ಮೈಸೂರು: ಅಭಿನವ ಶಂಕರಾಲಯದ ಶತಮಾನೋತ್ಸವಕ್ಕೆ ಸಂಭ್ರಮದ ತೆರೆ

Upayuktha
0
ಶತಮಾನ ಪೂರ್ಣಗೊಳಿಸಿದ ನಗರದ ಅಭಿನವ ಶಂಕರಾಲಯದಲ್ಲಿ ಶಾರದಾ ಮಾತೆಗೆ ಲಕ್ಷ ಮಲ್ಲಿಗೆ ಪುಷ್ಪಾರ್ಚನೆ ನೆರವೇರಿತು.


* ಶಾರದಾಂಬೆಗೆ ಲಕ್ಷ ಮಲ್ಲಿಗೆ ಪುಷ್ಪಾರ್ಚನೆ

* ಒಂದು ವಾರದ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗೆ ಮಂಗಳ

* ಎಲ್ಲೆಲ್ಲೂ ಹರಡಿತ್ತು ಭಕ್ತಿ- ಭಾವದ ಘಮಲು

ಮೈಸೂರು: ಜಗನ್ಮಾತೆ  ಶ್ರೀ ಶಾರದಾಂಬೆಗೆ ಲಕ್ಷ ಮಲ್ಲಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶನಿವಾರ ಮೈಸೂರಿನ ಅಭಿನವ ಶಂಕರಾಲಯದ ಶತಮಾನೋತ್ಸವ ಸಂಭ್ರಮದ ಸಂಭ್ರಮದ ತೆರೆ ಎಳೆಯಲಾಯಿತು. ಕಳೆದ ಒಂದು ವಾರದಿಂದ ಐತಿಹಾಸಿಕ ದೇಗುಲದ ಆವರಣದಲ್ಲಿ ಮೂಡಿದ್ದ ಸಂಭ್ರಮಕ್ಕೆ ಸಾಕ್ಷಿಯಾದ ಶಾರದಾಂಬೆ, ಸತ್ಯನಾರಾಯಣ,  ಜಗದ್ಗುರು ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳ ದೇಗುಲದಲ್ಲಿ ಶನಿವಾರ ಮಲ್ಲಿಯೆಯದ್ದೇ ಘಮಲು.


ಶಿಖರ ಕುಂಭಾಭಿಷೇಕ, ಕಳಸ ಪ್ರತಿಷ್ಠಾಪನೆ, ವಿವಿಧ ಹೋಮ, ಹವನ, ಆದುಕಾ ಪೂಜೆ,  ಪಾರಾಯಣಗಳಿಗೆ ಪಂಡಿತರ ದಂಡೇ ವಾರದಿಂದ ಇಲ್ಲಿ ಬೀಡು ಬಿಟ್ಟಿತ್ತು. ಅವರೆಲ್ಲರಿಗೂ ಶನಿವಾರ ಧನ್ಯತಾ ಭಾವ. ನೂತನ ಶ್ರೀ ಸಚ್ಚಿದಾನಂದ ವಿಲಾಸ  ಗುರುಭವನವಂತೂ ಸಂಸ್ಥಾನ ಪೂಜೆ, ಚಂದ್ರಮೌಳೇಶ್ವರನ ಆರಾಧನಾ ನೆಲೆಯಾಗಿ, ಗುರುಪೀಠಕ್ಕೆ ವೇದಿಕೆಯಾಗಿ ರಾರಾಜಿಸಿತು.


ಶನಿವಾರ ಮುಂಜಾನೆಯಿಂದ ವೇದ ಘೋಷದೊಂದಿಗೆ ಶಾರದಾಂಬೆಗೆ ವಿಶೇಷ ಅಭಿಷೇಕ, ಪೂಜೆ, ನೈವೇದ್ಯ ಸಮರ್ಪಣೆಯಾಯಿತು. ಶೃಂಗೇರಿಯ ನೂರರು ವೇದ ವಿದ್ವಾಂಸರು ಅಷ್ಟೋತ್ತರ, ಶ್ರೀ ಸೂಕ್ತ ಮತ್ತಿತರ ಮಂತ್ರೋಚ್ಛಾರಣೆ ಮೂಲಕ ಶಕ್ತಿ ಶಾರದೆಗೆ ನಮಿಸಿದ್ದು, ವಾರಪೂರ್ಣ ಚಟುವಟಿಕೆಗಳನ್ನು ಆಕೆಯ ಪಾದ ಕಮಲಗಳಿಗೆ ವಿನಮ್ರವಾಗಿ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು.


ಎಲ್ಲವೂ ಪರಮ ಗುರುಗಳ ಕೃಪೆಯಿಂದಲೇ  ಆಗಿದೆ. ಜಗದ್ಗುರು ಶ್ರೀ ವಿಧುಶೇಖರ ಭಾರತೀತೀರ್ಥರ ಆಜ್ಞೆ ಮತ್ತು ಆದೇಶದಂತೆ ಸಕಲ ಸೇವೆಗಳೂ ಸಂಪನ್ನಗೊಂಡಿವೆ ಎಂಬ ಆತ್ಮಾನಂತ ಎಲ್ಲರಲ್ಲೂ ಕಂಡುಬಂತು. ನಾನು- ನನ್ನಿಂದಲೇ ಎಂಬ ಲವಲೇಶ ಸ್ವಾರ್ಥವೂ ನೆರೆದ ಭಕ್ತಗಣದಲ್ಲಿ ಕಾಣಲೇ ಇಲ್ಲ. ಎಲ್ಲೆಲ್ಲೂ ಭಕ್ತಿ- ಭಾವವೇ ಮೇಳೈಸಿದ್ದು, ಅದಕ್ಕೆ ಶನಿವಾರ ಮಂಗಳಾಚರಣೆ ! .


ಈ ಸಂದರ್ಭಕ್ಕೆ ನೂರಾರು ಭಕ್ತರು ಸಾಕ್ಷಿಯಾದರು. ಶಾರದೆಗೆ  ಮಂಗಳಾರತಿ ಸಮರ್ಪಿಸಿದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ, ಒಂದು ವಾರಗಳ ಕಾಲ ವಿಶೇಷ ಉತ್ಸವಕ್ಕೆ ಶ್ರಮಿಸಿದ ನೂರಾರು ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಗುಮೊಗದಿಂದ ಹರಸಿದರು.


ಮುಂದಿನ ನೂರಾರು ವರ್ಷಗಳ ವರೆಗೆ ಈ ತಾಣದಲ್ಲಿ ಸನಾತನ ಪರಂಪರೆಯ ಚಟುವಟಿಕೆಗಳು ಇಲ್ಲಿ ವಿಜೃಂಭಿಸಲಿ ಎಂದು ಆಶೀರ್ವದಿಸಿದರು.


ನಂತರ ಶ್ರೀ ಸಚ್ಚಿದಾನಂದ ವಿಲಾಸ  ಗುರುಭವನದಲ್ಲಿ  ಸ್ವಾಮೀಜಿ ಪಾದಪೂಜೆ ಸ್ವೀಕಾರ ಮಾಡಿದರು. ಭಕ್ತರಿಗೆ ಫಲ, ಮಂತ್ರಾಕ್ಷತೆ ನೀಡಿದರು. ನೂರಾರು ಮಾತೆಯರು ಗುರುನಮನ ಸಮರ್ಪಿಸಲು ಗುರುಚರಿತ್ರೆ ಪಾರಾಯಣ ಮಾಡಿದರು.


ಶಿವಾನಂದ ಲಹರೀ, ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ ಅನುರಣಿಸಿದವು. ಎಲ್ಲರಿಗೂ ತೀರ್ಥ ಪ್ರಸಾದ ವಿತರಣೆ ನೆರವೇರಿತು. ಅಭಿನವ ಶಂಕರಾಲಯದ ಧರ್ಮಾಧಿಕಾರಿ ಎಚ್. ರಾಮಚಂದ್ರನ್, ಮಠದ ವ್ಯವಸ್ಥಾಪಕ ಶೇಷಾದ್ರಿ ಭಟ್ ಇತರರು ಇದ್ದರು.


* ರಂಜಿಸಿದ ಸಂಗೀತ

ಖ್ಯಾತ ಕಲಾವಿದೆ ಅಪರ್ಣಾ ಪಂಡಿತ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ರಂಜಿಸಿತು. ರೂಪನಗುಡಿ ರತ್ನತೇಜ ಪಿಟೀಲು ಮತ್ತು ಪ್ರಣವ ಸುಬ್ರಹ್ಮಣ್ಯ ಅವರು ಮೃದಂಗ  ಪಕ್ಕವಾದ್ಯ ಸಹಕಾರ ನೀಡಿದರು.


ವಿಶೇಷ ಅಂಚೆ ಲಕೋಟೆ ಬಿಡುಗಡೆ:



ಮೈಸೂರಿನ ಶೃಂಗೇರಿ ಶ್ರೀ ಶಂಕರ ಮಠದ ಅಭಿನವ ಶಂಕರಾಲಯದ ಶತಮಾನೋತ್ಸವದ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಲಕೋಟೆಯನ್ನು ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಗುರುವಂದನಾ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿ ಆಶೀರ್ವದಿಸಿದರು. ಶ್ರೀಮಠದ ಆಡಳಿತಾಧಿಕಾರಿ ಶ್ರೀ ಪಿ ಎ ಮುರಳಿ, ಧರ್ಮಾಧಿಕಾರಿ ಶ್ರೀ ಹೆಚ್ ರಾಮಚಂದ್ರ, ಸಪ್ತಮಾತೃಕ ದೇವಸ್ಥಾನದ ಅಧ್ಯಕ್ಷರಾದ ಕೆ ಭಾಸ್ಕರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ನಂ ಶ್ರೀಕಂಠ ಕುಮಾರ್ ಉಪಸ್ಥಿತರಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top