ಮೂರನೆ ಮಹಾ ಯುದ್ದ- ನೀರಿಗಾಗಿ!

Upayuktha
0


ಏಳು ವರ್ಷಗಳಲ್ಲಿ ದಾಖಲೆ ಉಷ್ಣಾಂಶ ಏರಿರುವುದು ಭಯಾನಕ ಸುದ್ದಿಯೇ ಸರಿ.


ಇನ್ನೊಂದು ಸಮಸ್ಯೆ ಏಳು ವರ್ಷಗಳಲ್ಲಿ ಉಷ್ಣಾಂಶ ಏರಿದಾಗ ಅದರ ಹಿಂದಿನ ಮಳೆಗಾಲದಲ್ಲಿ ಉತ್ತಮ ಮಳೆಯಾಗಿ ಅಂತರ್ಜಲ ಕಾಯ್ದುಕೊಂಡಿತ್ತು. 

ಜೊತೆಗೆ ಮಳೆಗಾಲ ಮುಗಿದ ಮೇಲೂ ಆಗಾಗ ಒಂದೊಂದು ಮಳೆಯೂ ಆಗುತ್ತಿತ್ತು. ಆದರೆ ಈ ವರ್ಷ ಹಾಗಿಲ್ಲ.


2023 ರ ಬೇಸಿಗೆಯಲ್ಲೂ ಉಷ್ಣಾಂಶ ಏರಿದೆ, ನಂತರದ ಮಳೆಗಾಲದಲ್ಲಿ ಒಟ್ಟು ಮಳೆ ಗಣನೀಯವಾಗಿ ಕಮ್ಮಿಯಾಗಿದೆ, ಮಳೆಗಾಲ ಮುಗಿದ ಮೇಲೆ ಬರುತ್ತಿದ್ದ ಸಣ್ಣ ಮಳೆಯೂ ಬಂದಿಲ್ಲ, ಪರಿಣಾಮ, ಮಳೆಗಾಲದ ಮಳೆಯ ನೀರು ಅಂತರ್ಜಲವಾಗಿ ತುಂಬಲಿಲ್ಲ.  


ಈಗ ಉಷ್ಣಾಂಶ ದಾಖಲೆಯನ್ನು ಮೀರಿ ಏರುತ್ತಿದೆ. ಭಾಗಶಃ ಅರ್ಧದಷ್ಟೂ ತುಂಬದ ಅಂತರ್ಜಲ ಬೇಗನೆ ಬರಿದಾಗಿದೆ. ಉಷ್ಣಾಂಶ ಇನ್ನೂ ಏರುವ ಸಾಧ್ಯತೆ ಕಾಣುತ್ತಿದೆ.


ದೊಡ್ಡ ಮಳೆ ಬೀಳದೆ, ಉಷ್ಣಾಂಶ ಎಷ್ಟೇ ಇಳಿದರೂ ನೀರಿಲ್ಲದ ಭೂಮಿಯಲ್ಲಿ ಬರ ಭೀಕರತೆಯನ್ನು ಪಡೆದುಕೊಳ್ಳುತ್ತದೆ.  ಇನ್ನು ಉಷ್ಣಾಂಶ ಏರುತ್ತಲೇ ಹೋದರೆ ಪರಿಸ್ಥಿತಿ ಮತ್ತಷ್ಟು ಭಯಾನಕವೇ ಸರಿ.


ಭಯಾನಕ ಬರಗಾಲ ಇನ್ನಷ್ಟು ಭೀಕರವಾಗುವ ಲಕ್ಷಣಗಳು ಕಾಣಿಸುತ್ತಿವೆ. ಹಳ್ಳ, ತೊರೆ, ಕಿರು ನದಿಗಳು, ಕೆರೆ, ಬಾವಿಗಳು ಬತ್ತುತ್ತಿವೆ. ನದಿಗಳ ಹರಿವೂ ಕಟ್ ಆಗುತ್ತಿದೆ. ನಾಲ್ಕಂಕಿ ಅಡಿ ಆಳದ ಬೋರ್‌ವೆಲ್‌ಗಳೂ ಡ್ರೈ ಆಗುತ್ತಿವೆ. ಪೇಪರ್‌, ಟಿವಿಗಳಲ್ಲಿ ನೀರಿನ ಸಮಸ್ಯೆಯ ಸುದ್ದಿಗಳು ನಿತ್ಯ ಬರುತ್ತಿವೆ.


ಅಡಿಕೆ, ಮಾವು, ತೆಂಗು ಮುಂತಾದ ಮರಗಳ ಹರಳುಗಟ್ಟಿದ ಹೂವು ನೀರಿನ ಕೊರತೆ ಮತ್ತು ಉಷ್ಣತೆಯಿಂದ ಉದುರುತ್ತಿವೆ. ಕೆಲವು ಕಡೆ ಮರಗಳೇ ಒಣಗಿ ನಿಲ್ಲುತ್ತಿವೆ. ಯುಗಾದಿ, ಚೈತ್ರಮಾಸ, ವಸಂತ ಋತುಗಳಿಗೆ ಚಿಗುರಬೇಕಾದ ಮರಗಳು ಚಿಗಿತರೂ ಅಲ್ಲೇ ಬಾಡುತ್ತಿವೆ- ಒಣಗುತ್ತಿವೆ.


ಕಾಲರ, ಚರ್ಮರೋಗ, ತಲೆನೋವು, ಕಣ್ಣುರಿ, ಗ್ಯಾಸ್ಟಿಕ್, ಡಿ-ಹೈಡ್ರೇಷನ್, ವಾಂತ-ಬೇಧಿ, ಜ್ವರ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ವಿಸ್ತರಿಸುತ್ತಿದೆ ಎಂದು ನಿಜವಾದ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರಗೊಳಿಸಿ, ಎಚ್ಚರಿಕೆ ವಹಿಸುವಂತೆ ಸೂಚಿಸಲಾಗುತ್ತಿದೆ.


ಕೃಷಿಕರು, ಕೃಷಿ ಕಾರ್ಮಿಕರು ಹೊಲದಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಸುಮ್ಮನೆ ಕುಳಿತರೂ ಒಣ ವಾತಾವರಣದಲ್ಲಿ ಬಳಲಿಕೆ ಆಗುವಂತಹ ಸ್ಥಿತಿಯಾಗಿದೆ.  ನೀರಾವರಿ ಇಲ್ಲದೆ ನೀರೆ 'ವರಿ'ಯಾಗಿದೆ!!


ಬಹಳ ಹಿಂದೆ ಒಬ್ಬರು ಒಂದು ಮಾತು ಹೇಳಿದ್ದರು "ಮೂರನೇ ಮಹಾ ಯುದ್ಧ ನೆಡೆದರೆ ಅದು ದೇಶಗಳ ನಡುವೆ ನೆಡೆಯುವುದಲ್ಲ, ದೇಶಗಳ ಒಳಗಡೆಯೇ ನೆಡೆಯುವುದು, ಮತ್ತು ಅದು ಕೇವಲ ನೀರಿಗಾಗಿ!!" ಎಂದು.


ಆ ಮಾತು ನಿಜವಾಗುತ್ತೇನೋ ಅಂತ ಅನಿಸುತ್ತಿದೆ. ಮನುಷ್ಯ ಮತ್ತು ಪ್ರಕೃತಿಯ ಮಧ್ಯೆ ಮೂರನೆ ಮಹಾ ಯುದ್ದ- ನೀರಿಗಾಗಿ!! ಯುದ್ಧ ನಡೆಯದಂತೆ ಮಾಡು ದೇವರೆ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top