ಮಲ್ಲಿಗೆಯ ಕಂಪಿನೊಂದಿಗೆ ಉತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಮಂದಿ ವಿಳಂಬಿನಾಮ ಸಂವತ್ಸರದ ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ ಗುರುವಾರ , ಏ. 23 ಇಡೀ ರಾತ್ರಿ ವೈಭವಯುತವಾಗಿ ನಡೆಯುತ್ತದೆ. ಶಕ್ತಿದೇವತೆ ಉಪಾಸನೆಯ ಕರಗಕ್ಕೂ ಯೌವನದ ಕಾವಿಗೂ ಇನ್ನಿಲ್ಲ ನಂಟು. ಬೆಳದಿಂಗಳಲ್ಲಿ ಮಿಂದ ಇರುಳಿನಲ್ಲಿ ನಡೆಯುವ ಕರಗದ ಆರಾಧನೆ ಮತ್ತು ಮೆರವಣಿಗೆಯಲ್ಲಿ ಮಲ್ಲಿಗೆ ಹೂಗಳು ಚೆಲ್ಲಾಡುತ್ತವೆ. ಹೂವಿನ ಕರಗ ಹೊತ್ತು ನಡೆಯುವ ಪೂಜಾರಿ ಹಾಗೂ ವೀರಕುಮಾರರ ಪಡೆ ಯೌವನದ ಉತ್ಸಾಹ ಹಾಗೂ ಜೀವನ ಪ್ರೀತಿಯನ್ನು ಊರೆಲ್ಲ ಪಸರಿಸುವಂತೆ ಕಾಣುತ್ತದೆ. ಕರಗ ಉತ್ಸವದ ಈ ಕಥನ, ಬದಲಾದ ಸಂದರ್ಭದಲ್ಲಿ ಬದಲಗದ ಕರಗದೊಂದಿಗಿನ ಹೊಸ ತಲೆಮಾರಿನ ನಂಟನ್ನು ಕುರಿತು ಹೇಳುತ್ತಿದೆ. ವಸಂತನ ಆಗಮದೊಂದಿಗೆ ಮರ ಗಿಡಗಳಲ್ಲಿ ಹೊಸ ಚಿಗುರು ಕಾಣುತ್ತಿದೆ. ಚೈತ್ರದ ಚಂದಿರ ಪೂರ್ಣವಾಗಿ ಕಾಣಲು ಇನ್ನು ಕೆಲವೇ ದಿನಗಳು ಉಳಿದಿವೆ. ಈ ಹುಣ್ಣಿಮೆ ವಿಶೇಷ ಸಂಭ್ರಮದೊಂದಿಗೆ ತಳಕು ಹಾಕಿಕೊಂಡಿದೆ. ಅದು 'ಕರಗ'ದ ಸಂಭ್ರಮ! ಸುವಾಸನೆ ಸೂಸುವ ಮಲ್ಲಿಗೆ ಹೂಗಳ ಉತ್ಸವ.
'ಬೆಂಗಳೂರು ಕರಗ ಬಹುಪ್ರಸಿದ್ಧ. ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ 'ಕರಗ' ಉತ್ಸವಗಳು ನಡೆಯುತ್ತವೆ. ಅನೇಕಲ್, ಹೊಸಕೋಟೆ, ಮಾಲೂರು, ಚಿಕ್ಕಬಳ್ಳಾಪುರ, ಕೈವಾರ, ವೇಮಗಲ್, ನರಸಾಪುರ- ಹೀಗೆ ಹಳ್ಳಿ ಪಟ್ಟಣಗಳಲ್ಲಿ 'ಕರಗ' ಹಬ್ಬ ಪ್ರತಿ ವರ್ಷದ ರೂಢಿ. ಸಾಮರಸ್ಯದ ಹಬ್ಬವೆಂದೇ ಹೆಸರಾದ ಕರಗ 'ಶಕ್ತಿಯ ಉತ್ಸವ'ವೂ ಹೌದು. ಈ ಉತ್ಸವದಲ್ಲಿ ವಹ್ನುಕುಲಸ್ಥರ (ತಿಗಳರು) ಮುಂದಾಳತ್ವ ಇದ್ದರೂ ಎಲ್ಲಾ ಧರ್ಮಿಯರೂ ಸಕ್ರಿಯವಾಗಿ ಭಾಗವಹಿಸುತ್ತಾರೆ. ಕರಗದ ಸಡಗರಕ್ಕೆ ಎಲ್ಲಾ ಊರುಗಳಲ್ಲಿ ಸಾಮಾನ್ಯನೆಲೆ ಶ್ರೀಧರ್ಮರಾಯ ಸ್ವಾಮಿ ದೇವಾಲಯ. ದ್ರೌಪದಿ ಕರಗ'ವೆಂದು ಕರೆದರೂ ಹಲವೆಡೆ ಗ್ರಾಮದೇವತೆಗಳೂ 'ಕರಗ'ಕ್ಕೆ ನೆಲೆ ನೀಡಿರುವುದಿದೆ. ತಿಗಳರು ವಾಸಿಸುವ ಬಹುತೇಕ ಎಲ್ಲಾ ಊರು-ಕೇರಿಗಳಲ್ಲೂ 'ಕರಗ'ದ ಉತ್ಸವ ಇದ್ದೇ ಇರುತ್ತದೆ.
ಕರಗ: ಮಲ್ಲಿಗೆ ಕಂಪು, ಬೆಳದಿಂಗಳ ಒನಪು!
ಈ ಭಾವೈಕ್ಯತೆಯ ಹಬ್ಬಕ್ಕೆ ಮೈಸೂರಿನ ಯದುವಂಶದ ಅರಸರು ಪ್ರೋತ್ಸಾಹ ಕೊಟ್ಟರು. ಧರ್ಮರಾಯ ಗುಡಿ ಕಟ್ಟಲು, 'ಕರಗ' ಹಬ್ಬಕ್ಕೂ ಅವರೇ ನೆರವು ನೀಡಿದರು.. ಬಹಳಷ್ಟು ಊರುಗಳಲ್ಲಿ ಕರಗಕ್ಕೆ ಆಹ್ವಾನ ಪತ್ರಿಕೆ ಅಚ್ಚಾಗುವುದು ಮೈಸೂರು ಅರಸರ ಹೆಸರಿನಲ್ಲಿ. ಇದು ಇಂದೂ ನಿಂತಿಲ್ಲ. ಪಾಂಡವರ ಕುಲಕ್ಕೆ ಸೇರಿದ ವಹ್ನಿ ಕುಲಸ್ಥರು ಆರಾಧಿಸುವ ಧರ್ಮರಾಯನ ದೇವಾಲಯಗಳಲ್ಲಿ ದ್ರೌಪದಿಗೆ ಹೆಚ್ಚಿನ ಪ್ರಾಧಾನ್ಯ. ಕರಗ ಶಕ್ತಿಯ ಮೂಲಸೆಲೆಯೇ ದ್ರೌಪದಿ ಎಂಬುದು ಇದಕ್ಕೆ ಕಾರಣ.
ಕೆಲವು ವಿಧಿವಿಧಾನಗಳನ್ನು ಹೊರತುಪಡಿಸಿದರೆ ಕರಗ ಕಾರ್ಯಕ್ರಮಗಳು ನಡೆಯುವುದೆಲ್ಲ ಸೂರ್ಯ ಮುಳುಗಿದ ಮೇಲೆ-ಚಂದಿರನ ಬೆಳಕಿನಲ್ಲಿ. ದೇವಾಲಯದ ಮುಂದೆ ಧ್ವಜಾರೋಹಣದಿಂದ ಕರಗೋತ್ಸವಕ್ಕೆ ಚಾಲನೆ. ಮೊದಲ ದಿನ-ಖಡ್ಗ, ವೀರ ಚಾವುಟಿ ಮತ್ತಿತರ ಪೂಜಾಪರಿಕರಗಳೊಂದಿಗೆ ಮೆರವಣಿಗೆ ನಡೆಯುತ್ತದೆ. ಆಯುಧಗಳ ಶುಚೀಕರಣವೂ ನಡೆಯುತ್ತದೆ. ಎರಡನೇ ದಿನ ಹಸಿ ಅಥವಾ ಹಸಕರಗ. ಬೆಂಗಳೂರಿನಲ್ಲಿ ಪೂಜಾರಿ ಹಸಿಕರಗವನ್ನು ಸೊಂಟದ ಮೇಲಿಟ್ಟುಕೊಂಡು ಸಾಗಿದರೆ, ಉಳಿದೆಡೆ ಪುಟ್ಟ ಹಲಗೆ ಅಥವಾ ತಟ್ಟೆಯಲ್ಲಿಟ್ಟುಕೊಂಡು ಕುಣಿಸುತ್ತ ಸಾಗುವುದಿದೆ. ಕೊಳಗದಲ್ಲಿ ಹಸಿಗಡಿಗೆಯೊಂದನ್ನು ಅಡಗಿಸಿಟ್ಟು, ಅದನ್ನು ಪೂಜಾರಿ ಹೊರತೆಗೆದು ತಾತ್ಕಾಲಿಕವಾಗಿ ಬಿಳಿ ಬಟ್ಟೆಗಳಿಂದ ಕಟ್ಟಿದ ಕುಟೀರಕ್ಕೆ ಹೊತ್ತೊಯ್ಯುತ್ತಾನೆ. ಅದನ್ನು ಮಲ್ಲಿಗೆ ಪುಷ್ಪಗಳಿಂದ ಅಲಂಕರಿಸಿ ವಾದ್ಯ-ಗಂಟೆನಾದದೊಂದಿಗೆ ಕುಣಿಸುತ್ತ ನಾಲ್ಕೈದು ಪೂಜಾಸ್ಥಾನಗಳಿಗೆ ಹೋಗಿ ಧರ್ಮರಾಯಸ್ವಾಮಿ ದೇವಾಲಯಕ್ಕೆ ತಲುಪುವುದು ಸಂಪ್ರದಾಯ.
ವೀರ ಕುಮಾರರು ಕರಗ ಶಕ್ತಿಯ ಉತ್ಸವಕ್ಕೆ ಕಳೆ ಕಟ್ಟಿಸುತ್ತಾರೆ. ಧ್ವಜಾರೋಹಣದಿಂದ ಮೊದಲ್ಗೊಂಡು ವಸಂತೋತ್ಸವ ಮುಗಿಯುವರೆಗೆ ಕಂಕಣ ಕಟ್ಟಿಕೊಂಡು ಗುಡಿಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಕಚ್ಚೆಪಂಚೆ, ಪೇಟಾ, ರುಮಾಲು, ಬನಿಯನ್- ಇವೆಲ್ಲ ವೀರಕುಮಾರರ ಪೋಷಾಕು. ಇವುಗಳಲ್ಲಿ ಪ್ರಮುಖವಾದ ಬಣ್ಣ ಹಳದಿ. 'ಗೋವಿಂದ-ಗೋವಿಂದ' ನಾಮಸ್ಮರಣೆಯೊಂದಿಗೆ ವೀರಕುಮಾರರು ಮೈತುಂಬಿಕೊಂಡು ಅಲಗುಸೇವೆ ಮಾಡುತ್ತಾರೆ. ಮೈಮೇಲೆ ಶಕ್ತಿ ಬಂದಾಗ ಖಡ್ಗಗಳಿಂದ ಎದೆಭಾಗಗಳಿಗೆ ಬಡಿದುಕೊಳ್ಳುವ ಸೇವೆಯಂತೂ ರೋಮಾಂಚಕಾರಿ.
ಹಸಿಕರಗದ ಮರುದಿನ ಪೊಂಗಲ್ ಉತ್ಸವ ಮತ್ತು ದೀಪೋತ್ಸವ. ವಹ್ನುಕುಲದ ಒಕ್ಕಲುಗಳಿಗೆ ಸೇರಿದ ಹೆಂಗಳೆಯರು ಹಸಿ ಹಿಟ್ಟಿನಿಂದ ಮಾಡಿದ ದೀಪಗಳನ್ನು ತಲೆಮೇಲೆ ಹೊತ್ತು ಗುಂಪುಗುಂಪಾಗಿ ಸಕಲ ವಾದ್ಯಗಳೊಡನೆ ಆಗಮಿಸಿ ಪೂಜೆ ಮಾಡಿಸುತ್ತಾರೆ. ದೀಪಾರಾಧನೆಯ ಮಾರನೆಯ ದಿನ ದ್ರೌಪದಿ-ಧರ್ಮರಾಯರ ಲಗ್ನ. ಎಲ್ಲ ಜಾತಿ ಧರ್ಮದವರೂ ಪಾಲ್ಗೊಳ್ಳುವ ಈ ವಿವಾಹದಲ್ಲಿ ವಿವಿಧ ವಸ್ತು ವಿಶೇಷಗಳು ಹೊಣೆಯನ್ನು ವಹ್ನುಕುಲಸ್ಥರೊಂದಿಗೆ ಬೇರೆ ಮತ ಧರ್ಮೀಯರೂ ಹೊತ್ತುಕೊಳ್ಳುವುದು ವೈಶಿಷ್ಟ್ಯಪೂರ್ಣ.
ಹೂವಿನ ಕರಗವನ್ನು ತಲೆ ಮೇಲೆ ಧರಿಸಿದ ಪೂಜಾರಿ ಗುಡಿ ಒಳಗಿನಿಂದ ಬರುವುದು ಎಲ್ಲರಿಗೂ ಕಾತುರದ ಕ್ಷಣ. ಭಾವುಕರ ನಿರೀಕ್ಷೆಯ ಕ್ಷಣಗಳ ನಡುವೆ ರಪ್ಪೆಂದು ರಾಚುವ ಮಲ್ಲಿಗೆಯ ವಾಸನೆಯೊಂದಿಗೆ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಹೂವಿನ ಕರಗ ಬರುತ್ತದೆ. ಸಂಪೂರ್ಣ ಮಲ್ಲಿಗೆ ದಂಡೆ, ಅಲ್ಲಲ್ಲಿ ಕನಕಾಂಬರದ ಅಲಂಕಾರಿಕ ಎಸಳುಗಳು, ಚುನ್ನೆರಿಯ ನಕ್ಷತ್ರಗಳು, ಪುಟ್ಟ ಬಣ್ಣದ ಪತಾಕೆಗಳು. ಶಿಖರದಲ್ಲಿ ಪುಟ್ಟ ಬ್ಯಾಟರಿ ಆಧಾರಿತ ಒಂಟಿದೀಪ. ದಂಡೆಯಲ್ಲಿ ಕಿರುನಗೆ ಸೂಸುವ ಗುಲಾಬಿದಳಗಳು. ಇವೆಲ್ಲ ವಿಶೇಷಗಳೊಂದಿಗೆ 'ಕರಗ' ದೇವಾಲಯದ ಆವರಣದಲ್ಲಿ ಪ್ರದಕ್ಷಿಣೆ ಹಾಕುತ್ತ ಹೊರಹೋಗುತ್ತದೆ. ಇದರ ಜೊತೆಗೆ, ವೀರಕುಮಾರರ ಅಲಗು ಸೇವೆ, ಶಂಖನಾದ, ಗಂಡೆಗಳ ಶಬ್ದ, ಗೋವಿಂದ ನಾಮಸ್ಮರಣೆ ಸಡಗರಕ್ಕೆ ಇಂಬು ನೀಡುತ್ತವೆ.
ಬೆಂಗಳೂರು ಕರಗಕ್ಕೂ ಉಳಿದೆಡೆ ನಡೆಯುವ ಹೂವಿನ ಕರಗಕ್ಕೂ ಆಚರಣೆಯಲ್ಲಿ ಕೊಂಚ ವ್ಯತ್ಯಾಸಗಳಿವೆ. ಬೆಂಗಳೂರಿನಲ್ಲಿ ಗೋವಿಂದ ನಾಮಸ್ಮರಣೆ, ಶಂಖ ಧ್ವನಿಯ ನಡುವೆ ಕರಗ ಮುಂದೆ ಸಾಗುತ್ತದೆ. ಬೇರೆ ಕೆಲವೆಡೆ ಗಂಟಾನಾದ, ತಮಟೆ ಸದ್ದು 'ಕರಗದ ಜೊತೆಗಿರುತ್ತದೆ. ಮಧ್ಯರಾತ್ರಿ ನಂತರ ಎತ್ತುವ ಕರಗ ಸೂರ್ಯೋದಯಕ್ಕೆ ಮೊದಲೇ ಗುಡಿ ಸೇರುವುದು ಬೆಂಗಳೂರಿನ ಸಂಪ್ರದಾಯ. ಬೇರೆ ಊರುಗಳಲ್ಲಿ 'ಕರಗ' ಮುಖ್ಯ ಭಾಗಗಳಿಗೆ ಭೇಟಿ ನೀಡುವುದೇ ಅಲ್ಲದೆ, ಮರುದಿನ ಸಂಜೆಯವರೆಗೆ ಸುತ್ತಾಡುವುದೂ ಇದೆ. ಕರಗ ಗರ್ಭಗುಡಿಗೆ ಸೇರುವ ಮೊದಲು ಅಗ್ನಿಕುಂಡ ಪ್ರವೇಶ ಕೂಡ ಕಾಯಂ ಆಚರಣೆ.
'ಓಕುಳಿಯಾಟ'
ಹೂವಿನ ಕರಗ ಮುಗಿದ ಎರಡು ದಿನಗಳ ಬಳಕೆ ಮಹಾಭರತ ಪಠಣ ಕಾರ್ಯಕ್ರಮ ನಡೆಯುತ್ತದೆ. ರಾತ್ರಿ ಪಠಣದ ಸಂದರ್ಭದಲ್ಲಿ ಪೋತುಲರಾಜು ಮೈ ಮೇಲೆ ಬಂದು. ಆತ ಜೀವಂತ ಮೇಕೆಯ ಕೊರಳನ್ನು ಹಲ್ಲಿನಿಂದ ಸೀಳೀ ರಕ್ತ ಹೀರುವ ಆಚರಣೆ ಇರುತ್ತದೆ. ಇದಾದ ಮರುದಿನ ಸಂಜೆ ವಸಂತೋತ್ಸವ. ಇದೊಂದು ರೀತಿ ಓಕುಳಿಯಾಟ, ವಹ್ನಿಕುಲದ ಮಹಿಳೆಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿದ ಅರಿಶಿಣ ಕಲಿಸಿದ ನೀರನ್ನು ಬಿಂದಿಗೆಗಳಲ್ಲಿ ತುಂಬಿಸಿ, ಮೆರವಣಿಗೆಯಲ್ಲಿ ಧರ್ಮರಾಯಸ್ವಾಮಿ ದೇಗುಲಕ್ಕೆ ನೀರಿನ ಬಿಂದಿಗೆಗಳನ್ನು ತಂದು ವೃತ್ತಾಕಾರವಾಗಿ ಅಥವಾ ಸಾಲಾಗಿ ಇಡುತ್ತಾರೆ.
ಕರಗದ ಪೂಜಾರಿ ಒನಕೆ ಮೇಲೆ ಅರಿಶಿಣ ನೀರು ತುಂಬಿದ ತೆರೆದ ಪಾತ್ರೆ ಇಟ್ಟುಕೊಂಡು ತಲೆ ಮೇಲೆ ಹೊತ್ತುಕೊಂಡು ಕುಣಿಯುತ್ತಾರೆ. ಇದಾದ ಮೇಲೆ ವೀರಕುಮಾರರ 'ಓಕುಳಿಯಾಟ'. ಹೆಂಗಳೆಯರು ತಂದ ನೀರನ್ನು ಸಣ್ಣ ಪಾತ್ರೆಗಳಲ್ಲಿ ತುಂಬಿಕೊಂಡು ಪರಸ್ಪರ ಎರಚಾಡುತ್ತಾರೆ. ಇದೊಂದು ಮೋಜಿನ ಸನ್ನಿವೇಶವೂ ಹೌದು. ಓಕುಳಿಯಾಡಿದ ನಂತರ ಖಾಲಿಕೊಡಗಳು, ಉತ್ಸವ ಮೂರ್ತಿಗಳು, ವೀರಕುಮಾರರ ಅಲಗುಗಳು, ಪೂಜಾರಿಪರಿಕರಗಳನ್ನು ಮೆರವಣಿಗೆಯಲ್ಲಿ ಹತ್ತಿರದ ಕೊಳ-ಕಲ್ಯಾಣಿಗೆ ಒಯ್ದು ಶುಚಿಗೊಳಿಸಿ ಧರ್ಮರಾಯನ ಗುಡಿಗೆ ವಾಪಾಸ್ಸಾದರೆ, ಆ ವರ್ಷದ 'ಕರಗ' ಉತ್ಸವ ವಿಧಿ ಕೊನೆಯಾದಂತೆ.
- ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ