- ಎಸ್.ಜಿ.ಕೃಷ್ಣಮೂರ್ತಿ
ತ್ರೇತಾಯುಗದ ರಾಮನ ಚರಿತ್ರೆ- ಶ್ರೀರಾಮಚಂದ್ರನ ಅದ್ಭುತ ಕಥೆಯ ತುಣುಕುಗಳು ರಾಮಾಯಣದ ಹೊಸಚಿತ್ರಣವೊಂದು ಕಲ್ಪನೆಯ ಜಾಡು ಹಿಡಿದು ಹೊರಹೊಮ್ಮಿದೆ. ವಾಲ್ಮೀಕಿ ಮಹರ್ಷಿಯೇ ಊರುಗೋಲು. ಮರ್ಯಾದಾ ಪುರುಷೋತ್ತಮ ಶ್ರೀರಾಮ ಚಂದ್ರನ ಚರಿತ್ರೆಯ ವಿನೂತನ ನಿರೂಪಣೆ. ಅಲ್ಲಿ ಕಂಗೊಳಿಸುವ ವಿವಿಧ ವ್ಯಕ್ತಿಗಳಿಗೆ ಹೊಸ ಅಲಂಕಾರ ಮಾಡಲಾಗಿದೆ.
ರಾಮಾಯಣವು ಅದ್ಭುತ, ಪಾವನಮಯ ಇತಿಹಾಸ. ಭಾರತೀಯ ಭವ್ಯ ಉಜ್ವಲ ಪರಂಪರೆಗೆ ಮಹೋನ್ನತ ಸಾಂಸ್ಕøತಿಕ ಜಲಧಾರೆಗೆ ಇದರ ಕೊಡುಗೆ ಅಪಾರ. ಜ್ಞಾನವಾಹಿನಿಯೆಂಬ ಗಂಗೆಯು ರಾಮಸ್ಮರಣೆಯೆಂಬ ಜಲವನ್ನು ತುಂಬಿಕೊಂಡು, ಜನರ ಪಾಪಗಳನ್ನು ತೊಳೆಯುತ್ತಾ, ಪುಣ್ಯ ಸಿಂಚನೆ ಮಾಡುತ್ತಾ ಧನ್ಯತೆಯ ಭಾವ ಮೂಡಿಸುತ್ತಾ ನಿರಂತರ ಹರಿಯುತ್ತಿದೆ.
ಋಷ್ಯಶೃಂಗ, ಪರಶುರಾಮ, ಇವರ ಪಾತ್ರಗಳ ಬಗ್ಗೆ ಹೊಸಚಿತ್ರಣ ಕೊಡುವ ಪ್ರಯತ್ನ ಇಲ್ಲಿ ನಡೆದಿದೆ. ವಿನೂತನವಾದ ವಸ್ತ್ರಾಲಂಕಾರಗಳಿಂದ ಸಿಂಗರಿಸಲಾಗಿದೆ. ಈ ಎಲ್ಲವೂ ಶ್ರೀರಾಮನ ಪಾತ್ರಕ್ಕೆ ಮೆರುಗು ನೀಡುತ್ತವೆ. ವೈವಿಧ್ಯತೆಯೆಲ್ಲವೂ ಪ್ರಭು ರಾಮಚಂದ್ರನಿಗೆ ಮಾಡುವ ಷೋಡಶ ಪೂಜಾ ಕೈಂಕರ್ಯಗಳು. ವಾಲ್ಮೀಕಿ ರಾಮಾಯಣಕ್ಕೆ ಪೂರ್ತಿ ಅವಲಂಬನ. ಮೂಲಕ್ಕೆ ವಿರುದ್ಧವಲ್ಲದಂತೆ ನಡೆ. ಕಥನ, ಕಲ್ಪನಾ ಭೃಂಗದ ಬೆನ್ನೇರಿ ಓಟ. ರಾಮಾಯಣದಲ್ಲಿ ಬರುವ ಪುಣ್ಯ ಜೀವಿಗಳು ಕೆಲವರನ್ನು ಪರಿಚಯಿಸುವ, ಅವರ ಪಾತ್ರವನ್ನು ಇನ್ನಷ್ಟು ಆಳವಾಗಿ ಅಧ್ಯಯಿಸಿ ಓದುಗರ ಮುಂದಿಡುವ ಸಾಹಸ ನಡೆದಿದೆ. ಶ್ರೀರಾಮಚಂದ್ರನನ್ನು ಕೇಂದ್ರವಾಗಿಟ್ಟುಕೊಂಡು ವೈಜ್ಞಾನಿಕ ತಳಹದಿಯಲ್ಲಿ ಮಾನವನು ಆಯಾ ಸನ್ನಿವೇಶಕ್ಕೆ ಪ್ರತಿಕ್ರಯಿಸುವ ಪರಿಯನ್ನು ತಿಳಿಸಲು ಮಾಡಿರುವ ಒಂದು ಪ್ರಯತ್ನ.
ಭಗೀರಥ:
ಸಗರ ಮತ್ತು ಭಗೀರಥ ಶ್ರೀರಾಮನ ಪೂರ್ವಜರು. ಹಿಂದಿನ ಕಾಲದ ರಾಜರ, ಚಕ್ರವರ್ತಿಗಳ ಭವ್ಯ ಉನ್ನತ ಆದರ್ಶವನ್ನು ನಾವು ಗಮನಿಸಬೇಕು. ರಾಜನಿಗೆ ಪ್ರಜೆಗಳ ಕ್ಷೇಮ ಮೊದಲು. ದೇಶಕ್ಕೆ ಪ್ರಜೆಗಳಿಗೆ ಏನು ತೊಂದರೆ ಬಂದರೂ ರಾಜ ತನ್ನನ್ನು ಕಾರಣ ಮಾಡಿಕೊಳ್ಳುತ್ತಿದ್ದನು. ಅವನು ಆತ್ಮಾವಲೋಕನ ಮಾಡಿಕೊಳ್ಳುತ್ತಿರುತ್ತಾನೆ. ತಾನು ಕೇವಲ ಒಬ್ಬ ಟ್ರಸ್ಟಿ ಎಂಬಂತೆ ನಡೆದುಕೊಳ್ಳುತ್ತಾನೆ. ಇದು ಇಂದು ನಮಗೆಲ್ಲಾ ಒಂದು ಪಾಠ, ಆದರ್ಶ ಆಗಿದೆ.
ಇಲ್ಲಿ ರಾಮನ ಸೀತಾ ಪರಿತ್ಯಾಗ ಸಂದರ್ಭವನ್ನು ನೆನಪಿಸಿಕೊಳ್ಳಬೇಕು. ಇಕ್ಷ್ವಾಕು ವಂಶದಲ್ಲಿ ಇದು ಸ್ಪಷ್ಟವಾಗಿ ಕಾಣಬರುತ್ತದೆ. ರಾಮನ ಪೂರ್ವೀಕ ಸಗರನ ನಡೆಯನ್ನು ಚಿಂತಿಸುವ. ಸ್ವಂತಮಗನು ದುರಾಚಾರಿಯಾಗಿ ರಾಜಮನೆತನದ ಗೌರವ ಮಣ್ಣುಪಾಲು ಮಾಡಿ, ದೇಶಕ್ಕೆ ಹಾನಿಕಾರಕನಾದ ಅಸಮಂಜನನ್ನು, ಅವನು ಯುವರಾಜನಾಗಿದ್ದರೂ ಲೆಕ್ಕಿಸದೆ ತಂದೆ ಸಗರ ಶಿಕ್ಷಿಸುತ್ತಾನೆ. ಬಡವರು, ಅಬಲರು, ಪುಟಾಣಿ ಮಕ್ಕಳನ್ನು ನದಿಗೆ ಎಸೆದು ಅವು ಒದ್ದಾಡಿ ಸಾಯುತ್ತಿದ್ದುದನ್ನು ನೋಡುತ್ತಾ ಸಂತೋಷ ಹೊಂದುತ್ತಿದ್ದ, ಈ ಹೀನ ಮನುಷ್ಯ. ರಾಜನು ಅವನನ್ನು ತ್ಯಾಜ್ಯ ಮಾಡಿ ಅರಣ್ಯಕ್ಕೆ ಅಟ್ಟಿ ಬಿಡುತ್ತಾನೆ. ಸ್ವಂತ ಮಗನಾದರೇನು, ನೀತಿಗೆಟ್ಟವನು ಮುಂದೆ ರಾಜ್ಯವನ್ನು ಸರಿಯಾಗಿ ನಡೆಸಿಕೊಂಡು ಹೋಗಬಲ್ಲ ಎಂಬ ನಂಬಿಕೆ ತಂದೆಗೆ ಹೊರಟು ಹೋಗುತ್ತದೆ. ರಾಮನ ಪೂರ್ವಜರು ಹೀಗಿದ್ದರು. ಪ್ರಜಾಹಿತಾಕಾಂಕ್ಷಿ. ಜನರ ಒಳಿತೇ ಅವರ ಧ್ಯೇಯ, ಗುರಿ. ಆ ಸಂತತಿಗೇ ಸೇರಿದ ರಾಮನ ಮುತ್ತಜ್ಜ ಭಗೀರಥನ ಕಥೆ ಬಹಳ ರೋಮಾಂಚನವಾದುದು.
ಸಗರ ಚಕ್ರವರ್ತಿಯ ಆಳ್ವಿಕೆಯಲ್ಲಿ ಬರಗಾಲವೊಂದು ಬಂದಿತು. ಜಲಕ್ಷಾಮದಿಂದ ಜನ ತತ್ತರಿಸಿದರು. ರಾಜನು ಮಂತ್ರಿಗಳು, ಪುರೋಹಿತರು ಜ್ಞಾನಿಗಳು ಹಿತವರನ್ನು ಸೇರಿಸಿ ಸಭೆ ನಡೆಸಿ ಪರಿಹಾರ ಮಾರ್ಗ ಹುಡುಕಿದನು. ತನ್ನ ಅಳಲನ್ನು ಅವರ ಮುಂದಿಟ್ಟನು. ನೀವು ಯಾಗ ಮಾಡು ಎಂದಿರಿ, ಮಾಡಿದೆನು. ಪ್ರಯೋಜನವಾಗಿಲ್ಲವಲ್ಲ?
ರಾಜನ್ ಹಾಗಲ್ಲ. ಯಜ್ಞ ಮಾಡಿಬಿಟ್ಟೆ ನನ್ನ ಕೆಲಸ ಮುಗಿಯಿತು ಎಂದು ಕೈಕಟ್ಟಿ ಕುಳಿತರೆ ಆಯಿತೆ. ಯಜ್ಞ ನಿನಗೆ ಪ್ರಚೋದನೆ ನೀಡುತ್ತದೆ. ಸೋಮಾರಿಯಾಗಿದ್ದು ಫಲದ ಅಪೇಕ್ಷೆ ಸಲ್ಲದು. ಮಾರ್ಗೋಪಾಯ ದೊರಕಿದೆ. ಅದೇ ಜಲ ಸಂಚಲನ. ನೀರಿನ ಹರಿವನ್ನು ಉಂಟುಮಾಡುವುದು. ಅಂದರೆ ಕಾಲುವೆ ತೋಡಬೇಕು. ರಾಜನಿಗೆ ಒಪ್ಪಿಗೆ ಆಯಿತು. ಕಾಲುವೆಗಳು ಸಿದ್ಧವಾದವು. ನೀರು ಬೇಕಿರುವ ಸ್ಥಳಕ್ಕೆ ಒದಗಿ ಬಂದಿತು.
ಆದರೆ ಸಾಕಷ್ಟು ನೀರು ಸಿಕ್ಕುತ್ತಿಲ್ಲ. ಅಶ್ವಮೇಧಯಾಗ ಮಾಡಿ ಉಪಾಯವೇನು ತಿಳಿಯುವ. ಬೃಹತ್ತಾದ ಯಾಗ ನಡೆಯುತ್ತಿದೆ. ಅತ್ತ ದೇವತೆಗಳ ಸಭೆಯಲ್ಲಿ ದೇವೇಂದ್ರ ಹೇಳುತ್ತಿದ್ದಾನೆ. `ಈ ಜನಗಳಿಗೆ ಸುಳಿವು ಸೂಕ್ಷ್ಮ ಕೊಟ್ಟರೂ ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ? ಯಾಗದ ಕುದುರೆ ಬಚ್ಚಿಡೋಣ. ಅವರಿಗೆ ಪರದಾಟ ಆಗುತ್ತದೆ. ಯಾಗ ನಿಂತು ಹೋಗಲು ಅವರು ಬಿಡರು. ಕಾರ್ಯೋನ್ಮುಖರಾಗುತ್ತಾರೆ. ಪ್ರಯತ್ನಶೀಲರಾಗುತ್ತಾರೆ. ಉತ್ತಮ ಫಲ ಹೊಂದಲು ಅರ್ಹರಾಗುತ್ತಾರೆ’. ಸರಿ, ಅಶ್ವವನ್ನು ಅಪಹರಿಸಿ ದೂರದ ಕಪಿಲ ಋಷಿಯ ಆಶ್ರಮದಲ್ಲಿ ಬಚ್ಚಿಡುತ್ತಾರೆ. ಸುಳಿವು ಸಿಕ್ಕಿ ಅಲ್ಲಿಗೆ ತಲುಪಲು ದೊಡ್ಡಯತ್ನ ಆಗುತ್ತದೆ. ಬೆಟ್ಟಗುಡ್ಡಗಳ ಸಂದಿನಿಂದ ದಾರಿ ಮಾಡಿಕೊಂಡು ಸ್ಥಳ ತಲಪುತ್ತಾರೆ. ಕುದುರೆ ಸಿಕ್ಕ ಸಂಭ್ರಮದಲ್ಲಿ ಋಷಿಯನ್ನು ಬಹಳವಾಗಿ ಹೀಯಾಳಿಸಿ ಅವನ ಶಾಪಕ್ಕೆ ತುತ್ತಾಗಿ 60000 ಜನ ಭಸ್ಮವಾಗಿ ಹೋಗಿ ಬಿಡುತ್ತಾರೆ. ಇತ್ತ ಯಾಗ ಸಮಾಪ್ತಿ ಆಗಲಿಲ್ಲ. ಅತ್ತ ಸಹಸ್ರಾರು ಜನ ಅಕಾಲ ಮರಣ ಹೊಂದಿರುತ್ತಾರೆ. ಛಲಗಾರರಾದ ಅಂಶುಮಾನ್, ಅವನ ಪುತ್ರ ಭಗೀರಥ ದಕ್ಷ ಸಾಹಸ ಮಾಡುತ್ತಾರೆ. ಪಿತೃಗಳಿಗೆ ಸದ್ಗತಿ ದೊರೆಕಿಸಿಕೊಡಬೇಕು. ಅವರ ಭಸ್ಮ ತೊಳೆಯಲು ನೀರು ಬೇಕು. ದೇವಗಂಗೆಗೇ ಗುರಿಯಿಡುತ್ತಾನೆ, ಭಗೀರಥ. ಅವನು ಅಸೀಮ ಸಾಹಸಿ. ಯಾವ ಎಡರನ್ನೂ ಲೆಕ್ಕಿಸುವುದಿಲ್ಲ. ತಪಸ್ಸು ಮಾಡಿ ಗಂಗೆಯನ್ನು ಒಲಿಸಿಕೊಳ್ಳುತ್ತಾನೆ.
ಭೋರ್ಗರೆದು ಬರುವ ಅವಳ ರಭಸ ಭೂಲೋಕದ ಜನ ತಡೆದು ಕೊಳ್ಳಲು ಅಸಮರ್ಥರು. ಕೊಚ್ಚಿಕೊಂಡು ಹೋಗಿ ಬಿಡುತ್ತಾರೆ ಎಂದು ಅರಿತ ದೇವತೆಗಳು ಶಿವನನ್ನು ಪ್ರಾರ್ಥಿಸುತ್ತಾರೆ. ಅವನು ಗಂಗೆಯನ್ನು ತನ್ನ ಜಡೆÉಯಲ್ಲಿ ಬಂಧಿಸಿ ಬಿಡುತ್ತಾನೆ. ಏನಾಯಿತು? ಮುಂದೆ ಮುಂದೆ ಭಗೀರಥ ಹೋಗುತ್ತಿರುತ್ತಾನೆ. ಗಂಗೆ ಹಿಂದೆ ಹಿಂದೆ ಬರುತ್ತಿದ್ದಾಳೆ. ಇದ್ದಕ್ಕಿದ್ದಂತೆ ನಿಶ್ಶಬ್ದ. ಆಕೆ ಕಾಣದಾದಳು. ತಪಸ್ಸು ಮಾಡಿ ಶಿವನ ಕರುಣೆ ಪಡೆಯುತ್ತಾನೆ. ಸ್ವಲ್ಪ ಸ್ವಲ್ಪವಾಗಿ ಗಂಗೆಯನ್ನು ಹರಿದು ಹೋಗಲು ಬಿಡುತ್ತಾನೆ, ಈಶ್ವರ.
ಮಾರ್ಗದಲ್ಲಿ ಮತ್ತೊಂದು ಅಡಚಣೆ. ಜಹ್ನು ಋಷಿಯ ಆಶ್ರಮ ಮುಳುಗಿ ಬಿಡುತ್ತದೆ. ಋಷಿ ಕೋಪದಿಂದ ಗಂಗೆಯನ್ನು ಆಪೋಶನÀ ತೆಗೆದುಕೊಂಡು ಬಿಡುವನು. ಮತ್ತೆ ಬಂತು ಕಷ್ಟ ಭಗೀರಥನಿಗೆ. ತಪಸ್ಸು ಮಾಡಿ ಋಷಿಯನ್ನು ಮೆಚ್ಚಿಸಿ ಕೆಲಸ ಸಾಧಿಸಿಕೊಳ್ಳುತ್ತಾನೆ. ಗಂಗೆ ಸರಾಗವಾಗಿ ಹರಿದು ಪೂರ್ವಜರ ಅಸ್ಥಿ ಭಸ್ಮವನ್ನು ಕೊಚ್ಚಿಕೊಂಡು ಹೋಗಿ ಸಮುದ್ರ ಸೇರುತ್ತದೆ. ಕುದುರೆ ಸಿಕ್ಕಿ ಯಾಗ ಪೂರ್ಣಗೊಳ್ಳುತ್ತದೆ. ಪಿತೃಗಳಿಗೆ ಸದ್ಗತಿ ದೊರಕುತ್ತದೆ. ಸದ್ದಿಲ್ಲದೆ ಈಗ ಯಥೇಚ್ಛ ನೀರು ಗಂಗೆಯ ರೂಪದಲ್ಲಿ ಜಗತ್ತಿಗೆ!
ಏನು ಛಲ, ಏನು ಗುರಿಯತ್ತ ನೆಟ್ಟದೃಷ್ಟಿ! ಗಂಗೆ ಭಾಗೀರಥಿ ಎನಿಸಿಕೊಳ್ಳುತ್ತಾಳೆ. ಜಹ್ನುವಿನಿಂದ ಜಾಹ್ನವಿ ಆದಳು. ಇದು ಆತನ ಮಹಿಮಾನ್ವಿತ ಕಥೆ. ಎಲ್ಲಿಯ ದೇವ ಗಂಗೆ, ಎಲ್ಲಿಯ ಮತ್ರ್ಯಲೋಕ. ನಿಜವಾಗಿ ದೇವತೆಗಳಿಗೆ ಭೂಲೋಕಕ್ಕೆ ಸಮೃದ್ಧ ಜಲದ ಕೊಡುಗೆ ಆಗಬೇಕೆಂಬುದು. ಅವರು ಸುಮ್ಮನೇ ಕೊಡುವವರಲ್ಲ. ನಾವು ಆರ್ಜಿಸಲಿ. ಸ್ವಪ್ರಯತ್ನದಿಂದ ಸಾಧಿಸಲಿ, ಅದರಲ್ಲಿರುತ್ತದೆ ಸಂತೃಪ್ತಿ, ಮಹತ್ವ. ನಮ್ಮನ್ನು ಕೆಲಸದಲ್ಲಿ ಹಚ್ಚುತ್ತಾರೆ. ಜೊತೆ ಜೊತೆಯಲ್ಲಿ ನಿಲ್ಲುತ್ತಾರೆ. ನಾವೇ ಗಳಿಸುವಂತೆ ಮಾಡುತ್ತಾರೆ.
ದೈವಕೃಪೆಯೊಡನೆ ಮನುಷ್ಯ ಪ್ರಯತ್ನ. ಇದು ಉದ್ದೇಶ. ನಾನೇ ಮಾಡಿದೆ, ಇನ್ನು ದೇವರೇಕೆ ಎಂಬ ಗರ್ವ ಬೇಡ. ಆತನ ದಯೆಯಿಂದ ಪ್ರಚೋದನೆ. ಬೇಕಿದ್ದ ಪರಿಕರಗಳ ಒದಗಿಸುವಿಕೆ. ಭಗೀರಥನ ಶ್ರಮ ಅಷ್ಟು ತೀವ್ರ. ಗುರಿಯ ಕಡೆ ಅಚಲ ಲಕ್ಷ್ಯ. ಗಂಗೆ ಒಲಿದು ಬಂದಳು. ಹರಿಯ ಪಾದದಿಂದ ಹರಿದುಬಂದಳು. ಇಳೆ ತುಂಬಿಸಿದಳು. ಉದ್ದೇಶ ವೈಯುಕ್ತಿಕವಾಗಿ ಹಿರಿಯರಿಗೆ ಸ್ವರ್ಗ ಪ್ರಾಪ್ತಿಯ ಅಂತ್ಯಕ್ರಿಯೆ ಆದರೆ ಅದಕ್ಕಿಂತ ಸಹಸ್ರಪಾಲು ಮಿಗಿಲಾದ ಕೊಡುಗೆ ಜನರಿಗೆ ಅಪರಿಮಿತ ಜಲದ ವರ.
ಭಗೀರಥ ಒಬ್ಬ ಸಾಹಸಿ ಇಂಜಿನಿಯರ್. ಬಹಳ ಕಾಲದ ಹಿಂದೆ ಹಿಮಾಲಯದ ಗಿರಿ ಶಿಖರಗಳಲ್ಲಿ ನೀರು, ಹಿಮ ತಡೆಹಿಡಿಯಲ್ಪಟ್ಟಿದ್ದಿತು. ಮುಂದೆ ಚಲಿಸಲು ದಾರಿಕಾಣದೆ ಸ್ಥಗಿತಗೊಂಡಿತ್ತು. ರಾಜನ ಚತುರ ಶಿಲ್ಪಿಗಳು ನಾಡಿನ ನೀರಿನ ಅವಶ್ಯಕತೆಯ ತೀವ್ರತೆಗೆ ಸ್ಪಂದಿಸಿ ನೀರು ಸರಾಗವಾಗಿ ಹರಿದುಬರಲು ಇದ್ದ ಅಡ್ಡಿ ಆತಂಕಗಳನ್ನು ದೂರ ಮಾಡಿದರು. ಅತಿ ಸಾಹಸದಿಂದ, ಜಾಣ್ಮೆಯಿಂದ ಹಿಮನದಿಯ ಸೆರೆ ಬಿಡಿಸಿ ಉಪಾಯವಾಗಿ ಕೆಳಗೆ ಹರಿದು ಬರುವಂತೆ ಮಾಡಿ ಕೌಶಲ ಮೆರೆದರು. ಪ್ರಬುದ್ಧ ರೀತಿಯಲ್ಲಿ ಮಾರ್ಗ ಅನುಗೊಳಿಸಿದರು. ಅಪಾಯವಾಗದಂತೆ ಕೆಲಸ ಮಾಡಿ ಮಹೋನ್ನತ ಇಂಜಿನಿಯರಿಂಗ್ ಸಾಧನೆಗೈದರು. ಯಶೋಭಾಗಿಗಳಾದರು. ಇದು ಇಂಜಿನಿಯರಿಂಗ್ ಸಾಧನೆಯೇ ಆಗಿದ್ದಲ್ಲಿ ಇಷ್ಟು ಹಿರಿದಾದ ಸಾಧನೆ ಜಗತ್ತು ಇನ್ನೂ ಕಂಡಿಲ್ಲ, ಕೇಳಿಲ್ಲ. ಸಗರ ಭಗೀರಥರು ಧನ್ಯರು.
ಗಿರಿಗಳು ನದಿಗಳು ಇರುವವರೆಗೆ ರಾಮಾಯಣದ ಕಥೆ ಜಗತ್ತಿನಲ್ಲಿ ಪ್ರಚಾರದಲ್ಲಿರುತ್ತದೆ. ಇದು ವಾಲ್ಮೀಕಿಗೆ ಬ್ರಹ್ಮನ ವರ. ವರಕವಿ ಬೇಂದ್ರೆ ಹೇಳುತ್ತಾರೆ. `ಶ್ರೀ ಭಗೀರಥ ಸಾರ್ವಭೌಮ ನಿನ್ನದು ಒಂದೇ ನಿಜವಾದ ಅಮರ ಕೀರ್ತಿ. ಹರಿಯುತ್ತಿದೆ ಭಾರತೀಯ ಮಾತೃ ಹೃದಯ. ತನ್ನ ಮಕ್ಕಳಿಗಾಗಿ ಏನು ಮಾತೆ(ಗಂಗೆ)ಯ ರೀತಿ! ಇಳಿದು ಬಾ ತಾಯೇ ಇಳಿದು ಬಾ...... ಶಂಭು ಶಿವ ಹರನ ಚಿತ್ತ ಬಾ. ಹರನ ಜಡೆಯಿಂದ ಹರಿಯ ಅಡಿಯಿಂದ ನುಸುಳಿ ಬಾ’. ಹೆಜ್ಜೆ ಹೆಜ್ಜೆಗೂ ಅಡ್ಡಿಗಳು ಆದರೆ ಭಗೀರಥ ಅವಿಚಲಿತ. ಅವಿಶ್ರಾಂತ ಪ್ರಯತ್ನಕ್ಕೆ, ಸಾಫಲ್ಯಕ್ಕೆ ಇನ್ನೊಂದು ಹೆಸರಾಯಿತು. ಮೋಕ್ಷದಾಯಿನಿ ಅಮರ ಗಂಗೆ ಇಂದಿಗೂ ಹರಿಯುತ್ತಿದ್ದಾಳೆ.
ಋಷ್ಯಶೃಂಗ:
ಇಲ್ಲಿನ ಪ್ರಸಂಗ ದಶರಥನು ರಾಜ್ಯವಾಳುತ್ತಿದ್ದಾಗಿನ ಮಾತು. ಒಮ್ಮೆ ಭೀಕರ ಕ್ಷಾಮ ಅಯೋಧ್ಯೆಯನ್ನು ಆವರಿಸಿತು. ಮಳೆಯಿಲ್ಲದೆ ಜನ ತತ್ತರಿಸಿದರು. ತಿಳಿದ ಹಿರಿಯರು ರಾಜನಲ್ಲಿ ಬಿನ್ನಹ ಮಾಡಿದರು ವಿಭಾಂಡಕ ಋಷಿಯ ಮಗ ಋಷ್ಯಶೃಂಗ ಅತ್ಯಂತ ತೇಜಸ್ವೀ ಆದರೆ ಶಿಶುವಿನ ಮುಗ್ಧತೆ ಕೂಡಿದ ಋಷಿ, ಪರಮ ಸಾತ್ವಿಕ. ಅಶ್ವಮೇಧ ಯಾಗಕ್ಕೆ ಆತನನ್ನು ಮುಖ್ಯಸ್ಥನನ್ನಾಗಿ ಮಾಡಿದರೆ, ಜನರ ಕಷ್ಟ ಬಗೆಹರಿಯುತ್ತದೆ. ಮಳೆ ಬರುತ್ತದೆ ಎಂದರು. ಅಂತೆಯೇ ಆತನನ್ನು ಪ್ರಾರ್ಥಿಸಿ ಉಪಾಯವಾಗಿ ಬರಮಾಡಿಕೊಳ್ಳುತ್ತಾರೆ. ಯಾಗ ನಡೆಯುತ್ತದೆ. ಅವರೆಲ್ಲರ ಅನಿಸಿಕೆಯಂತೆ ಮಳೆ ಧಾರೆಯಾಗಿ ಬೀಳುತ್ತದೆ. ಜನ, ಪ್ರಾಣಿ, ಸಸ್ಯಸಂಕುಲ ಮಿತಿಯಿಲ್ಲದ ಸಂತಸದಿಂದ ಕೂಡಿರುತ್ತಾರೆ. ಕೃತಜ್ಞನಾದ ರಾಜ ತನ್ನ ಸಾಕು ಮಗಳು ಶಾಂತಾಳನ್ನು ಋಷಿಗೆ ಮದುವೆ ಮಾಡಿಕೊಡುತ್ತಾನೆ. ಇದು ಒಂದು ರೀತಿ ಸ್ವಹಿತಚಿಂತನೆ. ಮಗಳು ಅಳಿಯ ಅಲ್ಲಿಯೇ ಉಳಿದು ದೇಶಕ್ಕೆ ಅಲ್ಲಿಂದಾಚೆಗೆ ನೀರಿನ ಬವಣೆ ಶಾಶ್ವತವಾಗಿ ತಪ್ಪುತ್ತದೆ. ಅವನ ತಪಸ್ಸಿನಿಂದ, ಮಹಿಮೆಯಿಂದ ಅವನಿಂದ ಜರುಗಿದ ಯಾಗದಿಂದ ಮಳೆ ಬೆಳೆ ಸಮೃದ್ಧವಾಗಿ ಆಯಿತು ಎಂದು ಎಲ್ಲರೂ ಮನಗಾಣುತ್ತಾರೆ.
ಕತೆ ಮತ್ತೆ ಇಲ್ಲಿನ ಪುಸ್ತಕದಲ್ಲಿ ಸ್ವಲ್ಪ ತಿರುವು ಪಡೆದು ಬಣ್ಣಿಸಲ್ಪಟ್ಟಿದೆ. ಋಷ್ಯಶೃಂಗ ಒಬ್ಬ ಋಷಿ ಆದರೆ ಪ್ರವೃತ್ತಿಯಲ್ಲಿ ಒಬ್ಬ ವಿಜ್ಞಾನಿ. ಸಾಧಕ. ಈತನಲ್ಲಿ ಈ ಎರಡೂ-ತಪಸ್ಸು, ಜ್ಞಾನ ಮತ್ತೆ ವಿಜ್ಞಾನಿಯ ನಡೆ ಮೇಳೈಸಿವೆ. ಸಹ್ಯಾದ್ರಿಯ ಸರಹದ್ದಿನಲ್ಲಿ ಅವನ ಆಶ್ರಮ (ಶೃಂಗೇರಿಯ ಬಳಿಯ ಕಿಗ್ಗ?) ತನ್ನ ವೇದಾಧ್ಯಯನದ ತಪಜಪಗಳ ಮಧ್ಯೆ ಮಳೆಯ ಮೇಲಿನ ಪ್ರಯೋಗ ಮಾಡುತ್ತಿರುತ್ತಾನೆ. ಅದರಲ್ಲಿ ಬಹಳ ಆಸಕ್ತಿ. ಅವನಿಗೆ ವಿಸ್ಮಯತಂದ ವಿಷಯವೆಂದರೆ ಮಳೆಯ ಆಗಮನ ಹಠಾತ್ ಆದಂತೆ ಅಂತೆಯೇ ಹೇಳದೇ ಕೇಳದೇ ನಿರ್ಗಮನ. ಅದರ ಚಟುವಟಿಕೆ, ಜನರ ಜ್ಞಾನದ ವ್ಯಾಪ್ತಿಯ ಹೊರಗೆ. ವರ್ಷಾ ಕಾಲ ಬಂತೆಂದರೆ ಕ್ಲುಪ್ತವಾಗಿ ಎಲ್ಲಿಂದಲೋ ಮುಗಿಲುಗಳು ಒಟ್ಟುಗೂಡಿ ಆಕಾಶದಲ್ಲಿ ನಾಟ್ಯವಾಡುವುವು. ಚಿತ್ರ ವಿಚಿತ್ರ ಚಿತ್ತಾರಗಳನ್ನು ಮೂಡಿಸುತ್ತಾ ಸಂಧ್ಯಾ ಸೂರ್ಯನ ಪ್ರಭಾವದಿಂದ ದಿಗಂತದಲ್ಲಿ ಅರುಣ ಕಿರಣರಾಗ ರಾಜಿ ಬಿಂಬಿಸಿ ವರ್ಣವೈವಿಧ್ಯ ಉಂಟುಮಾಡುವುವು. ಜನರ ಮನದಲ್ಲಿ ಸಂತಸ ವಿಸ್ಮಯಗಳನ್ನು ಮೂಡಿಸುವುವು. ಒಂದು ಅವ್ಯಕ್ತ ಅಜ್ಞಾತ ನಿಯಮಕ್ಕೆ ಒಳಪಟ್ಟು ಮಳೆಯಿಂದ ಇಳೆಯನ್ನು ಸಿಂಚನಗೊಳಿಸುವುವು. ಎಲ್ಲರಲ್ಲೂ ನಗು ನೆಮ್ಮದಿ ತುಂಬಿಸಿ ಸದ್ದಿಲ್ಲದೆ ಪಯಣ ಮೂಡಿ ಬಿಡುವುದು. ಏನು ಇದರ ಅಂತರಂಗ?
ಇಲ್ಲಿ ಸಮೃದ್ಧಿ ಅಲ್ಲಿ ತೀರ ಅಲ್ಪ. ಪಕ್ಕ ಪಕ್ಕದ ಪ್ರದೇಶಗಳಲ್ಲಿಯೇ ಪಕ್ಷಪಾತ. ಮಳೆ ರಾಯನ ಪ್ರಸನ್ನತೆಯ ಆಳ ಅಳತೆ ಯಾರೂ ಅರಿಯರು ಅದು ನಿಗೂಢ. ಒಂದೆಡೆ ಅತೀವೃಷ್ಟಿ ಇನ್ನೊಂದೆಡೆ ಅನಾವೃಷ್ಟಿ. ಏಕೀ ತಾರತಮ್ಯ! ನೀರಿಗಾಗಿ ಬಾಯಿ ಬಿಡುವ ಜೀವಕೋಟಿಯ ವಿಷಮ ಸ್ಥಿತಿ ಸರಿಪಡಿಸಲು ಆಗದೇ? ಮಾನವನ ಶಕ್ತಿಯ ಪರಿಧಿಯಲ್ಲಿ ಅವಕಾಶವುಂಟೇ? ಇದು ಆತನ ಚಿಂತನೆ.
ಈತನೂ ಇತರ ಋಷಿಗಳೂ ಮರುಭೂಮಿಗಳಲ್ಲಿ ಮಳೆಯ ಬಗ್ಗೆ ಏಕಾಗ್ರ ಚಿತ್ತದಿಂದ ಪ್ರಯೋಗ ಮಾಡಲಾರಂಭಿಸಿದರು. ಒಮ್ಮೆ ಯಾಗವÀನ್ನು ಮಾಡುವಾಗ ತೆಳುವಾದ ಬೆಳ್ಳಿಯ ಹಾಳೆಯನ್ನು (ತಗಡು) ದಾನವಾಗಿ ಕೊಡಲ್ಪಟ್ಟಿತು. ಸಮುದ್ರದ ಬಳಿಯ ಮುಗ್ಧ ಬೆಸ್ತರು ದರ್ಭೆಯೆಂದು ಸಮುದ್ರದ ಜೊಂಡುಹುಲ್ಲನ್ನು ತಂದಿತ್ತರು. ಭಕ್ತಿಶ್ರದ್ಧೆಗಳಿಂದ ಕೂಡಿದ ಈ ವಸ್ತುಗಳನ್ನು ತಿರಸ್ಕರಿಸಲಾರದೆ, ಬೇರೆಯವರು ಅಪಹಾಸ್ಯ ಮಾಡದಂತೆ ಜೊಂಡನ್ನು ಬೆಳ್ಳಿಯ ರೇಖಿನಲ್ಲಿ ಸುತ್ತಿ ದಧಿಯಲ್ಲಿಟ್ಟು ಯಜ್ಞದಲ್ಲಿನ ಅಗ್ನಿಗೆ ಅರ್ಪಿಸಿದರು. ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮಿತು. ಕಾಕತಾಳೀಯವೆಂಬಂತೆ ಅಂದು ಸಂಜೆ ಮಳೆ ಸುರಿಯಿತು.
ಋಷಿಗೆ ವಿಸ್ಮಯ ಮಳೆಗೆ ಕಾರಣವೇನು? ಮುಂಚಿನಂತೆಯೇ ಇಂದೂ ಯಾಗ ನಡೆದಿದೆ. ಆಗ ಇಲ್ಲದ ಮಳೆ ಈಗ ಏಕೆ ಬಂದಿತು? ಇದೊಂದು ಆಕಸ್ಮಿಕವೇ? ಋಷಿಯಲ್ಲಿದ್ದ ವಿಜ್ಞಾನಿ ಚಿಂತನೆ ಶೋಧನಾ ಕಾಯಕದಲ್ಲಿ ತೊಡಗಿತು. ಯಾಗದಲ್ಲಿ ಏನು ಬದಲಾವಣೆ ಆಗಿದೆ? ಬೆಳ್ಳಿ ರೇಖು, ಸಮುದ್ರದ ಜೊಂಡುಹುಲ್ಲು ಮತ್ತು ಮೊಸರು ಈಗ ಅವುಗಳ ಮೇಲೆ ಅನೇಕ ಪ್ರಯೋಗಗಳು ಆದವು. ಬಹಳಷ್ಟು ಸಮಯದಲ್ಲಿ ಮಳೆ ಪದೇಪದೇ ಮರುಕಳಿಸಿತು. ಈಗ ಋಷಿಗೆ ಅನ್ನಿಸುತ್ತದೆ ಈ ವಸ್ತುಗಳು ಯಾಗದಲ್ಲಿ ಉಪಯೋಗಗೊಂಡಾಗ ಮೋಡಗಳು ಇದ್ದಾಗ ಅನುಕೂಲ ವಾತಾವರಣದಲ್ಲಿ ಮಳೆ ಬೀಳಲು ಕಾರಣವಾಗುತ್ತದೆ ಎಂದು. ಈ ವಿಷಯಗಳಲ್ಲಿ ಅವನು ಹೆಚ್ಚಿನ ತಿಳುವಳಿಕೆ ಹೊಂದಿದನು.
(ಕಾರಣವೇನಿರಬಹುದು? ಸಮುದ್ರದ ಜೊಂಡು ಹುಲ್ಲಿನಲ್ಲಿ ಅಯೋಡಿನ್ ಎಂಬ ವಸ್ತು ಇರುತ್ತದೆ. –ಮೊಸರು ಬೆಳ್ಳಿಯ ರೇಖು, ಶಾಖ ಇವುಗಳ ಸಂಯೋಗದಿಂದ ರಾಸಾಯನಿಕ ಕ್ರಿಯೆ ನಡೆದು, ಅತಿ ಸೂಕ್ಷ್ಮ ಕಣಗಳ ರೂಪದಲ್ಲಿ ಯಜ್ಞಕುಂಡದ ಹೊಗೆಯಲ್ಲಿ ಕೂಡಿ ಆಕಾಶಕ್ಕೆ ಏರುತ್ತದೆ. ಈ ವಸ್ತುವಿಗೆ ಜಲಾಕರ್ಷಕ ಗುಣ ಇರುತ್ತದೆ. ಮೋಡದಲ್ಲಿನ ವಿರಳ ಆವಿ ಈಗ ಕೇಂದ್ರೀಕೃತಗೊಂಡು ಮಳೆ ಹನಿ ಆಗುತ್ತದೆ. ಮಳೆ ಬರುತ್ತದೆ.)
ಇಂದಿನ ದಿನಗಳಲ್ಲಿ ಕೃತಕ ಮಳೆ ಬರಿಸಲು ವಿಮಾನದಿಂದ ರಾಸಾಯನಿಕ ವಸ್ತುಗಳು ಸಿಲ್ವರ್ ಅಯೊಡೈಡ್, ಸೋಡಿಯಂ ಅಯೋಡೈಡ್‍ಗಳನ್ನು ಮೋಡಕ್ಕೆ ಸಿಂಪಡಿಸುತ್ತಾರೆ. ಮಳೆ ಬರಿಸುತ್ತಾರೆ. ಋಷ್ಯಶೃಂಗನಾದರೂ ಬೆಳ್ಳಿ ತಗಡು ಜೊಂಡು ಹುಲ್ಲು, ಮೊಸರುಗಳನ್ನು ಯಜ್ಞೇಶ್ವರನಿಗೆ ಅರ್ಪಿಸಿದನು. ಈ ವಸ್ತುವನ್ನು ಅವನು ಹೋಮಧೂಮವಾಗಿ ಆಕಾಶಕ್ಕೆ ಚಿಮ್ಮಿಸಿದನು. ಆ ಮೂಲಕ ಮಳೆ ಬರಿಸಿದನು. ಸೂಕ್ಷ್ಮ ಕಣಗಳು ಇಂದಿನ ಅಯೋಡೈಡ್ ಸಿಂಪಿಣಿಯಂತೆ ಕೆಲಸ ಮಾಡಿತು.
ಇಲ್ಲಿ ಋಷಿಯ ಪ್ರಯೋಗಶೀಲತ್ವ ಎದ್ದು ಕಾಣುತ್ತದೆ. ವಸ್ತು ಅಥವಾ ವಿಷಯ ಎಷ್ಟೇ ಅಲ್ಪವಾಗಿರಲಿ, ಪ್ರಯೋಗಶೀಲ ಕಣ್ಣುಗಳು ಅವನ್ನು ನಿರ್ಲಕ್ಷಿಸುವುದಿಲ್ಲ. ಋಷಿ ಖ್ಯಾತಿ ಪಡೆದನು.
ಪುತ್ರೋತ್ಸವ:
ದಶರಥನಿಗೆ ಬಹಳಕಾಲ ಮಕ್ಕಳಾಗಲಿಲ್ಲ. ರಾಜ್ಯಕ್ಕೆ ವಾರಸುದಾರನು ಇಲ್ಲವಾದನು. ರಾಜನು ಚಿಂತಾಕ್ರಾಂತನಾಗಿದ್ದಾನೆ. ಏನೇನೆಲ್ಲ ರಾಜ ವೈಭೋಗಗಳಿದ್ದರೂ, ಪುತ್ರನ ಮುಖ ದರ್ಶನದ ಭಾಗ್ಯವಿಲ್ಲದೆ ಬಾಳು ನೀರಸವಾಗಿದೆ. ಪೊಡವಿಗೆಲ್ಲ ನಾನು ಆಧಾರ. ಆದರೆ ನಾನು ಮಾತ್ರ ನಿರಾಧಾರಿ. ಪತ್ನಿ ಬಂಜೆಯಾಗಿ ಬಾಳಬೇಕಾಗಿ ಬಂದಿತು. ವಯಸ್ಸಾಗುತ್ತಿದೆ. ನನ್ನ ಕಣ್ಣಿಗೆ ಎಂದು ಮಗುವು ತಂಪೆರದೀತು? ನನ್ನ ಕೊರಗೆಂಬ ಕತ್ತಲೆಯನ್ನು ದೂರ ಮಾಡುವ ಮಂಗಲದೀಪ ಎಂದು ಕಂಡೇನು?
ರಾಜನು ತನ್ನ ಅಳಲನ್ನು ವಸಿಷ್ಟಾದಿ ಋಷಿಗÀಳಲ್ಲಿ ತೋಡಿಕೊಂಡನು. ಅವರ ಆದೇಶದಂತೆ ಅಶ್ವಮೇಧ ಯಾಗವನ್ನು ಋಷ್ಯಶೃಂಗನ ಪೌರೋಹಿತ್ಯದಲ್ಲಿ ಕೈಗೊಂಡನು. ಆ ಯಾಗ ಆದ ಮೇಲೆ ಪುತ್ರ ಕಾಮೇಷ್ಟಿಯಾಗ.
ದಶರಥನು ಯುವಕನಾಗಿರುವಾಗ ಬೇಟೆಯ ಹುಚ್ಚು ವಿಪರೀತ. ಅವನಿಗೆ ಶಬ್ದವೇಧಿ ವಿದ್ಯೆ ಕರಗತ. ಅಂದರೆ ಪ್ರಾಣಿ ಎದುರಿಗಿಲ್ಲದಿದ್ದರೂ ಕೇವಲ ಅದರ ಧ್ವನಿಯನ್ನು ಅನುಸರಿಸಿ ಬಾಣ ಬಿಟ್ಟು ಬೇಟೆಯಾಡಬಲ್ಲನು. ಒಮ್ಮೆ ಇದೇ ರೀತಿ ಶಬ್ದ ಬಂದೆಡೆಗೆ ಗುರಿಯಿಟ್ಟು ಹೊಡೆಯುತ್ತಾನೆ. ಆಗ ಮನುಷ್ಯನೊಬ್ಬನ ಚೀತ್ಕಾರ ಆಗುತ್ತದೆ. ಗಾಬರಿಯಿಂದ ಆ ಧ್ವನಿ ಬಂದೆಡೆಗೆ ಧಾವಿಸಿದನು. ಒಬ್ಬ ಯುವ ಸನ್ಯಾಸಿ ಬಾಣದಿಂದ ಹೊಡೆಯಲ್ಪಟ್ಟು ಮರಣಾವಸ್ಥೆಗೆ ತಲುಪಿರುತ್ತಾನೆ. ಅವನು ತನ್ನ ಕೈಯಲ್ಲಿ ಇದ್ದ ತಂಬಿಗೆಯಿಂದ ಕೊಳದಲ್ಲಿ ನೀರು ತುಂಬಿಕೊಳ್ಳುತ್ತಿದ್ದನು. ಅಲ್ಲಿ ಆದ ಶಬ್ದ ದಶರಥನಿಗೆ ಆನೆಯೊಂದು ನೀರು ಕುಡಿಯಲು ಬಂದಿದೆ. ಅದರದೇ ಶಬ್ದ ಎಂದು ತಪ್ಪಾಗಿ ಗ್ರಹಿಸಿ ಬಾಣ ಪ್ರಯೋಗ ಮಾಡಿದನು. ಶ್ರವಣಕುಮಾರನೆಂಬ ಯುವಕ ಕಣ್ಣುಗಳಿಲ್ಲದ ವೃದ್ಧ ಮಾತಾ ಪಿತೃಗಳನ್ನು ಕರೆದುಕೊಂಡು ತೀರ್ಥಯಾತ್ರೆ ಮಾಡುತ್ತಿದ್ದಾಗ ಈ ದುರ್ಘಟನೆ ನಡೆಯಿತು. ಯುವಕ ಇವನನ್ನು ಕ್ಷಮಿಸುತ್ತಾನೆ. ಈಗ ಕೂಡಲೇ ಈ ನೀರು ತೆಗೆದುಕೊಂಡು ಹೋಗಿ ನನ್ನ ತಾಯಿ ತಂದೆಯವರಿಗೆ ಕೊಡು. ಅವರು ಬಾಯಾರಿದ್ದಾರೆ ಎಂದನು. ವಿಷಯ ತಿಳಿದ ಅವರು ಅಸಾಧ್ಯ ಶೋಕಕ್ಕೆ ಈಡಾಗುತ್ತಾರೆ. ರಾಜನನ್ನು ಶಪಿಸಿ ಮರಣಗೈಯುತ್ತಾರೆ. ವೃದ್ಧಾಪ್ಯದಲ್ಲಿ ನಮ್ಮಂತೆಯೇ ಪುತ್ರವಿಯೋಗದಿಂದ ನೀನು ಸಾಯಿ ಎಂದು ಶಪಿಸಿರುತ್ತಾರೆ. ಇದು ರಾಜನನ್ನು ಯಾವಾಗಲೂ ಚೂರಿಯಂತೆ ಎದೆಯನ್ನು ಚುಚ್ಚುತ್ತಿರುತ್ತದೆ. ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ಮೂರು ಜನ ಪತ್ನಿಯರು. ಆದರೆ ಜೀವಭಯದಿಂದ ಅವರೊಡನೆ ಸಂಸಾರ ಮಾಡುವಂತಿಲ್ಲ.
ಋಷ್ಯಶೃಂಗನು ಮನೋವಿಜ್ಞಾನಿ. ಎಲ್ಲಕ್ಕೂ ಮುಂಚೆ ರಾಜನ ಪಾಪಪ್ರಜ್ಞೆ ಹೋಗಲಾಡಿಸಬೇಕು. ಅವನಲ್ಲಿ ಸ್ಥೈರ್ಯ ಧೈರ್ಯ ತುಂಬಬೇಕು. ಶಾಪದಲ್ಲೂ ಒಂದು ಆಶಾ ಕಿರಣವಿದೆ. ನಿನಗೆ ಪುತ್ರ ಆಗಲೇಬೇಕು. ಇಲ್ಲದಿದ್ದರೆ ನೀನು ಸಾಯಲಾರೆ. ವೃದ್ಧನಾಗಿ, ಶಿಥಿಲ ದೇಹ ಹೊಂದಿ ಯುಗಾಂತರಗಳನ್ನು ಕಳೆಯುವೆಯಾ? ಪುತ್ರನ ಆಗಮನವಾಗಲಿ. ಪುತ್ರ ವಿಯೋಗವಾಗದಂತೆ ನೋಡಿಕೋ. ಎಲ್ಲವೂ ಸರಿಹೋಗುತ್ತದೆ.
ದಶರಥನಿಗೆ ಕನಸೊಂದು ಬೀಳುತ್ತದೆ. ಅದರಲ್ಲಿ ದೇವತೆಗಳೆಲ್ಲರೂ ಸೇರಿ ಬ್ರಹ್ಮನನ್ನು ಮುಂದಿಟ್ಟುಕೊಂಡು ಶ್ರೀಮನ್ನಾರಾಯಣನ ಬಳಿಗೆ ಹೋಗುತ್ತಾರೆ. ಪರಮಾತ್ಮನು ಅವರ ಕ್ಲೇಶಗಳನ್ನು ವಿಚಾರಿಸಿ ಸಾಂತ್ವನ ಮಾಡುತ್ತಾನೆ. ಭರವಸೆ ನೀಡುತ್ತಾನೆ. ಸನ್ನಿವೇಶ ಹೇಗಿತ್ತೆಂದರೆ ಸಹಸ್ರಸೂರ್ಯ ಪ್ರಕಾಶಕ್ಕೆ ಸಮನಾದ ಕಾಂತಿಯಿಂದ ಶ್ರೀಹರಿಯು ಪೂರ್ವದಿಕ್ಕಿನಲ್ಲಿ ಅವರಿಗೆ ಕಾಣಿಸಿಕೊಂಡನು. ಇಂದ್ರನೀಲ ಮಣಿಯಂತೆ ಶ್ಯಾಮಲ ವರ್ಣನೂ, ಸ್ಮಿತವದನನೂ, ಕಮಲದಂತೆ ಕಣ್ಣುಳ್ಳವನೂ, ಸರ್ವಾಭರಣ ಭೂಷಿತನೂ, ಕೇಯೂರ ಕುಂಡಲಗಳಿಂದ ಅಲಂಕೃತನೂ, ಎದೆಯಲ್ಲಿನ ಕೌಸ್ತುಭಮಣಿ ವೈಜಯಂತಿ ಮಾಲೆಯಿಂದ ಶೋಭಿತನೂ ಆಗಿದ್ದನು. ಶಂಖ ಚಕ್ರ ಗದಾ ಪದ್ಮಯುತನಾಗಿ ವಿರಾಜಿಸುತ್ತಿದ್ದನು. ಬ್ರಹ್ಮಾದಿಗಳಿಂದ ಸ್ತೋತ್ರಮಾಡಲ್ಪಟ್ಟನು. ಕ್ಷೀರಸಾಗರ ಶಯನ ಶಾಂತಾಕಾರ ರಕ್ಷಿಸು ನಮ್ಮನನವರತ. ಅನಂತರ ಯಜ್ಞ ಪುರುಷನಿಂದ ಪಾಯಸದ ಪಾತ್ರೆ ನನಗೆ ದೊರಕಿತು. ಅಷ್ಟರಲ್ಲಿ ನಾನು ಎಚ್ಚರಗೊಂಡೆನು. ಹೀಗೆಂದು ಕೌಸಲ್ಯೆಗೆ ಕನಸನ್ನು ವರ್ಣಿಸುತ್ತಾನೆ.
ಭಗವಂತ ಮಹಾವಿಷ್ಣುವಿನ ಅವತಾರವನ್ನು ಆಸ್ತಿಕ ಸಮುದಾಯ ಕಾತರದಿಂದ ಎದುರು ನೋಡುತ್ತಿದೆ. ಯಾವನ ಉದರದಲ್ಲಿ ಇಡೀ ಬ್ರಹ್ಮಾಂಡವೇ ಪರಮಾಣುವಿನಂತೆ ಇರುವುದೋ ಆ ದೇವ ದೇವನೇ ಕೌಸಲ್ಯೆಯ ಉದರದಲ್ಲಿ ಕುಳಿತಿದ್ದನು. ಪರಬ್ರಹ್ಮನಿಗೆ ಪುರುಷೋತ್ತಮನಿಗೆ ಮಹಾವಿಷ್ಣುವಿಗೆ ಮತ್ತೊಬ್ಬನು ತಂದೆಯಾಗಲು ಸಾಧ್ಯವೇ? ಇದು ಕೇವಲ ಭಗವಂತನ ಸಂಕಲ್ಪ ಎಂದು ತಿಳಿಯಬೇಕು. ಹಾಗಾಗಿ ಯಜ್ಞದಿಂದ ಮಹಾವಿಷ್ಣುವೇ ಹುಟ್ಟಿ ಬಂದನು.
ಈ ಮಾತುಗಳು ದಶರಥನಿಗೆ ಚೈತನ್ಯ ತುಂಬಿ, ಹರ್ಷ ಕೊಡುತ್ತದೆ. ಯಾಗ ಅವನ ಪಾಪ ಹೋಗಲಾಡಿಸಿತು.
ಪುತ್ರ ಕಾಮೇಷ್ಟಿ ಯಾಗದಲ್ಲಿ ಯಜ್ಞ ಪುರುಷನೇ ಎದ್ದು ಬಂದು ದಿವ್ಯ ಪಾಯಸದ ಪಾತ್ರೆಯನ್ನು ಕೊಟ್ಟನು ಎಂಬಂತೆ ಗೌಪ್ಯವಾಗಿ ಏರ್ಪಾಟು ಮಾಡಲಾಗುತ್ತದೆ. ರಾಜನಿಗೆ ನಂಬಿಕೆ ಬರುತ್ತದೆ. ನಂಬಿಕೆಯೇ ಎಲ್ಲಕ್ಕೂ ಮೂಲ. ಯಾವ ಕೆಲಸ ಬೇಕಾದರೂ ಸಾಧಿಸಬಹುದು. ವೈದ್ಯರಿಂದ ಚಿಕಿತ್ಸೆ, ವ್ರತಗಳು ಆಗಿ ರಾಣಿಯರು ಗರ್ಭವತಿಯಾಗುತ್ತಾರೆ. ನಾಲ್ವರು ಪುತ್ರರ ಜನನವಾಗುತ್ತದೆ. ಅಯೋಧ್ಯೆ ಆನಂದ ಸಾಗರದಲ್ಲಿ ತೇಲಿತು.
ಮಕ್ಕಳು ದೇಹ ನಾಲ್ಕು ಪ್ರಾಣ ಒಂದು ಎಂಬಂತಿದ್ದರು. ರಾಮನಿಗೆ `ಮಮ ಪ್ರಾಣಾಹಿ ಭ್ರಾತರಃ’ ಅವರು ಶ್ರೀಮನ್ನಾರಾಯಣನ ನಾಲ್ಕು ತೋಳುಗಳಂತೆ ವಿಜೃಂಭಿಸಿದರು. ಭಗವಂತ ಮಹಾವಿಷ್ಣುವೇ ರಾಮನ ರೂಪದಲ್ಲಿ ಅವತಾರಗೊಂಡನು. ಎಲ್ಲ ಸದ್ಗುಣ ಶತವನಾಯ್ದುಕೊಂಡು ಒಂದು ಕಿರು ಪುತ್ಥಳಿಯ ಮಾಡಿ ತಂದಿರಿಸಿದನು. ಸೃಷ್ಟಿಕರ್ತ ಕೌಸಲ್ಯಯುದರದೊಳ್.
ರಾಮನ ವರ್ಣನೆ: ಪ್ರಿಯದರ್ಶಃ! ವಿಪುಲಾಂಸಃ! ಮಹಾಬಾಹುಃ! ಕಂಬುಗ್ರೀವಃ! ಮಹಾಧನುಃ! ಮಹೋರಥಃ, ಸುಶಿರಃ, ಸುಲಲಾಟಃ, ವಿಶಾಲಾಕ್ಷಃ, ಆಜಾನುಬಾಹುಃ, ಪೀನವಕ್ಷಃ, ಸ್ನಿಗ್ಧ ವರ್ಣಃ... ... ... ವರ್ಣನೆಯ ಮಹಾಪೂರ ನಾರದರು ಮಾಡುತ್ತಾರೆ, ವಾಲ್ಮೀಕಿಯ ಮುಂದೆ.
ಅಂಗಾಂಗದಲ್ಲಿ ರಾಜಕಳೆ ತುಂಬಿ ಸೂಸಿತ್ತು. ಇವನ ಧ್ವನಿಯಾಲಿಸುತ್ತ ಹೊರಟಿತೇ ಕೋಕಿಲದ ಕುಕಿಲು ಪಿಕರಾಳ ಧ್ವನಿ? `ಧರ್ಮಾತ್ಮನೋ ಗುಣನತೋ ಲೋಕೋರಾಮಸ್ಯ ಧೀಮತಃ’.
- ಎಸ್.ಜಿ. ಕೃಷ್ಣಮೂರ್ತಿ
98455 12868
ಲೇಖಕರ ಸಂಕ್ಷಿಪ್ತ ಪರಿಚಯ
ಮಹಾನ್ ವೇದ ಋಷಿ ದೀರ್ಘತಮಸ್ ಬಗ್ಗೆ ಆಳವಾದ ಅಧ್ಯಯನ ಮಾಡಿ ಆತನನ್ನು ಕುರಿತಂತೆ ಕನ್ನಡ ಸಾರಸ್ವತ ಲೋಕಕ್ಕೆ ಪ್ರಥಮವಾಗಿ ಹೊರ ಬಂದ ಗ್ರಂಥದ ಕರ್ತೃವಾಗಿ, ರಾಮಾಯಣದ ಪ್ರಸಂಗಗಳನ್ನು ವೈಜ್ಞಾನಿಕ ಹಿನ್ನೆಲೆ ಮತ್ತು ತಮ್ಮ ಸೃಜನಾತ್ಮಕತೆಗಳನ್ನು ಹೆಣೆದು ವಿಶದ ಪಡಿಸಿ, ಹೊಸ ತಿರುವುಗಳನ್ನು ಒದಗಿಸಿ ಸತ್ಸಂಗದಲ್ಲಿ ಶ್ರೀರಾಮವೈಭವ ಎಂಬ ಎರಡು ಭಾಗಗಳಲ್ಲಿ ಹೊರ ಬಂದ ಗ್ರಂಥಗಳ ಕರ್ತೃವಾಗಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 94 ವರ್ಷ ಪ್ರಾಯದ ಕೃಷ್ಣಮೂರ್ತಿ ಸಾಹಿತ್ಯ ಪರಿಚಾರಕರಾಗಿ ಕನ್ನಡಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದಲ್ಲದೆ ಬಿ.ಎಸ್ಸಿ ಪದವಿಧರರು ಮತ್ತು ಹಿರಿಯ ಸಂಸ್ಥೆ ಕಲ್ಕತ್ತೆಯ ‘Institution of Chemists ‘ನಿಂದ ‘A.I.C.’ ಪದವಿ ಗಳಿಸಿರುತ್ತಾರೆ. Juggat Pharma ಔಷಧ ತಯಾರಿಕಾಕಂಪನಿಯಲ್ಲಿ Chemist ಆಗಿ, Production, Quality Assurance ಬೇರೆ ಬೇರೆ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಅತ್ಯಂತ ಉಲ್ಬಣಗೊಂಡಿರುವ ನಾಡಿನ ನೀರಿನ ಕೊರತೆಯ ಸಮಸ್ಯೆ, ಪರಿಸರ ಮಾಲಿನ್ಯ, ರಾಮಸೇತು’ ವಿವಾದಕ್ಕೆ ಪರಿಹಾರವಾಗಿ ಸೂಕ್ತ ಪರ್ಯಾಯ ಮಾರ್ಗ ಇತ್ಯಾದಿ. ಅದ್ಭುತ ವಸ್ತು ‘ಗ್ರಾಫೀನ್' ನಿಂದ ಆಕರ್ಷಿತರಾಗಿರುತ್ತಾರೆ. ಒಟ್ಟಿನಲ್ಲಿ ದೇಶದ, ಸಮಾಜದ ಒಳಿತಿಗಾಗಿ ನಡೆಯುವ ಚಟುವಟಿಕೆಗಳಲ್ಲಿ ಆಸಕ್ತಿ, ಆಸ್ಥೆ ಹೊಂದಿದವರು ಕೃಷ್ಣಮೂರ್ತಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ