ಶ್ರೀರಾಮ ಕಥಾ ಲೇಖನ ಅಭಿಯಾನ- 86: ವಿಶ್ವನಾಥ ಸತ್ಯನಾರಾಯಣರ `ಶ್ರೀರಾಮಾಯಣ ಕಲ್ಪವೃಕ್ಷಮು’- ಒಂದು ಒಳನೋಟ

Upayuktha
0


-ಕೆ.ಎಸ್. ರಾಮಮೂರ್ತಿ, 

ಭಾರತದ  ಆದ್ಯಕಾವ್ಯವೆಂದೇ ಖ್ಯಾತಿವೆತ್ತಿರುವ ರಾಮಾಯಣ ಮಹಾಕಾವ್ಯ, ಜಾಗತಿಕ ಮಟ್ಟದಲ್ಲಿ ಭಾರತದ ಸಾಂಸ್ಕೃತಿಕ ಸಂದೇಶವನ್ನು ಸಾರುವ ಮೇರುಕೃತಿ. ಬಹುತೇಕ ಎಲ್ಲಾ ಪುರಾಣಗಳಲ್ಲಿ, ಜಾನಪದ, ಶಿಷ್ಟ ಸಾಹಿತ್ಯ, ಪ್ರಕಾರಗಳಲ್ಲಿ ಭಿನ್ನ-ಭಿನ್ನ ರೂಪಗಳಲ್ಲಿ ರಾಮಾಯಣದ ಕಥೆ ಮರು ನಿರೂಪಿತವಾಗಿದೆ.


ಭಾರತೀಯರ ಹೃದಯದಲ್ಲಿ ಅಚ್ಚಳಿಯದ ಧಾರ್ಮಿಕ, ಸಾಂಸ್ಕೃತಿಕ ಮುದ್ರೆಯನ್ನು ಒತ್ತಿರುವ ಚಿರಂಜೀವಿ ಕೃತಿರತ್ನ. ಐತಿಹ್ಯವೇ ಕಾವ್ಯವಾಗಿ, ಪುರಾಣವಾಗಿ, ಇತಿಹಾಸವಾಗಿ ಮಾರ್ಪಟ್ಟು ಬಹುತೇಕ ಎಲ್ಲಾ ವಯೋಮಾನ ದವರನ್ನು ಆಕರ್ಷಿಸಿದ ಕಾವ್ಯ. ಪಿತೃ-ಮಾತೃಭಕ್ತಿ, ಭ್ರಾತೃಪ್ರೇಮ. ಅಧಿಕಾರ ನಿರ್ಮೋಹ, ಸತ್ಯ-ಧರ್ಮ-ಪರಾಯಣತೆ, ಸ್ತ್ರೀ-ಪುರುಷ ಸಂದರ್ಭಗಳಲ್ಲಿ ಶೀಲವಂತಿಕೆ, ನೈತಿಕ ನಿಷ್ಠೆಗೆ ಪ್ರಾಮುಖ್ಯ. ದುಷ್ಟಶಿಕ್ಷೆ- ಶಿಷ್ಟ ರಕ್ಷಣೆ ಕಾರ್ಯಗಳಲ್ಲಿ ತ್ಯಾಗ ಮತ್ತು ಋಜು ನಡೆಗೆ ಆದ್ಯತೆ, ತನ್ನ ಸರಳ ನಡೆ-ನುಡಿಯಿಂದ ನರ ಕೂಡ ನಾರಾಯಣನಾಗಬಲ್ಲ ಎಂಬ ಸಂದೇಶ ಇಲ್ಲಿದೆ.


ಈ ಮಹಾಕಥನ ಹಲವು ತಲೆಮಾರುಗಳಿಂದ ವಿವಿಧ ಜಾನಪದ ಮತ್ತು ಶಿಷ್ಟ ಭಾಷಾರೂಪಗಳಲ್ಲಿ ವೈವಿಧ್ಯಮಯ ಪ್ರಕಾರಗಳಲ್ಲಿ ಮರು ನಿರೂಪಿಸಲ್ಪಟ್ಟಿದೆ. ಜಾನಪದ ಗೀತೆ ಲಾವಣಿ, ನೃತ್ಯ ರೂಪಕ, ಖಂಡ ಕಾವ್ಯ, ದೀರ್ಘ ಕಾವ್ಯ, ಕಥೆ, ಕಾದಂಬರಿ, ನಾಟಕ ಇತ್ಯಾದಿ ರೂಪಗಳನ್ನು ಪಡೆದುಕೊಳ್ಳುವುದರೊಂದಿಗೆ ಮೂಲ ಕತೆಗೆ ಹೊಸ ಹೊಳವುಗಳು ದಕ್ಕಿವೆ.


ಭರತಖಂಡದ ಜನಸಮೂಹವನ್ನು ಸನಾತನಧರ್ಮದೆಡೆಗೆ ಕೊಂಡೊಯ್ದು ಪುನೀತರನ್ನಾಗಿ ಮಾಡುವ ಪವಿತ್ರ ಗ್ರಂಥಗಳ ಗಂಗಾಪ್ರವಾಹ ಇಂದಿಗೂ ಪ್ರವಹಿಸುತ್ತಿದ್ದು, ಸಾರ್ವಕಾಲಿಕ ಮೌಲ್ಯಗಳನ್ನು ಸಾರುತ್ತಿವೆ. ಇವು ಕೇವಲ ಗ್ರಂಥಗಳಾಗಿರದೆ ನಮ್ಮ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ಸನ್ನಡತೆಗೆ ಸತ್ಕಾರಗಳಿಗೆ ಪ್ರೇರಕವಾಗಿವೆ. 


ಆದಿಕವಿ ವಾಲ್ಮೀಕಿಯಿಂದ ರಚಿತವಾದ ರಾಮಾಯಣ ಅನೇಕ ಕವಿಗಳಿಗೆ, ನಾಟಕಕಾರರಿಗೆ ಸ್ಥಳೀಯ ಸೆಲೆಯಾಗಿದೆ. ಮೌಲ್ಯಗಳ ಗಣಿಯಾಗಿದೆ ಇಂದಿನ ಆಧುನಿಕಯುಗದಲ್ಲಿಯೂ ಹಲವಾರು ಭಾರತೀಯ ಭಾಷೆಗಳಲ್ಲಿ ರಚಿತವಾಗುತ್ತಲೇ ಇದೆ.  


ಕನ್ನಡದಲ್ಲಿ ರಾಷ್ಟ್ರಕವಿ ಕುವೆಂಪು ರಚಿಸಿರುವ ಶ್ರೀರಾಮಾಯಣ ದರ್ಶನದಂತೆ ತೆಲುಗು ಭಾಷೆಯಲ್ಲಿ ಕವಿ ಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ `ಶ್ರೀರಾಮಾಯಣ ಕಲ್ಪವೃಕ್ಷಮು’ ಎಂಭ ಮಹಾಕಾವ್ಯವನ್ನು ರಚಿಸಿದ್ದು, ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿದೆ. ಈ ಕಾವ್ಯ 12 ಸಾವಿರ ಪದ್ಯಗಳಿಂದ ಕೂಡಿರುವ ಚಂಪೂಕಾವ್ಯವಾಗಿದೆ. ಸಂಸ್ಕೃತ ಭೂಯಿಷ್ಠನಾದ ತೆಲುಗು ಭಾಷೆಯಲ್ಲಿ ಮೂಡಿ ಬಂದಿರುವ ಈ ಕಾವ್ಯದಲ್ಲಿ ಗದ್ಯ-ಪದ್ಯಗಳ ಸಂಗಮವಿದೆ. ವೃತ್ತಛಂದಸ್ಸಿನ ವಿಲಾಸವಿದೆ. ಓದಲು, ಕೇಳಲು, ಪ್ರವಚನಕ್ಕೆ, ಅಧ್ಯಯನಕ್ಕೆಷ್ಟೇ ಅಲ್ಲ ಉಪಾಸನೆಗೂ ಅರ್ಹವೆನಿಸಿದ ಗ್ರಂಥವಾಗಿದೆ. 


ತೆಲುಗು ಭಾಷೆಯಲ್ಲಿ ನನ್ನಯನನ್ನು ಎರಡನೇ ವಾಲ್ಮೀಕಿಯನ್ನಾಗಿ ಕಂಡಿದ್ದಾರೆ. ತಿಕ್ಕನನ್ನು ‘ನಿರ್ವಚನೋತ್ತರ ರಾಮಾಯಣ’  ಪ್ರಬಂಧ ರಚನಕಾರನೆಂದು, ರ‍್ರಪೆಗ್ಗಡನು ಬರೆದ ರಾಮಾಯಣ ಕಾವ್ಯ ಉಪಲಬ್ಧವಿಲ್ಲ. ಗೋನುಬುದ್ಧರಾಜ ರಚಿಸಿದ ‘ರಂಗನಾಥ ರಾಮಾಯಣಂ’; ಹುಳಕ್ಕಿ ಭಾಸ್ಕರ ರಚಿಸಿದ ‘ಭಾಸ್ಕರ ರಾಮಾಯಣ’; ಕವಯಿತ್ರಿ ಮೊಲ್ಲ ರಚಿಸಿದ ‘ರಾಮಾಯಣ,’; ಅಯ್ಯಾಲರಾಜು ರಾಮಭದ್ರ ಕವಿಯ ‘ರಾಮಾಭ್ಯುದಯ’ ;ಬಮ್ಮರ ಪೋತನು ರಚಿಸಿದ ಭಾಗವತದಲ್ಲಿ ರಾಮಾಯಣದ ಕಥೆ; ಕಂಕAಟಿ ಪಾತಾರಾಜುವಿನ ‘ಉತ್ತರ ರಾಮಾಯಣ’; ಕೂಚಿ ಮಂಚಿ ತಿಮ್ಮನ ‘ತೆಲುಗು ರಾಮಾಯಣ’; ಅಡಿದಮು ಸೂರಕವಿ ರಚಿಸಿದ ‘ಶುದ್ಧಾಂದ್ರ ರಾಮಾಯಣ’; ಇನ್ನು ಆಧುನಿಕವಾಗಿ ವಾವಿಲಕೋಲನು ಸುಬ್ಬರಾವ್ ಇವರ ‘ಯಥಾಮೂಲ ರಾಮಾಯಣಂ’; ಗೋಪಿನಾಥಂ ವೆಂಕಟಕವಿಯ ‘ಗೋಪಿನಾಥ ರಾಮಾಯಣಂ’; ವೆಂಕಟೇಶ್ ಪಾರ್ವತೀಶ ಕವಿಗಳ ‘ರಾಮಾಯಣಂ’; ವಿಶ್ವನಾಥ ಸತ್ಯನಾರಾಯಣರ ‘ಶ್ರೀಮದ್ ರಾಮಾಯಣ ಕಲ್ಪವೃಕ್ಷಂ’; ಆಧುನಿಕ ತೆಲುಗು ಸಾಹಿತ್ಯದಲ್ಲಿ ಪುರುಷರ ಸರಸ್ವತಿಯೆಂದು ಖ್ಯಾತರಾದ ಫುಟ್ಪರ್ತಿ ನಾರಾಯಣಾಚಾರ್ಯರ ‘ಜನಪ್ರಿಯ ರಾಮಾಯಣಂ’; ವಾನಮಾಮಲೈ ಜಗನ್ನಾಥಾಚಾರ್ಯರ ‘ರೈತು ರಾಮಾಯಣಂ’; ಪೊಲೂರಿ ಹನುಮಜ್ಜಾನಕೀರಾಮಶರ್ಮ ‘ಶ್ರೀಮದ್ರಾರಾಮಾಯಣಂ’; ಜನಮಂಚಿ ಶೇಷಾದ್ರಿ ಶರ್ಮರ ‘ರಾಮಾಯಣ’ ಮುಂತಾದವುಗಳು ಅಲ್ಲದೇ ಇತ್ತೀಚಿಗೆ ಕೋಲಾರ ಜಿಲ್ಲೆ ನಾರಾಯಣ ಶಾಸ್ತಿç ಕಂದಪದ್ಯಗಳಲ್ಲಿ ‘ಕಂದಾನಂದ ರಾಮಾಯಣಂ’ ರಚಿಸಿದ್ದಾರೆ.


ಬಮ್ಮೆರ ಪೋತನನು ಬರೆದದ್ದು ಭಾಗವತನಾದರೂ ಇದರಲ್ಲಿ ರಾಮಾಯಣ ಅಂತರ್ಗತವಾಗಿದೆ. ಕನ್ನಡದ ಕುಮಾರ ವ್ಯಾಸಕವಿಯಂತೆ ಪೋತನ ಭಾಗವತ ತೆಲುಗು ನಾಡಿನಲ್ಲಿ ಬಹುಜನಪ್ರಿಯವಾಗಿದೆ. ರ‍್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರ ಮೂರ್ತಿಗೆ ಇದನ್ನು ಅಂಕಿತ ಮಾಡಲಾಗಿದೆ. 


ಕವಿ ಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣರ `ಶ್ರೀರಾಮಾಯಣ ಕಲ್ಪವೃಕ್ಷಮು` ಮಹಾಕಾವ್ಯ ಹೆಸರಿಗೆ ತಕ್ಕಂತೆ ಮೌಲ್ಯಗಳ ಆದರ್ಶಗಳ ಕಲ್ಪವೃಕ್ಷವೆನಿಸಿದೆ. ಭಕ್ತಿ ರಸದಿಂದ ಕೂಡಿರುವ ಈ ಕೃತಿ ಲೌಕಿಕ ಆಧ್ಯಾತ್ಮಿಕ ಧರ್ಮಗಳ ಸುಮಧುರ ಸಂಗಮವೆನಿಸಿದೆ. 


ತಂದೆಯ ಕೋರಿಕೆಯಂತೆ, ತಿಕ್ಕನ-ನನ್ನಯ ಕವಿಗಳಿಂದ ಸ್ಫೂರ್ತಿ ಪಡೆದು ಈ ಕಾಔಯವನ್ನು ರಚಿಸಿರುವುದಾಗಿ ಕವಿ ಹೇಳಿದ್ದಾರೆ. ಸನಾತನ ಧರ್ಮ ಹಾಗೂ ಸಮಕಾಲೀನ ಮಾನವಧರ್ಮಕ್ಕನುಗುಣವಾಗಿ ರಚಿತವಾಗಿರುವ ಈ ಕಾವ್ಯ ರಾಮನ ಕಥೆಗೆ ಬರೆದಿರುವ ಸುಮಧುರ ಭಾಷ್ಯದಂತಿದೆ. ವಾಲ್ಮೀಕಿ ರಾಮಾಯಣದ ವಿಶ್ವರೂಪ ದರ್ಶನ ಇದರಲ್ಲಿದೆ. ಧರ್ಮವೀರನಾದ ಶ್ರೀರಾಮನ ಆದರ್ಶ ದಾಂಪತ್ಯದ ಚಿತ್ರಣದಿಂದ ಕೂಡಿರುವ ಈ ಮಹಾಕಾವ್ಯದಲ್ಲಿ ಕಥನ ಕೌಶಲವಿದೆ. ಮೂಲಕಥೆಗೆ ಚ್ಯುತಿಬಾರದಂತೆ ಕಲ್ಪನಾವಿಲಾಸವಿದೆ. ಶ್ರೀರಾಮನ ಕಥೆಗೆ ಅನನ್ಯ ರೂಪ ಶಿಲ್ಪ ನೀಡಿದ್ದಾರೆ ವಿಶ್ವನಾಥ ಸತ್ಯನಾರಾಯಣರು. ಈ ಕಾವ್ಯದ ಪ್ರತಿಯೊಂದು ಖಾಂಡದಲ್ಲಿ ಕಾವ್ಯಮಂಜರಿಯಿದೆ. ಕವಿಯ ಪಾಲಿಗೆ ರಾಮಾಯಣ ಮಹಾಮಂತ್ರವಾಗಿದೆ. ಇವರ ಕವಿತ್ವ ಮಹಾಬಲಿಪುರಂನ ಕಲ್ಲಿನ ರಥದಂತೆ ತಾನು ಕದಲದೆ ನಮ್ಮನ್ನು ಕದಲಿಸುತ್ತದೆ ಎಂದು ವಿದ್ವಾಂಸರು ಪ್ರಶಂಸಿಸಿದ್ದಾರೆ. 


ತೆಲುಗು ನಾಡಿನಲ್ಲಿ ರಾಮದೇಗುಲಗಳು, ಶ್ರೀರಾಮ ಕ್ಷೇತ್ರಗಳು ಹೇರಳವಾಗಿರುವಂತೆ, `ಶ್ರೀರಾಮಾಯಣ ಕಲ್ಪವೃಕ್ಷಮು` ಕಾವ್ಯ ಜನಾದರಣೀವಾಗಿದೆ. ಈ ಕಾವ್ಯವನ್ನು ಕುರಿತ ಅನೇಕರು ರಸವಿಮರ್ಶೆಯನ್ನು ಬರೆದಿದ್ದು, ಕಾವ್ಯವನ್ನು ಓದುವಂತೆ ಪ್ರೇರಣೆ ನೀಡುವಂತಿದೆ. ನವಿರಾದ ಮೃದು ನುಡಿಗಳಿಂದ ಸಾರ್ವಕಾಲಿಕ ಮೌಲ್ಯಗಳನ್ನು ಇದರಲ್ಲಿ ಹೇಳಲಾಗಿದೆ. 


ರಸಘಟ್ಟಗಳು:- `ರಾಮಾಯಣ ಕಲ್ಪವೃಕ್ಷಮು` ಮಹಾಕಾವ್ಯದಲ್ಲಿ ಹಲವಾರು ರಸಘಟ್ಟಗಳು, ಸನ್ನಿವೇಶಗಳ ಚಿತ್ರಣವಿದ್ದು, ಓದುಗರಿಗೆ ಮುದನೀಡಿ ರಂಜಿಸುತ್ತವೆ. ಪುತ್ರ ಜನನಕ್ಕಾಗಿ ಹಂಬಲಿಸುವ ದಶರಥ ಪಾತ್ರದಿಂದ ಕಾವ್ಯ ಆರಂಭವಾಗುತ್ತದೆ. 


ಅರಣ್ಯಾಖಾಂಡದಲ್ಲಿ ಬರುವ ಮಾರೀಚ ಪ್ರಸಂಗ, ಸೀತಾರಾಮರು ಕಾಡಿನಲ್ಲಿ ನಡೆಸಿದ ಸಂಸಾರ, ಮುನಿಶಾಪಖಾಂಡ, ರಮ್ಯತೆಯಿಂದ ಕೂಡಿದ ಕಿಷ್ಕಿಂದಾ ಖಾಂಡ, ದುಂದುಭಿಕಥೆ, ಬಹುವಿಧ ಸೌಂದರ್ಯದಿಂದ ಕೂಡಿದ ಸುಂದರಖಾಂಡ, ಕಥನ ಕೌಶಲ್ಯದಿಂದ ಕೂಡಿದ ಯುದ್ಧಖಾಂಡ ಮೊದಲಾದ ಕಾವ್ಯದ ವೈಶಿಷ್ಟ್ಯವಾಗಿದೆ. 


ಸನಾತನ ಧರ್ಮದ ಸಂಪ್ರದಾಯ, ಆದರ್ಶ ಹಾಗೂ ಮೌಲ್ಯಗಳನ್ನು ಸಾರುವ ಈ ಕಾವ್ಯವನ್ನು ಸೃಜಿಸಿದ ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣರಿಗೆ ಜ್ಞಾನಪೀಠ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿಗಳು ಸಂದಿರುವುದು ಔಚಿತ್ಯಪೂರ್ಣವಾಗಿದೆ. 




- ಕೆ.ಎಸ್.ರಾಮಮೂರ್ತಿ


ಲೇಖಕರ ಕಿರು ಪರಿಚಯ: 


ಸಂಸ್ಕೃತಿ ಚಿಂತಕರು 94497 50618

ಕೋಲಾರದ ಗೊಲ್ಲಪಿನ್ನಿ ಮನೆತನದ ನಿವೃತ್ತ ಕನ್ನಡ ಉಪನ್ಯಾಸಕ – ಆಕಾಶವಾಣಿ ಕಲಾವಿದ , ಲೇಖಕ ಕೆ.ಎಸ್.ರಾಮಮೂರ್ತಿ; ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸದ್ದುಗದ್ದಲ ವಿಲ್ಲದೆ ಶ್ರಮಿಸುತ್ತಿರುವ ಸಜ್ಜನರು.  ಇವರು ಧಾರ್ಮಿಕ ಶ್ರದ್ದೆಯೊಂದಿಗೆ ಸಂಶೋಧನಾತ್ಮಕ ಕೃತಿ  ‘ತಿರುಪತಿಯ ಹಿನ್ನೆಲೆಯಲ್ಲಿ ಶ್ರೀ ವೆಂಕಟೇಶ್ವರ ಸುಪ್ರಭಾತ’  ಜಗದ್ವಿಖ್ಯಾತ ತಿರುಮಲದಲ್ಲಿ ಶ್ರೀನಿವಾಸ ದೇವರನ್ನು ಎಬ್ಬಿಸಲು ಬಂಗಾರದ ಬಾಗಿಲ ಬಳಿ ಪ್ರತಿನಿತ್ಯ ಪ್ರಾತಃಕಾಲದಲ್ಲಿ ಪಠಿಸುವ ವಿಶೇಷ ಸ್ತೋತ್ರ ಇದಾಗಿದ್ದು,  14ನೇ ಶತಮಾನದಲ್ಲಿ ಪ್ರತಿವಾದಿ ಭಯಂಕರ ಅನ್ನಂಗರಾಚಾರ್ಯರು (ಅಣ್ಣನ್) (ಖ್ಯಾತ ಹಿನ್ನೆಲೆ ಗಾಯಕರಾಗಿದ್ದ ಪಿ.ಬಿ.ಶ್ರೀನಿವಾಸ್ ಈ ಮನೆತನಕ್ಕೆ ಸೇರಿದವರು) ಸಂಸ್ಕೃತದಲ್ಲಿ ರಚಿಸಿರುವ ಈ ಸುಪ್ರಭಾತ ; ಭಕ್ತ ಸಮೂಹದಲ್ಲಿ ಅದು ಉಂಟುಮಾಡುವ – ಮಾಡುತ್ತಿರುವ ಪ್ರಭಾವ ಪರಿಣಾಮಗಳು ಹೃದಯಂಗಮವಾದವು . ಇದಕ್ಕೆ ತಮ್ಮ ಧ್ವನಿಯ ಮೂಲಕ ಮಾಧರ‍್ಯ ಕಾಂತಿಯನ್ನು ತುಂಬಿದವರು ಗಾನಕೋಗಿಲೆ ಭಾರತರತ್ನ  ಎಂ.ಎಸ್.ಸುಬ್ಬುಲಕ್ಷ್ಮಿ ರವರು ತಮ್ಮ ಪಠನವನ್ನು ನಿವೇದನವನ್ನಾಗಿ ಮಾಡಿ ಅದರ ಆರ್ಥಗುರುತ್ವವನ್ನು ರಸಾದ್ರತೆಯನ್ನು ಹೆಚ್ಚಿಸಿದರು.

ಅರುಣೋದಯಕಾಲದ ನಿಸರ್ಗ ಸೌಂದರ‍್ಯ ವರ್ಣನೆ, ವೆಂಕಟೇಶನ ಮಹಿಮೆ , ಶರಣಾಗತಿ ಭಾವ , ಮಂಗಳಾಶಾಸನದಿಂದ ಕೂಡಿದ ಈ ಸ್ತೋತ್ರರತ್ನದ ಅರ್ಥ – ಆಶಯವನ್ನು ಕನ್ನಡಿಗರೆಲ್ಲರೂ ಓದಬೇಕೆಂದು ತಿಳಿಗನ್ನಡದಲ್ಲಿ ಕಿರುಕೃತಿಯನ್ನು ಸಿದ್ದಪಡಿಸಿ ಪ್ರಕಟಿಸಲಾಗಿದೆ .  

ಶ್ರೀಯುತರು ಮೈಸೂರಿನ ಪಿಟೀಲು ಟಿ.ಚೌಡಯ್ಯ ಟ್ರಸ್ಟ್ ವತಿಯಿಂದ ಮೈಸೂರು ರಾಜವಂಶಸ್ಥರಾದ ಯದುವೀರ ಚಾಮರಾಜದತ್ತ ಒಡೆಯರ್‌ರವರಿಂದ ಹಾಗೂ ಮೈಸೂರಿನ ಮುಲಕನಾಡು ಸಭಾದಿಂದ ಶ್ರೇಷ್ಠ ಸಂಶೋಧಕರೆಂದು ಪುರಸ್ಕೃತರಾಗಿದ್ದಾರೆ. 

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top