ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ 2022-23ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಕಾರ್ಯಾಧ್ಯಕ್ಷೆ ಮೈತ್ರೇಯಿ ಮಾತನಾಡಿ, ತಂತ್ರಜ್ಞಾನವು ಮಕ್ಕಳನ್ನು ದಾರಿ ತಪ್ಪಿಸುತ್ತಿದೆ. ಪ್ರಸ್ತುತ ಶಿಕ್ಷಣ ದುಬಾರಿ ಮತ್ತು ಸ್ಪರ್ಧಾತ್ಮಕವಾಗಿದೆ. ಹೀಗಾಗಿ ಮಕ್ಕಳೊಂದಿಗೆ ಪೋಷಕರ ಒಡನಾಟದ ಅಗತ್ಯ ಹೆಚ್ಚಾಗಿದೆ ಎಂದರು.
ಸಂಘದ ಕೋಶಾಧಿಕಾರಿ ಡಾ. ಇಂದಿರಾ ಜೆ., 2022-23ನೇ ಸಾಲಿನ ಆರ್ಥಿಕ ವರದಿ ಮಂಡಿಸಿದರು. ಶಿಕ್ಷಕ ಕಾರ್ಯದರ್ಶಿ ಅರೂಣಾ ಕುಮಾರಿ ವಾರ್ಷಿಕ ವರದಿಯನ್ನು ಸಭೆ ಮುಂದೆ ಪ್ರಸ್ತುತ ಪಡಿಸಿದರು.
ಇದೇ ವೇಳೆ ಶಿಕ್ಷಕ-ರಕ್ಷಕ ಸಂಘಕ್ಕೆ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಕಾರ್ಯಧ್ಯಕ್ಷರಾಗಿ ಗಿಲ್ಬರ್ಟ್ ದೀಪಕ್ ಡಿಸೋಜ, ಉಪಾಧ್ಯಕ್ಷರಾಗಿ ಎಸ್. ಎನ್. ಗಂಗಾಧರ್, ಸದಾಶಿವ ಎಸ್. ಕೆ., ಶ್ರೀನಿವಾಸ್ ಆಯ್ಕೆಯಾದರೆ ಜತೆ ಕಾರ್ಯದರ್ಶಿಯಾಗಿ ಚೇತನಾ ಹಾಗೂ ಸಾಮಾನ್ಯ ಸದಸ್ಯರಾಗಿ ತೇಜಾಕ್ಷಿ, ವಾಮನ ಆಚಾರ್ಯ, ಹರೀಶ್ ಬಂಗೇರ, ರಾಮಕೃಷ್ಣ ನಾಯ್ಕ್, ಮಹಮ್ಮದ್ ಅಸೀನ್ ಎನ್. ಹಾಗೂ ಬಸಮ್ಮ ಆಯ್ಕೆಯಾದರು.
ನೂತನ ಕಾರ್ಯಾಧ್ಯಕ್ಷ ಗಿಲ್ಬರ್ಟ್ ದೀಪಕ್ ಡಿಸೋಜಾ ಮಾತನಾಡಿ, ಕಾಲೇಜಿನ ಏಳಿಗೆಗೆ ಎಲ್ಲಾ ಪೋಷಕರ ಸಹಕಾರದ ಅಗತ್ಯವಿದೆ. ಕಾಲೇಜನ್ನು ವ್ಯವಸ್ಥಿತವಾಗಿ ಮುನ್ನಡೆಸುವ ಜವಾಬ್ದಾರಿ ಪೋಷಕರಾದ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಶಿಕ್ಷಕರ ನಿರಂತರ ಶ್ರಮದ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಕಾಲೇಜಿನ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಿಕ್ಷಕರ ಪಾತ್ರವನ್ನು ಶ್ಲಾಘಿಸಿದರು.
ವಿದ್ಯಾರ್ಥಿ ಸಂಘದ ಉಪನಿರ್ದೇಶಕಿ ಪ್ರೊ. ಲತಾ ಎ. ಪಂಡಿತ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸುಧಾ ಎನ್. ವೈದ್ಯ ವಂದಿಸಿದರು. ಡಾ. ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ-ರಕ್ಷಕ ಸಂಘದ ಸರ್ವ ಸದಸ್ಯರು, ಪೋಷಕರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ