ಉಜಿರೆ: ಜೀವಕೋಶ ಸಂರಚನೆಯೊಳಗೆ ಅಡಕವಾಗಿರುವ ಸೂಕ್ಷಾತಿಸೂಕ್ಷ್ಮ ಅಂಶಗಳನ್ನು ಪರಿಗಣಿಸಿ ಕೈಗೊಳ್ಳಲಾಗುವ ಸಂಶೋಧನೆಗಳು ಚಿಕಿತ್ಸೆಯೂ ಸೇರಿದಂತೆ ವಿವಿಧ ವಲಯಗಳಿಗೆ ಅನುಕೂಲಕಾರಿಯಾಗಿವೆ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಜೈವಿಕ ವಿಜ್ಞಾನ ಮತ್ತು ಸಂಶೋಧನಾ ವಿಭಾಗವು ಏರ್ಪಡಿಸಿದ್ದ ಒಂದು ದಿನದ ಮೊಲಿಕ್ಯುಲಾರ್ ಡಾಕಿಂಗ್ [ಡ್ರಗ್ ಡಿಸೈನ್] ವಿಷಯದ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೈವಿಕ ಸಂಶೋಧನೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಟ್ರೆಂಡ್‌ಗಳನ್ನು ವಿದ್ಯಾರ್ಥಿಗಳು ಮತ್ತು ಸಂಶೋಧಕರು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಇದಕ್ಕನುಗುಣವಾಗಿ ಆಲೋಚಿಸಿ ಸಂಶೋಧನಾ ಪ್ರಜ್ಞೆಯೊಂದಿಗೆ ಮುಂದಡಿಯಿಡಬೇಕು. ಇದರಿಂದ ಸಂಶೋಧನೆ ಮತ್ತು ವೃತ್ತಿಪರವಲಯದಲ್ಲಿ ವಿಭಿನ್ನವಾಗಿ ಕಾರ್ಯೋನ್ಮುಖರಾಗುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಲವಾರು ಅಣುಗಳ ಸಂರಚನೆಯಿಂದ ಮನುಷ್ಯ ಜೀವಿ ರೂಪುಗೊಂಡಿದ್ದಾನೆ. ಅಣುಗಳ ಮೇಲೆ ನಡೆದ ವಿಜ್ಞಾನಿಗಳ ಪ್ರಯೋಗಾತ್ಮಕ ಕೌಶಲ್ಯದಿಂದ ಇಂದು ಜಗತ್ತು ಮುಂದುವರಿದಿದೆ. ಸಂಶೋಧನಾ ವಲಯದ ಈ ಹೆಜ್ಜೆಗಳು ಹೊಸದೊಂದರ ಅನ್ವೇಷಣೆಗೆ ಪೂರಕವಾಗಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್.ಡಿ,ಎಂ ಸ್ನಾತಕೋತ್ತರ ಕೇಂದ್ರ ಡೀನ್ ಡಾ.ವಿಶ್ವನಾಥ ಪಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗಳು ಹೊಸ ಆಯಾಮ ಪಡೆಯುತ್ತಿರುವಾಗ ವಿದ್ಯಾರ್ಥಿಗಳು ಚಿಕಿತ್ಸಕ ದೃಷ್ಟಿಕೋನದೊಂದಿಗೆ ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಕಾಲಿಕ ಮಾರ್ಗದರ್ಶನ ಪಡೆದು ಸಂಶೋಧನಾ ಪರಿಕಲ್ಪನೆಗಳನ್ನು ಸಮರ್ಪಕವಾಗಿ ಗ್ರಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರು ಜೆ.ಎಸ್.ಎಸ್ ಕಾಲೇಜಿನ ಪ್ರಾಧ್ಯಾಪಕ ಡಾ.ರಮಿತ್ ರಾಮು ಉಪಸ್ಥಿತರಿದ್ದರು. ವಿಭಾಗ ಮುಖ್ಯಸ್ಥೆ ಡಾ. ಪ್ರಾರ್ಥನಾ ಜೈನ್ ಸ್ವಾಗತಿಸಿದರು, ಕಾರ್ಯಕ್ರಮದ ಕಾರ್ಯದಶಿ ಡಾ.ಸುದರ್ಶನ.ಪಿ ವಂದಿಸಿದರು. ವಿದ್ಯಾರ್ಥಿ ಪ್ರತೀಕ್ಷಾ. ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಪ್ರಾಧ್ಯಾಪಕ ಡಾ.ಮನೋಜ್, ಡಾ.ಗಿರೀಶ್ ಕುಮಾರ್ ಕಾರ್ಯಕ್ರಮದಲ್ಲಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ