್ಮಗಳನ್ನು ತಿಳಿದವನು. ಸೀತಾಪಹರಣವನ್ನು ವಿರೋಧಿಸಿದವನು. ನೀನು ಸೀತೆಯನ್ನು ಶ್ರೀರಾಮನಿಗೆ ಒಪ್ಪಿಸಿ ಶರಣಾಗು ಎಂಬ ಹಿತೋಕ್ತಿಯನ್ನು ರಾವಣನಿಗೆ ಹೇಳಿದಾಗ ಅದು ರಾವಣನಿಗೆ ಇಷ್ಟವಾಗದೆ, ರಾಜ್ಯಬಿಟ್ಟು ಹೋಗು ಎಂದು ವಿಭೀಷಣನಿಗೆ ಹೇಳುತ್ತಾನೆ. ಇದನ್ನು ಕೇಳಿದ ವಿಭೀಷಣ ಹೇಳುತ್ತಾನೆ, ಅಣ್ಣಾ ರಾವಣ, ಜಗತ್ತಿನಲ್ಲಿ ಮುಖಸ್ತುತಿ ಮಾಡುವವರು ಬಹಳ ಜನರಿದ್ದಾರೆ. ಆದರೆ ಮನಸ್ಸಿಗೆ ಹಿತವೂ, ಜೀವನಕ್ಕೆ ಆದರ್ಶವೂ ಆದ ಮಾತುಗಳನ್ನು ಹೇಳುವವರು, ಕೇಳುವವರು ಕಡಿಮೆಯೇ ಎಂದು. ಆದರೆ ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದಿದ್ದ ರಾವಣನಿಗೆ ಈ ಮಾತುಗಳು ಇಷ್ಟವಾಗುವುದಿಲ್ಲ. ಕೊನೆಗೆ ಅದು ಅವನ ಮೃತ್ಯುವಿಗೆ ಕಾರಣವಾಗುತ್ತದೆ. 


12. ಅಪಿ ಸ್ವರ್ಣಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ||

 ಶ್ರೀರಾಮನು ಲಂಕಾಧೀಶ್ವರ ರಾವಣನನ್ನು ವಧಿಸಿದ ನಂತರ, ಲಂಕೆಯನ್ನು ಪ್ರವೇಶಿಸಿದ ಲಕ್ಷ್ಮಣನು ಅಲ್ಲಿನ ವೈಭವವನ್ನು ಕಂಡು ಬೆರಗಾಗುತ್ತಾನೆ. ಕೆಲವು ಸಮಯ ಮೋಹಕ್ಕೂ ಒಳಗಾಗುತ್ತಾನೆ. ಆ ಸಮಯದಲ್ಲಿ ಅವನು ಅಣ್ಣ ರಾಮನನ್ನು ಕುರಿತು ಈ ಮಾತುಗಳನ್ನು ಹೇಳುತ್ತಾನೆ. 'ಹೇಗಿದ್ದರೂ ನಾವು ಲಂಕೆಯನ್ನು ಜಯಿಸಿದ್ದೇವೆ. ಇದು ಈಗ ನಮ್ಮ ಅಧೀನದಲ್ಲಿದೆ ಹಾಗೂ ಇದು ವೈಭವಯುತವಾಗಿದೆ. ಆದ್ದರಿಂದ ನಾವು ಏಕೆ ಇಲ್ಲೇ ರಾಜ್ಯಭಾರ ಮಾಡಿಕೊಂಡಿರಬಾರದು' ಎಂದು ಹೇಳಿದಾಗ, ಪ್ರತಿಯಾಗಿ ಶ್ರೀರಾಮನು ಈ ಮಾತನ್ನು ಹೇಳುತ್ತಾನೆ. 'ಜನನಿ ಹಾಗೂ ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು. ಇಂತಹ ವೈಭವದ ಲಂಕೆಯು ಜನನಿ ಹಾಗೂ ಜನ್ಮಭೂಮಿಗಿಂತ ಖಂಡಿತಾ ಶೋಭಿಸುವುದಿಲ್ಲ, ನಮ್ಮ ಶೋಭೆ ಇರುವುದು ಅಯೋಧ್ಯೆಯಲ್ಲಿ ಎನ್ನುತ್ತಾನೆ. ಇದು ಇಂದಿಗೂ ನಮಗೆ ಮಾರ್ಗದರ್ಶನ ಮಾಡುವಂತಹ ಮಾತುಗಳು. ಹಣದ ಆಸೆಗೆ ಬಿದ್ದು, ವಿದೇಶಗಳಿಗೆ ತೆರಳುವವರಿಗೆ ಈ ಮಾತುಗಳನ್ನು ಅನ್ವಯಿಸಿ ಹೇಳಬೇಕು. ನಮಗೆ ನಮ್ಮ ತಾಯ್ನಾಡೇ ಶ್ರೇಷ್ಠ, ನಮ್ಮ ಅಸ್ತಿತ್ವ ಇರುವುದು ಇಲ್ಲಿಯೇ. ಇದರ ಮುಂದೆ ಯಾವ ಹಣವೂ, ವೈಭವವೂ ಸಮನಾದುದಲ್ಲ ಎಂದು ಹೇಳಬೇಕಾಗಿದೆ. 

(ಈ ಮಾತುಗಳು ಮೂಲ ರಾಮಾಯಣದಲ್ಲಿ ಇಲ್ಲವೆಂದು ಹೇಳಲಾಗುತ್ತದೆ. ಆದರೂ ಇದೊಂದು ಮಹಾವಾಕ್ಯವಾಗಿಯೇ ಕಂಡುಬರುವುದರಿಂದ ಇದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವೆನಿಸಿ ಉಲ್ಲೇಖಿಸಿದೆ)




- ಡಾ. ವಿ ರಂಗನಾಥ್ 

ಲೇಖಕ, ಚಿಂತಕ, ಅಂಕಣಬರಹಗಾರ

ಮೈಸೂರು

94482 08746


ಲೇಖಕರ ಸಂಕ್ಷಿಪ್ತ ಪರಿಚಯ:


ಮೈಸೂರು ಮಿತ್ರ ಪತ್ರಿಕೆಯಲ್ಲಿ ಕಳೆದ ಆರು ವರ್ಷಗಳಿಂದ ವಾರಕ್ಕೊಂದು ಅಂಕಣ ಬರೆಯುತ್ತಿದ್ದಾರೆ.  ಎಂಟು ತಿಂಗಳಿನಿಂದ ವಿಕ್ರಮ ವಾರಪತ್ರಿಕೆಯ ಅಂಕಣ ಬರಹಗಾರರಾಗಿದ್ದಾರೆ. 

ಹಲವು ಸಂಸ್ಥೆಗಳಲ್ಲಿ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ತರಬೇತುದಾರ. ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ, ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ಅಧಿಕಾರಿಗಳ ತರಬೇತುದಾರ. ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ಮುಕ್ತ

ವಿಶ್ವವಿದ್ಯಾನಿಲಯ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯ, ಮಂಡ್ಯ ವಿಶ್ವವಿದ್ಯಾಲಯಗಳ ಲಿಪಿಕ ಸಿಬ್ಬಂದಿಗಳ ತರಬೇತುದಾರ.,  ಮೈಸೂರು ಅರಮನೆ ಮಂಡಳಿಯ ಸಲಹೆಗಾರ. ಆಕಾಶವಾಣಿ ಚಿಂತನಕಾರ ಹಾಗೂ ಭಾಷಣಕಾರರಾಗಿದ್ದಾರೆ. ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಮಂಡ್ಯ ಪಿಇಎಸ್ ಕಾಲೇಜಿನ ಚೌಡಯ್ಯ ಸ್ಮಾರಕ ರಾಜ್ಯಮಟ್ಟದ ಅಂಕಣಬರಹ ಪ್ರಶಸ್ತಿ, ಆದರ್ಶ ಸೇವಾ ಸಂಘ ನೀಡಿದ ಆದರ್ಶ ಸೇವಾರತ್ನ' ಪ್ರಶಸ್ತಿ ಪುರಸ್ಕೃತ, ಮೈಸೂರು ಬ್ರಾಹ್ಮಣ ಸಭೆ ನೀಡಿದ ವಿಪ್ರ ಆಚಾರ್ಯ ಪ್ರಶಸ್ತಿ, ಅನ್ವೇಷಣಾ ಸೇವಾ ಟ್ರಸ್ಟ್ ನೀಡಿದ ಅರವಿಂದ ಮಹರ್ಷಿ ಪ್ರಶಸ್ತಿ ಅಲ್ಲದೆ ಹಲವು ಸಂಸ್ಥೆಗಳಿಂದ ಪುರಸ್ಕೃತರು.

ಪುಸ್ತಕ ರಚನೆ: ಈವರೆವಿಗೆ 33 ಪುಸ್ತಕಗಳು ಪ್ರಕಟವಾಗಿವೆ. ನಾಲ್ಕು ಸ್ಮರಣ ಸಂಚಿಕೆಗಳಿಗೆ ಪ್ರಧಾನ ಸಂಪಾದಕನಾಗಿ, ಒಂದು ಸಂಚಿಕೆಗೆ ಸಹ ಸಂಪಾದಕನಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಸುಮಾರು ಹದಿನೈದು ಪುಸ್ತಕಗಳಿಗೆ ಮುನ್ನುಡಿ ಬರೆದಿದ್ದಾರೆ.

ವೀಕ್ಷಕ ವಿವರಣೆಗಾರ: ಮೈಸೂರು ದಸರಾ ಮೆರವಣಿಗೆ ಹಾಗೂ ಪಂಜಿನ ಕವಾಯತು ಕಾರ್ಯಕ್ರಮದ ಬಗ್ಗೆ ಕಳೆದ 8 ವರ್ಷಗಳಿಂದ ದೂರದರ್ಶನದಲ್ಲಿ ವೀಕ್ಷಕ ವಿವರಣೆಗಾರ. ಈ ವರ್ಷ ವಿಸ್ತಾರ ನ್ಯೂಸ್ ಚಾನಲ್‌ನಲ್ಲಿ ವೀಕ್ಷಕ ವಿವರಣೆ ನಿಡಿದ್ದಾರೆ.  ಮೈಸೂರು ಜಿಲ್ಲೆಯ ಕಮ್ಯುನಿಟಿ ರೇಡಿಯೋಗಳ ಭಾಷಣಕಾರ

ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕದ ವಲಯ ಪ್ರಮುಖ್ ಹಾಗೂ ಪ್ರಾಂತ ಸಂಪರ್ಕ ಪ್ರಮುಖ್ ಆಗಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top