ಮಂಗಳೂರು: ಕ್ರೀಡೆಯಲ್ಲಿ ತ್ಯಾಗ ಮುಖ್ಯ, ಕ್ರೀಡಾಪಟು ಆಗಬೇಕಿದ್ದರೆ ವ್ಯಕ್ತಿಯು ಮುಂದಾಲೋಚನೆ ಹೊಂದಿರಬೇಕು ಎಂದು ಏಕಲವ್ಯ ಪ್ರಶಸ್ತಿ ವಿಜೇತ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ನೆಟ್ ಬಾಲ್ ತರಬೇತುದಾರ ನಿತಿನ್ ಪಿ. ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಅಂತರ ಕಾಲೇಜು ಮಹಿಳಾ ಹ್ಯಾಂಡ್ ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಆಟದಲ್ಲಿ ಮಹಿಳೆಯರು ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನಹರಿಸಬೇಕು. ದೀರ್ಘಕಾಲದ ಪಂದ್ಯಗಳಲ್ಲಿ ಮಹಿಳೆಯರು ಫಿಟ್ನೆಸ್ ಹೊಂದಿರದಿದ್ದರೆ ಕ್ರೀಡೆಯಲ್ಲಿ ಹೆಚ್ಚಿನ ಮಟ್ಟದ ಸಾಧನೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಕ್ರೀಡೆಯಲ್ಲಿ ಯಶಸ್ಸು ಮಾತ್ರ ಮುಖ್ಯವಲ್ಲ, ಭಾಗವಹಿಸುವಿಕೆಯೂ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಮಿಳುನಾಡಿನ ಪೆರಿಯಾರ್ ವಿಶ್ವವಿದ್ಯಾನಿಲಯದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವ ವಿದ್ಯಾನಿಲಯ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೇಶವ ಮೂರ್ತಿ ಟಿ. ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶಮಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಧ್ಯಾಪಕರು, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಂತರ ಕಾಲೇಜು ಮಹಿಳಾ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು. ವಿಶ್ವವಿದ್ಯಾನಿಲಯ ಕಾಲೇಜಿನ ತಂಡ ದ್ವಿತೀಯ ಸ್ಥಾನ ಮತ್ತು ಉಜಿರೆ ಎಸ್‌ಡಿಎಂ ಕಾಲೇಜು ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ಇದೇ ವೇಳೆ, ಉತ್ತಮ ಉದಯೋನ್ಮುಖ ಗೋಲ್ ಕೀಪರ್ ಪ್ರಶಸ್ತಿಗೆ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಶ್ರೀಮತಿ ಹಾಗೂ ಉತ್ತಮ ಉದಯೋನ್ಮುಖ ಆಟಗಾರ್ತಿ ಎಂಬ ಪ್ರಶಸ್ತಿಯನ್ನು ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿ ಚಂದ್ರಿಕಾ ಪಡೆದುಕೊಂಡರು.
ಸಮಾರೋಪ ಸಮಾರಂಭಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜಾನ್ ಪಿಂಟೋ ಆಗಮಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ದಿವಾಕರ್ ಶೆಟ್ಟಿ ಮತ್ತು ಕಾರ್ತಿಕ್ ಕೆ. ಕೆ. ಹಾಗೂ ಮತ್ತಿತರರು ಉಪಸ್ಥಿತಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ