ನಿನ್ನೆಯ ದಿನ ಮಗ ಬಂದು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಬಗ್ಗೆ ಸಿನಿಮಾ ಬಂದಿದೆ ನೋಡಬೇಡವೋ ಅಂತ ಕೇಳಿದ. ಅಗತ್ಯ ನೋಡಲೇಬೇಕು 45 ವರ್ಷ ಹಿಂದೆ ಓದಿದ ಅವರ ಚರಿತ್ರೆಯನ್ನು ಇನ್ನೊಮ್ಮೆ ತಿಳಿದುಕೊಂಡಂತಾಯಿತು ಅಂತ ಉತ್ಸಾಹದಿಂದಲೇ ದಂಪತಿ ಸಮೇತನಾಗಿ ಹೋಗಿದ್ದೆ.
ಸ್ವತಂತ್ರ ಭಾರತ ಮತ್ತು ಅಖಂಡ ಭಾರತದ ಕಲ್ಪನೆಯಿಂದಲೇ ವಕೀಲ ವೃತ್ತಿಯನ್ನು ಕಲಿಯಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಹೆಜ್ಜೆ ಹೆಜ್ಜೆಗೆ ಭಾರತೀಯರ ಮೇಲೆ ನಡೆಯುವ ಶೋಷಣೆಯನ್ನು ಕಂಡು ಪ್ರತಿಭಟಿಸುತ್ತಲೇ ಇದ್ದ ವ್ಯಕ್ತಿ ಕ್ರಾಂತಿಕಾರಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಗಳಾದರು. ದೇಶದ್ರೋಹದ ಆರೋಪಕ್ಕೊಳಗಾಗಿ ಕಾಲಾಪಾನಿ ಶಿಕ್ಷೆ ಅನುಭವಿಸಿದರು.
ಅಂಡಮಾನದ ಸೆಲ್ಯುಲರ್ ಜೈಲಿನಲ್ಲಿ ಅವರು ಅನುಭವಿಸಿದ ಚಿತ್ರಣ ಮಾತ್ರ ಊಹಿಸಲು ಅಸಾಧ್ಯ. ಭೂಲೋಕದ ನರಕದಲ್ಲಿ ಪ್ರತಿನಿತ್ಯ ಎಂಬಂತೆ ಊಹನಾತೀತಾ ಹೊಡೆತ ಬಡಿತ. ಗಾಣಕ್ಕೆ ಎತ್ತಿನಂತೆ ಮಾನವನ ಬಳಕೆ, ಶರೀರಕ್ಕೆ ಕಬ್ಬಿಣದ ಸಲಾಕೆಗಳ ಬಂಧನ, ಅತ್ಯಂತ ಹೊಲಸು ಆಹಾರ, ಬಾಯಾರಿದಾಗ ನೀರಿನ ಬದಲು ಕೊಡುವ ಮೂತ್ರ ಈ ಎಲ್ಲದರ ಪರಿಣಾಮವಾಗಿ ಅದೆಷ್ಟು ಮಾನಸಿಕ ಕ್ಷೋಭೆಗೆ ಒಳಗಾಗಿದ್ದರೂ ಎಂಬುದರ ಚಿತ್ರಣವಂತು ಹೃದಯ ಹಿಂಡಿ ಬರುತ್ತದೆ. ಅನೇಕ ವರುಷಗಳ ನಂತರ ಭಾರತದ ರತ್ನಗಿರಿ ಜೈಲಿಗೆ ಹೊರಟಾಗ ಸಿಕ್ಕಿದ ಒಡಕು ಕನ್ನಡಿಯಲ್ಲಿ ತನ್ನ ಮುಖವನ್ನು ಪರೀಕ್ಷಿಸಿದಾಗ ತನ್ನ ದೇಹವನ್ನೇ ನೋಡಿ ಜುಗುಪ್ಸೆ ಬರುವಂತಹ ಸನ್ನಿವೇಶದ ನಟನೆಯಂತೂ ಪಾತ್ರದ ಒಳಹೊಕ್ಕು ಅನುಭವಿಸಿದ ನೋವಿನ ಪ್ರತೀಕ.
ಬಿಡುಗಡೆ ಹೊಂದಿದಾಗ ಮಹಾತ್ಮ ಗಾಂಧಿಯವರೊಡನೆ ನಡೆಯುವ ಸಂಭಾಷಣೆ ಬಹಳ ಮಾರ್ಮಿಕ.ಸಂಪೂರ್ಣ ಮತೀಯವಾದವನ್ನು ಮತ್ತು ದೇಶ ಒಡೆಯುವ ಮಾತನ್ನೇ ಹೇಳುತ್ತಿದ್ದ ಮುಸ್ಲಿಂ ಲೀಗನ್ನು ಒಪ್ಪಿಕೊಂಡ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಅಖಂಡ ಭಾರತದ ಕಲ್ಪನೆಯ ಮತ್ತು ಎಲ್ಲಾ ಸಮಾಜದವರು ನಮ್ಮಂತೆಯೇ ಎಂದು ಹೇಳುವ ಹಿಂದುತ್ವದ ಪ್ರತೀಕವಾದ ಸಾವರ್ಕರ್ ಕಲ್ಪನೆಯ ಹಿಂದೂ ಮಹಾಸಭಾವನ್ನು ಒಪ್ಪಿಕೊಳ್ಳದೆ ಇರುವುದು ಆಶ್ಚರ್ಯದ ಸಂಗತಿ.
ನಾವೆಲ್ಲರೂ ಅದರಲ್ಲೂ ಮಕ್ಕಳಾದಿಯಾಗಿ ಎಲ್ಲರೂ ಈ ಸಿನಿಮಾವನ್ನು ನೋಡಲೇಬೇಕು ಯಾಕಾಗಿ?
1) ಆಧುನಿಕ ಸುಖಲೋಲುಪತೆಯಲ್ಲಿ ಈ ಸುಖ ಶಾಶ್ವತ ಎಂದು ಯೋಚಿಸಿ ರಾಷ್ಟ್ರದ ಆಗುಗಳ ಬಗ್ಗೆ ಚಿಂತನೆಯನ್ನು ವ್ಯಕ್ತಪಡಿಸದಿದ್ದರೆ ಅಪಾಯ ನಿಶ್ಚಿತ.
2) ಸಾವಿರ ವರ್ಷದ ದಾಸ್ಯದಿಂದ ಮುಕ್ತಿ ಪಡೆಯಬೇಕಾದರೆ ಅದರ ಹಿಂದಿನ ನೋವಿನ ಕಲ್ಪನೆಯ ಸಣ್ಣ ತುಣುಕಾದರೂ ಮನಸ್ಸಿಗೆ ಬಂದೀತು.
3) ಶಾಲೆಯಲ್ಲಿ ಶಿಕ್ಷಕರೊಬ್ಬರಿಂದ ಪೆಟ್ಟು ತಿಂದರೂ ಆತ್ಮಭಿಮಾನಕ್ಕೆ ನೋವಾಯಿತು ಎಂದು ತಿಳಿಯುವ ಕಾಲದ ಮಕ್ಕಳು ದಾಸ್ಯಕ್ಕೆ ಬಿದ್ದಲ್ಲಿ ಅದೆಷ್ಟು ಶತಮಾನಗಳು ಅನುಭವಿಸಬೇಕಾದೀತು ಎಂಬ ಕಲ್ಪನೆಯಾದರೂ ಬಂದೀತು.
4) ಇಂದು ಓಟಿಗಾಗಿ ನೋಟಿಗಾಗಿ ಜಾತಿಯನ್ನು ಮುಂದೊತ್ತುವವರು ಪ್ರಜಾಪ್ರಭುತ್ವದ ಈಗಿನ ವ್ಯವಸ್ಥೆಗಾಗಿ ನಮ್ಮ ಹಿಂದಿನ ತಲೆಮಾರಿನ ತ್ಯಾಗವನ್ನು ಒಮ್ಮೆಯಾದರೂ ವೀಕ್ಷಿಸುವಂತಾದೀತು.
5) ದೇಶಕ್ಕಾಗಿ ಆತ್ಮಾರ್ಪಣೆ ಅಂದರೆ ಏನು ಎಂಬುದರ ಕಲ್ಪನೆಗಾದರೂ ಒಮ್ಮೆ ವೀಕ್ಷಣೆ ಮಾಡೋಣ.
ದೇಶದ ಸ್ವಾತಂತ್ರ್ಯದಲ್ಲಿ ಸಾವರ್ಕರ್ರ ಕೊಡುಗೆ ಏನು? ಅವರೇಕೆ ಈಗಿನ ಕಾಲಕ್ಕೂ ಪ್ರಸ್ತುತ ಎಂಬುದನ್ನು ತಿಳಿಯಲು ಸಿನಿಮಾವನ್ನೊಮ್ಮೆ ವೀಕ್ಷಿಸಿ ಬರೋಣ.
ಈ ಮೂಲಕವಾದರೂ ಸಾವರ್ ಗೆ ಒಂದು ಋಣವನ್ನು ಸಲ್ಲಿಸೋಣ.
-ಎ.ಪಿ. ಸದಾಶಿವ ಮರಿಕೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ