ಶ್ರೀರಾಮ ಕಥಾ ಲೇಖನ ಅಭಿಯಾನ- 85: ಸೀತಾಮಾತೆಯ ಆದರ್ಶಗಳು

Upayuktha
0

- ಶ್ರೀಮತಿ ಲಕ್ಷ್ಮೀ ಉಪಾಧ್ಯೆ, ಬೆಂಗಳೂರು


ಭಾರತದ ಮಣ್ಣಿನಲ್ಲೇ ಇರುವ ಗುಣ ಹೆಣ್ಣು ಗಂಡನನ್ನು ಅನುಸರಿಸುವದು. ಅದು ಬಂದದ್ದು ಸಾಕ್ಷಾತ್‌ ಲಕ್ಷ್ಮೀ ಸ್ವರೂಪಳಾದ ಆದಶ೯ ಲೋಕಮಾತೆಯಾದ ಸೀತೆಯಿಂದ. ಮಿಥಿಲಾಪತಿಯಾದ ಜನಕನು ಚಯನಾರ್ಥವಾಗಿ ಭೂಮಿಯನ್ನು ಶೋಧಿಸುವ ಸಲುವಾಗಿ ನೇಗಿಲಿನಿಂದ ಭೂಮಿಯನ್ನು ಉಳುತ್ತಿದ್ದಾಗ, ನೇಗಿಲಿನ ಗುಳಕ್ಕೆ ಸಿಲುಕಿ ಒಂದು ಹೆಣ್ಣು ಮಗುವು ಹೊರಬಂದಿತು. ಜನಕಮಹಾರಾಜನು ಅವಳಿಗೆ ಸೀತೆಯೆಂದು ನಾಮಕರಣ ಮಾಡಿ ಮಗಳೆಂದೇ ಭಾವಿಸಿ ಸಾಕಿದನು. ಈಕೆಯು ಅತ್ಯಂತ ಪರಿಶುದ್ಧಳು. ಗರ್ಭವಾಸವನ್ನೇ ಮಾಡದೇ ಹುಟ್ಟಿದ ಅಯೋನಿಜೆ. ಹಿರಣ್ಯವರ್ಣೆಯಾದ ಇವಳು ಭೂದೇವಿಯಿಂದ ಹೊರಹೊಮ್ಮಿದ ಹೊನ್ನಿನ ಕುಡಿ.



ಶಿವಧನುಸ್ಸನ್ನು ಮೇಲೆತ್ತಿ ಹೆದೆಯೇರಿಸಿ ಯಾರು ಅತುಲವಾದ ಪರಾಕ್ರಮ ತೋರುವರೋ ಅವರಿಗೆ ಮಾತ್ರವೇ ಇವಳನ್ನು ಕೊಟ್ಟು ಮದುವೆ ಮಾಡುವದು ಎಂದು ನಿಧ೯ರಿಸಿದ್ದನು ಜನಕ ಮಹಾರಾಜನು. ತನ್ನ ಪರಾಕ್ರಮವನ್ನು ಧನುರ್ಭಂಜನದಿಂದ ಪ್ರದರ್ಶಿಸಿದ ದಶರಥನ ಮಗನಾದ ಶ್ರೀರಾಮಚಂದ್ರನಿಗೆ ವಿವಾಹ ಮಾಡಿಕೊಟ್ಟನು ತನ್ನ ಪ್ರಿಯಸುತೆಯಾದ ಸೀತೆಯನ್ನು. “ಇವಳು ಪತಿವ್ರತೆಯಾಗಿ ನಿನ್ನ ನೆರಳಿನಂತೆಯೇ ನಿನ್ನನ್ನು ಸದಾ ಅನುಸರಿಸುವಳು” ಎಂದು ಹೇಳಿದನು.


ವಿದೇಹಾಧಿಪತಿಯಾದ ಜನಕನು ತನ್ನ ಹೆಣ್ಣುಮಕ್ಕಳಿಗೆ ಹೇರಳವಾದ ಕನ್ಯಾಧನವನ್ನು ಕೊಟ್ಟು, ಲಕ್ಷೋಪಲಕ್ಷ ಗೋವುಗಳನ್ನು, ರತ್ನಗಂಬಳಿಗಳನ್ನು, ರೇಷ್ಮೆಯ ಪೀತಾಂಬರಗಳನ್ನು, ಅಲಂಕರಿಸಲ್ಪಟ್ಟ ದಿವ್ಯವಾದ ರೂಪಗಳುಳ್ಳ ಆನೆ, ಕುದುರೆ, ರಥ, ಪದಾತಿಗಳನ್ನೂ ಅದಲ್ಲದೇ ನೂರು ಮಂದಿ ಸಖಿಯರನ್ನು, ಅನೇಕ ದಾಸರನ್ನು ಕಳುಹಿಸಿಕೊಟ್ಟನು. ಅನೇಕ ಲಕ್ಷ ಬೆಳ್ಳಿಯ ನಾಣ್ಯಗಳನ್ನು, ಸುವರ್ಣ ನಾಣ್ಯಗಳನ್ನು, ಹವಳಗಳನ್ನೂ ತನ್ನ ಹೆಣ್ಣು ಮಕ್ಕಳಿಗೆ ಬಳುವಳಿಯಾಗಿ ಕೊಟ್ಟನು. ಅಯೋಧ್ಯೆಯಲ್ಲಿ ರಾಜವಂಶದಲ್ಲಿ ಹುಟ್ಟಿದ್ದ ಸೀತೆಯೊಡನೆ ಅಮರೇಶ್ವರನಾದ ಮಹಾವಿಷ್ಣುವು ವಿರಾಜಿಸುತ್ತಿದ್ದನು. 


ರಾಮನ ಪಟ್ಟಾಭಿಷೇಕವು ಎಲ್ಲರಿಗೂ ಸಂತೋಷ ಸಂಭ್ರಮ ತರುವ ವಿಷಯವಾದಾಗ ಭರತನ ತಾಯಿ ಕೈಕೇಯಿ ದಾಸಿ ಮಂಥರೆಯ ಮಾತು ಕೇಳಿ, ದಶರಥನು ತನಗೆ ಕೊಟ್ಟ ಎರಡು ವರಗಳನ್ನು ನೆನಪಿಸಿ ರಾಮನು ಹದಿನಾಲ್ಕು ವರುಷ ವನವಾಸಕ್ಕೆ ಹೋಗಬೇಕು. ಭರತನಿಗೆ ಪಟ್ಟಾಭಿಷೇಕವಾಗ ಬೇಕೆಂದಳು. ಅವಳೇನು ಸೀತೆಗೆ ವನವಾಸ ಹೇಳಿರಲಿಲ್ಲ. ಆದರ್ಶ ಪತ್ನಿಯಾದ ಸೀತೆ ತಕ್ಷಣ ನಾರು ಮಡಿಯನ್ನುಟ್ಟು ಹುಟ್ಟಿದ ಮನೆ ಮತ್ತು ಗಂಡನ ಮನೆಯ ರಾಜ ವೈಭೋಗ ತ್ಯಜಿಸಿ ಬರಿಗಾಲಲ್ಲಿ ರಾಮನೊಡನೆ ವನವಾಸಕ್ಕೆ ಹೊರಟು ನಿಂತಳು.


ರಾಜಕುಮಾರಿಯಾಗಿ, ಸೂಕ್ಷ್ಮವಾಗಿ ಹೂವಿನಂತೆ ಬೆಳೆದ ಸೀತಾ ಮಾತೆಗೆ ಪ್ರಾರಂಭದಲ್ಲಿ ಕಷ್ಟವಾದರೂ ಹಾಗೇ ಸಾಗುತ್ತಾಳೆ. ಹುಲಿ, ಸಿಂಹ, ಚಿರತೆಗಳಲ್ಲದೆ ಭೂತ, ಪ್ರೇತ, ಪಿಶಾಚಿಗಳ ಮಧ್ಯದಲ್ಲಿ ಓಡಾಡುವ ಪ್ರಸಂಗ ಬಂದರೂ ಗಂಡನನ್ನೂ ಏನೂ ಅನ್ನಲಿಲ್ಲ. ಪಂಚಭಕ್ಷ ಪರಮಾನ್ನವನ್ನು ಬಿಟ್ಟು ಗಡ್ಡೆ, ಗೆಣಸು ತಿಂದುಕೊಂಡಿದ್ದಳು.


ಜನಕರಾಜನ ಮಗಳಾಗಿ, ಅಯೋಧ್ಯಾ ಪಟ್ಟಣದ ಅಧಿಪತಿ ದಶರಥ ಮಹಾರಾಜನ ಸೊಸೆಯಾಗಿ, ಶ್ರೀ ರಾಮನ ಹೆಂಡತಿಯಾಗಿ ಅವಳೇನು ಜಿಂಕೆ ಬಯಸಬೇಕಾಗಿರಲಿಲ್ಲ. ಮನಸ್ಸು ಮಾಡಿದ್ದರೆ ಶ್ರೀರಾಮಚಂದ್ರ ಆ ಜಾತಿಯ ವಿಷೇಷ ಜಿಂಕೆ ತರಬಹುದಾಗಿತ್ತು. ಲೋಕದ ದೃಷ್ಟಿಯಲ್ಲಿ ಸೀತೆ ತಪ್ಪು ಮಾಡಿದಂತೆ ಕಾಣುತ್ತದೆ. ಆದರೆ ಯಾವದೇ ಅಲಭ್ಯ ವಸ್ತು ಬೇಕೇ ಬೇಕು ಎಂದು ಗಂಡನನ್ನು ಹಿಂಸೆ ಮಾಡಬಾರದು ಎಂಬ ತತ್ವ ಲೋಕಕ್ಕೆ ತೋರಿಸುತ್ತಾಳೆ. ಕಾರಣ ಅವಳು ಜಿಂಕೆ ಇದೇ ಬೇಕು ಈಗಲೇ ಬೇಕು ಎಂದದ್ದು. ಮಾಯಾಮೃಗ ಬೇಕು ಎಂದು ಹಠ ಮಾಡಿದಳು.


ರಾವಣನ ಪಟ್ಟಣವಾದ ಲಂಕೆಯ ಅಶೋಕ ವನದಲ್ಲಿದ್ದಾಗ, ಸೀತೆಯನ್ನು ರಾವಣ ತನ್ನನ್ನು ಮದುವೆ ಮಾಡಿಕೋ ಎಂದೂ ಅವಳನ್ನು ಸುಖದ ಸುಪ್ಪತ್ತಿಗೆಯಲ್ಲಿ ತೇಲಿಸುತ್ತೇನೆ ಎಂದನು. ಇದಲ್ಲದೇ ರಾಮ ಸಾಮಾನ್ಯ ಮನುಷ್ಯ ಎಂದನು. ತಾನೇ ಶಕ್ತಿವಂತ ಎಂದೆಲ್ಲಾ ಹೇಳಿ ಸೀತೆಯನ್ನು ಒಲಿಸಿಕೊಳ್ಳಲು ನೋಡಿದ. ಆದರೆ ಆದಶ೯ ಮಾತೆಯಾದ ಶ್ರೀರಾಮಚಂದ್ರನನ್ನು ಅಗಲಿರದ ಸೀತೆ ಕೆಟ್ಟ ವಿಚಾರ ಮಾಡಲಿಲ್ಲ. “ರಾವಣನಿಗೆ ನೀನು ಒಂದು ತೃಣ ಪ್ರಾಯ” ಎಂದು ಒಂದು ಹುಲ್ಲುಕಡ್ಡಿಯನ್ನು ಅಡ್ಡ ಹಿಡಿದಳು. ಒಬ್ಬ ಪತಿವ್ರತಾ ಸ್ತ್ರೀ ಪರಪುರುಷರ ಹತ್ತಿರ ಹೇಗೆ ಇರಬೇಕೆಂಬುದನ್ನು ತೋರಿಸಿಕೊಟ್ಟಳು.


ಅಸುರಾವೇಶದ ಪ್ರಭಾವದಿಂದ ಇಂದ್ರಪುತ್ರನಾದ ಜಯಂತನು ಒಮ್ಮೆ ಬಹು ಕಾಲ ಬದುಕುವ ಕಾಗೆಯ ರೂಪವನ್ನು ಧಾರಣ ಮಾಡಿದನು. ಕಾಗೆಯಾದ ಜಯಂತನಲ್ಲಿ ಕುರಂಗನೆಂಬ ದೈತ್ಯನು ಸೇರಿದನು. ಎಲ್ಲ ಕಾಗೆಗಳ ಒಂದು ಕಣ್ಣಲ್ಲಿ ತಾನು ನೆಲೆಸಬೇಕು.ಇದರಿಂದಾಗಿ ತನಗೆ ಸಾವು ಬರಲಾರದು ಎಂದು ರುದ್ರದೇವರಿಂದ ವರವನ್ನು ಪಡೆದಿದ್ದನು. ಕಾಗೆಯಾದ ಜಯಂತನು ಚಿತ್ರಕೂಟದಲ್ಲಿ ವಾಸಿಸುತ್ತಿರುವ ಸೀತೆಯ ಸ್ತನದಲ್ಲಿ ತನ್ನ ಕೊಕ್ಕನ್ನು ಹಾಕಿತು. ಇಂತಹ ಕಷ್ಟವಾದರೂ ಸೀತಾದೇವಿ ಗಂಡನ ವಿರುದ್ಧ ಮಾತನಾಡಲಿಲ್ಲ. ಗಂಡ ರಕ್ಷಣೆ ಮಾಡೇ ಮಾಡುತ್ತಾನೆ ಎಂಬ ವಿಶ್ವಾಸ ಅವಳಲ್ಲಿತ್ತು. ಶ್ರೀ ರಾಮಚಂದ್ರನು ಒಂದು ಹುಲ್ಲುಕಡ್ಡಿಯನ್ನು ಅಭಿಮಂತ್ರಿಸಿ ಕಾಗೆಯ ಒಂದು ಕಣ್ಣಲ್ಲಿ ವಾಸವಾಗಿದ್ದ ಕುರಂಗನನ್ನು ಸಂಹರಿಸಿದನು ಮತ್ತು ಜಯಂತನನ್ನು ಕ್ಷಮಿಸಿದನು.


ಸೀತಾಮಾತೆಯ ಮತ್ತೊಂದು ಆದಶ೯ವೆಂದರೆ ಅವಳು ರಾಮನ ಪರಾಕ್ರಮವನ್ನು ಮೆಚ್ಚುತ್ತಿದ್ದಳು. ಪತಿಯ ಅಗೌರವವನ್ನು ಒಪ್ಪುತ್ತಿರಲಿಲ್ಲ. ಹನುಮಂತದೇವರು ಬಂದು ಸೀತಾದೇವಿಗೆ ಶ್ರೀ ರಾಮದೇವರ ಮುದ್ರೆ ಉಂಗುರ ಕೊಟ್ಟರು. ಸೀತಾಮಾತೆ ಕೊಟ್ಟ ಚೂಡಾಮಣಿಯನ್ನು ತೆಗೆದುಕೊಂಡು ಹೋಗುವಾಗ, ಅವರು ಸೀತೆಯನ್ನು ಕರೆದುಕೊಂಡು ಹೋಗಿ ಶ್ರೀ ರಾಮನಿಗೆ ಒಪ್ಪಿಸುವದಾಗಿ ಹೇಳಿದರು. ಹನುಮನ ಪರಾಕ್ರಮದ ಬಗ್ಗೆ ಅವಳಿಗೆ ನಂಬಿಕೆ ಇತ್ತು. ಆದರೆ ಲೋಕದ ಜನರು ರಾಮನ ಕೈಲಿ ಈ ಕೆಲಸವಾಗಲಿಲ್ಲಾ ಎನ್ನುತ್ತಾರೆ ಏಂದು ಅವಳು ರಾಮನೇ ಬಂದು ಪರಾಕ್ರಮದಿಂದ ರಾವಣನನ್ನು ಸದೆಬಡೆದು, ಕರೆದುಕೊಂಡು ಹೋಗಲಿ ಎಂದಳು. ಹೀಗೆ ಅನೇಕ ದುಷ್ಟ ರಾಕ್ಷಸರ ಸಂಹಾರ ಕಾರ್ಯದಲ್ಲಿ ಕೈ ಜೋಡಿಸಿದ ಸೀತಾದೇವಿ ಆದಶ೯ ಮಾತೆ.


ಅವಳ ಶುದ್ಧತೆ ಜಗತ್ತಿಗೆ ಅಥ೯ವಾಗಲೆಂದು ರಾಮನು ಅವಳಿಗೆ ಅಗ್ನಿ ಪ್ರವೇಶ ಮಾಡಲು ಹೇಳುತ್ತಾನೆ. ಆದರ್ಶ ಸೀತೆ ಗಂಡನ ವಿರುದ್ಧ ಮಾತಾಡದೇ ಅಗ್ನಿ ಪ್ರವೇಶ ಮಾಡಿಯೇ ಬಿಟ್ಟಳು. ತಾನು ದೇಹದಿಂದಲೋ, ಮಾತಿನಿಂದಲೋ, 

                                                

ಮನಸ್ಸಿನಿಂದಲೋ ತಪ್ಪು ಮಾಡಿದ್ದರೆ ಅಗ್ನಿ ತನ್ನನ್ನು ಆಹುತಿ ತೆಗೆದುಕೊಳ್ಳಲಿ. ತಾನು ಪರಿಶುದ್ಧಳಾಗಿದ್ದರೆ ಅಗ್ನಿಯಿಂದ ಎದ್ದು ಬರುತ್ತೇನೆ ಎಂದಳು. ಅಗ್ನಿಯಿಂದ ಇಬ್ಬರು ಸೀತಾದೇವಿಯರು ಬಂದರು. ಸೀತಾದೇವಿ ಮತ್ತು ವೇದವತಿ. ರಾವಣನು ತನ್ನನ್ನು ಅಪಹರಿಸಲು ಬಂದಾಗ ಸೀತಾದೇವಿಯು ವೇದವತಿಯನ್ನು ತನ್ನ ಸ್ಥಾನದಲ್ಲಿ ಕುಳ್ಳಿರಿಸಿ ಅದೃಶ್ಯಳಾಗಿ ಕೈಲಾಸಕ್ಕೆ ಹೋಗಿ ಅಲ್ಲಿ ಪಾವ೯ತಿ ಪರಮೇಶ್ವರರಿಂದ ಪೂಜೆಗೊಳ್ಳುತ್ತಾ ಅಲ್ಲಿಯೇ ಇದ್ದಳು. ವೇದವತಿಯಲ್ಲಿ ಸೀತಾ ಒಂದು ರೂಪದಲ್ಲಿ ಪ್ರವೇಶಿಸಿದ್ದಳು. ಏಕಪತ್ನಿ ವ್ರತಸ್ಥನಾದ ಶ್ರೀ ರಾಮನು ಸೀತೆಯ ಮಾತಿನಂತೆ (ತನ್ನ ಪತ್ನಿಯಾಗಿ ನಟಿಸಿ ಸೀತೆಯ ಮಾತಿನಂತೆ ನಡೆದುಕೊಂಡದ್ದಕ್ಕಾಗಿ) ಶ್ರೀನಿವಾಸನಾಗಿ ಅವತಾರ ಮಾಡಿದಾಗ ವೇದವತಿಯನ್ನು ಮದುವೆಯಾದನು.


ರಾಮನ ಭಾವನೆಯಂತೆ ರಮಾದೇವಿಯ ಭಾವನೆ – ಹನುಮಂತನು ರಾಮನ ಶ್ರೇಷ್ಠ ಭಕ್ತ. ಹನುಮಂತನ ಮೇಲೆ ಅಪಾರ ಪ್ರೀತಿ. ಹನುಮಂತನ ಸೇವೆ ಅಪಾರವಾದುದು. ಆದರೂ ರಾಮನು ಸೀತೆಗೆ ಹಾರವನ್ನು ಯಾರು ಹೆಚ್ಚು ಸೇವೆ ಮಾಡಿರುವರೋ ಅವರಿಗೆ ಕೊಡಲು ಅವಳಿಗೇ ಹೇಳಿದನು. ರಾಮನ ಮನವನರಿತ ಸೀತೆ, ಹನುಮನ ಸೇವೆ ಅರಿತಿದ್ದರಿಂದ  ಹನುಮನಿಗೆ ಕೊಡುತ್ತಾಳೆ.


ಪಟ್ಟಾಭಿಷಿಕ್ತನಾದ ಮೇಲೆ ಅಗಸನ ಮಾತು ಕೇಳಿ ಶ್ರೀರಾಮಚಂದ್ರನು ಗಭಿ೯ಣಿಯಾದ ಸೀತಾದೇವಿಯನ್ನು ಶತೃಘ್ನನ ಜೊತೆ ಕಳುಹಿಸಿ ಅರಣ್ಯಕ್ಕೆ ಬಿಟ್ಟು ಬರಲು ಹೇಳುತ್ತಾನೆ. ಮುಂದೆ ಅವಳಿ ಮಕ್ಕಳಾದ ಲವ ಕುಶರ ಬಾಯಿಯಿಂದ ರಾಮಾಯಣ ಗಾಯನವನ್ನು ಮುನಿಗಳೊಡನೆಯೂ, ವಾನರರೂಡನೆಯೂ, ರಾಜರೊಡನೆಯೂ ಕುಳಿತು ಕೇಳಿದ. ವಾಲ್ಮೀಕಿ ಋಷಿಗಳು ಅನೇಕ ವಿಷಯ ಸೀತೆಯ ಬಗ್ಗೆ ಹೇಳಿದರು.

1. ಪಂಚಭೂತಸಾಕ್ಷಿಯಾಗಿ ಮತ್ತು ಮನಸ್ಸಾಕ್ಷಿಯಾಗಿ ಸೀತೆಯು ಪರಿಶುದ್ಧಳೆಂದು ತಿಳಿದನಂತರವೇ ಆಶ್ರಮದ ಸಮೀಪದ ವನದಲ್ಲಿ ಕಿರು ನದಿಯ ತೀರದಲ್ಲಿ ಇವಳನ್ನು ನಾನು ಮಗಳಂತೆ ಪರಿಗ್ರಹಿಸಿದೆನು. 2. ಇವಳು ನಿಶ್ಚಯವಾಗಿಯೂ ಶುದ್ಧಚಾರಿತ್ರ್ಯಳು. 3. ಪತಿಯನ್ನೇ ಪರದೇವತೆಯನ್ನಾಗಿ ಭಾವಿಸಿದವಳು.4. ಭಯಗೊಂಡಿರುವ ನಿನಗೆ ತುಂಬಿರುವ ಮಹಾಸಭೆಯಲ್ಲಿ ತಾನು ಶುದ್ಧ ಚಾರಿತ್ರ್ಯಳೆಂಬುದನ್ನು ಶಪಥದ ಮೂಲಕವಾಗಿ ತೋರಿಸಿಕೊಡುತ್ತಾಳೆ.


ಶ್ರೀರಾಮ ಸೀತೆಯರು ಎಂದೆಂದಿಗೂ ಅಗಲದ ಅನ್ಯೋನ್ಯ ದಂಪತಿಗಳಾದರೂ, ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ಅವತಾರ ಮಾಡಿದ ಅವರಿಬ್ಬರೂ ಮಾನವರಂತೆ ನಟನೆ ಮಾಡುತ್ತಾರೆ. ಸೀತೆಯು ಹೇಳುತ್ತಾಳೆ “ಮನಸ್ಸಿನಿಂದಲೂ, ಕ್ರಿಯೆಯಿಂದಲೂ, ಮಾತಿನಿಂದಲೂ ನಾನು ಯಾವಾಗಲೂ ರಾಮನನ್ನೇ ಅರ್ಚಿಸುತ್ತಿದ್ದುದು ನಿಶ್ಚಯವಾದರೆ ಮಾಧವನ ಪತ್ನಿಯಾದ ಭೂದೇವಿಯು ತನ್ನ ರಂಧ್ರದೊಳಗೆ ನನಗೆ ಸ್ಥಾನವನ್ನು ಕೊಡಲಿ” ಎಂದು. ಭೂದೇವಿಯು ಆಗಮಿಸಿ ತನ್ನೆರಡು ತೋಳುಗಳಿಂದಲೂ ಸೀತಾದೇವಿಯನ್ನು ಬಾಚಿ ತಬ್ಬಿಕೊಂಡು ಸಿಂಹಾಸನದಲ್ಲಿ ಕೂಡಿಸಿಕೊಂಡು ರಸಾತಲವನ್ನು ಪ್ರವೇಶಿಸುತ್ತಿದ್ದುದನ್ನು ನೋಡಿ ದೇವತೆಗಳು ಆಕಾಶದಿಂದ ಅವಿಚ್ಛಿನ್ನವಾದ ಪುಷ್ಪವೃಷ್ಟಿಯನ್ನು ಸುರಿಸಿದರು.  


ಆದಶ೯ ಶ್ರೀರಾಮ ಸೀತೆಯರ ಬಗ್ಗೆ ತಪ್ಪು ಕಲ್ಪನೆ  ಮಾಡಿದರೆ ತಮಸ್ಸಿಗೆ ಹೋಗಬೇಕಾಗುತ್ತದೆ. ಅವರಿಬ್ಬರೂ ಸಾಕ್ಷಾತ್‌ ಶ್ರೀಲಕ್ಷ್ಮೀನಾರಾಯಣರು. ಅವತಾರ ಮಾಡಿದ್ದು ಲೋಕ ಶಿಕ್ಷಣಕ್ಕಾಗಿ, ದುಷ್ಟರ ಸಂಹಾರ ಕಾರ್ಯಕ್ಕಾಗಿ. 



- ಶ್ರೀಮತಿ ಲಕ್ಷ್ಮೀ ಉಪಾಧ್ಯೆ, ಬೆಂಗಳೂರು


ಲೇಖಕರ ಕಿರು ಪರಿಚಯ: 

“ಬಿ.ಕಾಂ” ಪದವೀಧರೆ, ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದಿಂದ ಹರಿದಾಸ ಸಾಹಿತ್ಯದಲ್ಲಿ “ಎಂ.ಎ” ಪದವಿ,  ಸೌರಭ ದಾಸ ಸಾಹಿತ್ಯ ವಿದ್ಯಾಲಯದಿಂದ “ದಾಸ ಶಿರೋಮಣಿ” ಮತ್ತೂ ಯೋಗ ಸಂಸ್ಕೃತಮ್‌ ಯುನಿವರ್ಸಿಟಿ ಫ್ಲೋರಿಡದಿಂದ “ಪಿ.ಎಚ್.ಡಿ” ಪಡೆದಿದ್ದಾರೆ.


ವಿಳಾಸ: 

ನಂ.201, ಸೂರ್ಯ ನಿಲಯಮ್‌, 33-36, ವಲ್ಲಭನಗರ-3ನೇ ಅಡ್ಡ ರಸ್ತೆ, ಕೆನರಾ ಬ್ಯಾಂಕ್ ಉತ್ತರಹಳ್ಳಿ 

- ಶಾಖೆಯ ಹತ್ತಿರ, ಉತ್ತರಹಳ್ಳಿ, ಬೆಂಗಳೂರು- 560061.

ಮೊಬೈಲ್‌ ನಂ: 95384 74123

ಇ ಮೇಲ್‌ ಐಡಿ: srnvsupadhye@yahoo.co.in


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top