ಕನ್ನಡಕ್ಕೆ, ಕರ್ನಾಟಕಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟ ಶಿವರಾಮ ಕಾರಂತರು ಕೇವಲ ಒಬ್ಬ ವ್ಯಕ್ತಿಯಲ್ಲ; ಅವರೊಂದು ಶಕ್ತಿ; ಬುದ್ಧಿಬಲ ಮತ್ತು ಸಾಮಾಜಿಕ ಕಳಕಳಿಯನ್ನಾಧರಿಸಿದ ಒಂದು ಬೃಹತ್ ಸಂಸ್ಥೆ ಎಂದರೂ ತಪ್ಪಲ್ಲ.
ಸಾಹಿತಿಯಾಗಿಯೇ ಅವರ ವ್ಯಕ್ತಿತ್ವಕ್ಕೆ ವಿಭಿನ್ನ ಮುಖಗಳಿವೆ. ಸೃಜನಶೀಲ ಕಲಾಕಾರನಾಗಿಯೂ ಅವರ ಕೊಡುಗೆ ಬಗ್ಗೆ ಸಾಕಷ್ಟು ವಿಮರ್ಶೆಗಳಾಗಿವೆ. ಪತ್ರಿಕೋದ್ಯಮಕ್ಕೆ, ರಾಜಕೀಯಕ್ಕೆ ಮತ್ತು ಸಾಮಾಜಿಕ ಸುಧಾರಣೆಗೆ ಅವರು ತಮ್ಮ ಜೀವನದ ಮಹತ್ತರ ಸಮಯ ನೀಡಿದ್ದರೂ ಅದರ ಬಗ್ಗೆ ಸೂಕ್ತ ಚರ್ಚೆಯಾಗಿಲ್ಲ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ.
ಬಹುಶಃ ಕಾರಂತರ ಸಹೋದರರಲ್ಲಿ ಒಬ್ಬರಾದ ಕೆ.ಆರ್ ಕಾರಂತ ರಾಜಕಾರಣದಲ್ಲಿಯೂ, ಇನ್ನೊಬ್ಬ ಅಧ್ಯಾಪಕ ಕೆ.ಎಲ್ ಕಾರಂತರು ಸಾಮಾಜಿಕ ಆಂದೋಳನದಲ್ಲಿಯೂ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಇವೆರಡು ರಂಗಗಳಲ್ಲಿ ಶಿವರಾಮ ಕಾರಂತರು ನಿರ್ವಹಿಸಿದ ಪಾತ್ರ ಹಿನ್ನೆಲೆಗೆ ಸರಿದಿರಬಹುದೇನೋ.
ಕುಡಿಮೀಸೆ ತರುಣ ಕಾರಂತರಲ್ಲಿ ಸಮಾಜ ಸುಧಾರಣೆಯ ಕೆಚ್ಚು ಬಹಳವಿತ್ತು. ಅವರು ಸಾಹಿತ್ಯ ಕೃತಿ ರಚನೆ ಪ್ರಾರಂಭಿಸಿದ್ದು, ಅದರ ಜೊತೆಯಲ್ಲಿಯೇ ಪತ್ರಿಕಾ ಪ್ರಕಟಣೆಗೆ ಕೈ ಹಾಕಿದ್ದು, ಮೂಲತಃ ಸಮಾಜ, ಸಮಾಜದಲ್ಲಿರುವ ಕುಂದುಕೊರತೆಗಳನ್ನು ನಿವಾರಿಸುವ ಉದ್ದೇಶದಿಂದಲೇ ಎಂಬುದು ಅವರ ಪ್ರಾರಂಭಿಕ ಬರವಣಿಗೆಗಳಿಂದ ಶ್ರುತಪಡುತ್ತದೆ.
ಕಾರಂತರ ಸಾಮಾಜಿಕ ಚಿಂತನೆ ಮುಂದಿನ ಜನಾಂಗದ ಬಗೆಗಿನ ಕಾಳಜಿಯೊಂದಿಗೆ ಪ್ರಕಟಗೊಳ್ಳುತ್ತದೆ. ಸ್ವತಃ ತಮ್ಮ ಮಕ್ಕಳನ್ನು ಬೆಳೆಸುವುದರಿಂದ ಹಿಡಿದು ನಾಡಿನ ಎಲ್ಲ ಮಕ್ಕಳ ಮಾನಸಿಕ ಅಭ್ಯುದಯಕ್ಕೆ ಅವರು ನಡೆಸಿದ ಪ್ರಯೋಗಗಳು, ಪ್ರಾಮಾಣಿಕ ಪ್ರಯತ್ನಗಳು ಈ ಹಿರಿಯರ ಹೃದಯದಾಳವನ್ನು ತೆರೆದಿಡುತ್ತವೆ.
ಮಕ್ಕಳ ಓದು, ಕಲಿಕೆ, ಮನೋರಂಜನೆ ಈ ಚಿಣ್ಣರ ವ್ಯಕ್ತಿತ್ವ ವಿಕಸಿಸುವಂತಿರಬೇಕು ಎಂಬ ಮಹದಾಸೆಯಿಂದ ಪುತ್ತೂರಿನಲ್ಲಿ ಕಾರಂತರು ಸ್ಥಾಪಿಸಿದ ಬಾಲವನ, ನಿರಂತರವಾಗಿ ದುಡಿದು ರಚಿಸಿದ ವೈಜ್ಞಾನಿಕ ವಿಷಯ ವಿಶ್ವಕೋಶಗಳು, ಜಾನಪದ ಪ್ರಯೋಗಗಳು ಹೀಗೆ ಪ್ರತಿಯೊಂದೂ ಅವರ ಸಾಮಾಜಿಕ ಕಳಕಳಿಗೆ ಅವಿಚ್ಛಿನ್ನ ಸಾಕ್ಷಿಯಾಗಿ ಬೆಳಗುತ್ತಿವೆ.
***
ಡಾ. ಶಿವರಾಮ ಕಾರಂತರು ವಿಚಾರವಾಣಿ ಎಂಬ ಪತ್ರಿಕೆಯನ್ನೂ ನಡೆಸಿದರು. ವಿಭಿನ್ನ ದೃಷ್ಟಿಕೋನಗಳೊಂದಿಗೆ ಎಂದಿನಂತೆ ಸಾಹಿತ್ಯ, ಕಲೆ, ಶಿಕ್ಷಣ, ಕೈಗಾರಿಕೆ, ಗುಡಿಕೈಗಾರಿಕೆ ಕನ್ನಡ ನಾಡುನುಡಿಗಳ ಸಮಗ್ರ ಅಭಿವೃದ್ಧಿಗೆ ಮಾಧ್ಯಮವನ್ನಾಗಿಸಿ ಮುನ್ನಡೆದರು. ವಿಜ್ಞಾನ, ಸಂಶೋಧನೆಗಳ ಬಗ್ಗೆ ಸರಳ ಭಾಷೆಯಲ್ಲಿ ಅನೇಕ ಲೇಖನಗಳಿದರಲ್ಲಿ ಅಚ್ಚುಗೊಳ್ಳುತ್ತಿದ್ದೊಂದು ವಿಶೇಷ. ಕೆಲವೇ ವರ್ಷಗಳಲ್ಲಿ ವಿಚಾರವಾಣಿ ಕೈ ಬದಲಾಯಿಸಿ ಮತ್ತೊಂದು ದಶಕ ಕಾಲ ಮುಂದುವರಿದಿತ್ತು.
ರೇಖಾಚಿತ್ರ: ನಾಡಿಗ್
ಯಾವ ಪತ್ರಿಕೆಯೇ ಆಗಲಿ - ತನ್ನನ್ನು ಕೇಳಿಕೊಳ್ಳಬೇಕಾದ ಪ್ರಶ್ನೆಯಿದೆಯೆಂದು ಕಾರಂತರು ಆಗಲೇ ಗುರುತಿಸುತ್ತಾರೆ. ಯಾವ ಕೊರತೆ ನೀಗಿಸಲು ಅದು ಕೆಲಸ ಮಾಡುತ್ತದೆ ಎಂಬ ಕಲ್ಪನೆ ಸಂಪಾದಕನಿಗಿರಬೇಕು ಎನ್ನುತ್ತಾರೆ. ಬೇರೆ ಬೇರೆ ಅಭಿರುಚಿಯ ಜನ ಇದ್ದೇ ಇರುವುದು ನಾಗರಿಕ ಸಮಾಜದ ಲಕ್ಷಣ. ಸಂಪಾದಕ ತನ್ನ ಓದುಗರ ಗುಂಪನ್ನು ಆರಿಸಿಕೊಳ್ಳಬೇಕಾದ ಎಚ್ಚರಿಕೆಯನ್ನು ನೀಡುತ್ತಾರೆ. “ನಮ್ಮ ನಾಡಿನ ಪತ್ರಿಕೆಗಳು ಯಾವುದನ್ನು ತೆಗೆದರೂ ವಿಜ್ಞಾನ, ಕಲೆ, ಸಾಹಿತ್ಯ, ತತ್ವಜ್ಞಾನ ಎಲ್ಲ ತುಂಬಿರುತ್ತವೆ, ಆದರೆ ಯಾವುದೂ ಆಳವಾಗಿರದೆ ಯಾರನ್ನೂ ತೃಪ್ತಿಪಡಿಸದೆ ಹೋಗುತ್ತವೆ" ಎಂದು ವಿಷಾದಿಸುತ್ತಾರೆ. ಪರದೇಶಗಳಲ್ಲಿ ಸಂಶೋಧನೆಯ ಆಧಾರದ ವೈಜ್ಞಾನಿಕ ಲೇಖನಗಳನ್ನು ಬರೆಯುವ ಮಟ್ಟಕ್ಕೆ ನಮ್ಮ ಪತ್ರಿಕೆಗಳು ಬರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಾರೆ. ನಮ್ಮ ಪಾಪ್ಯುಲರ್ ಪತ್ರಿಕೆಗಳು ವಿಜ್ಞಾನ, ರಾಜನೀತಿ, ಕಲೆ, ಸಂಸ್ಕೃತಿ, ತತ್ವಜ್ಞಾನ ಎಲ್ಲವನ್ನೂ ಕೊಡಬೇಕು. ಆದರೆ ಜನಸಾಮಾನ್ಯರಿಗೆ ಸುಲಭ ಗ್ರಾಹ್ಯವಲ್ಲದ ತೀರಾ ಶಾಸ್ತ್ರೀಯ ಭಾಷೆಯ ಶೈಲಿಯಲ್ಲಲ್ಲ; ಕುತೂಹಲ, ಜ್ಞಾನಪಿಪಾಸಿಗೆ ಆಹಾರವಾಗುವ ರೀತಿಯಲ್ಲಿ'' ಎಂದು ಪತ್ರಿಕೋದ್ಯಮಕ್ಕೆ ಪ್ರತ್ಯೇಕ ಶೈಲಿ, ಭಾಷೆ ಬೆಳೆಸಿಕೊಳ್ಳಬೇಕಾದ ಅಗತ್ಯವನ್ನು ಐವತ್ತು ವರ್ಷಗಳ ಹಿಂದೆಯೇ ತಿಳಿಯ ಹೇಳುತ್ತಾರೆ. ಸಂಶೋಧನೆ ಮಾನವ ಜೀವನ ಬದಲಾಯಿಸುವ ಸಾಧ್ಯತೆ ಪರಸ್ಪರ ಸಂಬಂಧ ತೋರಿಸಿಕೊಡುವುದಲ್ಲದೆ, ಕತೆ ಕಾದಂಬರಿ ಓದುವಂತೆ ಅದನ್ನು ಓದಲು ಸಾಧ್ಯವಾಗಬೇಕು ಎಂಬ ಕಾಳಜಿಯು ವ್ಯಕ್ತಗೊಳ್ಳುತ್ತದೆ. ಸಂಸ್ಕೃತಿ, ಕಲಾಪ್ರಕಾರಗಳಲ್ಲೂ ಪತ್ರಿಕೆ ಕೆಲಸ ಮಾಡಬಹುದೆಂದು ಅವರು ಅಂದು ಹೇಳಿದ ಮಾತುಗಳು ಇಂದಿಗೂ ನಿಜವಾಗಿ ಪ್ರಕಟಗೊಳ್ಳುತ್ತಿವೆ.
ಸಂಪಾದಕನ ಪ್ರಾಮುಖ್ಯತೆ ಹೇಳುತ್ತಲೇ ಕಾರಂತರು "ಹೀಗೆನ್ನುತ್ತಲೇ ಪತ್ರಿಕೆ ಬರಿಯ ಒಂಟಿ ವ್ಯಕ್ತಿಯ ಬಾಯಿ ತುಪಾಕಿಯಲ್ಲ, ಒಬ್ಬ ವ್ಯಕ್ತಿಯ ನೇತೃತ್ವದಲ್ಲಿ ವ್ಯವಸ್ಥಿತವಾಗಿ ಸಜ್ಜುಗೊಂಡ ವಿಚಾರಶೀಲರ, ಸಾಹಿತಿಗಳ, ಕಲಾವಿದರ, ಕಸುಬುದಾರರ ಕೂಟವೆಂದು ತಿಳಿಯಬೇಕು'' ಎಂದು ನೆನಪಿಸಲು ಮರೆಯುವುದಿಲ್ಲ. ಈ ಕೆಲಸ ಸಾಂಗವಾಗಿ ನಡೆಯಲು ಸಂಪಾದಕರು ಸಮನಾದ ಆರ್ಥಿಕ ಬಲವನ್ನು ಪಡೆಯಬೇಕು. ಒಳ್ಳೆಯ ವಾಚನಾಲಯ, ಪತ್ರಿಕೆಗಳ ಸಂಗ್ರಹಗಳ ಜೊತೆಗೆ ತಾನು ಪ್ರವಾಸ, ಜನಪರಿಚಯಗಳಿಂದ ತನ್ನ ಅನುಭವವನ್ನು ನಿತ್ಯವೂ ಚುರುಕುಗೊಳಿಸಲು ಆತುರನಾಗಿರಬೇಕು" ಎಂದು ಸಂಪಾದಕನಿಗಿರಬೇಕೆಂದು ಅವರು ನಿರ್ವಹಿಸಿದ ಗುಣಗಳು ಇಂದಿಗೂ ಸತ್ಯ.
ನಾವು ಮಾಡಬೇಕಾದ ಕೆಲಸದ ವಿಸ್ತೃತಿ ತಿಳಿದಿದ್ದರೆ, ಆಗ ಅದನ್ನು ನೆರವೇರಿಸಲು ಸಂಪಾದಕನಿಗಿರ ಬೇಕಾದ ಶಿಕ್ಷಣ, ಸಲಕರಣೆ ಏನೆಂದು ತಿಳಿಯುವುದು ಕಷ್ಟವಲ್ಲ. ಅದರ ಬದಲು ಕನ್ನಡದ ಸೇವೆ, ಜನತಾ ಸೇವೆ ಎಂಬ ದೊಡ್ಡ ಮಾತುಗಳೇ ನಮ್ಮ ಮೋಹದ ವಸ್ತುಗಳಾದರೆ ಪತ್ರಿಕೆ ಜೀವ ತಾಳಲಾರದು. ಆ ಸೇವೆ, ಕಾರ್ಯರೂಪ, ವಿಸ್ತಾರಗಳ ಅರಿವಿಲ್ಲದವರಿಗೆ ಇಂಥ ಸಂಕತಗಳಿಂದ ತಮ್ಮನ್ನೇ ಮರುಳುಗೊಳಿಸಿಕೊಳ್ಳುವುದು ಸುಲಭ''.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ