ಪರಿಚಯಗಳೇ ಸ್ನೇಹವಾಗುವವು, ಸ್ನೇಹ ಎಂಬ ಪದದ ಅರ್ಥ ಬಹುವಿಶಾಲ ಮತ್ತು ವಿಶಿಷ್ಟವಾದದ್ದು ಹಾಗೆಯೇ ಇದರ ವ್ಯಾಖ್ಯಾನ ವ್ಯಾಪ್ತಿ ಸ್ವರೂಪ ಪ್ರಾಮುಖ್ಯತೆ ಆಕಾಶದಷ್ಟು ವಿಸ್ತಾರವಾದದು.
ಸ್ನೇಹ ಪ್ರೀತಿ ಎಲ್ಲರಲ್ಲೂ ಹುಟ್ಟುತ್ತೆ. ಆದರೆ ಯೋಗ್ಯತೆ ಇರುವವರಲ್ಲಿ ಮಾತ್ರ ಬೆಳೆಯುತ್ತೆ ಎಂಬಂತೆ ಸ್ನೇಹಕ್ಕೆ ಸ್ನೇಹ ನೀಡಿ ಇಟ್ಟಿರುವ ನಂಬಿಕೆಗೆ ಪ್ರಾಮಾಣಿಕವಾಗಿ ಇರುವವರ ಸಂಖ್ಯೆ ಇಂದು ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ. ಮತ್ತೊಂದೆಡೆ ಸ್ನೇಹಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟವರನ್ನು ನಾವು ಕಾಣುತ್ತೇವೆ. ಪ್ರಸಿದ್ಧಿ ಪಡೆದಂತಹ ಸ್ನೇಹ ಸಂಬಂಧಗಳೆಂದರೆ ಮಹಾಭಾರತದಲ್ಲಿ ಬರುವ ದಾನಕ್ಕೆ ಹೆಸರುವಾಸಿಯಾದ ಕರ್ಣ ಮತ್ತು ಸಾಹಸ ಪ್ರಿಯ ದುರ್ಯೋಧನ ಗೆಳೆತನದ ಸಂಬಂಧ ಹಾಗೂ ಕೃಷ್ಣ ಸುಧಾಮರ ಸ್ನೇಹವನ್ನು ನಾವಿಲ್ಲಿ ನೆನಪಿಸಿಕೊಳ್ಳಸಬಹುದು. ಹಾಗೆಯೇ ಇನ್ನೂ ಅನೇಕರ ಗೆಳತನ ಪವಿತ್ರತೆಯನ್ನ ಕಂಡುಕೊಂಡು ಮಾದರಿಯಾಗಿರುವುದನ್ನು ಸಹ ಗಮನಿಸಬಹುದಾಗಿದೆ.
ದೇಹಕ್ಕೆ ಒಂದೇ ಹೃದಯ, ನಾವು ವಾಸಿಸಲು ಇರುವುದು ಒಂದೇ ಭೂಮಿ ಒಬ್ಬನೇ ಸೂರ್ಯ ಒಬ್ಬನೇ ಚಂದ್ರ ಬೀಸುವ ಗಾಳಿ ಕುಡಿಯುವ ನೀರು ಜಗದಲ್ಲಿರುವವರೆಲ್ಲರ ಕಾಯದೊಳರಿಯುವುದು ಕೆಂಪು ಬಣ್ಣದ ನೆತ್ತರು ಮಾತ್ರ. ಇದು ಎಲ್ಲಾ ವರ್ಗದವರಿಗೂ ಸಾಮಾನ್ಯವಾಗಿರುವುದು. ಹೀಗಿರುವಾಗ ಪವಿತ್ರವಾದ ಗೆಳೆತನ ಹುಟ್ಟುವುದು ಸಹ ಜಾತಿ ಜನಾಂಗ ಧರ್ಮಗಳನ್ನು ವೀಕ್ಷಿಸಿ ಅಲ್ಲ ಬದಲಾಗಿ ಅವರಲ್ಲಿನ ಪ್ರೀತಿ, ವಿಶ್ವಾಸ, ನಂಬಿಕೆ ಮನವನ್ನು ಅರಿಯುವಂತಹ ಗುಣ, ಭಾವನೆಗಳಿಗೆ ಸ್ಪಂದಿಸುವ ಹೃದಯವಂತಿಕೆಯನ್ನು ಕಂಡು. ಪ್ರಮುಖವಾಗಿ ನಮ್ಮ ಸೋಲಿನಲ್ಲಿ ವಿಜಯದ ಭರವಸೆಯನ್ನು ಹುಟ್ಟಿಸಿ ತಪ್ಪು ಸಂಭವಿಸಿದಾಗ ಮತ್ತೊಮ್ಮೆ ಎಡವದಂತೆ ಕಾಯ್ದುಕೊಂಡು ವಿಹಂಗಮವಾಗಿ ಬೆರೆಯುವ ಪರಿಯನ್ನ ಉದಯಿಸುವುದು ಈ ಗೆಳೆತನ.
ಮತ್ತೊಂದಡೆ ಕೆಲ ಜನರು ತಮ್ಮ ಧರ್ಮದವರನ್ನೇ, ಜನಾಂಗದವರನ್ನೇ ಹುಡುಕಿ ಸ್ನೇಹ ಮಾಡುವುದನ್ನು ನೀವೆಲ್ಲರೂ ಕಂಡಿರುವಿರಿ. ನಿಮಗೂ ನನಗೂ ತಿಳಿದಂತೆ ಜಾತಿ ಜನಾಂಗ ಧರ್ಮ ಅಂತಸ್ತು ನೋಡಿ ಮಾಡುವ ಪ್ರೀತಿ ಸ್ನೇಹ ನೀರ ಮೇಲಿನ ಗುಳ್ಳೆಯಂತೆ ಎಂದಿಗೂ ಅದು ನೀರಿನಂತೆ ಶುದ್ಧತೆಯನ್ನು ಕಂಡುಕೊಳ್ಳುವುದಿಲ್ಲ ಎಂಬುದು. ಒಂದು ಕಡೆ ಒಬ್ಬ ಹವ್ಯಾಸಿ ಬರಹಗಾರರು ಬರೆದ ಸಾಲುಗಳೆಂದರೆ
"ಸೋತ ಹೆಗಲಿಗೆ ಪ್ರೇರಣೆಯ ಪ್ರೇರಕ ಈ ಸ್ನೇಹ
ಅಂಧತ್ವ ನಿವಾರಣ ಕಾರ್ಯಗಾರ ಈ ಗೆಳೆಯರ ಗೆಳೆತನ
ಒಲವ ತುಂಟಾಟದ ಮಾತುಗಳ ದಿವ್ಯ ಸಾನಿಧ್ಯ ಈ ದೋಸ್ತಿ
ಆರಂಭ ಕಂಡು ಕೊನೆಯನ್ನದೆ ಬಯಸದ ನಿರ್ಮಲ ಭಾವ ಈ ಸ್ನೇಹ ಸಂಗಮ" ಎನ್ನುವ ಸಾಲುಗಳನ್ನು ನಾವಿಲ್ಲಿ ನೆನೆಯಬಹುದು.
ಸಿಹಿ ಇದ್ದಲ್ಲಿ ನೊಣಗಳು ಹೆಚ್ಚು ಎಂಬಂತೆ ಗೆಳೆತನದಲ್ಲೂ ಸಹ ಹೆಚ್ಚು ನಂಬಿಕೆ, ದೃಢತೆ ಇದ್ದಲ್ಲಿ ಅದನ್ನ ಕೆಡಿಸುವಂತಹ ನಕರಾತ್ಮಕ ಅಂಶಗಳು ನಮ್ಮನ್ನು ಸುತ್ತುತ್ತಲೆ ಇರುತ್ತವೆ, ಆದರೆ ಅಂತಹ ಕೆಟ್ಟ ಅಂಶಗಳಿಗೆ ನಾವು ಕಿವಿಗೊಡದೆ ನಮ್ಮಲ್ಲಿನ ವಿಶ್ವಾಸವನ್ನು ಕಂಡು ಉತ್ತಮವಾಗಿರುವುದು ಒಳಿತೆನಿಸುವುದು. ಕೆಲವರ ಸ್ನೇಹದ ಗುಂಪುಗಳಲ್ಲಿ ಶಕುನಿಯಂತವರನ್ನು ಸಹ ಕಂಡಿದ್ದೇವೆ. ಒಂದು ಗುಂಪಿನ ಸ್ನೇಹಿತರ ಮಾತುಗಳನ್ನು ಮತ್ತೊಬ್ಬರೊಂದಿಗೆ ಹೇಳುವುದು, ಮತ್ತೊಂದು ಸ್ನೇಹದ ಗುಂಪಿನ ವಿಚಾರಗಳನ್ನು ಮತ್ತೆ ಕೆಲ ಗುಂಪುಗಳಿಗೆ ಹೇಳುವುದು ಇಂತಹ ನವರಂಗಿ ಆಟಗಳನ್ನು ಆಡುವಂತಹ ಮುಖವಾಡಗಳನ್ನು ಧರಿಸಿರುವವರನ್ನು ಪ್ರತಿದಿನವೂ ಸಹ ನಾವು ಕಾಣುತ್ತಲೇ ಇರುತ್ತೇವೆ. ಮತ್ತೆ ಕೆಲವರು ಎಲ್ಲರೊಂದಿಗೂ ಚೆನ್ನಾಗಿರಬೇಕೆಂದು, ಸಂದರ್ಭಕ್ಕೆ ತಕ್ಕಂತೆ ನಟಿಸುವ ನಟನಾಕಾರರನ್ನು ನಾವು ಈ ಬದುಕೆಂಬ ರಂಗ ಸಜ್ಜಿಕೆಯ ಮೇಲೆ ಬಲ್ಲೆವು. ನಿಜವಾದ ಸ್ನೇಹ ಮಾಡುವುದನ್ನು ನೀವೆಲ್ಲರೂ ಕಲಿಯಬೇಕಾಗಿದೆ ಕೆಲವರು ಮಾಡುವ ಕ್ಷುಲ್ಲಕ ತಪ್ಪುಗಳಿಂದ ಒಂದು ಗುಂಪಿನ ಎಲ್ಲಾ ಸದಸ್ಯರ ವ್ಯಕ್ತಿತ್ವವನ್ನು ಕೈಮಾಡಿ ತೋರಿಸುವಂತೆ,ಆಡಿಕೊಳ್ಳುವಂತೆ ಮಾಡುವುದು.
ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ ಮತ್ತೊಬ್ಬರು ನಮ್ಮೊಂದಿಗೆ ಹೇಗಿರುವರು ಎಂಬುದರ ಮೇಲೆ ನಮ್ಮ ಪ್ರತಿಕ್ರಿಯೆ ನಿಂತಿರುತ್ತದೆ ಅದು ಚಿಕ್ಕವರೇ ಅಲಿರಲಿ, ದೊಡ್ಡವರೇ ಆಗಿರಲಿ, ಶಿಕ್ಷಕ ವಿದ್ಯಾರ್ಥಿಯಾಗಿರಲಿ, ಒಬ್ಬ ವ್ಯಕ್ತಿ ಮತ್ತೊಬ್ಬರ ಹತ್ತಿರ ಉತ್ತಮ ಒಡನಾಟದಲ್ಲಿದ್ದರೆ ಅವರಲ್ಲಿನ ಪ್ರೀತಿ ವಿಶ್ವಾಸ ನಂಬಿಕೆಗಳು ದೃಢವಾಗಿರುತ್ತವೆ ಎಂದರ್ಥ. ಉತ್ತಮವಾದದ್ದನ್ನ ಉತ್ತಮವಾಗಿದೆ ಎಂದು ಒಪ್ಪಿಕೊಳ್ಳುವುದರಲ್ಲಿ ತಪ್ಪಿಲ್ಲ ಅದನ್ನು ಹೊರತುಪಡಿಸಿ ಸುಖಾಸುಮ್ಮನೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ನಮ್ಮ ವ್ಯಕ್ತಿತ್ವವನ್ನು ನಮ್ಮಲ್ಲಿನ ಅಜ್ಞಾನವನ್ನು ಪ್ರತಿನಿಧಿಸುತ್ತದೆ
ಇಲ್ಲಿ ಯಾವುದು! ಯಾರು? ಶಾಶ್ವತವಲ್ಲ ಬದಲಾಗಿ ನಾವು ಗಳಿಸುವಂತಹ ವ್ಯಕ್ತಿತ್ವ ಒಂದೇ ಸ್ಥಿರವಾದ ಆಸ್ತಿಯಾಗಿದೆ. ಶುದ್ಧವಾಗಿ ಚಿರಕಾಲವಾಗಿ ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆ ಉಳಿಯಬೇಕಾದರೆ ನಾವು ಮಾಡಬೇಕಾದ ಮೊದಲ ಕ್ರಿಯೆ ಎಂದರೆ ಅನ್ಯರ ಊಹಾಪೋಹಗಳಿಗೆ ಕಿವಿಗೊಡುವುದನ್ನ ಬಿಟ್ಟು ನೇರವಂತಿಕೆ ನಿರ್ದಿಷ್ಟತೆಯನ್ನು ಕಂಡುಕೊಳ್ಳುವುದು ಉತ್ತಮವಾಗಿದೆ.
"ಎಲ್ಲರಲ್ಲಿಯೂ ಪವಿತ್ರವಾದ ಸ್ನೇಹ ಹುಟ್ಟಲು ಸಾಧ್ಯವಿಲ್ಲ"
ನನಗೊಬ್ಬರು ಹೇಳಿದ ನೈಜ ಘಟನೆ ಎಂದರೆ ಬೆಂಗಳೂರು ನಗರದಲ್ಲಿ ಜೀವನ ಕಟ್ಟಿಕೊಂಡ ಶ್ರೀಮಂತ ಕುಟುಂಬ, ಅ ಕುಟುಂಬಕ್ಕೆ ಒಬ್ಬನೇ ಮಗ ಇವನ ಸ್ನೇಹವನ್ನು ಮಾಡಿದಂತಹ ಐದು ಜನ ಸ್ನೇಹಿತರು ಇವನಲ್ಲಿನ ಮೃದು ಸ್ವಭಾವವನ್ನು ಸಹಾಯಕ್ಕೆ ಮಣಿಯುವಂತಹ ಗುಣವನ್ನು ಕಂಡಂತಹ ಒಬ್ಬನು, ತನ್ನ ತಾಯಿಗೆ ಅನಾರೋಗ್ಯವೆಂದು ಹೇಳಿ 2,00,000 ನಗದನ್ನು ಪಡೆದು ಆದಷ್ಟು ಬೇಗ ಕೊಡುವೆನೆಂದು ತೆಗೆದುಕೊಂಡ. ತಾನು ತೆಗೆದುಕೊಂಡ ಕಡ ಮುಗಿದ ಕೆಲದಿನಗಳ ನಂತರ ಆ ಶ್ರೀಮಂತರ ಹುಡುಗ ಹಣವನ್ನು ವಾಪಸ್ ಕೇಳಲು, ಕರೆ ಮಾಡಿದ ಕರೆಗೆ ಉತ್ತರಿಸಿದ, ಹಣ ತೆಗೆದುಕೊಂಡು ಅವನು ಆಗ ಕೊಡುವೆ ಈಗ ಕೊಡುವೆ ಎಂದು ಸುಳ್ಳಿನ ಸರಮಾಲೆಯನ್ನು ಕಟ್ಟಿಕೊಂಡಿದ್ದ, ಇದನ್ನು ಸಹಿಸಿಕೊಂಡ ಶ್ರೀಮಂತರ ಹುಡುಗ ಕೆಲದಿನಗಳ ವರೆಗೆ ಕರೆ ಮಾಡುವುದನ್ನೇ ನಿಲ್ಲಿಸಿದ.
ಹೀಗಿರುವಾಗ ಒಂದು ದಿನ ತಡರಾತ್ರಿ ಶ್ರೀಮಂತ ಹುಡುಗನಿಗೆ ಹಣ ಪಡೆದುಕೊಂಡಿದ್ದ ಸ್ನೇಹಿತ ಕರೆ ಮಾಡಿ ಹಣ ಕೊಡುವನೆಂದು ಹೇಳಿ ಒಂದು ಸ್ಥಳಕ್ಕೆ ಕರೆಸಿಕೊಂಡು, ಆ ಮುಗ್ಧ ವ್ಯಕ್ತಿಯಾದ ಶ್ರೀಮಂತನನ್ನು ಚಿತ್ರಹಿಂಸೆ ಕೊಟ್ಟು ಶವವಾಗಿಸಿದರು. ಈ ವಿಷಯ ತಿಳಿದು ಮನೆಯಲ್ಲಿ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಈ ತರಹದ ಪರಿಸ್ಥಿತಿ ಯಾರಿಗೂ ಬರದಿರಲಿ, ಆ ಶ್ರೀಮಂತ ಹುಡುಗ ತನ್ನ ಸ್ನೇಹಿತನಿಗೆ ಹಣ ವಾಪಸ್ ಕೇಳಲು ಕಾರಣವೆಂದರೆ ಅವನ ಅ ಸ್ನೇಹಿತ ತೆಗೆದುಕೊಂಡ ಹಣ ತಾಯಿಯ ಅನಾರೋಗ್ಯಕ್ಕೆ ಅಲ್ಲ, ಬದಲಾಗಿ ತಾನು ಪ್ರೀತಿಸಿದ ಹುಡುಗಿಯೊಂದಿಗೆ ಸರಸವೆಸಗಲೆಂದು ಎಂಬುದ ತಿಳಿದು.
ಇಲ್ಲಿರುವೆಲ್ಲರು ಒಳ್ಳೆಯವರಲ್ಲ!
ಇಲ್ಲಿರುವೆಲ್ಲರು ಕೆಟ್ಟವರಲ್ಲ! ಆದರೆ ಎಲ್ಲರೂ ಮಾನವೀಯತೆ ಕರುಣೆ ಪ್ರೀತಿ ವಿಶ್ವಾಸಗಳಿಗೆ ವಿಧೇಯರಾಗಿರುವುದನ್ನ ಕಲಿಯಬೇಕಾಗಿದೆ. ಈ ಲೇಖನ ಓದುತ್ತಿರುವವರಿಗೆಲ್ಲರಿಗೂ ನಾ ಕೇಳಿಕೊಳ್ಳುವುದೊಂದೇ, ನಿಮ್ಮ ಪ್ರೀತಿ, ಸ್ನೇಹ, ಮತ್ತೊಬ್ಬರಿಗೆ ಕೆಡಕನ್ನುಂಟು ಮಾಡದಿರಲಿ. ಸದಾ ಸನ್ಮಾರ್ಗದಲ್ಲಿ, ನಂಬಿಕೆಗೆ ಋಣಿಯಾಗಿ, ಸಮಾಜಕ್ಕೆ, ಹೆತ್ತವರಿಗೆ, ಅಕ್ಷರ ಕಲಿಸಿದ ಗುರುಗಳಿಗೆ, "ನಿರಂತರವಾಗಿ ವಿಧೇಯರಾಗಿರಿ" ಎಂಬುದೇ ನನ್ನ ಒಡಲಾಳದ ಆಶಯ.
- ಜುಂಜಿ ಹರ್ಷವರ್ಧನ
ಪ್ರಶಿಕ್ಷಣಾರ್ಥಿ
ವಿಜಯನಗರ ಜಿಲ್ಲೆ, ಹೊಸಕೋಡಿಹಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ