ಧರ್ಮಸ್ಥಳದಲ್ಲಿ ಮಹಿಳಾ ಉದ್ಯಮಿಗಳ ಕಾರ್ಯಾಗಾರ

Upayuktha
0

ಸ್ವ-ಉದ್ಯೋಗದಿಂದ ಮಹಿಳೆಯರ ಆತ್ಮವಿಶ್ವಾಸ, ಗೌರವ ಹೆಚ್ಚಾಗುತ್ತದೆ: ಹೇಮಾವತಿ ವೀ ಹೆಗ್ಗಡೆ


ಹೇಮಾವತಿ ವಿ. ಹೆಗ್ಗಡೆಯವರು ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು.


ಉಜಿರೆ: ಮಹಿಳೆಯರು ಮನೆ ಮತ್ತು ಮನ ಬೆಳಗುವ ಸೂರ್ಯನಂತೆ ಸದಾ ಪ್ರಕಾಶಮಾನವಾಗಿರುತ್ತಾರೆ. ಮಹಿಳೆಯರು ಮನಸ್ಸು ಮಾಡಿದರೆ ಏನೂ ಮಾಡಬಲ್ಲರು. ಅವರ ಶ್ರಮದ ಫಲ ಎಲ್ಲರಿಗೂ ಹಂಚಿ ಹೋಗುತ್ತದೆ. ಮಹಿಳೆಯರು ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದು ಸ್ವ-ಉದ್ಯೋಗದಿಂದ ಮಹಿಳೆಯರ ಆತ್ಮ, ವಿಶ್ವಾಸ, ಗೌರವ ಹೆಚ್ಚಾಗುತ್ತದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬೆಂಗಳೂರಿನ ಸೆಲ್ಕೊ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಮಹಿಳಾ ಉದ್ಯಮಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.


ಮಹಿಳೆಯರು ಸೂಕ್ಷö್ಮಮತಿಗಳಾಗಿದ್ದು ಸಂಸಾರ, ವ್ಯವಹಾರ ಮತ್ತು ಸ್ವ-ಉದ್ಯೋಗವನ್ನು ಜಾಣ್ಮೆಯಿಂದ ಹಾಗೂ ಸಮನ್ವಯದಿಂದ ನಿಭಾಯಿಸಿ ತಮಗೆ ಸಿಗುವ ಅವಕಾಶದ ಸದುಪಯೋಗ ಪಡೆದು ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗುತ್ತಾರೆ. ಮಹಿಳೆಯರನ್ನು ಎಲ್ಲರೂ ನಂಬುತ್ತಾರೆ. ಬಾಲ್ಯ ಮತ್ತು ವೃದ್ದಾಪ್ಯದಲ್ಲಿ ಎಲ್ಲರೂ ಪರಾವಲಂಬಿಗಳಾಗುತ್ತಾರೆ. ಆದುದರಿಂದ ಯೌವನದಲ್ಲಿ ಪರಿಶ್ರಮಪಟ್ಟು ಸಂಪಾದನೆ ಮಾಡಬೇಕು. ಮಹಿಳೆಯರನ್ನು ಮದುವೆಗಾಗಿ ಬೆಳೆಸದೆ, ಉತ್ತಮ ಶಿಕ್ಷಣ, ಉದ್ಯೋಗ ಮತ್ತು ಸಂಸ್ಕಾರ ನೀಡಿ ಸಾರ್ಥಕ, ಸ್ವಾವಲಂಬಿ ಜೀವನಕ್ಕಾಗಿ ಬೆಳೆಸಬೇಕು ಎಂದು ಹೇಮಾವತಿ ವೀ. ಹೆಗ್ಗಡೆ ಸಲಹೆ ನೀಡಿದರು.


ಸ್ವ-ಸಹಾಯ ಸಂಘಗಳು ಹಾಗೂ ಸೌರಶಕ್ತಿ ಬಳಕೆಯಲ್ಲಿಯೂ ಮಹಿಳೆಯರ ಸೇವೆ-ಸಾಧನೆಯನ್ನು ಅವರು ಶ್ಲಾಘಿಸಿ, ಅಭಿನಂದಿಸಿದರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸೌರಶಕ್ತಿ ಅಪಾರ ಶಕ್ತಿಯ ಮೂಲವಾಗಿದ್ದು ಎಲ್ಲರೂ ಪ್ರಯೋಗಶೀಲರಾಗಿ, ಸಂಶೋಧಕರಾಗಿ ಹೊಸ ಆವಿಷ್ಕಾರಗಳನ್ನು ಮಾಡಿ ಸೌರಶಕ್ತಿಯ ಸದುಪಯೋಗ ಮಾಡಬೇಕು. ಗ್ರಾಮೀಣ ಪ್ರದೇಶಗಳ ಜನರು ಕೂಡಾ ಅನೇಕ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು.


ಯಶಸ್ವಿ ಮಹಿಳಾ ಉದ್ಯಮಿಗಳ ಪರವಾಗಿ ಹುಬ್ಬಳ್ಳಿಯ ರೂಪಾ ರೆಡ್ಡಿ ಮತ್ತು ಬೆಳಗಾವಿಯ ಪ್ರಮೋದ್ ಮೋದಿ ತಮ್ಮ ಸಾಧನೆಯ ಅನುಭವವನ್ನು ಹಂಚಿಕೊಂಡರು.


ಸ್ವಾಮಿ ವಿವೇಕಾನಂದ ಯುವ ಚಳವಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಸುಳುಗೋಡು ಮಾತನಾಡಿ, ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಬಲೀಕರಣಗೊಂಡಾಗ ಮಾತ್ರ ಸ್ವಾವಲಂಬಿ ಜೀವನ ಸಾಧ್ಯವಾಗುತ್ತದೆ. ಪ್ರಸ್ತುತ 1000 ಪುರುಷರಿದ್ದಲ್ಲಿ 914 ಮಹಿಳೆಯರು ಮಾತ್ರ ಇದ್ದಾರೆ. ಹೆಣ್ಣು ಭ್ರೂಣಹತ್ಯೆ ತಡೆದು ಲಿಂಗತಾರತಮ್ಯ ನಿವಾರಣೆಯಾಗಬೇಕು ಎಂದು ಅವರು ಸಲಹೆ ನೀಡಿದರು.


ಉದ್ಘಾಟಕರಾದ ಹೇಮಾವತಿ ವೀ. ಹೆಗ್ಗಡೆಯವರ ಭಾಷಣದ ಮಾಹಿತಿ, ಮಾರ್ಗದರ್ಶನದ ಬಗ್ಯೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಸೆಲ್ಕೊ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಹಂದೆ, ಇತರ ಭಾಷೆಗಳಿಗೂ ಅದನ್ನು ಅನುವಾದ ಮಾಡಿ ಪ್ರಕಟಿಸುವುದಾಗಿ ಭರವಸೆ ನೀಡಿದರು. ಈಗ ಓದುವ ಹವ್ಯಾಸ ಕಡಿಮೆ ಇರುವುದರಿಂದ ಭಾಷಣದ ವೀಡಿಯೊ ಬುಕ್ ತಯಾರಿಸುವಂತೆ ಅವರು ಸಲಹೆ ನೀಡಿದರು.

ಮುಂದಿನ ವರ್ಷ ಸೌರಶಕ್ತಿ ಬಳಕೆ ಬಗ್ಯೆ ಜಾಗತಿಕ ಸಮ್ಮೇಳನವನ್ನು ಧರ್ಮಸ್ಥಳದಲ್ಲಿ ಆಯೋಜಿಸುವುದಾಗಿ ಅವರು ಭರವಸೆ ನೀಡಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್‌ಕುಮಾರ್, ಎಸ್.ಎಸ್. ಉಪಸ್ಥಿತರಿದ್ದರು.


ಸೆಲ್ಕೊ ಸೋಲಾರ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮೋಹನ್ ಭಾಸ್ಕರ ಹೆಗಡೆ ಸ್ವಾಗತಿಸಿದರು. ಸೌಮ್ಯ ಧನ್ಯವಾದವಿತ್ತರು. ಶ್ರೀನಿವಾಸ ಪೂಜಾರಿ, ಗುರುಪ್ರಸಾದ್ ಮತ್ತು ಪ್ರಸನ್ನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top