ಮಂಗಳೂರು: ಮತದಾನ ಮಾಡುವುದು ಕೇವಲ ಹಕ್ಕು ಮಾತ್ರವಲ್ಲ; ಅದೊಂದು ಶ್ರೇಷ್ಠ ಕರ್ತವ್ಯವಾಗಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಲತಾ ಎ. ಪಂಡಿತ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಶಿಕ್ಷಣ ಸಚಿವಾಲಯ, ಯುವ ವ್ಯವಹಾರ ಹಾಗೂ ಚುನಾವಣಾ ಆಯೋಗದ ಸಹಯೋಗದೊಂದಿಗೆ ಮೇರಾ ಪೆಹ್ಲಾ ವೋಟ್ ದೇಶ್ಕೆ ಲಿಯೇ ಮತದಾನ ಜಾಗೃತಿ ಅಭಿಯಾನದಡಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಮತದಾನ ಜಾಗೃತಿ ಕುರಿತು ಮಾತನಾಡಿದರು.
ಸರ್ಕಾರ ನೀಡುವ ಎಲ್ಲಾ ಸವಲತ್ತುಗಳ ಲಾಭ ಪಡೆದುಕೊಂಡಿದ್ದೇವೆ. ಆದರೆ ದೇಶದ ಪ್ರಜೆಗಳಾಗಿ ನಮ್ಮ ಕರ್ತವ್ಯಗಳನ್ನು ನಿಭಾಯಿಸುವ ಸಮಯ ಬಂದಿದೆ. ಅದನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸುವ ಕೆಲಸ ಮಾಡಬೇಕಿದೆ. ಮತದಾನ ಮಾಡದೇ ಹೋದರೆ ಸರ್ಕಾರವನ್ನು ಪ್ರಶ್ನೆ ಮಾಡುವ ಹಕ್ಕು ಯಾವುದೇ ನಾಗರಿಕನಿಗೆ ಇರುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ. ಹಾಗಾಗಿ ಈ ದೇಶದ ನಾಗರಿಕರಾಗಿ ಸಮಾಜಕ್ಕೆ ಕೊಡುಗೆ ನೀಡುವ ಕಡೆಗೆ ಗಮನ ನೀಡಬೇಕಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಭಾಗವಹಿಸುವಿಕೆ ಇಲ್ಲದೇ ಹೋದರೆ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಯಾವುದೇ ಪಕ್ಷದ ನಾಯಕರಿಗೆ ಮತ ಹಾಕಲು ಅವಕಾಶವಿದ್ದು, ಆ ಮೂಲಕ ಸಮಾಜಕ್ಕೆ ಉತ್ತರದಾಯಿಯಾಗಿ ಕೆಲಸ ಮಾಡುವ ಸರ್ಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನದ್ದಾಗಿರುತ್ತದೆ. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಿದ್ದಂತೆ. ಈ ಹಬ್ಬದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರೂ ಭಾಗವಹಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ನಾಗರಿಕ ಹಕ್ಕುಗಳನ್ನು ಅರಿತು, ಸಂವಿಧಾನಕ್ಕೆ ಬದ್ಧವಾಗಿ ಮತದಾರರು ತಮ್ಮ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಎಲ್ಲಾ ಸಂದರ್ಭಗಳಲ್ಲೂ ವ್ಯವಸ್ಥೆ ಕಡೆಗೆ ಬೊಟ್ಟು ಮಾಡಿ ತೋರಿಸುವ ಮುನ್ನಾ ನಾಗರಿಕರಾಗಿ ನಮ್ಮ ಕರ್ತವ್ಯಗಳ ಕಡೆಗೆ ಹೆಚ್ಚು ಗಮನ ನೀಡಬೇಕಿದೆ ಎಂದು ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಕಡ್ಡಾಯ ಮತದಾನ ಮಾಡುವ ಕುರಿತು ಪ್ರಮಾಣ ವಚನ ಬೋಧಿಸಲಾಯಿತು. ಗಣಕಯಂತ್ರ ವಿಭಾಗದ ಡಾ. ಭಾರತಿ ಪಿಲಾರ್ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ