ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಆಚಾರ್ಯರಾದ ಬ್ರಹ್ಮಶ್ರೀ ಪಾಂಡೇಲು ಶಿವಶಂಕರ ಭಟ್ಟ ಕಿಳಿಂಗಾರು ಹಾಗೂ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶತಂತ್ರಿಗಳನ್ನು ಶ್ರೀಕ್ಷೇತ್ರದಲ್ಲಿ ಪೂರ್ಣಕುಂಭ ಸ್ವಾಗತವನ್ನು ನೀಡಿ ಬರಮಾಡಿಕೊಳ್ಳಲಾಯಿತು. ಏಪ್ರಿಲ್ 21ರಿಂದ ಏಪ್ರಿಲ್ 30ರ ತನಕ ಬ್ರಹ್ಮಕಲಶೋತ್ಸವವು ನಡೆಯಲಿರುವುದು. ಆಡಳಿತಮೊಕ್ತೇಸರ ಶಂಕರನಾರಾಯಣ ಭಟ್ ಕೆ.ಎಂ. ಮುಂದಾಳುತ್ವದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಕುಂಟಿಕಾನ ಮಠದ ಮನೆಯವರು, ಭಗವದ್ಭಕ್ತರು ಜೊತೆಗಿದ್ದರು. ತಂತ್ರಿವರ್ಯರ ನೇತೃತ್ವದಲ್ಲಿ ಶ್ರೀದೇವರ ಮುಂಭಾಗದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಿಂದ ಹಸಿರುವಾಣಿ
ಬದಿಯಡ್ಕ: ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಿಂದ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಾರಂಭದ ದಿನ ಭಾನುವಾರ ಹಸಿರುವಾಣಿ ಸಮರ್ಪಣೆ ನಡೆಯಿತು. ಶ್ರೀ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲು, ಡಾ. ಶ್ರೀನಿಧಿ ಸರಳಾಯ ಬದಿಯಡ್ಕ, ಜಗನ್ನಾಥ ರೈ ಕೊರೆಕ್ಕಾನ, ಭಗವದ್ಭಕ್ತರು, ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಕೆ.ಎಂ. ಪ್ರಾರ್ಥನೆಯನ್ನು ಸಲ್ಲಿಸಿದರು.
ನೆನೆದ ಕಾರ್ಯ ನೆರವೇರಬೇಕಾದರೆ ದೇವರ ಅನುಗ್ರಹವಿರಬೇಕು
ಕುಂಟಿಕಾನ ಮಠ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಎಡನೀರು ಶ್ರೀಗಳು
ಬದಿಯಡ್ಕ: ನೆನೆಸಿದ ಕಾರ್ಯಗಳು ನೆರವೇರಬೇಕಾದರೆ ದೇವರ ಅನುಗ್ರಹವಿರಬೇಕು. ಮನುಷ್ಯ ಪ್ರಯತ್ನ ಎಷ್ಟೇ ಇದ್ದರೂ ದೈವಸಂಕಲ್ಪ ಬೇರೆಯಿರುತ್ತದೆ. ಈ ಕ್ಷೇತ್ರವು ಸುಂದರವಾಗಿ ರೂಪುಗೊಂಡಿರುವುದು ಶಂಕರನಾರಾಯಣನ ಅನುಗ್ರಹ ಭಗವದ್ಭಕ್ತರ ಭಕ್ತಿಯ ಫಲ ಎನ್ನಬಹುದು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.
ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮೊದಲ ದಿನ ಭಾನುವಾರ ಜರಗಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೀಪಬೆಳಗಿಸಿ ಚಾಲನೆಗೈದು ಅವರು ಆಶೀರ್ವಚನವನ್ನು ನೀಡಿದರು. ಭಗವದ್ಭಕ್ತರ ತಪಸ್ಸಿನ ಫಲವಾಗಿ ದೇವರ ಅನುಗ್ರಹವಾಗಿದೆ. ದೇವಸ್ಥಾನಗಳು ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಮುಂದುವರಿಯಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಶ್ರೀಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ದುಡಿದ ಬಿ.ವಸಂತಪೈ ಬದಿಯಡ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಂಡಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ, ಮುಂಬೈ ಉದ್ಯಮಿ ಕೃಷ್ಣಪ್ರಸಾದ ರೈ ಕುತ್ತಿಕಾರು, ಫಿಟ್ ಪರ್ಸನ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ರಮಾನಾಥ ಶೆಟ್ಟಿ, ಕೇರಳ ಸರಕಾರದ ಸಾರ್ವಜನಿಕ ಆಡಳಿತ ವಿಭಾಗದ ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಐಎಎಸ್, ಮಾತೃಸಮಿತಿ ಅಧ್ಯಕ್ಷೆ ಜಯಂತಿ ವಿ. ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು ಸ್ವಾಗತಿಸಿ, ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್(ರಿ) ಅಧ್ಯಕ್ಷ ವಿ.ಬಿ.ಕುಳಮರ್ವ ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಕೆ.ಎಂ.ಶ್ಯಾಮಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಶ್ಯಾಮಪ್ರಸಾದ ಕುಳಮರ್ವ ನಿರೂಪಿಸಿದರು.
ಕುಂಟಿಕಾನ ಮಠದಲ್ಲಿ ಭಜನಾ ಝೇಂಕಾರ, ಇಂದು ಶಾಂತಿ ಹೋಮಗಳು
ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಎರಡನೇ ದಿನ ಸೋಮವಾರ ಬೆಳಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರಿಂದ ಗಣಪತಿ ಹೋಮ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಬಿಂಬ ಶುದ್ಧಿ, ಅಂಕುರ ಪೂಜೆ ನಡೆಯಿತು. ಶ್ರೀ ಅನ್ನಪೂರ್ಣೇಶ್ವರಿ ಭಜನಾ ಸಂಘ ಕುಂಟಿಕಾನ, ಶ್ರೀ ವೀರಾಂಜನೇಯ ಬಾಲಗೋಕುಲ ಏಣಿಯರ್ಪು, ಶ್ರೀ ಕುದ್ರೆಕ್ಕಾಳಿ ಅಮ್ಮ ಭಜನಾ ಸಂಘ ರತ್ನಗಿರಿ, ಶ್ರೀ ಕುಮಾರಸ್ವಾಮಿ ಮಹಿಳಾ ಭಜನಾ ಸಂಘ ಪುತ್ತಿಗೆ, ಶ್ರೀ ಉದನೇಶ್ವರ ಭಕ್ತವೃಂದ ಭಜನಾ ಮಂಡಳಿ ಬದಿಯಡ್ಕ, ಶ್ರೀ ಮಹಾವಿಷ್ಣು ಭಜನಾ ಸಂಘ ಮುಂಡಿತ್ತಡ್ಕ ಭಜನಾ ಝೇಂಕಾರದಲ್ಲಿ ಪಾಲ್ಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ ವಿದುಷಿ ಸರಸ್ವತಿ ಕೃಷ್ಣನ್ ಮತ್ತು ಬಳಗ ಸಾರಂಗ ಸಂಗೀತ ಶಾಲೆ ಕುಮಾರಮಂಗಲ ಬೇಳ ಇವರಿಂದ ಸಂಗೀತ ಕಚೇರಿ, ಅಪರಾಹ್ನ ಪರಮೇಶ್ವರ ಆಚಾರ್ಯ ಕಲಾಸೇವಾ ಪ್ರತಿಷ್ಠಾನ ನೀರ್ಚಾಲು ಇವರಿಂದ ಯಕ್ಷಗಾನ ತಾಳಮದ್ದಳೆ ವಾಮನ ಚರಿತ್ರೆ, ಸಂಜೆ ೭ರಿಂದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಪ್ರದರ್ಶನಗೊಂಡಿತು. ಏ.23 (ಇಂದು) ಬೆಳಗ್ಗೆ ಗಣಪತಿ ಹೋಮ, ಶಾಂತಿ ಹೋಮಗಳು, ತ್ರಿಕಾಲಪೂಜೆ ನಡೆಯಲಿದೆ.
ಏ.24 (ನಾಳೆ)ಬುಧವಾರದ ಕಾರ್ಯಕ್ರಮಗಳು:
ಬೆಳಗ್ಗೆ ೬ ಗಂಟೆಗೆ ಗಣಪತಿ ಹೋಮ, ತತ್ವಹೋಮ, ತತ್ವಕಲಶಪೂಜೆ, ತತ್ವ ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ತ್ರಿಕಾಲಪೂಜೆ, ಅಂಕುರ ಪೂಜೆ, ಸಂಜೆ ಅನುಜ್ಞಾಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಬಿಂಬಶುದ್ಧಿ, ಕಲಶಪೂಜೆ ನಡೆಯಲಿದೆ. ಭಜನಾ ಸಂಘಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10 ಗಂಟೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಡಾ. ಹೇಮಶ್ರೀ ಹಾಗೂ ಕು. ವಾಣಿಶ್ರೀ ಕಾಕುಂಜೆ ಇವರಿಂದ, ಅಪರಾಹ್ನ 2ರಿಂದ ಹವ್ಯಕ ಯಕ್ಷಗಾನ ತಾಳಮದ್ದಳೆ ಕುಶಾಲಿನ ಲಡಾಯಿ, ಸಂಜೆ 6:30ರಿಂದ ಕುಂಟಿಕಾನಮಠ ಬಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಕುಂಟಿಕಾನ ಮಠ ಇವರ ಪ್ರಾಯೋಜಕತ್ವದಲ್ಲಿ ತುಡರ್ ಕಲಾವಿದರ್ ಕಳತ್ತೂರು ಇವರಿಂದ ತುಳು ಪೌರಾಣಿಕ ನಾಟಕ ವಿಶ್ವಜನನಿ ಪ್ರದರ್ಶನಗೊಳ್ಳಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

