ಕರ್ನಾಟಕ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀವ್ಯಾಸರಾಯರು

Upayuktha
0

(ಮಾರ್ಚ್ 29, ಗುರುಗಳ ಆರಾಧನೆ ಪ್ರಯುಕ್ತ ಲೇಖನ)



|| ಅರ್ಥಿಕಲ್ಪಿತ ಕಲ್ಪೋಯಂ ಪ್ರತ್ಯರ್ಥ ಗಜಕೇಸರಿ|

ವ್ಯಾಸರಾಜ ಗುರುರ್ಭೂಯಾತ್ ಅಸ್ಮದಿಷ್ಟಾರ್ಥ ಸಿದ್ಧಯೇ||


ವಿದ್ಯಾಗುರುಗಳಾದ ಶ್ರೀ ಶ್ರೀಪಾದರಾಜರಿಂದಲೇ "ಸಾಸಿರ ಜಿಹ್ವೆಗಳುಳ್ಳ ಶೇಷನೇ ಕೊಂಡಾಡಬೇಕು ವ್ಯಾಸಮುನಿರಾಯರ ಸನ್ಯಾಸದಿರವ" ಎಂದು ಗುರುಗಳಿಂದ ಕೊಂಡಾಡಿಸಿಕೊಂಡ ಭವ್ಯಚೇತನ ಶ್ರೀವ್ಯಾಸರಾಜರು.


ಮುಂದೆ ಅವರೇ ಶೇಷಾಂಶ ಧರಿಸಿ ಬನ್ನೂರು ಎಂಬಲ್ಲಿ ಜನಿಸಿದರು. ಶ್ರೀ ಬ್ರಹ್ಮಣ್ಯತೀರ್ಥರ ಲಾಲನೆ ಪಾಲನೆ ಪೋಷಣೆಯಲ್ಲಿ ಬೆಳೆದರು. ಮುನಿರತ್ನರಾದ ಶ್ರೀ ಶ್ರೀಪಾದರಾಜರಲ್ಲಿ ವಿದ್ಯಾಸಂಪನ್ನರಾದರು. ಅನ್ಯಮತಗಳ ಮಿಥ್ಯೆಯನ್ನು ನಿವಾರಿಸಿದರು. ಹರಿಕಾರುಣ್ಯಕ್ಕೆ ಪಾತ್ರರಾದರು. ಗುರುವ್ಯಾಸಮುನಿರಾಯ ಎಂದು ಜಗತ್ಪ್ರಸಿದ್ಧರಾದರು. ಸಜ್ಜನರಿಗೆ ಸಕಲಶಾಸ್ತ್ರ, ವಿಶೇಷವಾಗಿ ನ್ಯಾಯಶಾಸ್ತ್ರ ಅರುಹಿದರು. ಯೋಗ್ಯರನ್ನೆಲ್ಲಾ ಉದ್ಧರಿಸಿದರು. ಜ್ಞಾನ ಭಕ್ತಿ ವೈರಾಗ್ಯನಿಧಿಗಳೆನಿಸಿಕೊಂಡರು. ಚತುರಾಶ್ರಮದ ಚತುರ ಯತಿಗಳೆನಿಸಿಕೊಂಡರು. ಭರತಖಂಡದಲ್ಲಿ ದೇಶೋವಿಶಾಲ ಕೀರ್ತಿಪತಾಕೆ ಹಾರಿಸಿದರು.


ಶಾಸ್ತ್ರಪ್ರಪಂಚದ ರತ್ನತ್ರಯವೆಂದೇ ಖ್ಯಾತವಾದ ಚಂದ್ರಿಕಾ, ನ್ಯಾಯಾಮೃತ, ತರ್ಕತಾಂಡವ ಎಂಬ ಸದ್ಗ್ರಂಥಗಳನ್ನು ರಚಿಸಿದರು. ಮಧ್ವಸಿದ್ಧಾಂತವನ್ನು ಜಗತ್ತಿನ ಉತ್ತುಂಗಶೃಂಗಕ್ಕೆ ಎತ್ತಿಹಿಡಿದರು. ಜನಸಾಮಾನ್ಯರಿಗೆ ಭಕ್ತಿಭರಿತ ಸಾಂಸ್ಕೃತಿಕ ಸದಾಶಯಗಳು ಚಿಗುರುವಂತೆ ಮಾಡಿದರು.

  

ವಿಜಯನಗರದಲ್ಲಿ ಬೃಹತ್ ವಿಶ್ವವಿದ್ಯಾನಿಲಯ ಒಂದನ್ನು ಸ್ಥಾಪಿಸಿದರು. ಭಕ್ತಿಪಂಥದ ಬೀಜವನ್ನು ವ್ಯಾಪಕವಾಗಿ ಎಲ್ಲೆಡೆ ಬಿತ್ತಿದರು. ಬನ್ನೂರಿನಲ್ಲಿ ಜನಿಸಿದ ಬಾಲಕನ ಪ್ರತಿಭೆ, ಜ್ಞಾನತೃಷೆ, ಸದಾಚಾರ, ಆರೋಗ್ಯ, ವಿಷಯ, ಭಕ್ತಿ, ಶ್ರದ್ಧೆ ಎಲ್ಲವನ್ನೂ ಗಮನಿಸಿದ ಬ್ರಹ್ಮಣ್ಯತೀರ್ಥರು "ಶ್ರೀವ್ಯಾಸತೀರ್ಥರು" ಎಂಬ ಅಭಿದಾನದಿಂದ ಸನ್ಯಾಸಾಶ್ರಮ ನೀಡಿದರು.


ಮುಂದೆ ತಲಸ್ಪರ್ಶಿ ಜ್ಞಾನ ಪಡೆಯಲು ಮುಳಬಾಗಿಲಿನ ಶ್ರೀ ಶ್ರೀಪಾದರಾಜರಲ್ಲಿಗೆ ಶಿಷ್ಯನಾಗಿ ಶ್ರೀ ವ್ಯಾಸರಾಜರು ಆಗಮಿಸಿದರು. ಶ್ರೀ ವ್ಯಾಸರಾಜರಂತಹ ಪ್ರತಿಭಾವಂತರಿಗೆ, ಮೇಧಾವಿಗಳಿಗೆ, ಕುಶಾಗ್ರಮತಿಗಳಿಗೆ, ಏಕಸಂಧಿಗ್ರಾಹಿಗಳಿಗೆ, ಪ್ರಚಂಡಧೀಶಕ್ತಿ ಸಂಪನ್ನರಿಗೆ ಶ್ರೀ ಶ್ರೀಪಾದರಾಜರು ಸಮಸ್ತ ವಿದ್ಯೆಯನ್ನು ತಪಸ್ಸಿನಂತೆ ಧಾರೆಯೆರೆದರು. ವೇದ, ಶೃತಿ, ಸ್ಮೃತಿ, ಶಾಸ್ತ್ರ, ಪುರಾಣ, ವ್ಯಾಕರಣ, ಛಂದಸ್ಸು, ತರ್ಕ, ಮೀಮಾಂಸೆ, ನವೀನನ್ಯಾಯ ಪದ್ಧತಿಗಳಲ್ಲಿ ಅಭಿನವ ಬೃಹಸ್ಪತಿಯಂತಿದ್ದರು. ಸಾಹಿತ್ಯ, ಸಂಗೀತ, ಕಲೆಗಳೆಲ್ಲ ಶ್ರೀ ವ್ಯಾಸರಾಜರ ಕರತಲಾಮಲಕವಾಗಿದ್ದು, ಅವರೊಂದು  ಭವ್ಯವಿಶ್ವಕೋಶದಂತಿದ್ದರು. ದೇವಾನುದೇವತೆಗಳಿಂದಲೇ ಭರದಿಂದ ವಾಲಗವನ್ನು ಕೈಕೊಳ್ಳುತ್ತ, ಗುಣನಿಧಿ ವಿಜಯವಿಠ್ಠಲರೇಯನ ನೆರೆ ನಂಬಿ ಪ್ರತಿದಿನ ಅವರನ್ನು ಮೆರೆಸಿ ಮೈಮರೆಯುತ್ತಿದ್ದರು .


ಅಂತರಂಗದಲ್ಲಿ ಹರಿಯನ್ನು ಕಾಣುವ ರೀತಿಯನ್ನು ಬಹಳ ಮನೋಜ್ಞವಾಗಿ ತಿಳಿದವರು. ಹರಿಯನ್ನು ಕಾಣದ ಮನುಷ್ಯನಿಗೆ, ಇಂದ್ರಿಯಗಳಿದ್ದು ಫಲವೇನು ಎಂಬ ಸತ್ಯವನ್ನು ತಿಳಿಸಿದವರು. ಸಂತರೊಬ್ಬರು ಏನೆಲ್ಲ ಸಮಾಜಮುಖಿ ಕೆಲಸಗಳನ್ನು ಮಾಡಬಹುದು ಎನ್ನುವುದಕ್ಕೆ ಶ್ರೀ ವ್ಯಾಸರಾಜರ ಅನನ್ಯವಾದ ಕೊಡುಗೆಗಳೇ ಸಾಕ್ಷಿ. ಕೃಷಿಕರಿಗೆ, ಸಮಾಜಕ್ಕೆ ಅತ್ಯವಶ್ಯಕವಾದ ಅನೇಕ ಕೆರೆಗಳನ್ನು ನಿರ್ಮಾಣ ಮಾಡಿದವರು. ಕೃಷ್ಣದೇವರಾಯನ ಆಸ್ಥಾನಕ್ಕೆ ರಾಜಗುರುಗಳಾಗಿದ್ದ ಶ್ರೀ ವ್ಯಾಸರಾಯರು ಅನ್ನದಾನಕ್ಕಾಗಿ ಅನೇಕ ಅಗ್ರಹಾರಗಳನ್ನು ನಿರ್ಮಿಸಿದ್ದರು. 730ಕ್ಕೂ ಹೆಚ್ಚು ಹನುಮಂತನನ್ನು ಪ್ರತಿಷ್ಠಾಪಿಸಿದ ಸಂತಶ್ರೇಷ್ಠರು. ಶ್ರೀ ವ್ಯಾಸರಾಯರ ತಪೋಭೂಮಿಯಾದ ಹಂಪೆಯಲ್ಲಿ ಶ್ರೀ ಯಂತ್ರೋದ್ಧಾರಕ ಮುಖ್ಯಪ್ರಾಣನ ಪ್ರತಿಷ್ಟಾಪನೆ.


ಮಧ್ವಮತದ ಮುನಿತ್ರಯರಲ್ಲಿ ಒಬ್ಬರೆನಿಸಿಕೊಂಡ ಶ್ರೀ ವ್ಯಾಸರಾಯರು, 'ಈಸುಮುನಿಗಳಿದ್ದರೇನು ವ್ಯಾಸಮುನಿರಾಯ ಮಧ್ವಮತವನುದ್ಧರಿಸಿದ' ಎಂದು ಶಿಷ್ಯರಾದ ಪೂತಾತ್ಮ ಶ್ರೀ  ಪುರಂದರದಾಸರಿಂದ ಬಂದ ನುಡಿಮುತ್ತಿದು. ನೂರಾರು ಕೀರ್ತನೆಗಳನ್ನು ರಚಿಸಿ ಪುರಂದರದಾಸರು ಮತ್ತು ಕನಕದಾಸರಿಗೆ ದಾಸ ದೀಕ್ಷೆ ಇತ್ತು ಸಾವಿರಾರು ದೇವರನಾಮಗಳನ್ನು ಪ್ರಚರಪಡಿಸಿದವರು. ವ್ಯಾಸರಾಯರು ಕನ್ನಡ ದೇವರನಾಮಗಳನ್ನು ರಚಿಸಿದ್ದಲ್ಲದೆ, ವ್ಯಾಸತ್ರಯ, ರತ್ನತ್ರಯಗಳೆಂದೇ ಪ್ರಸಿದ್ಧಿಯಾದ ಚಂದ್ರಿಕಾ, ನ್ಯಾಯಾಮೃತ ತರ್ಕತಾಂಡವಾದಿ ಹಲವಾರು ಕೃತಿಗಳನ್ನು ರಚಿಸಿ ಆಚಾರ್ಯ ಮಧ್ವರ ಸಿದ್ಧಾಂತವನ್ನು ಎತ್ತಿ ಹಿಡಿದ ಸಾರಸ್ವತ ಲೋಕದ ದಿವ್ಯಚೇತನ ಶ್ರೀ ವ್ಯಾಸರಾಯರು. ಶ್ರೀ ವ್ಯಾಸರಾಜರು "ಭೀಷ್ಮ ಪಿತಾಮಹರಂತೆ ಇದ್ದವರು. ಶ್ರೀ ವಾದಿರಾಜರು, ಶ್ರೀ ವಿಜಯೀಂದ್ರರು, ಶ್ರೀ ಕನಕದಾಸರು, ಶ್ರೀ ಪುರಂದರದಾಸರೂ ಇದ್ದಂಥ ಕಾಲ. ಪಾಠ, ಪ್ರವಚನ, ಗ್ರಂಥ ರಚನೆ, ಕಾವ್ಯ ರಚನೆ, ವಾಕ್ಯಾರ್ಥ ವಿನೋದಗಳಲ್ಲಿ ಯತಿಪುಂಗವರು ಮುಳುಗಿ ಹೋಗುತ್ತಿದ್ದರು.  ಮುಂತಾದವರೆಲ್ಲಾ ಜೊತೆಯಲ್ಲಿ ಇದ್ದಂತಹ ಸುದಿನಗಳು. ಪರಸ್ಪರ ಪ್ರೀತಿ, ಆದರದಿಂದ ಭಕ್ತ್ಯಾದರಗಳಿಂದ ವರ್ತಿಸುತಿದ್ದರು. ಕನ್ನಡ ಪದ, ಪದ್ಯ ಸುಳಾದಿ ಉಗಾಭೋಗಗಳನ್ನೂ, ಸ್ತೋತ್ರ, ಗದ್ಯಗಳನ್ನೂ, ಗ್ರಂಥಗಳನ್ನೂ ರಚಿಸಿ ಪರಸ್ಪರ ಕೇಳಿಸಿಕೊಂಡು, ಹೇಳಿಸಿಕೊಂಡು ಹಾಡಿಸಿಕೊಂಡು, ಭಗಂವತನ್ನು ಒಲಿಸಿಕೊಳ್ಳುತ್ತಿದ್ದ ಅದ್ಭುತ ಕಾಲವದು.


ತಿರುಪತಿ ತಿಮ್ಮಪ್ಪನನ್ನು ಸತತ ಹನ್ನೆರಡು ವರ್ಷ ಕಾಲ ಪೂಜಿಸಿ, ಅಲ್ಲಿ ನಿತ್ಯ ನಿರಂತರ ಪೂಜಾವ್ಯವಸ್ಥೆ ನಡೆಯುವಂತೆ ಮಾಡಿದ ಮಹಾನುಭಾವರು. ಶ್ರೀ ಪರಂದರದಾಸರು, ಶ್ರೀ ಕನಕದಾಸರನ್ನ ನಮ್ಮ ಸಮಾಜಕ್ಕೆ ಕೊಟ್ಟವರು, ಎಲ್ಲ ರೀತಿಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದವರು ಪ್ರಹ್ಲಾದಾಂಶರಾದ ಶ್ರೀ ವ್ಯಾಸರಾಯರು.


ಪ್ರಲ್ಹಾದಾಂಶಜರೂ, ಗೋಪಾಲಕೃಷ್ಣನನ್ನು ತಮ್ಮ ಭಕ್ತಿಯಿಂದ ಒಲಿಸಿಕೊಂಡ ಈ ಮಹಾನುಭಾವರು. ಕೃಷ್ಣದೇವರಾಯನ ಕುಹಯೋಗವನ್ನು ಪರಿಹರಿಸಿದವರು, ವಾದಿಸಿಂಹರಾಗಿದ್ದ ಶ್ರೀ ವ್ಯಾಸರಾಯರು 'ಕರ್ನಾಟಕದ ವಿದ್ಯಾಸಿಂಹಾಸನಾಧೀಶ್ವರರು' ಎಂದೇ ಪ್ರಖ್ಯಾತರಾದವರು.   ಮುಖ್ಯವಾಗಿ  ದಾಸಸಾಹಿತ್ಯವನ್ನು, ವ್ಯಾಸಸಾಹಿತ್ಯವನ್ನೂ ಮೆರೆದವರು. ಶ್ರೀ ಬ್ರಹ್ಮಣ್ಯತೀರ್ಥರ ಆಶ್ರಯ, ಅನುಗ್ರಹದ ರಕ್ಷೆಯಲ್ಲಿ ಬೆಳೆದವರು, ಶ್ರೀ ಶ್ರೀಪಾದರಾಜರ ಪ್ರೀತಿ ಅಂತಃಕರಣದಲ್ಲಿ ಮಿಂದೆದ್ದವರು.

'ಕರ್ನಾಟಕದ ಸಂಗೀತ ಪಿತಾಮಹ'ರೆನಿಸಿದ, ನವಕೋಟಿನಾರಾಯಣರಾಗಿದ್ದ ಶ್ರೀ ಪುರಂದರದಾಸರ ಸ್ವರೂಪೋದ್ಧಾರಕರು. ಶ್ರೀ ಕನಕದಾಸರಿಗೆ ಪ್ರೀತಿಯ ದಾಸತ್ವ ಭಾವದ ಸೊಗಡನ್ನು ಉಣಬಡಿಸಿದವರು.  ಇಂತಹ ದಾಸ ಶ್ರೇಷ್ಠರ ಗುರುಗಳಾಗಿದ್ದವರು ಶ್ರೀ ವ್ಯಾಸರಾಜರು.


ದಾಸಸಾಹಿತ್ಯ ಪರಂಪರೆಯನ್ನು ಶ್ರೀ ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ ಶ್ರೀ ವ್ಯಾಸರಾಯರು.


ಹರಿದಾಸ ಚತುಷ್ಟಯರಲ್ಲಿ ಒಬ್ಬರಾದ ಶ್ರೀ ವಿಜಯದಾಸರು ಇವರ ಕುರಿತಾದ ಸುಳಾದಿಯಲ್ಲಿ ಬಹಳ ಮನೋಜ್ಞವಾಗಿ ಹೇಳಿದ್ದಾರೆ. ಆ ಸುಳಾದಿಯಲ್ಲಿ ಶ್ರೀ ವ್ಯಾಸರಾಜರ ಕುರಿತು ನೋಡೋಣ.

  

ಈ ಸುಳಾದಿಯನ್ನು ಶ್ರೀ ವಿಜಯದಾಸರು ಕಥನಸುಳಾದಿಯ ರೂಪದಲ್ಲಿ ಪ್ರಾರಂಭಿಸುತ್ತಾರೆ . ಒಂದು ದಿನ ನಾರದಮುನಿ, ಹರಿವರ್ಷಖಂಡದೊಳು ಆನಂದ ಗಾಯನದಿಂದ ನರಸಿಂಹದೇವರ ದರ್ಶನ ಪುಳಕದಿಂದ ಸಂಭ್ರಮಿಸಿ ಹೊರಟುನಿಂತರು. ಆಗ ಪ್ರಹ್ಲಾದನು  ಮುನಿಯ ಪಾದಕ್ಕೆರಗಿ, ದ್ವಾರಕಾಪುರದ ವಾರ್ತೆಯನ್ನು ತನಗೆ ಏನೂ ತಿಳಿಸಲಿಲ್ಲ ಏಕೆ ಎಂದು ಪ್ರಶ್ನಿಸಿದ.

ಕಣ್ಣಿಂದ ಆನಂದಭಾಷ್ಪ ತುಳುಕಿಸುತ್ತ ನಾರದಮುನಿ ನಂದ ಕಂದ ಮುಕುಂದ ಕೃಷ್ಣನ್ನ ಒಂದೊಂದು ಚರಿತೆಯನ್ನು ಹೇಳಿದ. ಪ್ರಹ್ಲಾದ ಮೈಮರೆತು ಮುನಿಗೆ ಶಿರಬಾಗಿ ಎರಗಿ ಅಂತಹ ಕೃಷ್ಣನನ್ನು ನಾನೆಂದು ವಂದಿಸುವೆ ಎಂದು ಮಂದಹಾಸದಿಂದ ಕೇಳಿದ. "ಪರಮ ಭಾಗವತರ ವರಮಣಿಯೆ ನೀನು, ಧಾರುಣಿಯೊಳಗೆ ಅವತರಿಸಿ ಅಧಿಕವಾದ ಮರುತಮತದೊಳಗೆ ಚರಿಸಿ, ಕೃಷ್ಣನ ಪೂಜೆ ನಿರುತ ಬಿಡದೆ ಮಾಡಿ, ಹರ್ಷ ಪಟ್ಟು ಸುಖಿಸುತ್ತಿರು"ಎಂದು ನಾರದರ ಬಾಯಿಂದ ಬಂದ ಮಾತು ಸತ್ಯವಾಯಿತು. ಶ್ರೀ ವಿಜಯದಾಸರು "ಜತೆ"ಯಲ್ಲಿ ಅದೇ ಪ್ರಹ್ಲಾದನೇ, ಶ್ರೀ ವ್ಯಾಸ ಮುನಿ, ಅದೇ ಶ್ರೀ ವ್ಯಾಸಮುನಿಯೇ ಶ್ರೀ ರಾಘವೇಂದ್ರತೀರ್ಥರು ಅಹುದೆಂದು ಭಜಿಸಿರೋ ವಿಜಯವಿಠಲ ಒಲಿವಾ" ಎಂದು ಉದ್ಘೋಷಿಸಿ ಶ್ರೀ ಪ್ರಹ್ಲಾದರಾಜರೇ ಶ್ರೀ ವ್ಯಾಸಮುನಿಗಳು. ಶ್ರೀ ವ್ಯಾಸರಾಯರೇ ಈಗಿನ ರಾಘವೇಂದ್ರ ಗುರುಸಾರ್ವಭೌಮರು ಎಂದು ಸ್ಪಷ್ಟವಾಗಿ ತಿಳಿಸುತ್ತಾ ಭಕ್ತರಿಗೆ ಕರೆ ನೀಡಿದರು.


ಶ್ರೀ ವ್ಯಾಸರಾಜರನ್ನು ಸ್ತುತಿಸಿದ ಶ್ರೀ ವಾದಿರಾಜರ ಸುಳಾದಿ

ಮಾಧವನಂಘ್ರಿಗಳನ್ನು ನಿತ್ಯ ಮೋದದಲ್ಲಿ ಭಜಿಸುವ ಸಾಧುಸನ್ಮುನಿವರ್ಯ ಮೋದತೀರ್ಥರ ಪಾದವನ್ನು ಸಾದರದಿಂದಲಿ ಭಜಿಸಿ, ಮೇದಿನಿಗೆ ಭಾರವಾದ ಮಾಯಾವಾದಿಗಳನ್ನು ಗೆದ್ದ ವಾದಿರಾಜರ ಮಹಿಮೆ ವರ್ಣಿಸಲು ತಾವು ಅರ್ಹರಲ್ಲವೆಂದು ಹೇಳುತ್ತಲೇ ಈ ಸುಳಾದಿಯಲ್ಲಿ ಶ್ರೀ ವಿಜಯರಾಯರು ಶ್ರೀ ವಾದಿರಾಜರ ಮಹಿಮೆಯನ್ನು ಅದ್ಭುತವಾಗಿ ತಿಳಿಸಿದ್ದಾರೆ. ವೇದವೇದ್ಯನಾದ ಹಯವದನ ಆದರದಿಂದ ಶ್ರೀ ವಾದಿರಾಜರ ಭುಜದಲ್ಲಿ ಪಾದವನ್ನು ಇಟ್ಟು ಹಾಗೆಯೇ ಕಡಲಲ್ಲಿ ಪವಡಿಸಿದ ಒಡೆಯ ಈಗ ಪೊಡವಿಯ ಉಡುಪಿಯಲಿ ನಿಂತು, ಹರಿವಾಣದಲ್ಲಿ ಕಡಲೆ ಸಕ್ಕರೆ ಬೆರೆಸಿ ಮಾಡಿದ ಲಡ್ಡು, ಸಡಗರದ ಭಕ್ಷ್ಯ, ಪಾಯಸ, ತುಪ್ಪವನ್ನು ವಾದಿರಾಜರು ನೀಡಿದರೆ, ಸ್ವಾಮಿ ಬ್ರಹ್ಮಾದಿಪರಿವಾರ ಸಹಿತ ಉಂಡು, ಕಡಗೋಲುನೇಣು ಪಿಡಿದು ಉಡುಪಿಯಿಂದ ಮಾಡಿದ ಬೆಡಗಿನ ಪರಿಪರಿ ಕಾರ್ಯವನ್ನು ಈ ಸುಳಾದಿಯಲ್ಲಿ ವಾದಿರಾಜರು ಹೇಳುತ್ತಾರೆ.

 

ತಾಮಸ ಗುಣದ ಪಾಮರ ಜನರಿಗೆ, ಕ್ರಮಿಸಿ ಕೋಟಿವರ್ಷ ಅವನ ನಾಮ ನುಡಿದರೂ, ಇಂತಹ ಮಹಿಮೆ ದೊರೆಯುವುದೇ. ಭೂಮಿಯಲ್ಲಿನ ಭ್ರಾಮಕ ಜನರಿಗೆ ಸ್ವಾಮಿ ಸಿಲುಕುವನೇ, ಅಂತಹ ಜನರಿಗೆ ಪರಂಧಾಮ ದೊರೆಯುವುದೇ, ಎಂದು ವಾದಿರಾಜರು ಕೇಳುತ್ತಾರೆ.

ಬ್ರಹ್ಮದೇವರು ಸತ್ಯಲೋಕವನ್ನು ಆಳಿದರು. ಹಾಗೆಯೇ ಪೂರ್ಣಪ್ರಜ್ಞರೆಂಬ ಮುನಿಯ ಅಜಪದಕ್ಕೆ ಬಂದು ಅಖಿಳರನು ಆಳುವ ಆ ವಾಯುದೇವರೇ ಹನುಮಭೀಮಮಧ್ವರೆನಿಸಿದರು. ಪರಮಾತ್ಮನ ಪಾದಧೂಳಿಯ ಮಹಾತ್ಮೆಯಿಂದ ವಿಜಯವಿಠಲನ ಭಜನೆ ಮಾಡುತ್ತಾ ಋಜುಗುಣ ಪಂಕ್ತಿಯೊಳಗೆ ಕುಳಿತು ನಿರ್ಮಲಜ್ಞಾನಧ್ಯಾನದಿಂದ ಪರಿಪಕ್ವಮನಸ್ಸಿನ ಸುಜನ ಶಿರೋಮಣಿ ವಾದಿರಾಜರು, ನಿಜವಾಗಿಯೂ ಬ್ರಹ್ಮಾಂಡ ಪುರಾಣ ಸಾಧಕರಿಂದ ಅಜಪದಕ್ಕೆ ಸಲ್ಲುವರು. ಇದಕೆ ಲವಲೇಶವೂ ಸಂಶಯ ಬೇಡ.


ಮೋದತೀರ್ಥರಮತದ ಸೇನಾನಿಯಾದ ಶ್ರೀ ವಾದಿರಾಜಮುನಿಯು ಮಹಾಮಹಿಮರು. ಅಂಥ ಯತಿಶ್ರೇಷ್ಠರನ್ನು ಸಾಮಾನ್ಯರೆಂದು ಎಣಿಸಿದವರಿಗೆ ಘನಶಿಕ್ಷೆಯಾಗುವುದು. ಹೀಗೆ ಸೋಂದೆಯಿಂದ ಉಡುಪಿಯವರೆಗೆ ತಮ್ಮ ಮಹಿಮಾ ಪ್ರಸರಣ ಮಾಡಿದ ಶ್ರೀ ವಾದಿರಾಜರು ಹೇಗೆ ಅದ್ಭುತ ಧಾರ್ಮಿಕ ಜಾಗೃತಿಯ ನವಚೇತನವೊಂದನ್ನು ಮೂಡಿಸಿ, ದಾರ್ಶನಿಕ ಧೃವತಾರೆ ಎನಿಸಿಕೊಂಡರು ಎನ್ನುವುದನ್ನು ದಾಸರು ಅಪೂರ್ವವಾಗಿ, ಬಲು ಸೊಗಸಾಗಿ  ಬಣ್ಣಿಸಿದ್ದಾರೆ. ತಪಸ್ಸು, ವಿದ್ಯೆ, ವಿರಕ್ತಿ, ಭಕ್ತಿಗಳಿಂದ ಯತಿಶ್ರೇಷ್ಠರೆನಿಸಿದ ಶ್ರೀ ವಾದಿರಾಜರು ಉಡುಪಿಯ ಶ್ರೀಕೃಷ್ಣನನ್ನು, ಶ್ರೀ ಹಯವದನ ಮೂರ್ತಿಯನ್ನೂ ಕೊಂಡಾಡಿರುವ ಪರಿ ಅನನ್ಯ. ಶ್ರೀ ಕನಕದಾಸರನ್ನು ಕೊಡುಗೆಯಾಗಿ ಸಮಾಜಕ್ಕೆ ಕೊಡುವಲ್ಲಿ ಶ್ರೀ ವ್ಯಾಸರಾಯರ ಪಾತ್ರ ಹಿರಿದು. ಶ್ರೀಕೃಷ್ಣದೇವರಾಯನ ಆಸ್ಥಾನ ಗುರುಗಳಾಗಿದ್ದ ಇವರ ವಿದ್ಯೆಯ ವೈಭವ ಅಕ್ಷರಗಳಲ್ಲಿ ಹೇಳತೀರದು. ಯುದ್ಧದಲ್ಲಿ ಸೋತು ಬಂದಿದ್ದ ಶ್ರೀಕೃಷ್ಣದೇವರಾಯ ಮತ್ತೆ ಶ್ರೀ ವ್ಯಾಸರಾಯರ ಅನುಗ್ರಹ ಪಡೆದು ಮತ್ತೆ ಯುದ್ಧ ಮಾಡಿ ಕಲಿಂಗದ ರಾಜನನ್ನು ಸೋಲಿಸಿ ಬಹಳಷ್ಟು ದೂರದವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿ, ತಿರುಪತಿ ತಿಮ್ಮಪ್ಪನಿಗೆ ಬಹಳಷ್ಟು ಸೇವೆ ಮಾಡಿದ ಶ್ರೀಕೃಷ್ಣದೇವರಾಯ ಶ್ರೀ ವ್ಯಾಸರಾಯರಿಗೆ ನಭೂತೋ ನಭವಿಷ್ಯತಿ ಎಂಬಂತೆ 'ರತ್ನಾಭಿಷೇಕ'ವನ್ನು ಮಾಡಿದ್ದು ಸುವರ್ಣಾಕ್ಷರದಲ್ಲಿ ಬರೆಯುವಂತಹದ್ದು. (ಶ್ರೀ ವ್ಯಾಸರಾಜರ ಶಿಷ್ಯವೃಂದದ ವೈಭವ, ಅವರ ವಾಗ್ಝರಿಯನ್ನು ಕಣ್ಣಾರೆ ಕಂಡಿದ್ದ  ಸೋಮನಾಥಕವಿ ಬಹಳ ಮನೋಜ್ಞವಾಗಿ ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿ ನಮಗೆ ಮಹದುಪಕಾರ ಮಾಡಿದ್ದಾರೆ.) ಅವರ ಜ್ಞಾನ, ತಪಸ್ಸನ್ನು ಕಣ್ಣಾರೆ ಕಂಡಿದ್ದ ಶ್ರೀಕೃಷ್ಣದೇವರಾಯ ಗುರುಗಳ ಅನುಗ್ರಹವನ್ನು ನೆನೆದು, ನತಮಸ್ತಕರಾಗಿ ಕುಟುಂಬ ಸಮೇತ ನಮಿಸಿ, ಇಂಥ ಗುರುಗಳಿಗೆ ಅಭಿಷೇಕ ಮಾಡುವ ಭಾಗ್ಯ ನನ್ನದಾಗಿದೆಯಲ್ಲ ಎಂದು ನೆನೆದು ಆನಂದಭಾಷ್ಪ ಸುರಿಸಿ ಆನಂದಿಸಿದ ಕ್ಷಣ. ಆ ಕ್ಷಣಕ್ಕೆ ಸಾಕ್ಷಿಯಾಗಿದ್ದ ತಂಡೋಪತಂಡ ಯತಿಶಿಷ್ಯರು. ಗೃಹಸ್ಥಶಿಷ್ಯರು. ಈ 'ರತ್ನಾಭೀಷೇಕ' ಕಣ್ತುಂಬಿಕೊಳ್ಳಲು ಆನಂದತುಂದಿಲರಾಗಿ ತಮ್ಮ ಜೀವನವನ್ನು ಧನ್ಯವಾಗಿಸಿಕೊಳ್ಳಲು ಆಗಮಿಸಿದ್ದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ರಾಜರು, ಸಾಮಂತರಾಜರು, ಹಾಗೂ ಬಂದ ಜನಸ್ತೋಮಕ್ಕೆಲ್ಲ ಅಭಿಷೇಕ ಮಾಡಿದ್ದ ಅಷ್ಟೂ ರತ್ನಗಳ ರಾಶಿಯನ್ನು ಕೊಟ್ಟು ಅನುಗ್ರಹಿಸಿದ ಪರಮ ವೈರಾಗ್ಯಶಾಲಿಗಳು ಶ್ರೀ ವ್ಯಾಸರಾಯರು.  


ತತ್ವಜ್ಞಾನದ ಪ್ರಸಾರದಲ್ಲಿ, ವೈಷ್ಣವ ಸಿದ್ಧಾಂತದ ಪ್ರಬಲ ಪ್ರತಿಷ್ಠಾಪನೆಯಲ್ಲಿ ಮಹಾನ್ ಕ್ರಿಯಾಶಕ್ತಿಯಾದವರು ಶ್ರೀ ವಾದಿರಾಜರು. ತಪಶ್ಯಕ್ತಿ, ಮಂತ್ರಸಿದ್ಧಿ ಹಾಗೂ ತತ್ವಜ್ಞಾನನಧಿಗಳ ತ್ರಿವೇಣಿ ಸಂಗಮವಾಗಿದ್ದರು ಅವರು. ಅವರು ಸರ್ವಸಂಗಪರಿತ್ಯಾಗ ಮಾಡಿದ ಮಹಾ ಯತಿಗಳು. ಸದ್ಗ್ರಂಥ, ಉದ್ಗ್ರಂಥಗಳನ್ನು ರಚಿಸಿ ದರ್ಶನ ಜಗತ್ತಿನ ಗೌರಿಶಂಕರ ಎನಿಸಿಕೊಂಡವರು. ತೀರ್ಥಯಾತ್ರಾ ಪರ್ಯಟನೆ ಮಾಡಿ ಕ್ಷೇತ್ರಗ್ರಂಥ 'ತೀರ್ಥಪ್ರಬಂಧ'ವನ್ನು ರಚಿಸಿದರು. ಅನೇಕ ಮಹತ್ವದ ಧಾರ್ಮಿಕ ಸುಧಾರಣಾ ಕಾರ್ಯಗಳನ್ನು ಮಾಡಿದರು. ಇಂತಹ ಶ್ರೀ ವಾದಿರಾಜರ ಪರಮಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀ ವಿಜಯದಾಸರ ಈ ಸುಳಾದಿ ಶ್ರೀ ವಾದಿರಾಜರ ಮಹಿಮೆಯ ಎತ್ತರ ಬಿತ್ತರಗಳನ್ನು ಸಾಂದ್ರವಾಗಿ ಸಾರುವಲ್ಲಿ ಯಶಸ್ವಿಯಾಗಿದೆ.

        

ವ್ಯಾಸರಾಯರು 1548, ಫಾಲ್ಗುಣ ಮಾಸದ ಚತುರ್ಥಿ ದಿನದಂದು, ಹಂಪೆಯಲ್ಲಿ ವೃಂದಾವನ ಪ್ರವೇಶಿಸಿದರೆಂದು ಹೇಳಲಾಗುತ್ತದೆ.  ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪವಾದ ನವವೃಂದಾವನದಲ್ಲಿದೆ.



-ಡಾ.ವಿದ್ಯಾಶ್ರೀ ಕುಲಕರ್ಣಿ ಮಾನವಿ

ಲೇಖಕಿ, ಕನ್ನಡ ಅಧ್ಯಾಪಕಿ ಪೂರ್ಣಪ್ರಮತಿ ಶಾಲೆ.ಬೆಂಗಳೂರು



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top