ಸದ್ದಿಲ್ಲದೆ ನವೀಕರಣಗೊಂಡ ಬಾರ್ಕೂರು ಅರಸರು ಕಟ್ಟಿಸಿದ್ದ ಪ್ರಾಚೀನ ದೇವಳ
ಈ ಸೀಸನ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ಜೀರ್ಣೋದ್ಧಾರಗೊಂಡ ದೇವಸ್ಥಾನಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಕಳೆದ ವಾರವಷ್ಟೆ ಉಡುಪಿ ಜಿಲ್ಲೆಯ ಅತ್ಯಂತ ಪ್ರಾಚೀನ ದೇವಸ್ಥಾನಗಳಲ್ಲಿ ಒಂದಾಗಿರುವ ಮತ್ತು ಕೊಪ್ಪರಿಗೆ ಅಪ್ಪ ಗಣಪನೆಂದೇ ಪ್ರಸಿದ್ಧವಾಗಿರುವ ಕಾರಣಿಕದ ಶ್ರೀ ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ವೈಭವದಿಂದ ಪುನರುತ್ಥಾನಗೊಂಡು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಹಸ್ತದಿಂದಲೇ ನಡೆದ ವಿಧ್ಯುಕ್ತ ಪುನಃ ಪ್ರತಿಷ್ಠಾಪೂರ್ವಕ ಬ್ರಹ್ಮಕಲಶೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರಷ್ಟೆ.
ಇದೀಗ ಮತ್ತೊಂದು ಗಣಪನ ಸನ್ನಿಧಿ ಯಾವುದೇ ಸದ್ದಿಲ್ಲದೇ ಪುನರುತ್ಥಾನಗೊಂಡು ಹೊಸಮೆರುಗು ಪಡೆದು ನಿಂತಿದೆ.
ಉಡುಪಿ ಜಿಲ್ಲೆಯ ಬಾರಕೂರು ಸಮೀಪದ ಹೊಸ್ಕೆರೆ ಶ್ರೀ ವಿನಾಯಕ ದೇವಸ್ಥಾನವು ಸದ್ದುಗದ್ದಲವಿಲ್ಲದೇ ಊರ ಪರವೂರ ಭಕ್ತ ಜನರ ಸಹಕಾರದೊಂದಿಗೆ ಸಂಪೂರ್ಣ ಶಿಲಾಮಯಗೊಂಡು ಶ್ರೀ ವಿನಾಯಕನ ವಿಧ್ಯುಕ್ತ ಪುನಃ ಪ್ರತಿಷ್ಠಾಪನಾದಿ ಸತ್ಕರ್ಮಗಳು ಯಶಸ್ವಿಯಾಗಿ ನೆರವೇರಿದ ಬಳಿಕ ಇವತ್ತು ಶನಿವಾರ ಬ್ರಹ್ಮಕಲಶೋತ್ಸವವೂ ಸಂಪನ್ನಗೊಂಡು ಸರ್ವಾಲಂಕಾರಭೂಷಿತನಾದ ಶ್ರೀ ವಿನಾಯಕನ ದರ್ಶನ ಪಡೆದು ಎರಡು ಸಾವಿರಕ್ಕೂ ಅಧಿಕ ಭಕ್ತರು ಪುನೀತರಾದರು.
ಭೌಗೋಳಿಕ ವ್ಯಾಪ್ತಿ ವಿಸ್ತೀರ್ಣಗಳ ದೃಷ್ಟಿಯಿಂದ ಪೆರಣಂಕಿಲದಷ್ಟು ದೊಡ್ಡದಾಗಿರದ ತೀರಾ ಚಿಕ್ಕ ಸ್ಥಳ (ಸುಮಾರು ಆರೇಳು ಸೆಂಟ್ಸ್) ದಲ್ಲಿರುವ ಹೊಸ್ಕೆರೆ ಗಣಪನ ಗುಡಿಯನ್ನು ಪ್ರಾಚೀನ ಗರ್ಭಗುಡಿಯ ವಿನ್ಯಾಸಕ್ಕೆ ಸರಿಯಾಗಿ ಚಿಕ್ಕದಾಗಿ ಆದ್ರೆ ಅಷ್ಟೇ ಸುಂದರವಾಗಿ ಸಂಪೂರ್ಣ ಶಿಲಾಮಯವಾಗಿ ನಿರ್ಮಿಸಿರುವುದು ವಿಶೇಷ.
ಗಾತ್ರದ ದೃಷ್ಟಿಯಲ್ಲಿ ಎರಡೂ ಗಣಪತಿ ಸನ್ನಿಧಿಯಲ್ಲಿ ಭಿನ್ನತೆಗಳಿದ್ದರೂ ಎರಡೂ ಸನ್ನಿಧಿಗಳು ಅರಸೊತ್ತಿಗೆಯ ರಾಜಾಶ್ರಯದಲ್ಲಿ ನಿರ್ಮಾಣಗೊಂಡ ಪ್ರಾಚೀನ ಸನ್ನಿಧಿಗಳು ಅನ್ನೋ ಸಾಮ್ಯತೆ ಉಲ್ಲೇಖನೀಯ. ಹೌದು ಪೆರಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಅಳುಪ ಅರಸರಿಂದ ನಿರ್ಮಾಣಗೊಂಡು ಕಾಲಾನಂತರದಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಅಧೀನಕ್ಕೆ ಬಂದ ಸುದೀರ್ಘ ಇತಿಹಾಸ ಹೊಂದಿರುವಂತೆಯೇ ಹೊಸ್ಕೆರೆ ಶ್ರೀ ವಿನಾಯಕ ದೇವಸ್ಥಾನವು ತುಳುನಾಡನ್ನು ಆಳಿದ ಹಾಗೂ 366 ದೇವಸ್ಥಾನಗಳನ್ನು ಬಾರಕೂರು ಸೀಮೆಯಲ್ಲಿ ಕಟ್ಟಿಸಿದರೆಂಬ ಹೆಗ್ಗಳಿಕೆ ಹೊಂದಿರುವ ಬಾರಕೂರು ಅರಸರು ಕಟ್ಟಿಸಿದ್ದರೆಂಬುದು ಈ ದೇವಳಕ್ಕಿರುವ ಐತಿಹಾಸಿಕ ಹಿರಿಮೆಯಾಗಿದೆ.
ದೇವಳಕ್ಕೆ ತಾಗಿಕೊಂಡಂತಿರುವ ಕೆರೆಯಿಂದ ದೇವಳಕ್ಕೆ ಹೊಸ್ಕೆರೆ ವಿನಾಯಕ ದೇವಸ್ಥಾನ ಎಂದು ಉಲ್ಲೇಖಿಸಿರಬೇಕು. ಹಾಗೆ ನೋಡಿದರೆ ಬಾರ್ಕೂರು ಸೀಮೆಯ ಅನೇಕ ದೇವಸ್ಥಾನಗಳಿಗೆ ಹೊಂದಿಕೊಂಡಂತೆ ಬಹಳ ದೂರದೃಷ್ಟಿಯಿಂದ ಅರಸರು ನಿರ್ಮಿಸಿರುವ ಕೆರೆಗಳ ಹೆಸರಿನೊಂದಿಗೇ ದೇವಸ್ಥಾನಗಳ ಹೆಸರೂ ಥಳುಕು ಹಾಕಿಕೊಂಡಿರುವುದು ಗಮನೀಯ.
ಈ ಹಿಂದೆ ಕೆರೆಯ ವ್ಯಾಪ್ತಿ ವಿಶಾಲವಾಗಿದ್ದಿರಬಹುದು; ಆದರೆ ಪ್ರಸ್ತುತ ರಸ್ತೆ ಅಗಲೀಕರಣದಿಂದಾಗಿ ತೀರಾ ಕಿರಿದಾಗಿದ್ದು ಮುಖ್ಯ ರಸ್ತೆಗೆ ತಾಗಿಕೊಂಡೇ ಇರುವ ಕಾರಣದಿಂದ ಒಂದಷ್ಟು ತ್ಯಾಜ್ಯಗಳಿಗೆ ನೆಲೆಯಾಗಿರುವುದೂ ತೀರಾ ಬೇಸರದ ಸಂಗತಿ. ಈ ಬಗ್ಗೆ ದೇವಳದ ಆಡಳಿತ ಮಂಡಳಿ ಪ್ರಯತ್ನಿಸಿದರೂ ಕೆರೆಯ ರಕ್ಷಣೆಯ ವಿಚಾರದಲ್ಲಿ ಜನರ ನಿರ್ಲಕ್ಷ್ಯ ಧೋರಣೆಯಿಂದ ದೊಡ್ಡ ಯಶಸ್ಸು ಸಿಕ್ಕಿಲ್ಲ. ಈಗ ಜೀರ್ಣೋದ್ಧಾರಗೊಂಡಿರುವುದರಿಂದ ಇನ್ನಾದರೂ ಕೆರೆಯ ರಕ್ಷಣೆ ಸಾಧ್ಯವಾದೀತೆಂಬ ಆಶಾಭಾವನೆ ಇದೆ.
ಅದೇನೇ ಇದ್ದರೂ ಕಾಲಕಾರಣದಿಂದ ಜೀರ್ಣಗೊಂಡಿದ್ದ ದೇವಳವನ್ನು ಸುಂದರವಾಗಿ ಪುನರ್ನಿರ್ಮಿಸಿದ್ದನ್ನು ಮೆಚ್ಚಲೇಬೇಕು. ಇದರಲ್ಲಿ ಕೈಜೋಡಿಸಿದ ಪ್ರತಿಯೊಬ್ಬರೂ ಅಭಿನಂದನೀಯರು. ಶ್ರೀ ಗಣಪತಿಯ ಶಿಲಾಮೂರ್ತಿಯೂ ತುಂಬ ಸುಂದರವಾಗಿದೆ.
ಅನೇಕ ವರ್ಷಗಳಿಂದ ಸ್ಥಳೀಯರಾದ ನಿವೃತ್ತ ಶಿಕ್ಷಕರೂ ಆಗಿರುವ ಬಿ ಶಾಂತಾರಾಮ ರಾವ್ ಅವರು ಶ್ರೀ ಗಣಪತಿಯ ನಿತ್ಯ ಪೂಜೆ ಹಾಗೂ ಕಾಲಾವಧಿ ಶ್ರೀ ಗಣೇಶ ಚತುರ್ಥೀ ಉತ್ಸವ ಹಾಗೂ ವಾರ್ಷಿಕ ವರ್ಧಂತಿ ಉತ್ಸವಾದಿಗಳನ್ನು ತಮ್ಮ ಮನೆಮಂದಿಯ ಹಾಗೂ ಸ್ಥಳೀಯ ಭಕ್ತರ ಸಹಕಾರದೊಂದಿಗೆ ಯಥಾಮತಿ ಯಥಾಶಕ್ತಿ ಚೆನ್ನಾಗಿಯೇ ನಡೆಸಿಕೊಂಡು ಬರುತ್ತಿದ್ದಾರೆ. ಉಳಿದಂತೆ ದೇವಳದ ಆದಾಯ ಮತ್ತು ಭಕ್ತರ ಅಷ್ಟಕ್ಕಷ್ಟೆ. ಇದೀಗ ಭಕ್ತಜನರ ಸಹಕಾರದಿಂದ ದೇವಳ ಜೀರ್ಣೋದ್ಧಾರಗೊಂಡು ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಾಂಗವಾಗಿ ಸಂಪನ್ನಗೊಂಡಿರುವುದಕ್ಕೆ ಅತ್ಯಂತ ಧನ್ಯತೆಯನ್ನು ವ್ಯಕ್ತಪಡಿಸುತ್ತಾರೆ ಶಾಂತಾರಾಮ ರಾಯರು.
ಭಕ್ತರ ಸಂಖ್ಯೆ, ಆದಾಯ ಸ್ಥಳ ಇತ್ಯಾದಿಗಳು ತುಂಬ ಸೀಮಿತವಾಗಿದ್ದರೂ ಪ್ರಾಚೀನತೆಯ ದೃಷ್ಟಿಯಿಂದ ಈ ದೇವಸ್ಥಾನದ ಜೀರ್ಣೋದ್ಧಾರ ನಡೆದಿರುವುದು ಜಿಲ್ಲೆಯ ಜೀರ್ಣೋದ್ಧಾರಗೊಂಡ ದೇವಳಗಳ ಸಾಲಿಗೆ ಸೇರ್ಪಡೆಯಾಗಿರುವುದು ಅತ್ಯಂತ ಮಹತ್ವದ್ದಾಗುತ್ತದೆ.
ನಿಮಗೂ ಈ ದೇವಳಕ್ಕೆ ಭೇಟಿಕೊಟ್ಟು ಶ್ರೀವಿನಾಯಕನ ದರ್ಶನ ಪಡೆಯಬೇಕೆಂಬ ಇಚ್ಛೆ ಇದೆಯೇ? ಖಂಡಿತ ಬನ್ನಿ.
ಉಡುಪಿ ನಗರದಿಂದ ಸುಮಾರು 15 ಕಿಮೀ ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬ್ರಹ್ಮಾವರಕ್ಕೆ ಬಂದು ಆಕಾಶವಾಣಿ ಕೇಂದ್ರದ ಬಳಿ ಬಲಕ್ಕೆ ಬಾರಕೂರು ಮುಖ್ಯರಸ್ತೆಯಲ್ಲಿ ಸುಮಾರು 3 ಕಿಮಿ ದೂರ ಕ್ರಮಿಸಿ ಬಾರ್ಕೂರು ಪೇಟೆಗೆ ಮೊದಲೇ ರಸ್ತೆಯ ಎಡಭಾಗದಲ್ಲಿ ಹೊಸ್ಕೆರೆ ಶ್ರೀ ವಿನಾಯಕ ದೇವಸ್ಥಾನ ಇದೆ. ನೀವೂ ಬನ್ನಿ ..ನಿಮ್ಮವರನ್ನೂ ಕರೆತನ್ನಿ. ಶ್ರೀ ಗಣಪನ ದರ್ಶನ ಪಡೆದು ಪುನೀತರಾಗಿ.
- ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ