ಶ್ರೀರಾಮ ಕಥಾ ಲೇಖನ ಅಭಿಯಾನ-79: 'ಸೀತಾ ಕಲ್ಯಾಣ'

Upayuktha
0


-ಡಾ ಭಾರತಿ. ಹ. ಪಾಟೀಲ


ಚತುರ್ಮುಖ ಬ್ರಹ್ಮದೇವರು ಭಗವದಾಜ್ಞೆಯಿಂದ ಸೃಷ್ಠಿಕಾರ‍್ಯದಲ್ಲಿ ತೊಡಗಿ ಪ್ರಜೆಗಳನ್ನು ಸೃಷ್ಠಿಸಿ ಪ್ರಪಂಚವನ್ನು ವೃದ್ಧಿಗೊಳಿಸಲು ತೊಡಗಿದಾಗ ಕೊನೆಯಲ್ಲಿ ಅವರ ದೇಹದಿಂದ ಸ್ತ್ರೀ-ಪುರುಷ ರೂಪದ ಶತರೂಪಾ-ಸ್ವಾಯಂಭುವ ಮನುವಿನ ಸೃಷ್ಠಿ ಆಯಿತು. ಈ ದಂಪತಿಗಳು ಮಿಥುನ ಧರ್ಮದಿಂದ ಪ್ರಜಾಭಿವೃದ್ಧಿಯನ್ನು ಮಾಡಿದರು. ಭಗವದಾಜ್ಞೆಯಿಂದ ಪ್ರಜೆಗಳು ಜಗತ್ತಿನಲ್ಲಿ ಸಾರ್ಥಕ ಜೀವನ ನಡೆಸಲು ವಿಧಿ, ನಿಯಮಗಳನ್ನು ತಿಳಿಸುವ ಶಾಸ್ತ್ರ ರಚಿಸಿ ಕೊಟ್ಟರು. ಅದರಂತೆ ಪ್ರಜೆಗಳಿಗೆ ನಾಲ್ಕು ಆಶ್ರಮಗಳಾದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಸಂನ್ಮಾಸ ಧರ್ಮಗಳನ್ನೂ, ಷೋಡಶ ಸಂಸ್ಕಾರಗಳನ್ನೂ ತಿಳಿಸಿದರು. ಗೃಹಸ್ಧಾಶ್ರಮದ ಪಾಲನೆಯಿಂದ ಮನುಷ್ಯನ ಅತ್ಯಂತ ಫಲವಾದ ಮೋಕ್ಷವನ್ನೂ ಪಡೆಯಬಹುದು. ಅದಕ್ಕೇ "ಧನ್ಯೋ ಗೃಹಸ್ಥಾಶ್ರಮಃ" ಎಂದು ಶಾಸ್ತ್ರ ಹೇಳುತ್ತದೆ.


ಈ ಗೃಹಸ್ಥಾಶ್ರಮಕ್ಕೆ ಪ್ರವೇಶಿಸಲು ವಿವಾಹ ಸಂಸ್ಕಾರ ಅತಿ ಮುಖ್ಯ. ಈ ವಿವಾಹ ಪದ್ಧತಿ ಎಂಟು ವಿಧವಾಗಿದೆ. ವಿವಾಹ ಎನ್ನವುದು ಕೇವಲ ಒಂದು ಒಪ್ಪಂದ ಅಲ್ಲ. ಧರ್ಮದಿಂದ ಜೀವನ ನಡೆಸುತ್ತಾ ಒಳ್ಳೆ ಸಂತಾನ ಪಡೆದು ಸಾರ್ಥಕ, ಸಂತೃಪ್ತ ಜೀವನ ನಡೆಸಬೇಕು. ಈ ವಿಷಯವಾಗಿ ತಿಳಿಸುವ ವೈದಿಕಗ್ರಂಥಗಳಿವೆ. ಹರಿದಾಸ ಸಾಹಿತ್ಯ, ವಚನ ಸಾಹಿತ್ಯ, ಜಾನಪದ ಕೃತಿಗಳೂ ಇವೆ. ಗುರುವಿಜಯ ವಿಠಲಾಂಕಿತ ಶೇಷದಾಸರು ರಚಿಸಿದ ವಿವಾಹ ಸುಳಾದಿಯಲ್ಲಿ ಮದುವೆಯ ಮಹತ್ವ, ಆಚರಿಸುವ ಬಗೆ, ಸರಿಯಾದ ಅನುಸಂಧಾನದಿಂದ ಪುಣ್ಯಸಾಧನೆ ಆಗುವ, ಅನೇಕ ವಿಷಯಗಳನ್ನು ತುಂಬ ವಿವರವಾಗಿ ತಿಳಿಸಿದ್ದಾರೆ. ದೇವರ ಅನೇಕ ಅವತಾರಗಳ ವಿವಾಹ, ದೇವತೆಗಳ ವಿವಾಹ, ಕಲ್ಯಾಣೋತ್ಸವಗಳ ಕೃತಿಗಳು ದಾನ ಸಾಹಿತ್ಯದಲ್ಲಿ ಸಾಕಷ್ಟಿವೆ. ಉದಾಹರಣೆಗೆ ಶ್ರೀನಿವಾಸ ಕಲ್ಯಾಣ, ಲಕ್ಷ್ಮೀ ಶೋಭಾನೆ, ರುಕ್ಮಿಣಿ ಕಲ್ಯಾಣ. ತುಳಸಿ ಕಲ್ಯಾಣ, ಗಿರಿಜಾ ಕಲ್ಯಾಣ, ಸುಭದ್ರಾ ಕಲ್ಯಾಣ, ರತಿ ಕಲ್ಯಾಣ, ಸೀತಾ ಕಲ್ಯಾಣ ಇನ್ನೂ ಅನೇಕ ಇವೆ.


ಸೀತಾ ಕಲ್ಯಾಣ :- 

ವಿಶ್ವಾಮಿತ್ರರ ಯಜ್ಞವನ್ನು ಪೂರೈಸಿ ರಾತ್ರಿ ಕಳೆದು ಬೆಳಗಾಗಿಂದ ವಿಶ್ವಾಮಿತ್ರರು ಮುನಿಗಳೊಂದಿಗೆ ಕೂಡಿ ರಾಮ ಲಕ್ಷ್ಮಣರಿಗೆ ಹೇಳಿದರು "ಶ್ರೇಷ್ಟವಾದ ಸ್ವಯಂವರ  ಒಂದು ವಿದೇಹ ದೇಶದ ಜಾನಕಿಗೆ ಘೋಷಿತವಾಗಿದೆ, ಕಾತರದಿಂದ ಸಕಲ ಜನರೂ ಅಲ್ಲಿಗೆ ಹೋಗುತ್ತಿದ್ದಾರೆ. ನಾವೂ ಸಹ ಆ ಮಹೋತ್ಸವವನ್ನು ನೋಡಲು ಅಲ್ಲಿಗೆ ಹೋಗೋಣ" ಹೀಗೆ ನುಡಿದು ಎಲ್ಲರೂ ಮಿಥಿಲಾ ನಗರದ ಕಡೆ ಪ್ರಯಾಣ ಬೇಳೆಸಿದರು. ಮಿಥಿಲೆಯ ಉಪವನದ ಬಳಿ ಇದ್ದ ಆಶ್ರಮದಲ್ಲಿ ಶಾಪದಿಂದ ಶಿಲೆಯಂತಿದ್ದ ಅಹಲ್ಯೆಯನ್ನು ಶ್ರೀ ರಾಮಚಂದ್ರ ಉದ್ಧರಿಸಿ ಶಾಪಮುಕ್ತ ಮಾಡಿದ. 


ಮಿಥಿಲಾಗಮನ : ಅಹಲ್ಯಾ ಉದ್ಧಾರದ ನಂತರ ಅಲ್ಲಿಂದ ಈಶಾನ್ಯ ದಿಕ್ಕಿಗೆ ಶ್ರೀರಾಮನು ಲಕ್ಷ್ಮಣನೊಂದಿಗೆ ವಿಶ್ವಾಮಿತ್ರರನ್ನು ಮುಂದಿಟ್ಟಿಕೊಂಡು ನಡೆದು, ಜನಕರಾಜನ ಯಜ್ಞ ಭೂಮಿಯನ್ನು ಹೋಗಿ ಸೇರಿದ. ವೇದಾಧ್ಯಯನ ಶಾಲಿಗಳಾದ ನಾನಾ ದೇಶವಾಸಿ ಬ್ರಾಹ್ಮಣರು ಬಹು ಸಂಖ್ಯೆಯಲ್ಲಿ ಬಂದಿದ್ದರು. ವಿಶ್ವಾಮಿತ್ರರು ಹೆಚ್ಚು ಜನರಿಲ್ಲದ ನೀರು ಇರುವ ಒಂದು ಸ್ಥಳದಲ್ಲಿ ವಸತಿ ಮಾಡಿದರು. ವಿಶ್ವಾಮಿತ್ರರು ಬಂದರೆಂದು ಕೇಳಿದ ಜನಕರಾಜನು ತಮ್ಮ ಪುರೋಹಿತರಾದ ಶತಾನಂದರೊಡನೆ ಬಂದು ವಿನಯದಿಂದ ಆದರಿಸಿ ಎದುರುಗೊಂಡರು. ವಿಶ್ವಾಮಿತ್ರರು ರಾಜನ ಕುಶಲವನ್ನು ಯಜ್ಞದ ತಯಾರಿಯನ್ನೂ ವಿಚಾರಿಸಿದರು. ಬಳಿಕ ಜನಕರಾಜನು ವಿಶ್ವಾಮಿತ್ರರಿಗೆ ಹನ್ನೆರಡು ದಿನಗಳು ದೀಕ್ಷಾಕಾಲ ಉಳಿದಿವೆ. ಯಜ್ಞ ಭಾಗಾಪೇಕ್ಷಿಗಳಾದ ದೇವತೆಗಳನ್ನು ಸುತ್ಯಾಕಾಲದಲ್ಲಿ ನೀವು ದರ್ಶನ ಮಾಡಬಹುದೆಂದು ಹೇಳಿ ಕೈಮುಗಿದು ನಮಸ್ಕರಿಸಿದ. ವಿಶ್ವಾಮಿತ್ರರೊಡನೆ ಇದ್ದ ದೇವತುಲ್ಯ ಪರಾಕ್ರಮಗಳಂತೆ ಕಾಣುವ ಈ ಇಬ್ಬರು ವೀರರು ಯಾರು ಎಂದು ಕೇಳಿದ. ಆಗ ವಿಶ್ವಾಮಿತ್ರರು ಇವರು ದಶರಥ ಪುತ್ರರು ಸಿದ್ಧಾಶ್ರಮದಲ್ಲಿದ್ದು ಅಲ್ಲಿ ರಾಕ್ಷಸ ವಧೆ ಮಾಡಿದ್ದು ಮುಂದೆ ಅಹಲ್ಯೆಯ ದರ್ಶನ ಮಾಡಿ ಗೌತಮರೊಡನೆ ಅಹಲ್ಯೆಯ ಸಮಾಗಮ ಮಾಡಿಸಿದ್ದು ಈಗ ಮಹಾಧನುಸ್ಸಿನ ಬಗ್ಗೆ ವಿಚಾರ ಮಾಡಲು ಬಂದಿದ್ದು ಎಂದು ತಿಳಿಸಿದರು. ವಿಶ್ವಾಮಿತ್ರರ ಈ ಮಾತನ್ನು ಕೇಳಿ ಅಲ್ಲಿದ್ದ ಶತಾನಂದರು ವಿಶ್ವಾಮಿತ್ರರಿಗೆ ಕೃತಜ್ಞತಾ ಪೂರ್ವಕ ತಮ್ಮ ತಾಯಿಯನ್ನು ಶಾಪಮುಕ್ತ ಮಾಡಿ ತನ್ನ ತಂದೆಯೊಡನೆ ಕೂಡಿಸಿದ. ಶ್ರೀರಾಮಚಂದ್ರನಿಗೆ ಮತ್ತೆ ಮತ್ತೆ ನಮಿಸುತ್ತ ವಿಶ್ವಾಮಿತ್ರರ ಮಹಾತ್ಮೆಯನ್ನು ಕೊಂಡಾಡಿದರು. ಬ್ರಹ್ಮರ್ಷಿಯಾದ, ಗಾಯತ್ರಿ ದ್ರಷ್ಟ್ರಾರರಾದ ವಿಶ್ವಾಮಿತ್ರರ ಮಹಿಮೆಯನ್ನು ವಿವರವಾಗಿ ಹೇಳಿದರು. ನಂತರ ಸೂರ್ಯಾಸ್ತ ಸಮಯವಾಯಿತು. ಜನಕರಾಜನು ವಿಶ್ವಾಮಿತ್ರರ ಅಪ್ಪಣೆ ಪಡೆದು ಯಜ್ಞ ಶಾಲೆಗೆ ತೆರಳಿದ. 


ಜನಕರಾಜನಿಗೆ ಭೂಮಿಜೆ ಸೀತಾ ಮತ್ತು ಶಿವಧನುಸ್ಸು ದೊರೆತ ಬಗ್ಗೆ : ಸೀತೆ ಉದ್ಭವ.


ಜನಕರಾಜನು ಯಜ್ಞಭೂಮಿಯನ್ನು ನೇಗಿಲಿನಿಂದ ಉಳುವಾಗ ನೇಗಿಲ ಸಾಲಿನಿಂದ ಕನ್ಯೆ ಉದ್ಭವಿಸಿದಳು. ಹೀಗೆ ಸೀರದಿಂದ ಪ್ರಾದುರ್ಭವಿಸಿದ್ದರಿಂದ "ಸೀರಜಾತಾ" ಅಂತ ಹೆಸರು ಅದರ ಸಂಕ್ಷಿಪ್ತ ರೂಪವೇ ಸೀತಾ ಎಂದಾಗಿದೆ. ಬಾಲೆಯಾದ ಈ ಸೀತೆಯು ಬೆಳೆಯುತ್ತಾ ಚಂದ್ರಕಲೆಯಂತೆ ಪೂರ್ಣಳಾದಾಗ ಇಂತಹವಳನ್ನು ಯಾರಿಗೆ ವಿವಾಹ ಮಾಡಿಕೊಡುವುದು ಎಂಬ ಚಿಂತೆ ಜನಕರಾಜಗೆ.


ಶಿವಧನಸ್ಸು ಜನಕರಾಜನಲ್ಲಿ ಬಂದ ಬಗೆ : 

ಹಿಂದೆ ದಕ್ಷಯಜ್ಞಭಂಗ ಕಾಲದಲ್ಲಿ ವೀರ್ಯಶಾಲಿಯಾದ ರುದ್ರನು ರೋಷದಿಂದ ಈ ಧನಸ್ಸನ್ನು ಹೆದೆ ಏರಿಸಿ ದೇವತೆಗಳ ಅಮೂಲ್ಯವಾದ ಶರೀರಾವಯವಗಳನ್ನು ಕತ್ತರಿಸಿದ್ದನು. ಎಲ್ಲ ದೇವತೆಗಳು ರುದ್ರನನ್ನು ಪ್ರಸನ್ನ ಗೊಳಿಸಿದ ನಂತರ ರುದ್ರನು ಸಂತುಷ್ಟನಾದನು. ನಿಮಿರಾಜನಿಂದ ಆರನೇಯುವನಾದ ದೇವರಾತನ ಕೈಯಲ್ಲಿ ಈ ಧನುಸ್ಸು ನ್ಯಾಸವಾಗಿ ಇಡಲ್ಪಟ್ಟಿತ್ತು. ಬಹುಕಾಲದ ತಪಸ್ಸಿಗೆ ಮೆಚ್ಚಿದ ಶಿವನಿಂದ ಜನಕರಾಜನಿಗೆ ಈ ಧನಸ್ಸು ವರವಾಗಿ ಲಭಿಸಿತು. 


"ಯಾವನು ಈ ಧನುಸ್ಸನ್ನು ಕಟ್ಟುವನೋ ಅವನಿಗೆ ನನ್ನ ಪುತ್ರಿಯನ್ನು ಧಾರೆ ಎರೆಯುವೆ", ಎಂಬುದಾಗಿ ಜನಕರಾಜ ಶಪಥ ಮಾಡಿದ. ಈ ಸುದ್ಧಿ ಸೂರ್ಯನ ಕಿರಣದಂತೆ ಲೋಕದಲ್ಲೆಲ್ಲ ಹಬ್ಬಿತು, ಯಕ್ಷರಾಕ್ಷಸರ ಪ್ರಧಾನರೊಂದಿಗೆ ವೀರಶ್ರೇಷ್ಠರಾದ ರಾಜಪುತ್ರರೂ ದೈತ್ಯರೂ ಸ್ವಯಂವರಕ್ಕೆಂದು ಧಾವಿಸಿಬಂದರು. ಕೆಲವರು ಧನುಸ್ಸನ್ನು ನೋಡಿ, ಕೆಲವರು ಅದನ್ನು ಮುಟ್ಟಿ, ಇನ್ನೂ ಕೆಲವರು ಅದನ್ನು ಅಲುಗಾಡಿಸಿ ತಾವು ವೀರರಲ್ಲ ಎಂದು ಒಪ್ಪಿಕೊಂಡು, ಆ ವೀರರು ಹಿಂತಿರುಗಿ ಹೋದರು. ಉನ್ಮತ್ತರಾದ ಹತ್ತು ಮುಖದ ರಾವಣ ಮೊದಲಾದವರು ಧನುಸ್ಸನ್ನು ಎತ್ತಲು ಬಯಸಿ ಬೆವೆತು ಮೂರ್ಛಿತರಾಗಿ ಭೂಮಿಯ ಮೇಲೆ ಉರುಳಿದರು. ಸೀತೆಗೋಸ್ಕರ ಯಾರಿಂದಲೂ ಜನಕರಾಜನಿಗೆ ಪರಾಭವ ಆಗಬಾರದು ಎಂದು ಬ್ರಹ್ಮದೇವ ರಿಂದ ವರವಿತ್ತು. ಹೀಗಾಗಿ ಸೋತ ಉನ್ಮತ್ತರಾದ ಖಳರು ಒಂದು ವರ್ಷಕಾಲ ಸೀತೆಯನ್ನು ಬಲಾತ್ಕಾರದಿಂದ ಅಪಹರಿಸಲು ಜನಕರಾಜರೊಡನೆ ಹೋರಾಡಿದರೂ ಸಮರ್ಥರಾಗಲಿಲ್ಲ.


ಜನಕರಾಜನು ವಿಶ್ವಾಮಿತ್ರರಿಗೆ ಅಂದಿನ ಬೆಳಗಿನ ಸಮಯದಲ್ಲಿ ಬಹಳ ತೇಜದಿಂದ ಹೊಳೆಯುವ ಧನುಸ್ಸನ್ನು ಅವರಿಗೂ ರಾಮಲಕ್ಷ್ಮಣರಿಗೂ ತೋರಿಸುವೆನು ಎಂದು ಆಮಂತ್ರಿಸಿದ. 


ಶಿವಧನುರ್ಭಂಗ :

ದೇವತೆಗಳಿಗೂ ಅಲುಗಿಸಲಾಗದ ವೈರಿಗಳ ಪರಾಭವಕ್ಕೆ ಕಾರಣವಾದ ಆ ಧನುಸ್ಸನ್ನು ರಾಮನಿಗೆ ತೋರಿಸು ಎಂದರು. ಆಗ ಗಂಧಮಾಲ್ಯಗಳಿಂದ ಅಲಂಕೃತವಾದ ದಿವ್ಯವಾದ ಧನುಸ್ಸು ಇರುವ ಪೆಟ್ಟಿಗೆಯನ್ನು ಧೃಢ ಧೀರ್ಘಕಾಯರಾದ ಮಹಾ ಪ್ರಯತ್ನಶಾಲಿ ವೀರರು ಶಿವನ ದಯದಿಂದ ತಂದು ಜನಕರಾಜನೆದುರು ಇಟ್ಟರು. ಆಗ ಜನಕರಾಜನು ವಿಶ್ವಾಮಿತ್ರರಿಗೆ ಹೇಳಿದ "ಮುನಿಯೇ ಇದೇ ಶಿವಧನುಸ್ಸು, ದೇವರಾತನಿಂದ ಹಿಡಿದು ಜನಕ ವಂಶದ ಎಲ್ಲ ರಾಜರೂ ಹಿಂದೆ ಇದನ್ನು ಪೂಜಿಸಿದ್ದಾರೆ. ದೇವತೆಗಳು, ಅಸುರರು, ಗಂಧರ್ವ ಕಿನ್ನರ, ನಾಗರು ಮನುಷ್ಯರು ಯಾರಿಗೂ ಎತ್ತಲಾಗಿಲ್ಲ. ಮಹಾಭಾಗ್ಯಶಾಲಿಯೇ ಇದನ್ನು ರಾಜಕುಮಾರರಿಗೆ ತೋರಿಸು" ಎಂದನು. ವಿಶ್ವಾಮಿತ್ರರು "ಮಗು ರಾಮ ಧನುಸ್ಸನ್ನು ನೋಡು, ಹೆದೆ ಏರಿಸಲು ಯತ್ನಿಸು" ಎಂದರು. ಜನಕರಾಜನೂ ಹಾಗೇ ಬಿನ್ನವಿಸಿದ.


ಆಗ ರಾಮಚಂದ್ರನು ಬಹು ಸಹಸ್ರ ಜನರು ನೋಡುತ್ತಿದ್ದಂತೆ ಕಾಲ್ಬೆರಳಿನಿಂದ ಧನುಸ್ಸಿನ ಮಧ್ಯವನ್ನೆತ್ತಿ ಲೀಲಾಜಾಲವಾಗಿ ಕೈಯಿಂದ ಹಿಡಿದು ಹೆದೆಯನ್ನು ಏರಿಸಿ ಕಿವಿ ವರೆಗೂ ಸೆಳೆದನು. ಮತ್ತು ಮಹಾಶಯನಾದ ಪುರುಷೋತ್ತಮ ರಾಮನು ಆ ಧನುಸ್ಸನ್ನು ನಡುವಿನಲ್ಲೇ ಮುರಿದನು. ಶ್ರೀರಾಮನು ಐರಾವತವು ಕಬ್ಬಿನ ಕೋಲನ್ನು ಮುರಿದಂತೆ ಅನಾಯಾಸವಾಗಿ ಮುರಿದು ಹಾಕಿದ. "ಶ್ರೀರಾಮನಿಗೆ ಸೀತೆ ಲಭಿಸಿದಳು" ಎಂಬ ತುಂಬ ಸಂತೋಷದ ವಾರ್ತೆಯನ್ನು ಮೂರು ಲೋಕಗಳಿಗೂ ಧನುರ್ಭಂಗದ ಶಬ್ದವು ಹರಡಿತು.


ಹರಿದಾಸರ ಪದಗಳಲ್ಲಿ ಶಿವಧನುರ್ಭಂಗ

ಪ್ರಸನ್ನ ಶ್ರೀನಿವಾಸದಾಸರು - ನಿರ್ಣಯ ರಾಮಾಯಣ

"ಯಮದಿಶಿಯಲಿ ಇಪ್ಪಲಂಕೆಯರಸನು ಮೊದಲಾದ ನೃಪರ |

ಯತ್ನ ಹಂಗಿಸಿದ ಆ ಧನುವ | ಅಹ

ಯತ್ನವಿಲ್ಲದೇ ಲೀಲೆಯಿಂದ ಎತ್ತಿ ನೀ

ಇಕ್ಷುವ ಶತಮುಖ ಹಸ್ತಿವೋಲ್ ಮುರಿದಿ ||"


ಭಾವಾರ್ಥ ಸಪ್ತಕಾಂಡ ರಾಮಾಯಣ – ಕಾಖಂಡಕಿ ಕೃಷ್ಣರಾಯರು 

"ನೋಡಿ ನೋಡಿ ಧನುವಾ | 

ರಾಘವ ನಿಜ ಬೆರಳ ಕೊನಿಯ ಲೆತ್ತಿ | ಕೊಡಿಸೆ ಹೆದೆಯನು ಜಗ್ಗಲು | 

ನೊಂದಿತು ನಡುವಿಗೆ ನೆಲಕೊತ್ತಿ | 

ಕೋಟಿಸಿಡಿಲ ಒದಗಿದ ಪರಿ | ಚಾಪದಾರ್ಭಟಕೆ ಜಗ ಬೆದರೆ |

ತಾಟಾಡಲು ಗ್ರಹ ತಾರೆಯು |

ನಗಜೆ ಧೂರ್ಜಟಿಯ ಪದಸಾರೆ |

ಧೀಟತನದಿ ನೋಡುವ | ಮುನಿಜನ ಹರಿಯಾಟಕೆ ನಲಿಯುತಿರೆ | 

ತಾಟಕಾರಿಯ ಬಿಗಿದಪ್ಪಿದ | 

ಜನಕ ಸಘಾಟಕೆ ಮೆರೆಯುತಿರೆ |"


ವರದೇಶ ವಿಠ್ಠಲದಾಸರು – 

"ಸ್ಮರಿಸುವೆನು ಸದ್ಭಕ್ತಿಯಲಿ ||

ಮೋದದಲಿ ಹರಧನು ಮುರಿದ ಗಂಭೀರನ ಬಹುಶೂರನ ||"


ಗುರು ಜಗನ್ನಾಥದಾಸರ ಶ್ರೀಮದ್ರಾಮ ಭಜನೆ

"ನರವರ ಸಭೆಯಲಿ ಗಿರಿಶನ ಧನುವನು

ಮುರಿದನು ರಾಘವ ರಾಮ ||

ಕೋಣೀಶನ ಪಣ ಕ್ಷೀಣಿಸಿ ಸೀತೆಯ

ಪಾಣಿಯ ಪಿಡಿದನು ರಾಮ ||"

. ವಿಜಯದಾಸರು – ರಾಮಾಯಣ ಸುಲಾದಿ

"ಅನಲಾಕ್ಷನ ಧನುಸು ಮುರಿದು ನಿಕ್ಕಡಿ ಮಾಡಿ |

ಜನಕ ರಾಜನ ನಂದಿಯ ನೆರೆದು........"


. ಪುರಂದರ ದಾಸರು "ಧನುವ ಮುರಿದ"

"ಧನುವ ಮುರಿದ ಶ್ರೀರಾಮ ಶೌರ್ಯವನೆ ತೋರಿ

ಜನಕನ ಸಭೆಯೊಳಗೆ ಜಾನಕಿಯ ಮನ ಸೆಳೆದು || ಪ ||

ವಸುಧೀಶರೆಲ್ಲರು ದೆಶೆಗೆಟ್ಟು ಕುಳಿತಿಹರು |

ದಶಕಂಠ ಧನುವೆತ್ತಿ ಅಸುಗೊಳದೆ ಬಿದ್ದ |

ಪಸರಿಸಿತು ಹಾಸ್ಯಧ್ವನಿ ನೆರೆದ ಸಭೆಯಲ್ಲಿ |

ನಸುನಕ್ಕು ವಿಶ್ವಾಮಿತ್ರ ರಾಮನೆಬ್ಬಿಸಿದ || 1 ||

ಶ್ಯಾಮ ಸುಂದರನೆದ್ದು ಪ್ರೇಮದಿಂದ ಮುನಿಗೆರಗಿ |

ಆ ಮಹಾ ಧನುವಿದ್ದ ಕಡೆಗೆ ಪೋದ |

ಕೋಮಲ ಕರಗಳಿಂ ಎತ್ತಿ ತಾ ಪಿಡಿದು

ಸಾಮರ್ಥ್ಯದಿಂದೆಳೆದ ಧನು ಮುರಿದು ಎರಡಾಯ್ತು || 2 ||

ಜಯ ಜಯ ಜಯವೆಂದು ಜಯಭೇರಿ ಹೊಡೆಯಲು

ಜಯಮಾಲೆ ಹಾಕಿದಳು ಜಾನಕಿ ಬಂದು

ಜಯ ಜಯ ಜಯವೆಂದು ಜಯಘೋಷ ಮೊಳಗಲು

ಜಯ ಪಡೆದು ನಗುತಿಹ ಪುರಂದರ ವಿಠ್ಠಲ || 3 ||"


ಸೀತಾ ರಾಮ ಕಲ್ಯಾಣ : 


ಶಿವಧನುರ್ಭಂಗ ಶ್ರೀರಾಮನಿಂದ ಆದದ್ದು ನೋಡಿ, ಜನಕರಾಜ, ವಿಶ್ವಾಮಿತ್ರ ಲಕ್ಷ್ಮಣ, ಸೀತಾದೇವಿ, ಅಂತಃಪುರದ ಎಲ್ಲರೂ ಬಲು ಸಂತೋಷಪಟ್ಟರು. ರಾಜಕುಮಾರಿಯ ರೂಪದ ಸಾಕ್ಷಾತ್ ಲಕ್ಷ್ಮಿಯಾದ ಸೀತಾದೇವಿಯು ಶ್ರೇಷ್ಠವಾದ ಅಂತಃಪುರದಿಂದ ಮೆಲ್ಲ ಮೆಲ್ಲನೆ ಶ್ರೀರಾಮನ ಬಳಿಗೆ ಲಜ್ಜೆ ಮತ್ತು ಭಕ್ತಿಯಿಂದ ಬಂದಳು. ಹೇಮವರ್ಣದ ಕಮಲಗಳ ಮಾಲೆಯನ್ನು ಶ್ರೀರಾಮನಿಗೆ ಸಮರ್ಪಿಸಿದಳು. ಶ್ರೀರಾಮನೂ ಸಹ ಪ್ರೀತಿಯ ಅಮೃತ ರಸ ಪೂರ್ಣವಾದ ಮಹೋಹರ ನೋಟವನ್ನು ಸೀತಾದೇವಿಯ ಮೇಲೆ ಬೀರಿದ. ಗಂರ‍್ವರ ಗಾಯನ, ಅಪ್ಸರೆಯರ ನರ್ತನ, ದೇವ ವೃಕ್ಷಗಳ ಪುಷ್ಪಮಳೆ, ಮಂಗಳ ವಾದ್ಯಗಳ ಧ್ವನಿಯಿಂದ ದೇವತೆಗಳು ಸಲ್ಲಿಸಿದ ಪೂಜೆಯನ್ನು ಸೀತಾರಾಮರು ಸ್ವೀಕರಿಸಿ ಸಂತೋಷಿಸಿದರು.


ಬಳಿಕ ಜನಕರಾಜನು ವಿಶ್ವಾಮಿತ್ರರ ಅನುಮತಿ ಪಡೆದು ಶ್ರೀರಾಮನ ಜನಕನಾದ ದಶರಥನ ಬಳಿಗೆ ದೂತರನ್ನು ಕಳುಹಿಸಿದ. ದೂತರು ಶ್ರೀರಾಮನಿಂದ ಶಿವಧನುರ್ಭಂಗದ ವಿಷಯ ತಿಳಿಸಿ ವಿನಯದಿಂದ ಜನಕರಾಜನ ಆಮಂತ್ರಣ ತಿಳಿಸಿದರು. ದಶರಥನು ಬಹಳ ಸಂತೋಷಗೊಂಡು ಮಂತ್ರಿಗಳಿಗೆ ಎಲ್ಲ ತಯಾರಿ ಮಾಡಲು ತಿಳಿಸಿದನು. ವಶಿಷ್ಠರು, ವಿಪ್ರರು, ರಾಣಿಯರು ಎಲ್ಲರೊಂದಿಗೆ ಶೃಂಗರಿಸಿದ ರಥಗಳಲ್ಲಿ ಕುಳಿತು ಜನಕಪುರಿಗೆ ಬಂದರು. ವಶಿಷ್ಠ ವಿಶ್ವಾಮಿತ್ರರು ದಶರಥನ ವಂಶ ಮತ್ತು ಜನಕರಾಜನ ವಂಶವನ್ನು ವಿವರಿಸಿದರು. ಮತ್ತು ರಾಮ ಲಕ್ಷ್ಮಣರಲ್ಲದೇ ನಿನ್ನ ತಮ್ಮನ ಮಕ್ಕಳನ್ನು ಭರತ ಶತೃಘ್ನರಿಗೆ ನೀಡಬೇಕು ಎಂದು ಹೇಳಿ ನಿಶ್ಚೈಸಿದರು. ಅದರಂತೆ, ದಶರಥರಾಜ, ಅವನ ಮಕ್ಕಳು, ಅವನ ರಾಣಿಯರು ಎಲ್ಲರೂ ಅಲಂಕಾರಗೊಂಡರು. ವಿವಾಹವು ಉತ್ತರಾ ಫಲ್ಗುಣೀ ನಕ್ಷತ್ರದಲ್ಲಿ ನಾಲ್ವರೂ ರಘುವಂಶ ಸಂಜಾತರಿಗೆ ವೇದವಾದಿಗಳೆನಿಸಿದ್ದ ಬ್ರಾಹ್ಮಣರಿಂದ ಒಂದೇ ಮಹೂರ್ತದಲ್ಲಿ ನಡೆಯಿತು. ನಂತರ ವಶಿಷ್ಠರು ವಿಶ್ವಾಮಿತ್ರರ ಸಮ್ಮತಿ ಪಡೆದು ಹೋಮ ಕಾರ್ಯವನ್ನು ಪೂರೈಸಿದರು. ದೇವಶ್ರೇಷ್ಠರು, ಗಂಧರ್ವರು, ನರ್ತಕಿಯರು, ಪ್ರಜೆಗಳು ಎಲ್ಲರೂ ಆ ಮಹೋತ್ಸವದಲ್ಲಿ ನಲಿದಾಡಿದರು.


ರಾಮನಿಗೆ ಸೀತೆ, ಲಕ್ಷ್ಮಣನಿಗೆ ಊರ್ಮಿಳಾ, ಮಾಂಡವಿ (ಮಾಲವಿ) ಭರತನಿಗೆ, ಶೃತಕೀರ್ತಿಯು ಶತೃಘ್ನನಿಗೆ ಪತ್ನಿ ಆದರು. ಸೀತಾ ರಾಮರಿಗೆ ಆರತಿ ಬೆಳಗಿದರು. ರಾಜನಾದ ಜನಕನು ವಸಿಷ್ಠ ಮೊದಲಾದ ಪುರೋಹಿತರನ್ನು, ಇತರ ಬ್ರಾಹ್ಮಣರನ್ನು ಉತ್ತಮ ಕಲ್ಪದ ಧನದಿಂದ ಸತ್ಕರಿಸಿದನು. ಈ ವರೆಗೆ ರಾಮಲಕ್ಷ್ಮಣರನ್ನು ಹಿಂಬಾಲಿಸಿದ ವಿಶ್ವಾಮಿತ್ರರು ತಮ್ಮ ಕಾರ್ಯ ಪೂರೈಸಿದರು. ಅಲ್ಲಿಂದ ಬೀಳ್ಕೊಂಡು ತಮ್ಮ ಆಶ್ರಮಕ್ಕೆ ತೆರಳಿದರು. ಜನಕರಾಜನು ತನ್ನ ಅಳಿಯಂದಿರಿಗೆ ಉಡುಗೊರೆಯನ್ನು ನೀಡಿದನು. ರೇಷ್ಮೆ ವಸ್ತ್ರಗಳನ್ನು, ನವರತ್ನಗಳ ರಾಶಿಯನ್ನು, ಲಕ್ಷ ಗೋವುಗಳನ್ನು, ಚಿನ್ನವನ್ನು ದಾಸ-ದಾಸಿಯರನ್ನು ನೀಡಿದನು. 


ಹರಿದಾಸರ ಪದಗಳಲ್ಲಿ ಸೀತಾ ಕಲ್ಯಾಣ:


ವರದೇಶ ವಿಠ್ಠಲರ - ಸ್ಮರಿಸುವೆನು. ಸದ್ಭಕ್ತಿಯಲಿ ಕೃತಿ 

"ಜನಕ ಭೂಪತಿ ತನುಜಳೆನಿಸಿದ ಸೀತೆಯ ಭೂ ಜಾತೆಯ ಘನ ಹರುಷದಲಿ ಒಲಿಸಿ 

ಕರವನು ಪಿಡಿದನ ಯಶ ಪಡೆದನ ||"


. ಗುರು ಜಗನ್ನಾಥದಾಸರ ಕೃತಿ - ಶ್ರೀಮದ್ರಾಮ ಭಜನೆ,

        "ಸುದತಿಯು ನೀಡಿದ ಪದುಮದ ಮಾಲೆಯ

ಮುದದಲಿ ಧರಿಸಿದ ರಾಮ ||

ಜಾನಕಿ ಸೊಗಸಿನ ಆನನ ಕಮಲಕೆ

ಭಾನುವಾದನು ರಾಮ ||"


. ಪ್ರಸನ್ನ ಶ್ರೀನಿವಾಸ ದಾಸರ ಕೃತಿ :- ನಿರ್ಣಯ ರಾಮಾಯಣ

"ಅತಿ ಮುದದಲಿ ದಶರಥನು | ಅರಸೀರು ಸುತರು ಸೇನೆಗಳು |

ಅಜಸುತ ವಶಿಷ್ಠರ ಕೂಡಿ | ಅಹ | ಅವನಿಯೋಳ್ ಪ್ರಖ್ಯಾತ ಮಿಥಿಲಾ

ಪುರಿಗೆ ಬಾರೆ | ಆನಂದದಿಂದಲಿ ಜನಕನರ್ಚಿಸಿದ || 17 ||

ವಿಯನ್ಮಂಡಲದಲಿ ಎಲ್ಲೂ | ವಿಮಾನಾವಳಿಯಲ್ಲಿ ಸುರರು |

ವರಗಂಧರ್ವರು ಸಹಸ್ರಾರು | ಅಹ | ವಿಶ್ವಾಮಿತ್ರರನು ಮೋದದಿ

ವಶಿಷ್ಠರು | ವಿಧಿಯಿಂದ ವಿವಾಹ ಚರಿಸೆ ನೋಡಿದರಾಗ || 18 ||

ಅತಿ ಹರುಷದಿಂದ ಜನಕ | ಆನೆ ರಥ ರತ್ನ ವಸನಾ |

ಅಖಳೇಶನಿಗೆ ಅರ್ಪಿಸಿದ | ಅಹ | ಅವರಜ ಲಕ್ಷ್ಮಣ ಭರತಾದಿಹರಿಗೆ 

ಅಂಗನೆ ಶೇಷ್ಠರು ಮೂವರ ಕೊಟ್ಟ || 21 ||"


. ಕಾಖಂಡಕಿ ಕೃಷ್ಣರಾಯರು - ಭಾವಾರ್ಥ ರಾಮಾಯಣ.

"ಈರೆಂಟು ಉಪಚಾರದಿ ಪೂಜಿಸಿ | ಮಧುಪರ್ಕ ಮೊದಲಾಗಿ ಮಾಡಿ |

ಸಾರಿಹ ಜೀವಾತ್ಮರೊಳು ಮಾಯಾ ಪಡಲಂತೆ ಹಿಡಿದರಂರ‍್ಪಟವ ನೋಡಿ |

ಸಾರುವ ಶೃತಿವಾಕ್ಯ ಬೋಧಿಸಿ ಸದ್ಗುರು ಸಾವಧಾನವೆಂದು ಗೂಡಿ |

ಕಾರುಣಿ ಗುರು ಮಹಿಪತಿಪ್ರಭು ಮಹಿಮೆಯ ಮಂಗಲಾಷ್ಟಕದಲಿ ಪಾಡಿ ||"


ಈ ಕೃತಿಯಲ್ಲಿ ಸೀತಾರಾಮ ಕಲ್ಯಾಣದ ವರ್ಣನೆ ಐವತ್ತು ನುಡಿಗಳಿಗೆ ಮೀರಿ ಇದೆ.


. ಪ್ರಸನ್ನ ವೆಂಕಟದಾಸರು - ಸೀತಾ ರಾಮರಿಗೆ ಆರತಿ ಹಾಡು.

"ಸ್ವಾಮಿಗೆ ಜಯ ಸ್ವಾಮಿಗೆ ಜಯ ಜಯವೆಂದು ಪಾಡಿ |

ಜಾನಕಿ ರಾಮಗಾರುತಿಯ ಬೆಳಗಿರೆ |

ಋಷಿಮಖವನು ಈಕ್ಷಿಸಿ ರಕ್ಷಿಸಿ | ವಿಷಯಮಾಚರಿ ರಾಕ್ಷಸಿ ಶಿಕ್ಷಿಸಿ |

ವಿಷಕಂಠನ ಧನುವ ಮುರಿದು | ವೈದೇಹಿಯ ಘನ ತುಷಿಸಿದ ಗಾರತಿ ಬೆಳಗಿರೆ ||



ಪರಶುರಾಮನ ಸಮಾಗಮ, ಅಯೋಧ್ಯಯತ್ತ ಪಯಣ:


ದಶರಥ ರಾಜನು ಜನಕನ ಅನುಮತಿ ಪಡೆದು ಬ್ರಾಹ್ಮಣರು, ತನ್ನ ಸೈನ್ಯ, ಪತ್ನಿಯರು, ಮಕ್ಕಳು ಸೊಸೆಯಂದಿರ ಸಹಿತ ತನ್ನ ಪಟ್ಟಣವಾದ ಅಯೋಧ್ಯೆಯ ಕಡೆಗೆ ಹೊರಟನು. ಶಕುನ ಬಲ್ಲವನಾದ ದಶರಥನು ಹಾದಿಯಲ್ಲಿ ತನಗೆ ವಿಪತ್ತು ಬರಬಹುದೆಂದು ಶಂಕಿಸಿ ಪುರೋಹಿತರಾದ ವಶಿಷ್ಠರಿಗೆ ಹೇಳಿದನು. ಭಯ ಒದಗುವಂತಿದೆ. ಅದಕ್ಕೆ ಪರಿಹಾರ ದೊರೆಯಲಿ ಎಂದರು. ಅಷ್ಟರಲ್ಲಿ ಪರಶುರಾಮರು ಮೈದೋರಿದರು. ಇಪ್ಪತ್ತೊಂದು ಬಾರಿ ಪೃಥ್ವಿ ಪ್ರದಕ್ಷಿಣೆ ಮಾಡಿ ಕ್ಷತ್ರಿಯರ ಸಂಹಾರ ಮಾಡಿದ ಪರಶುರಾಮರನ್ನು ಕಂಡು ದಶರಥ ಸಾಷ್ಟಾಂಗ ಪ್ರಣಾಮ ಮಾಡಿ ಭೀತನಾಗಿ "ಪ್ರಭು, ನನ್ನ ಮಗನನ್ನು ಕೊಲ್ಲಬೇಡ", ಪರಶುರಾಮನ ಉಗ್ರರೂಪ ನೋಡಿ ವಶಿಷ್ಠಾದಿಗಳು ಶಾಂತನಾಗೆಂದು ಪ್ರಾರ್ಥಿಸಿದರು. ಪರಶುರಾಮ, ಶ್ರೀರಾಮ ಇಬ್ಬರೂ ಶ್ರೀಹರಿ ಅವತಾರ, ಅವತಾರಗಳಲ್ಲಿ ಪೂರ್ಣ ಅಭೇದ ತೋರುವದಕ್ಕಾಗಿ ಪರಶುರಾಮರು ಬಂದಿದ್ದರು. ಅದರ ಪೂರ್ವಾಪರ ತಿಳಿಸಿದರು.


ಹಿಂದೆ ಎರಡು ಧನುಸ್ಸುಗಳು ವಿಶ್ವಕರ್ಮನಿಂದ ನಿರ್ಮಿತವಾದವು. ಒಂದು ಪಿನಾಕ ಅದನ್ನು ದೇವತೆಗಳು ಶಿವನಿಗೆ ತ್ರಿಪುರಾಸುರ ಸಂಹಾರಕ್ಕಾಗಿ ಕೊಟ್ಟರು. ಅದನ್ನು ದೈತ್ಯಸಂಹಾರ ಮಾಡಿ ಶಿವನು ಜನಕರಾಜನ ಹತ್ತಿರ ಕೊಟ್ಟಿದ್ದ. ಅದನ್ನು ಶ್ರೀರಾಮ ಮುರಿದಿದ್ದಾನೆ. ಇನ್ನೊಂದು ಶಾರ್ಙ್ಗ ಧನುಸ್ಸು ಇದನ್ನು ವಿಷ್ಣು ಋಚೀಕರಲ್ಲಿ ನ್ಯಾಸವಾಗಿಟ್ಟಿದ್ದ. ಅದು ಜಮದಗ್ನಿ ಮೂಲಕ ಈಗ ಪರಶುರಾಮರ ಹತ್ತಿರ ಇದೆ. ಪರಶುರಾಮರು ಆ ಶಾರ್ಙ್ಗಧನುಸ್ಸನ್ನು ಕೊಟ್ಟು ರಾಮನಿಗೆ ಹೇಳಿದರು. ಇದನ್ನು ಹೆದೆ ಏರಿಸು ಎಂದರು.


ಅತುಲ ದೈತ್ಯನೆಂಬವ ಬ್ರಹ್ಮನ ವರದಿಂದ ಲೋಕಮಯತ್ವವನ್ನು ಸಂಪಾದಿಸಿ ಅವಧ್ಯತ್ವ ಬಯಸಿ ಪರಶುರಾಮ ದೇವರ ಹೊಕ್ಕಳಲ್ಲಿ ಆಶ್ರಯ ಪಡೆದಿದ್ದ, ಅವರಿಗೆ ಸೋಲಿಲ್ಲ. ಅವರಲ್ಲಿದ್ದರೆ ನನಗೂ ಸಾವಿಲ್ಲ ಎಂದು ನೆಲೆಸಿದ್ದ. ಈಗ ಪರಶುರಾಮರು ಅತುಲಗೆ ಹೇಳಿದರು - ನೋಡು ಈ ರಾಮ ನನ್ನನ್ನು ಸೋಲಿಸ್ತಾನೆ. ನೀನು ಹೊರಗೆ ಬಂದು ಉಳಿದುಕೋ! ಎಂದಾಗ ಅತುಲ ಗಾಬರಿಯಾಗಿ ಹೊರಬಂದ, ಶ್ರೀರಾಮನು ಬಾಣವನ್ನು ಬಿಟ್ಟು, ರಾಕ್ಷಸನ ಮೂಲರೂಪವೇ ನಾಶವಾಗಿ ಅವನ ಲೋಕಮಯತ್ವ ಎಲ್ಲ ಪೂರಾ ನಾಶವಾಯಿತು.


ತನ್ನ ಭಕ್ತಜನರಲ್ಲಿಯ ಕಾರುಣ್ಯದಿಂದ ಪರಶುರಾಮ ತನ್ನ ರೂಪಗಳಲ್ಲಿ ಅತ್ಯಂತ ಅಭೇದವನ್ನು ತೋರುತ್ತ ಮೊದಲಿಗೆ ಭಿನ್ನನಂತಿದ್ದು ತನ್ನ ರೂಪವೇ ಆದ ರಾಮನೊಡನೆ ಎಲ್ಲರ ಸಮಕ್ಷಮದಲ್ಲಿ ಐಕ್ಯಹೊಂದಿ ಮತ್ತೆ ಪ್ರಕಟನಾಗಿ ನಿಂತ. ಇದೆಲ್ಲವನ್ನು ನೋಡಿ ಪರಶುರಾಮನು ತೃಪ್ತಿಯಿಂದ ಮಹೇಂದ್ರ ಪರ್ವತಕ್ಕೆ ಹೊರಟನು. ಪರಶುರಾಮನು ಹೊರಟು ಹೋಗಿಂದ ದಾಶರಥಿ ರಾಮನು ಅಪ್ರಮೇಯನಾದ ವರುಣನ ಕೈಯಲ್ಲಿ ವೈಷ್ಣವ ಧನು ಬಾಣಗಳನ್ನು ನೀಡಿದನು.


ಅಯೋಧ್ಯೆಗೆ ಆಗಮನ :

ಬಳಿಕ ಶ್ರೀರಾಮನು ವಶಿಷ್ಠಾದಿ ಋಷಿಗಳಿಗೆ ಅಭಿವಾದನ ಮಾಡಿ ತಂದೆ ದಶರಥನ ಆಜ್ಞೆಯಿಂದ ಚತುರಂಗ ಸೈನ್ಯದೊಡನೆ ಎಲ್ಲ ಪರಿವಾರ ಸಮೇತ ಅಯೋಧ್ಯೆಗೆ ನಡೆದರು. ಅಯೋಧ್ಯೆಯ ಪುರಜನರೆಲ್ಲ ವಧುವರರನ್ನು ನೋಡಲು ನಗರವನ್ನೆಲ್ಲ ಸಿಂಗರಿಸಿ ಸ್ವಾಗತಿಸಿ ಮಂಗಲ ಗೀತೆ ಹಾಡುತ್ತ ನಲಿದಾಡಿದರು. ಅಯೋಧ್ಯೆಯಲ್ಲಿ ಎಲ್ಲ ಪ್ರಜೆಗಳಿಗೆ ಪ್ರಿಯನಾಗಿ ಹಿರಿಯರ, ಋಷಿ ಬ್ರಾಹ್ಮಣರ ಸಂತೋಷಪಡಿಸುತ್ತ ಸೀತೆಯೊಂದಿಗೆ ಹನ್ನೆರಡು ವರ್ಷಕಾಲ ವಿಹಾರ ಮಾಡಿದ.


ಹರಿದಾಸರ ಪದಗಳಲ್ಲಿ ಪರಶುರಾಮರ ಸಮಾಗಮ :

ವಿಜಯದಾಸರು : ರಾಮಾಯಣ ಸುಳಾದಿ

"ಜನಕರಾಜನ ನಂದಿಯ ನೆರೆದು | ಅನುಪಥದೊಳಗೆ ಭೃಗುತನುಜನ ಪೊಕ್ಕಳಲಿ |

ದನುಜ ಸೇರಿರಲು ಬಾಣದಲಿ ಸೆದೆದು | 

ತನಗೆ ತಾನೆ ಲೀಲೆದೋರಿದ ಮಹಾದೈವ | ಆತನೇ ಕಾಣಿರೊ ಗೋಹಿತ ವಿಜಯ ವಿಠ್ಠಲರಾಮಾ ||"


. ಪ್ರಸನ್ನ ಶ್ರೀನಿವಾಸ ದಾಸರು: ನಿರ್ಣಯ ರಾಮಾಯಣ

"ಅವನಿಜಾಪತಿ ಹರಿಣೀಶ | ಅವತಾರ ಎರಡರೊಳು ನೀನು |

ಅಮಿತ ಸುಶಕ್ತ ಅಭೇದ | ಅಹ |

ಅತುಳ ಭಾರ್ಗವ ಭೀತಿಪಟ್ಟಂತೆ ನೆನೆಯೆ ನೀ |

ಅಸ್ತ್ರದಿ ಅಸುರನ್ನ ಭಸ್ಮ ಮಾಡಿದಿಯೊ || 27 ||

ಭಕ್ತ ಜನರಿಗೆ ಸತ್ತತ್ವ 'ಬಹು ನೀಚಜನರಿಗೆ ಮೋಹ |

ಬೋಧಿಸಿತು ನಿನ್ನೀ ಲೀಲಾ | ಅಹ |

ಭಾರ್ಗವ ರಾಘವ ರೂಪಗಳೊಂದಾಗಿ | 

         ಬಿಡಿಸಿದೀ ಸುಜನರ ಶಂಕಾ ದಯಾನಿಧೇ || 28 ||"


. ಕಾಖಂಡಕಿ ಕೃಷ್ಣರಾಯರು - ಭಾವಾರ್ಥ ರಾಮಾಯಣ

"ಈ ರೀತಿಯಲಿ ಆಡಿದಾ ಭೃಗುರಾಮರ ಲೀಲಾ ಇದು |

ಧಾರುಣಿಯೊಳು ಸಾಧು ಸಜ್ಜನರಿಗೆ ಆನಂದಕರ ನೀವದು |

ದಾರಿ ತಪ್ಪಿದ ದುಷ್ಟ ತಾಮಸರಿಗೆ ಮೋಹಕವನೆ ತೋರಿತು |

ಶ್ರೀರಾಘವನ ಶೌರ್ಯನೋಡಿ ನೃಪನಾ ಸಂತೋಷ ಉಕ್ಕೇರಿತು ||"


. "ಧರಿಗಗನ ಸಾಲದಾ ನೃಪನ ಹರುಷವ ನೋಡೆ |

ನೆರೆ ಪಯಣದಿಂದ ಬರುತಾ ತ್ವರಿತಾ |

ಪುರವ ಶೃಂಗರಿಸಲು ತಳಿಗೆ ತೋರಣದಿಂದಾ |

ಮೆರೆಸುತಲಿ ವಧುವರರ ತಾನು ||

ಸರಸ ಗಾಯನ ನೃತ್ಯದಿಂದ ಊರ್ವಶಿ ಮುಖ್ಯ |

ಸುರಸ್ತ್ರೀಯರಾಟದಿಂದಾ ಛಂದಾ |

ಮೆರೆವ ದುಂದುಭಿಗಳಿಂದಂಬರದಿ ನಿರ್ಜರರು |

ಅರಳ ಮಳೆಗರೆಯೆ ಜಯದಾ ರವದಾ ||"


ಫಲಸ್ತುತಿ :- 

"ಸೀತಾ ಕಲ್ಯಾಣ" ಎಂಬ ಅಮೃತೋಪಮ ಪ್ರಸಂಗದ ಚಿಂತನೆ, ಪಠಣಿ, ಪೂಜಿಸುವದು, ಉತ್ಸವ ಮಾಡಿ ಸಂಭ್ರಮಿಸುವುದು ಎಲ್ಲವೂ ಅನಂತ ಫಲದಾಯಕವಾಗಿವೆ. ಇದರಿಂದ ಕನ್ಯಾರ್ಥಿಗಳಿಗೆ ಕನ್ಯೆ, ವರಾರ್ಥಿಗಳಿಗೆ ವರ ದೊರೆತು ವಿವಾಹ ಕೈಗೂಡುವದು. ಕುಟುಂಬದಲ್ಲಿಯ ಅನೇಕ ಕಷ್ಟ ಪರಿಹಾರವಾಗಿ ಇಷ್ಟಾರ್ಥ ದೊರೆಯುವದು. ಸೀತಾ ರಾಮಚಂದ್ರರ ಪ್ರೀತಿಯಾಗಿ ಸರ್ವಾರ್ಥ ಸಿದ್ಧಿಯಾಗುವದು.

ವಿವಾಹ ಎನ್ನುವದೊಂದು ಪವಿತ್ರ ಸಂಬಂಧ. ಈ ಸಂಬಂಧವನ್ನು ಅದರ ಉದ್ದೇಶಗಳನ್ನು ವಿರೂಪಗೊಳಿಸಿ ಸಾರ್ಥಕವಾಗಬೇಕಾದ ಬದುಕನ್ನು ನಿರರ್ಥಕ, ದುಃಖದಾಯಕ ಮಾಡುವದು ಬೇಡ. ಯಾವುದೇ ಮನುಷ್ಯರ ಮದುವೆ ಆದರೂ ಅದು ಸಿರಿ-ನಾರಾಯಣರದೇ ಮದುವೆ. ಅದೇ ಸೀತಾ ಕಲ್ಯಾಣ ಎಂಬ ಅನುಸಂಧಾನ ಇದ್ದರೆ ಅದೇ ಮುಕ್ತಿಸಾಧನವೂ ಆಗ್ತದೆ.

"ಮದುವೆ ಎನಿಪದಿದು ಸಿರಿ ನಾರಾಯಣರಿಗೆ

ಪದವಿಗೆ ಸೋಪಾನ ಗುರು ವಿಜಯ ವಿಠ್ಠಲ ಒಲಿವ"

ಸೀತಾ-ರಾಮರು ಅನಾದಿಯಿಂದ ದಂಪತಿಗಳು. ಅವತಾರ ಮಾಡಿದಾಗ ಭಕುತರಿಗಾಗಿ ಮಾನವಧರ್ಮ ತಿಳಿಸಲು ಒಲುಮೆಯಿಂದ ಮದುವೆ ಆಗ್ತಾರೆ, "ಒಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡ ಸುಲಭದೇವರ ದೇವ ವಿಜಯ ವಿಠ್ಠಲ" 




-ಡಾ ಭಾರತಿ. ಹ. ಪಾಟೀಲ


ಲೇಖಕರ ಸಂಕ್ಷಿಪ್ತ ಪರಿಚಯ:

ಉದ್ಯೋಗ : ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಅಧ್ಯಾಪಕಿ (ಈಗ ನಿವೃತ್ತ). ಹುಟ್ಟಿದ ಮನೆಯ ಸಂಸ್ಕಾರದಿಂದ ಬಾಲ್ಯದಿಂದಲೇ ಅಧ್ಯಾತ್ಮವಿದ್ಯೆ,  ದಾಸ ಸಾಹಿತ್ಯದಲ್ಲಿ  ಆಸಕ್ತಿ. ಟಿ.ಟಿಡಿಯವರ ದಾಸ ಸಾಹಿತ್ಯ ಪ್ರಾಜೆಕ್ಟನವರು ನಡೆಸುವ ರಸಪ್ರಶ್ನೆ ಕಾರ‍್ಯಕ್ರಮಗಳಲ್ಲಿ ನಿರ್ಣಾಯಕರಾಗಿ ಸೇವೆ ಸಲ್ಲಿಕೆ ಉತ್ತರಾದಿಮಠದ ಶ್ರೀ ಗಳಿಂದ ಸಂಪೂರ್ಣ ಹರಿಕಥಾಮೃತಸಾರ ಪರೀಕ್ಷೆಯ ಯಶಸ್ವಿಗಾಗಿ "ಅಮೃತ ಕಂಠ ಶ್ರೀ" ಎಂಬ ತಾಮ್ರ ಫಲಕದ ಪ್ರಮಾಣ ಪತ್ರ.ರಾಯರಮರದ ಶ್ರೀ ಗಳಿಂದ ಸಂಪೂರ್ಣ ಹರಿಕಥಾಮೃತಸಾರ ಪರಿಕ್ಷೆಯ ಯಶಸ್ವಿಗಾಗಿ 32,000 ರೂ ಮತ್ತು ಫಲಮಂತ್ರಾಕ್ಷತೆ. ಈಗ ಸೌರಭದಾಸ ಸಾಹಿತ್ಯ ವಿದ್ಯಾಲಯದ ದಾಸಸಾಗರ  ಮತ್ತು ದಾಸಚಿಂತನಮಣಿ ವರ್ಗದ ವಿದ್ಯಾರ್ಥಿನಿ .


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top