ಕನ್ನಡ ಸಂಪಾದಕರು ತಾವು ಶಿಕ್ಷಣ ದೊರಕಿಸಿಕೊಳ್ಳದೇನೆ, ನಾಡಿನ ಶಿಕ್ಷಣಕ್ಕೆ ಹೊರಟ ಮಹೋಪಕಾರಿಗಳಾಗಿರುವುದರಿಂದಲೇ ಪತ್ರಿಕಾ ವ್ಯವಸಾಯದಲ್ಲಿ ಅಪಾರ ದಾರಿದ್ರ್ಯ ಉಂಟಾಗಿದೆ'' ಎಂದು ಡಾ. ಶಿವರಾಮ ಕಾರಂತರು ಆಡಿದ ಮಾತುಗಳಲ್ಲಿ ಹಲವಂಶಗಳು ಇಂದಿಗೂ ಪತ್ರಿಕೋದ್ಯಮ ರಂಗಕ್ಕೆ ಅಂಟಿಕೊಳ್ಳುತ್ತವೆ.
ಸ್ವಾತಂತ್ರ್ಯ ಬರುವ ವರ್ಷವೊಂದರ ಮೊದಲು ಕಾರಂತರು 'ವಾಹಿನಿ' ಎಂಬ ವಾರ್ಷಿಕ ಸಂಚಿಕೆಯೊಂದಕ್ಕೆ ಬರೆದ 'ಪತ್ರಿಕೆಗಳ ಬಡತನ' ಎಂಬ ಲೇಖನ ಭಾರತೀಯ ಪತ್ರಿಕಾರಂಗದ ಬಗ್ಗೆ ಅವರ ಖಡಾಖಡಿ ಅಭಿಪ್ರಾಯ ಸೂಚಿಸುತ್ತದೆ.
''...... ನಮ್ಮ ಜೀವನದಲ್ಲಿ ಅವು (ಪತ್ರಿಕೆ) ಪಡೆಯಬಹುದಾದ ಸ್ಥಾನವನ್ನು ಪಡೆಯಲು ಪ್ರಯತ್ನಿಸುತ್ತಿಲ್ಲವೆಂಬುದು ನನ್ನ ನೋವು. ಆ ಕಾರಣವನ್ನು ವಿಮರ್ಶಿಸುವುದು ನನ್ನ ಉದ್ದೇಶ. ನಾನೇ ಒಂದು ಕಾಲದಲ್ಲಿ ಕನ್ನಡ ಪತ್ರಿಕೆಯೊಂದರ ಸಂಪಾದಕನಾಗಿದ್ದೆ. ಪತ್ರಿಕೆ ಹೊರಡಿಸಿ, ಬರೆದು, ಮುದ್ರಿಸಿ, ಹೊತ್ತು ಮಾರಿ ಛಾಪಖಾನೆ ಸಾಲಗಳಿಂದ ಖಿನ್ನನಾಗಿ ಕೈಬಿಟ್ಟ ದಿವಸಗಳಿದ್ದವು. ಅದು ಸುಮಾರು 20 ವರ್ಷದ ಹಿಂದಿನ ಕತೆ... ಅಂದಿಗಿಂತ ಇಂದು ಪತ್ರಿಕೆಗಳ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಬಿಡಿ ಮಾರಾಟ ಹೆಚ್ಚಿದೆ. ಚೆನ್ನಾಗಿ ನಡೆಯುವ ಪತ್ರಿಕೆಯೊಂದು ತನ್ನ ಕಾಲ ಮೇಲೆ ನಿಲ್ಲುವ ಧೈರ್ಯದ ದಿವಸಗಳು ಬಂದಿವೆ. ಆದರೆ, ಈ ದೀರ್ಘಕಾಲದಲ್ಲಿ ಪತ್ರಿಕೆಗಳ ಯೋಗ್ಯತೆ ಮಾತ್ರ ಬೆಳೆದುಬಂದಿಲ್ಲ ಎಂದೇ ತೋರುತ್ತದೆ. ಅದಕ್ಕೆ ಆರ್ಥಿಕ ಬಡತನವನ್ನು ಮುಂದೆ ಇರಿಸುವುದುಂಟು. ಬುದ್ಧಿಯ ಬಡತನ ಅದಕ್ಕೆ ಕಾರಣವೆಂದು ನನಗೆ ಅನಿಸುತ್ತದೆ.''
ಅದೇ ಲೇಖನದಲ್ಲಿ ಅವರು ನಿಯತಕಾಲಿಕಗಳ ಬಗ್ಗೆ ವಿಮರ್ಶಿಸುತ್ತಾ ಹೀಗೆ ಹೇಳುತ್ತಾರೆ. 'ಪತ್ರಿಕೆ ಹೊರಡಿಸುವ ಯಾವನಿಗೇ ಆಗಲಿ- ಛಾಪಖಾನೆ ಸೌಕರ್ಯ ಬೇಕೇ ಬೇಕು. ಆದರೆ ಅದು ಇದೆ ಎಂಬುದರಿಂದಲೇ ಪತ್ರಿಕೆ ಹೊರಡಿಸುವುದು ಮೂರ್ಖತನ. ಅದಾಗಲಿ, ಜಾಹೀರಾತಿನ ವರಮಾನವಾಗಲಿ ಪತ್ರಿಕೆಯ ವರ್ಚಸ್ಸನ್ನು ಬೆಳೆಸಲು ಸಾಧನಗಳಲ್ಲ. ಆ ವರ್ಚಸ್ಸು- ಸಂಪಾದಕನನ್ನು ಮುಖ್ಯತಃ ಅವಲಂಬಿಸಿದೆ. ಅವನು ಕಲೆ ಹಾಕುವ ಲೇಖಕ ವರ್ಗ, ಚಿತ್ರಕಾರವರ್ಗವನ್ನು ಹೊಂದಿದೆ. ಪತ್ರಿಕೆಯ- ಓದುಗರ ವಿಸ್ತಾರವನ್ನುಹೊಂದಿದೆ. ಸಂಪಾದಕ ಬರಿಯ ಭಾಷಾ ಪಂಡಿತನಾದರೆ ಸಾಲದು, ಪತ್ರಿಕೆಯ ಗುರಿಗೆ ತಕ್ಕಂತಹ ಓದು, ಅನುಭವ, ಗೆಳೆತನ, ಪ್ರವಾಸ ಅವನಿಗೆ ಇರಬೇಕು. ಆತನ ಬರವಣಿಗೆಯಲ್ಲಿ ತೋರಿಸುವ ನಯ, ಚಾತುರ್ಯ, ಅಳತೆ, ಜನರಲ್ಲಿ ವಿಚಾರಗಳನ್ನು ಪ್ರೇರಿಸುವ ಬದಲು ಕೆರಳಿಸುವ ಶಕ್ತಿ- ಇವುಗಳಿಂದ ಓದುಗರ ಮೇಲೆ ಪರಿಣಾಮವಾಗಬೇಕು. ಓದುಗರ ಸಂಖ್ಯೆಯ ಮೇಲೆಯೇ ಪತ್ರಿಕೆಯ ಯೋಗ್ಯತೆ ನಿರ್ಣಯವಾಗಬೇಕಿಲ್ಲ. ಅವರ ಯೋಗ್ಯತೆಯೂ ಮುಖ್ಯ ವಿಷಯ. ಅಶ್ಲೀಲ ತುಂಬಿಸಿಯೋ; ಜನರ ಭಾವಾವೇಶಗಳಿಗೆ ಅಮಲು ಉಣಿಸಿಯೋ, ವ್ಯಕ್ತಿ ನಿಂದೆಯಲ್ಲಿ ಆಸಕ್ತಿ ತೋರಿಸಿಯೋ ಮಾನವ ಸಹಜವಾದ ಚಪಲತೆಯನ್ನು ಕೆರಳಿಸಬಹುದು. ಜನಕ್ಕೆ ಜನಾರ್ದನ ಕಛೇರಿಯ ಮೇಲೆ ತುಂಬ ಇಷ್ಟ. ಅದೇ ಮನೋವೃತ್ತಿಯನ್ನು ಹಿಂಬಾಲಿಸಿ, ಓದುಗರನ್ನು ಮಿಗಿಸಲು ಯತ್ನಿಸುವವರುಂಟು. ಅದನ್ನು ಎದೆಗಾರಿಕೆಯೆಂದು ಮೆರಯಿಸುವವರುಂಟು. ಊರುಕೇರಿಯಲ್ಲಿ ಗೂಂಡಾ ಜನ ಇರುವಂತೆ ಸಂಪಾದಕ ಗೂಂಡಾಜನ ಇರಬಹುದು. ಆದರೆ ಜನ ಉಗುಳುಬುಡ್ಡಿತನವನ್ನು ಎದೆಗಾರಿಕೆಯೆಂದು ತಿಳಿದಲ್ಲಿ - ಸಮಾಜದಲ್ಲಿ ನೀತಿ, ಅಳತೆ, ವಿಚಾರಶಕ್ತಿಗಳು ಮಾಯವಾದುವು. ನಮಗಿಂತ ಚೆನ್ನಾಗಿ ನಮ್ಮ ಮೋರೆಯ ಮೇಲೆ ಉಗುಳುವ ವೀರ ಮುಂದೆ ಬರುವ ತನಕ ಈ ಆಟ ನಡೆದೀತು. ಈ ಹೀನ ದಾರಿಯಲ್ಲಿ ಕೆಲವು ಸಂಪಾದಕರು ಕಾಲಿರಿಸುತ್ತಿರುವುದನ್ನು ಕಂಡು ಆಗುವ ನೋವು ಅಷ್ಟಿಷ್ಟಲ್ಲ."
"ಪತ್ರಿಕೋದ್ಯಮವಿಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಲಾಭದಾಯಕವಾಗಲು ಜಾಹೀರಾತನ್ನು ಅವಲಂಬಿಸಿದೆ. ಒಳ್ಳೆ ಮಟ್ಟದಲ್ಲಿ ಜಾಹೀರಾತು ಬರಬೇಕಾದರೆ ಪ್ರಸಾರ ಸಂಖ್ಯೆಯೂ ಒಳ್ಳೆಯದಿರಬೇಕು. ಇದಕ್ಕೆ ಸುದ್ದಿಗಾಗಿ ಹಾತೊರೆಯುವ ಓದುಗರು, ಅಧಿಕಾರದಾಹವುಳ್ಳ ರಾಜಕಾರಣಿಗಳು ಮಾತ್ರ ಇದ್ದರೆ ಸಾಲದು ; ಮಾಹಿತಿ, ಮನರಂಜನೆ ಬಯಸುವ ಲಕ್ಷಾಂತರ ಜನರಿರಬೇಕು" ಎಂದು ಬದಲಾಗುತ್ತಿರುವ ಪತ್ರಿಕಾಕ್ಷೇತ್ರವನ್ನು ಅವರು ಇಳಿಪ್ರಾಯದಲ್ಲಿ ವರ್ಣಿಸುತ್ತಾರೆ. ಹೊಸ ಪತ್ರಿಕೋದ್ಯಮದಲ್ಲಿ ಪತ್ರಕರ್ತ ಎಚ್ಚರ ತಪ್ಪಿದರೆ ಕಾನೂನು, ಕೋರ್ಟ್ ಹತೋಟಿ ಬರುವ ಬಗ್ಗೆಯೂ ಅವರು ಗಮನ ಸೆಳೆಯುತ್ತಾರೆ.
ತಾವೇ ಪತ್ರಿಕೋದ್ಯಮಿ ಪ್ರಕಾಶಕನಾಗಿ ಆರ್ಥಿಕ ಮುಗ್ಗಟ್ಟಿನಿಂದ ಹಿಂತೆಗೆದಿದ್ದರೂ ಸ್ವತಂತ್ರ ಭಾರತದಲ್ಲಿ ಭಾಷಾ ಪತ್ರಿಕೋದ್ಯಮ ಭರ್ಜರಿಯಾಗಿ ಅಭ್ಯುದಯಗೊಳ್ಳುತ್ತಿರುವುದರೊಂದಿಗೆ ಓದುಗರ ವೃತ್ತ ವಿಸ್ತರಿಸಿಕೊಂಡಿರುವುದರ ಬಗ್ಗೆಯೂ ಅವರು ಹರ್ಷ ವ್ಯಕ್ತಪಡಿಸುತ್ತಾರೆ.
ಸಾವನ್ನಪ್ಪುವ ಕೆಲ ದಿನಗಳ ಹಿಂದೆಯೂ ತೊಂಬತ್ತು ದಾಟಿದ್ದ ಕಾರಂತರು ಬರವಣಿಗೆ, ಪತ್ರಿಕಾ ಸಂದರ್ಶನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂಬ ವಸ್ತುಸ್ಥಿತಿಯನ್ನು ಪರಿಗಣಿಸಿದರೆ ಅವೆರಡೂ ಕ್ರಿಯೆಗಳು ಅವರ ಹೃದಯಕ್ಕೆಷ್ಟು ಹತ್ತಿರವಾಗಿದ್ದವು ಎಂಬುದು ನಿಚ್ಚಳವಾಗುತ್ತದೆ.
ಸ್ವಂತ ಪತ್ರಿಕೆಗಳೆರಡರಲ್ಲೂ ಕಾರಂತರು ಆರ್ಥಿಕವಾಗಿ ಫಲಪ್ರದರೆನಿಸಿಕೊಳ್ಳದಿದ್ದರೂ ಅವರ ಪತ್ರಿಕೋದ್ಯಮ ಆಸಕ್ತಿ ಕಿಂಚಿತ್ತೂ ಕುಂದಲಿಲ್ಲ. ಇಂಗ್ಲಿಷ್ ನ ಹೆಸರಾಂತ ಪತ್ರಿಕೆ ಇಲಸ್ಟ್ರೇಟೆಡ್ ವೀಕ್ಲಿಯೂ ಸೇರಿದಂತೆ ನಾಡಿನ ಹಲವಾರು ಪತ್ರಿಕೆ ನಿಯತಕಾಲಿಕಗಳಿಗೆ ಅವರು ನಿರಂತರವಾಗಿ ಲೇಖನ ಬರೆಯತೊಡಗಿದರು. ಅಂತಿಮ ವರ್ಷಗಳಲ್ಲಿ ಅವರು ತರಂಗ ವಾರ ಪತ್ರಿಕೆಯಲ್ಲಿ ಬಾಲವನದಲ್ಲಿ ಕಾರಂತಜ್ಜನಾಗಿ ಮಕ್ಕಳ ಅಂಕಣದಲ್ಲಿ ನೂರಾರು ಮಕ್ಕಳ ಸಂದೇಹ ಕುತೂಹಲಕ್ಕೆ ಸಮಾಧಾನವೀಯುತ್ತಿದ್ದರು.
ಹಾಗೆ ನೋಡಿದರೆ ಆಡು ಮುಟ್ಟದ ಸೊಪ್ಪಿಲ್ಲವೆನ್ನುತ್ತಾರೆ, ಅದೆಷ್ಟು ನಿಜ!. ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ ಎಂಬುದೂ ಅಷ್ಟೇ ನಿಜ. ಆದರೆ ಅಡುಗೆಗೆ ಆಗದ ಆಡುಸೋಗೆಯಿರುವಂತೆ, ಕಾರಂತರಿಗಿಷ್ಟವಾಗದ ರಂಗವೆಂದರೆ ರಾಜಕೀಯವೆಂದು ನನ್ನ ಅನಿಸಿಕೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ