- ಗೋನವಾರ ಕಿಶನ ರಾವ್, ಹೈದರಾಬಾದ್
ಆಂಧ್ರ ಪ್ರದೇಶ ರಾಜ್ಯದ, ಒಂದು ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿದ್ದ. ಒಂದು ದಿನ ಅವನು ಒಂದು ಸುಂದರವಾದ ಗಿಳಿಮರಿಯನ್ನು ಕಂಡ. ಅದರಿಂದ ಆಕರ್ಷಿತನಾಗಿ ಅದನ್ನು ಮನೆಗೆ ತಂದು ಸಾಕಬೇಕು ಎನ್ನುವುದು ಅವನ ಅಪೇಕ್ಷೆಯಾಗಿತ್ತು. ಅದನ್ನೊಂದು ಪಂಜರದಲ್ಲಿರಿಸಿ ಆಗಾಗ ಅದನ್ನು ನೋಡುತ್ತ ಆನಂದಿಸುತ್ತಿದ್ದ. ಪಾಪ ಗಿಳಿ ಮಾತ್ರ ಬಹಳ ದುಃಖಿಯಾಗಿತ್ತು. ಯಾವಾಗ ಸ್ವತಂತ್ರವಾಗಿ, ತನ್ನ ಗೂಡಿನೆಡೆ ಹಾರಿ ಬಿಡುವದೆಂದು ಯೋಚಿಸುತ್ತಿತ್ತು. ವಿಶೇಷ ವೆಂದರೆ, ಆ ಗಿಳಿಮರಿ ಪ್ರತಿದಿನ "ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ" ಎಂದು ಒಂದೇ ಸವನೆ ಅಳಲಿಡುತ್ತಿತ್ತು.ಅದರ ಇಂಪಾದ ಧ್ವನಿ ಬಾಲಕನಿಗೆ ಆನಂದದ ಜೊತೆಗೆ, ರಾಮ ರಾಮ ಎನ್ನುವ ಆ ಉಲಿ ಅವನನ್ನು ಆಯಸ್ಕಾಂತದಂತೆ, ಆಕರ್ಷಿಸಿ ಒಂದು ರೀತಿಯ ಹೇಳಲಾಗದ ಸಂತೃಪ್ತಿ ನೀಡುತ್ತಿತ್ತು. ಹೀಗೆ ಹನ್ನೆರಡು ದಿನಗಳು ಕಳೆದವು. ಬಾಲಕನಿಗೆ ಗಿಳಿಯ ಸ್ವತಂತ್ರ ಹಾರಾಟದ ಕುರಿತು ಯೋಚಿಸುವಂತಾಗಿ ಮನಃ ಪರಿವರ್ತನೆ ಆಗಿರಬೇಕು. ಗಿಳಿ ಮರಿಯನ್ನು ಬಿಡುಗಡೆ ಮಾಡಿದ. ಅದು ರೆಕ್ಕೆ ಪಟ ಪಟ ಬಡಿದು, ತನ್ನ ಸಂತೋಷ ವ್ಯಕ್ತಪಡಿಸಲೋ ಏನೋ ಎಂಬಂತೆ, ಬಾಲಕನ ಮುಖವನ್ನು ಒಮ್ಮೆ ಕೃತಜ್ಞತಾ ಭಾವದಿಂದನ ನೋಡಿ, ತನ್ನ ತಂದೆತಾಯಿಗಳನ್ನು ಸೇರಲು ಹಾರುತ್ತ ಹೋಯಿತು. ಬಾಲಕನ ಮನ ನೆಮ್ಮದಿಯನ್ನು ಅನುಭವಿಸಿತು.
ಆ ಬಾಲಕ ಬೆಳೆದು ದೊಡ್ಡವನಾದ. ಯೌವನಕ್ಕೆ ಬಂದಾಗ, ಮದುವೆ ಆದ. ಪತ್ನಿ, ಮಕ್ಕಳು-ಮರಿ, ಬಂಧು ಬಳಗಾದಿಗಳೊಂದಿಗೆ ಸೇರಿ ಅವನ ಬದುಕು, ಐಹಿಕ ಸಂತೋಷವನ್ನು ಅನುಭವಿಸಿತು. ಇಳಿ ವಯಸ್ಸಿನಲ್ಲಿ ಕಾಲ ರಾಯನ ಕರೆ ಬಂದಾಗ, ಇಹ ಲೋಕ ತ್ಯಜಿಸಿದ.
ಇದೇ ಬಾಲಕ ತನ್ನ ಮುಂದಿನ ಜನ್ಮದಲ್ಲಿ ಕಂಚರ್ಲ ಗೋಪನ್ನನಾಗಿ, ತೆಲಂಗಾಣ ರಾಜ್ಯದ (ಅಂದಿನ ಹೈದರಾಬಾದ ರಾಜ್ಯ ಭಾಷವಾರ ಪ್ರಾಂತಗಳ ವಿಂಗಡನೆಯಲ್ಲಿ ಆಂಧ್ರ ಪ್ರದೇಶವಾಗಿ, ಮುಂದೆ ಅದು ತೆಲಂಗಾಣ ಮತ್ತು ಆಂಧ್ರ ಪ್ರದೇಶ ಎಂದು ಮರು ವಿಭಜನೆಯಾಗಿ ಎರಡು ತೆಲುಗು ರಾಜ್ಯಗಳಾಗಿವೆ) ಖಮ್ಮಂ ಜಿಲ್ಲೆಯ ನೆಲಕೊಂಡಪಲ್ಲಿ ಗ್ರಾಮದ, ಲಿಂಗಣ್ಣ ಮಂತ್ರಿ ಮತ್ತು ಕಾಮಾಂಬ ಎನ್ನುವ ಶ್ರೀವೈಷ್ಣವ ಪಂಗಡಕ್ಕೆ ಸೇರಿದ ದಂಪತಿಗಳಿಗೆ 1620 ರಲ್ಲಿ ಜನಿಸಿದ ಎನ್ವುವ ದಾಖಲೆಗಳು ಇವೆ. (1620-1688). ತೆಲುಗು ಇವರ ಮಾತೃಭಾಷೆ. ಇಳಿವಯಸ್ಸಿನಲ್ಲಿ ತಂದೆ- ತಾಯಿಯರನ್ನು ಕಳೆದುಕೊಂಡ ಅನಾಥನಾದ. ಗೋಪನ್ನನ ಬಾಲ್ಯ ಜೀವನ ಕಡು ಬಡತನದಿಂದಕೂಡಿತ್ತು. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಶ್ರೀ ರಾಮಚಂದ್ರ ನ ಮೇಲಿನ ಹಾಡುಗಳೆಂದರೆ ಬಹಳ ಇಷ್ಟ.ಅಂದಿನ ಸಂಪ್ರದಾಯದಂತೆ ತಲೆಯ ಮೇಲೊಂದು ಅಗಲವಾದ ಬಾಯಿ ಇರುವ ಕಂಚಿನ ಪಾತ್ರೆ ಇಟ್ಟುಕೊಂಡು, ರಾಮ ಭಜನೆ ಮಾಡುತ್ತ, ಮನೆಮನೆ ತಿರುಗಿ ಅಕ್ಕಿ ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದ. ರಾಮಚಂದ್ರನ ಸ್ಮರಣೆಯಲ್ಲಿ ಭಕ್ತಿಗೀತೆಗಳನ್ನು ಹಾಡುವ ಮೂಲಕ ಮತ್ತು ಮನೆ ಮನೆಗೆ ಅಕ್ಕಿ ಸಂಗ್ರಹಿಸುವ ಮೂಲಕ ಬದುಕನ್ನು ಕಟ್ಟಿಕೊಂಡ. ಈ ಜೀವನ ಕಥೆಯನ್ನು ಹೆಚ್ಚಾಗಿ ಅವನೇ ರಚಿಸಿದ ಮತ್ತು ಸಂಯೋಜಿಸಿದ್ದ ಕವಿತೆಗಳಿಂದ ಪುನರ್ನಿರ್ಮಿಸಲಾಯಿತು, ಗೋಪನ್ನನ ಜೀವನದ ಘಟನೆಗಳಿಗೆ ಸಂಬಂಧಿಸಿದಂತೆ. ಅನೇಕ ದಂತ ಕಥೆಗಳು ಪ್ರಚಲಿದಲ್ಲಿವೆ. ಅವುಗಳೆಲ್ಲವೂ ಶ್ರೀ ರಾಮಚಂದ್ರ ದೇವರೊಂದಿಗೆ ನೇರ ಸಂಬಂಧ ಹೊಂದಿರುವುದು ಸಹ ಉಲ್ಲೇಖನೀಯ.
1650 ರಲ್ಲಿ, ಗೋಪಣ್ಣ ತನ್ನ. ಸಣ್ಣ ತಾತ ಅಂದರೆ ತಾಯಿಯ ಚಿಕ್ಕಪ್ಪನನ್ನು ಭೇಟಿ ಮಾಡಲು ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ, ಅವರು ಆ ಸಮಯದಲ್ಲಿ ಮಂತ್ರಿ ಮಿರ್ಜಾ ಮೊಹಮ್ಮದ್ ಸಯ್ಯದ್ ಅವರ ಕೈ ಕೆಳಗೆ, ಉದ್ಯೋಗಿ ಆಗಿದ್ದು ಗೋಲ್ಕೊಂಡಾ ಸುಲ್ತಾನರ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಅಣ್ಣನ ಮಗಳ ಮಗ, ಗೋಪಣ್ಣನಿಗೆ ಯಾವುದಾದರೊಂದು, ಕೆಲಸ ಕೊಡಿಸುವಂತೆ ಸಚಿವರ ಮನವೊಲಿಸಿದರು. ಮಿರ್ಜಾ ಮೊಹಮ್ಮದ್ ಸಯ್ಯದ್ ಅವರು, ಭದ್ರಾಚಲಂನಲ್ಲಿ ತೆರಿಗೆ ಸಂಗ್ರಹ ವಿಭಾಗದಲ್ಲಿ ತಹಸೀಲದಾರ್ ಎಂದು, (ಕರ ವಸೂಲಾತಿ ಅಧಿಕಾರಿ) ಗೋಪಣ್ಣನನ್ನು ನೇಮಿಸಿದರು. ಅಲ್ಲಿ ಇರುವ ಪುರಾತನ ಶ್ರೀ ರಾಮಚಂದ್ರ ದೇವಾಲಯ, ಗೋಪಣ್ಣನನ್ನು ಪರಿವರ್ತಿಸಿದ್ದು, ಒಂದು ರೋಚಕ ಘಟನೆಯೇ ಸರಿ.
ಭದ್ರಾಚಲಕ್ಕೆ ಬಂದು ಅಧಿಕಾರ ವಹಿಸಿಕೊಂಡ ಗೋಪನ್ನ, ಹತ್ತಿರದಲ್ಲಿಯೇ ಇರುವ "ಪರ್ಣಶಾಲೆ" ಗೋಪಣ್ಣನನ್ನು ಆಕರ್ಷಿಸಿತು. ವನವಾಸಕ್ಕೆ ಹೊರಟಿದ್ದ ರಾಮ ಸೀತ ಲಕ್ಷ್ಮಣ ಕೆಲ ಕಾಲ ತಂಗಿದ್ದರೆಂದು ಹೇಳಲಾದ, ಪವಿತ್ರ ಸ್ಥಾನ ಅದಾಗಿತ್ತು ಎಂದು ಹೇಳಲಾಗುತ್ತದೆ. ಪರ್ಣಶಾಲೆಯ ಸ್ವಲ್ಪ ಅಂತರದಲ್ಲಿಯೇ ಇರುವ ಶಬರಿಯ ಆಶ್ರಮ ಇರುವುದನ್ನು ಕಂಡುಕೊಂಡ. ಶಬರಿ, ಶ್ರೀ ರಾಮಚಂದ್ರ ದೇವರಿಗೆ ಹಣ್ಣುಗಳನ್ನು ಅರ್ಪಿಸಿ ಮೋಕ್ಷ ಹೊಂದಿದ ಸ್ಥಳ ಇದು ಎಂದು ಪ್ರತೀತಿ. ಭದ್ರಾಚಲಂ ನಲ್ಲಿರುವ ಪುರಾತನ ರಾಮಾಲಯವನ್ನು ನೋಡಿ ಗೋಪನ್ನನ ಮನಸ್ಸಿಗೆ ದುಃಖವಾಯಿತು. ಇದರ ಜೀರ್ಣೋದ್ಧಾರ ಕೆಲಸ ಮಾಡಬೇಕೆಂದು ಸಂಕಲ್ಪ ಮಾಡಿಕೊಂಡ. ಜನರಿಂದ ಹಣ,ಧಾನ್ಯ, ಬಂಗಾರದ ಆಭರಣ ಎಂದು ವಿಧ ವಿಧವಾದ ರೂಪದಲ್ಲಿ ಹರಿದು ಬಂತು. ತಾನು ತನ್ನ ಧರ್ಮ ಪತ್ನಿ, ಮಗ ಸೇರಿ ದೇವಾಲಯದ ಕೆಲಸ ಕೈ ಕೊಂಡರು. ಇದರಿಂದ ಸಂತುಷ್ಟನಾದ ರಾಮಚಂದ್ರ ಗೋಪನ್ನನ ಕನಸಿನಲ್ಲಿ ಕಾಣಿಸಿಕೊಂಡು, ರಾಮದಾಸು ಎಂದು ನಾಮಕರಣ ಮಾಡಿದ. ಗೋಪನ್ನ ರಾಮಭಕ್ತ ರಾಮದಾಸ ನಾದ
ಮಂದಿರದ ಕೆಲಸ ಪೂರ್ತಿ ಆಗಲು ಹಣದ ತೀವ್ರ ಅಡಚಣಿ ಉಂಟಾಯಿತು. ಏನು ಮಾಡುವುದು ಎಂದು ಚಿಂತೆಗೀಡಾದ. ಭದ್ರಾಚಲಂನಲ್ಲಿ ತಹಸೀಲ್ದಾರ್ ಆಗಿ ಕರ ವಸೂಲಾತಿ ಚಟುವಟಿಕೆಗಳ ನೇತೃತ್ವ ವಹಿಸಿದ ರಾಮದಾಸ, ಭದ್ರಾಚಲಂ ಪ್ರದೇಶದಲ್ಲಿ ಹಿಂದೂಗಳಿಂದಲೂ, ಜಿಝಿಯಾ ಹೆಸರಿನಲ್ಲಿ, ಧಾರ್ಮಿಕ ತೆರಿಗೆಯನ್ನು ವಸೂಲ ಮಾಡುತ್ತಿದ್ದ ದಿನಗಳವು. ರಾಮದಾಸನಿಗೆ ಪರಿಹಾರ ಸಿಕ್ಕಂತಾಯಿತು. ಜೀಝಿಯಾ ಹೇಗೂ ಧಾರ್ಮಿಕ ತೆರಿಗೆ. ಅದನ್ನು, ಧರ್ಮ ಕಾರ್ಯಗಳಿಗೆ, ಉಪಯೋಗಿಸಲೆಂದೇ, ವಸೂಲು ಮಾಡುತ್ತಿದ್ದೇನೆ. ರಾಮ ಮಂದಿರ, ಜೀರ್ಣೋದ್ದಾರ ಸಹ ಧರ್ಮದ ಕಾರ್ಯವಲ್ಲವೇ? ಇದನ್ನು ಉಪಯೋಗಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ನಿರ್ಧರಿಸಿದ. ಆದರೂ, ರಾಮದಾಸ ಗೋಲ್ಕಂಡ ಸುಲ್ತಾನನಿಗೆ ಪರವಾನಿಗೆ ಕೇಳಿ ರಾಯಸಂ ಕಳಿಸಿದ. ಯಾವ ಉತ್ತರ ಬಾರದೆ ಇದ್ದಾಗ, ಮತ್ತೊಂದು ಮನವಿ ಪತ್ರ ಮೂಲಕ ಅರಿಕೆ ಮಾಡಿಕೊಂಡ. ಸ್ವಲ್ಪ ದಿನ ನಿರೀಕ್ಚಿಸಿದ. ಯಾವ ರೀತಿಯ ಉತ್ತರ ಬರಲಿಲ್ಲ. 'ಮೌನಂ ಸಮ್ಮತಿ ಲಕ್ಷಣಂ' ಎಂದು ಕೊಂಡು, ಜಿಝಿಯಾ ದಿಂದ ಸಂಗ್ರಹಿಸಿದ ಹಣವನ್ನು ಬಳಸಿಕೊಂಡು, ಮಂದಿರ ಕೆಲಸ ಮುಂದುವರಿಸಿದ. ಭದ್ರಾಚಲಂ ನಲ್ಲಿ ಸುಪ್ರಸಿದ್ಧ ದೊಡ್ಡ ರಾಮ ಮಂದಿರವನ್ನು ನಿರ್ಮಿಸಿದ. ಭಾಗಶಃ ದೇಣಿಗೆ ಮತ್ತು ಭಾಗಶಃ ಜಿಝಿಯಾದಿಂದ ಸಂಗ್ರಹಿಸಿದ ತೆರಿಗೆ. ಅವರಿಗಾಗದ ಕೆಲವು ಸಮಯ ಸಾಧಕರು, ಸುಲ್ತಾನನಿಗೆ ಅರ್ಜಿ ಗುಜರಾಯಿಸಿದರು. ಸುಲ್ತಾನ ಇವನ ಅವಾಹಾಲನ್ನು ಕೇಳದೆ, ಯಾವ ವಿಚಾರಣೆ ಸಹ ಕೈಕೊಳ್ಳದೆ, ಇವನಿಗೆ ಶಿಕ್ಷೆ ವಿಧಿಸಿ. ಹೈದರಾಬಾದ್ ನಲ್ಲಿರುವ ಗೋಲ್ಕೊಂಡಾ ಕಾರಾಗೃಹಕ್ಕೆ ತಳ್ಳಿಸಿದ. 12 ವರುಷ ಕಾರಾಗೃಹ ಶಿಕ್ಷೆ ಅನುಭವಿಸ ಬೇಕಾಯಿತು. ರಾಮದಾಸರ ಬಹುಪಾಲು ಕೀರ್ತನೆಗಳನ್ನ ಭಜನೆಗಳನ್ನು, ಕಾರಾಗೃಹದಲ್ಲಿ ರಚಿಸಿದರು ಎಂದು ಹೇಳಲಾಗುತ್ತಿದೆ.
ಅವರ ಕೀರ್ತನೆಗಳನ್ನು ಕುರಿತು ಸಂಕ್ಷಿಪ್ತವಾಗಿ ವಿವರಿಸಬಹುದಾದರೆ, ಬಹಳ ಪ್ರಸಿದ್ದಿ ತಂದು ಕೊಟ್ಟ ರಚನೆಗಳೆಂದರೆ, ಅವರು ಗೋಲ್ಕೊಂಡಾ ಜೈಲಿನಲ್ಲಿದ್ದು ರಾಮಧ್ಯಾನದಲ್ಲಿಯೇ, ನಿರತರಾಗಿದ್ದುಕೊಂಡು ರಚಿಸಿದ ಎಲ್ಲ ಕೀರ್ತನೆಗಳಲ್ಲಿ ಪ್ರಸಿದ್ಧ ಎನಿಸಿಕೊಂಡ, ಒಂಬತ್ತು ಕೀರ್ತನೆಗಳು ಎಂದು ಗುರುತಿಸಲಾಗಿದೆ. ಈ ಕೀರ್ತನೆಗಳನ್ನು ಭಕ್ತ ರಾಮದಾಸರ "ನವರತ್ನ ಕೃತಿಗಳು" ಎಂದು ಹೇಳಲಾಗುತ್ತಿದೆ. ಪ್ರಖ್ಯಾತ ಸಂಗೀತಗಾರ ಎಂ. ಬಾಲಮುರಳಿ ಕೃಷ್ಣ ಸೇರಿದಂತೆ ಅನೇಕ ಕರ್ನಾಟಕ ಸಂಗೀತ ಹಾಡುಗಾರರು, ಹಾಡುಗಾರ್ತಿಯರು ಇವುಗಳನ್ನು ಹಾಡಿರುವುದು ವಿಶೇಷತೆ ಕೀರ್ವಿತನೆಗಳ ವಿವರಗಳನ್ನು ಓದುಗರ ಮಾಹಿತಿಗಾಗಿ ರಾಗ ತಾಳ ಭಾಷೆಯ ಕ್ರಮದಲ್ಲಿ ಇಲ್ಲಿ ನೀಡಲಾಗಿದೆ:
1.ಅದಿಗೋ ಭಧ್ರಾದ್ರಿ ........ ರಾಗ ಪಂತುವರಾಳಿ ಆದಿ ತಾಳ ತೆಲುಗು
2 ಶ್ರೀರಾಮ ನಾಮಮೇ ರಾಗ ಅಠಾಣಾ ಆದಿತಾಳ (ಥಿಸ್ರಾ) ತೆಲುಗು
3 ಪಲುಕೆ ಬಂಗಾರಮಾಯೆನಾ ರಾಗ ಆನಂದಭೈರವಿ ರೂಪಕ ತಾಳ ತೆಲುಗು
4 ಶ್ರೀ ರಾಮುಲ ದಿವ್ಯನಾಮ ರಾಗ ಸಾವೇರಿ ಆದಿತಾಳ ತೆಲುಗು
5 ರಾಮಜೋಗಿ ರಾಗ ಮಾಂಡು ಆದಿ ತಾಳ ತೆಲುಗು
6 ತಾರಕಮಂತ್ರಮು ರಾಗ ಧನ್ಯಾಸಿ ಆದಿ ತಾಳ ತೆಲುಗು
7 ಹರಿ ಹರಿ ರಾಮ. ಕಾನಡಾ ಆದಿ ತೆಲುಗು
8 ತಕ್ಕುವೇಮಿ ಮನಕು ಸೌರಾಷ್ಟ್ರ ಆದಿ ತೆಲುಗು
9 ಕಾಂತಿನೇದು ಮಾ ರಾಮುಲ ನಾದನಾಮಕ್ರಿಯಾ
ಇವುಗಳಲ್ಲದೆ ರಾಮದಾಸರು, ರಚಿಸಿರುವ ಸಂಖ್ಯೆ ಅಪಾರ. ಕೀರ್ತನೆಗಳನ್ನು, ತೆಲುಗು ಭಾಷೆಯ ಜೊತೆಗೆ ತಮಿಳು, ಸಂಸ್ಕೃತ ರಚನೆಗಳು ಅಡಕವಾಗಿವೆ. ಅವುಗಳಲ್ಲಿ, ಯೇ ತೀರುಗಾ, ಇಕ್ಷಾಕು ಕುಲತಿಲಕ, ಶ್ರೀ ರಾಮ ನಾಮ, ಭಜರೆ, ಶ್ರೀ, ರಾಮ, ಪಾಹಿ ರಾಮ ಪ್ರಭೋ, ನನ್ನುಬ್ರೋವಮನಿ ಚೆಪ್ಪವೆ ಸೀತಮ್ಮ ತಲ್ಲಿ, ತಕ್ಕುವೇಮಿ ಮನಕು ಮೊದಲಾದವುಗಳು ಹೆಸರುವಾಸಿಯಾಗಿವೆ.
ಇವುಗಳಲ್ಲದೆ, ರಾಮದಾಸರು, ತೆಲುಗುನಲ್ಲಿ ಶತಕಂಗಳನ್ನು ರಚಿಸಿದ್ದಾರೆ.
ಅವರು ರಾಮನಿಗೆ ಅರ್ಪಿಸಿದ ಸುಮಾರು 108 ಕವನಗಳ ಸಂಗ್ರಹವಾದ ಮಕುಟಮು ದಾಶರಥಿ ಕರುಣಾ ಪಯೋನಿಧೀ' (ದಾಶರಥಿ ಕರುಣಾ ಪಯೋನಿಧೀ!) ಜೊತೆಗೆ ದಾಶರಥಿ ಶತಕಮು (ದಾಶರಥಿ ಶತಕಮು) ಬರೆದರು. [2]
ಅವರ ಎಲ್ಲಾ ಕೀರ್ತನೆಗಳನ್ನು ಕುರಿತು ವಿವರಿಸುವದು ತುಂಬಾ ಸುದೀರ್ಘ ಮತ್ತು ವಿವರಣಾತ್ಮಕ ಪ್ರಕ್ರಿಯೆ ಆಗಿರುವುದರಿಂದ ನಾನು ನನಗಿಷ್ಟವಾದ, ಒಂದೋ ಅಥವಾ ಎರಡು ರಚನೆಗಳ ಕುರಿತು ಹೇಳಲು ಇಷ್ಟಪಡುತ್ತೇನೆ.ಪೀಠಿಕಾ ರೂಪವಾಗಿ ಒಂದೆರಡು ಮಾತಗಳು ಸೂಕ್ತ ಎನಿಸುತ್ತಿದೆ.
ಕರ್ನಾಟಕದ ಹರಿದಾಸರುಗಳು ಭವ್ಯ ಪರಂಪರೆಯನ್ನು ಹೊಂದಿದವರು. ವಿಟ್ಠಲಾಂಕಿತರಾಗಿ ಹರಿಯನ್ನು ಅನನ್ಯ ಭಕ್ತಿಯಿಂದ ಕೊಂಡಾಡಿದವರು. ಸಂಪ್ರದಾಯ, ತಾರತಮ್ಯ ನವವಿದ ಭಕ್ತಿ, ಸಮರ್ಪಣಾ ಮನೋಭಾವ ಅವರ ದಿನಚರಿಯೇ ಆಗಿತ್ತು. ಹರಿಯ ಹತ್ತು ಅವತಾರಗಳೂ ಅವರಿಗೆ ಸ್ಪೂರ್ತಿಯ ಸೆಲೆ, ಹರಿ ಸರ್ವೋತ್ತಮ- ವಾಯುಜೀವೋತ್ತಮ ಅವರ ಉಸಿರು. ಅದೇ ರೀತಿ ತೆಲುಗು, ತಮಿಳು, ಮರಾಠಿ ಭಾಷೆಗಳಲ್ಲಿ, ಕೀರ್ತನೆ ಸುಳಾದಿ ಉಗಾಭೋಗ ಅಭಂಗ, ಮೊದಲಾದ ಪ್ರಕಾರಗಳನ್ನು ನಾವು ಕಾಣುತ್ತೇವೆ. ಕನ್ನಡ ಭಾಷೆಯ ಕೀರ್ತೆಗಳ ಸಂದರ್ಭದಲ್ಲಿ ಹೇಳುವದಾದರೆ, ನಮ್ಮ ಹರಿದಾಸರುಗಳು ಹರಿಯನ್ನು ಕೇವಲ ಸ್ತುತಿಸಲಿಲ್ಲ ಅವರನ್ನು ಟೀಕಿಸುವ ನಿಂದಿಸುವ ಅಧಿಕಾರವನ್ನು ಹೊಂದಿದ್ದರು. ಹರಿದಾಸ ಸಾಹಿತ್ಯದಲ್ಲಿ ಇಂತಹ ಕೀರ್ತನೆಗಳನ್ನು 'ನಿಂದಾಸ್ತುತಿ' ಗಳೆಂದು ಹೆಸರಿಸಲಾಗಿದೆ. ಪುರಂದರ ದಾಸರ ಒಂದು ಕೀರ್ತನೆಯ ನುಡಿಯನ್ನು ನೋಡಿ:
ಹಾಸಿಗೆ ಹಾವಿನ ಮೇಲೆ ಒರಗಿದವ
ಹೇಸಿಗೆ ಇಲ್ಲದೆ ಕರಡಿಯ ಕೂಡಿದ
ಗ್ರಾಸಕಿಲ್ಲದೆ ತೊತ್ತಿನ ಮಗನ ಮನೆಲುಂಡ
ದೋಷಕಂಜದೆ ಮಾವನ ಶಿರವ ತರಿದವಗೆ
ಏನುಮರುಳಾದೆಮ್ಮ ಎಲೆ ರುಕ್ಮಿಣಿ
ಹೀನಕುಲ ಗೊಲ್ಲ ಶ್ರೀ ಗೋಪಾಲ ಕೃಷ್ಣಗೆ
ಇಂತಹ ನಿಂದಾ ಸ್ತುತಿಯನ್ನು ಭಕ್ತ ರಾಮದಾಸು ಅವರ ಒಂದು ರಚಿಸಿದ್ದು ವಿಶೇಷ ಎನಿಸಿತು. ಅವರು ಗೊಲ್ಕೊಂಡ ಕಾರಾಗೃಹ ದಲ್ಲಿ ಕಳೆಯುವಾಗ ರಚಿಸಿದ್ದು ಎಂದು ಪ್ರತೀತಿ.'ನವರತ್ನ' ಕೃತಿಗಳಲ್ಲಿ ಒಂದಾದ ಈ ಹಾಡು ನೋಡಿ: ಇಕ್ಷಾಕು ಕುಲ ತಿಲಕ ಎಂದು ಪ್ರಾರಂಭವಾಗುವ ಕೀರ್ತನೆ 9 ನುಡಿಗಳಲ್ಲಿದೆ ಲೇಖನದ ಗಾತ್ರ ಗಮನದಲ್ಲಿಟ್ಟುಕೊಂಡು, ಕೇವಲ ಮೂರು ನುಡಿಗಳ ಭಾವ ಸಂಗ್ರಹಿಸಲು ಪ್ರಯತ್ನಿಸಲಾಗಿದೆ.
ఇక్ష్వాకు కులతిలక ఇకనైన పలుకవే రామచంద్ర
నన్ను రక్షింప కున్నను రక్షకు లెవరింక రామచంద్ర
ಇಕ್ಷ್ವಾಕು ಕುಲತಿಲಕ ಇಕನೈನ ಪಲಕವೇ ರಾಮಚಂದ್ರ
ನನ್ನು ರಕ್ಷಿಂಪಕುನ್ನನು ರಕ್ಷಕಲೆವರಿಂಕ ರಾಮಚಂದ್ರ
(ಭಾವ: ಇಕ್ಷಾಕು ವಂಶದ ಕುಲತಿಲಕ ರಾಮಚಂದ್ರ ಈಗಾದರೂ ನನ್ನ ಮೇಲೆ ಕೃಪೆ ತೋರು. ನಿನ್ನ ಬಿಟ್ಟರೆ ನನ್ನನ್ನು ರಕ್ಕಿಸುವವರಾರು ರಾಮಚಂದ್ರ)
సీతమ్మకు చేయిస్తి చింతాకు పతకము రామచంద్ర
ఆ పతకమునకు పట్టె పదివేల వరహాలు రామచంద్ర
ಸೀತಮ್ಮಕು ಚೇಯಿಸ್ತಿ ಚಿಂತಾಕು ಪತಕಮು ರಾಮಚಂದ್ರ
ಆ ಪತಕನುಮುಕ ಪಟ್ಟೆ ಪದಿವೇಲು ವರಹಾಲು ರಾಮಚಂದ್ರ
ಭಾವ:
ಸೀತಾಮಾತಗೆ ಸಣ್ಣ ಸಣ್ಣ ಎಲೆಗಳ (ಚಿಂತಾಕು- ಹುಣಸೆ ಎಲೆ) ಆಕಾರದ ಕೊರಳ ಹಾರ ಮಾಡಿಸಿದೆ ಅದಕ್ಕೆ ಹತ್ತು ಸಾವಿರ ವರಹಗಳನ್ನು ವೆಚ್ಚಮಾಡಿದೆ ರಾಮಚಂದ್ರ
తురాయి నీకు మెలుకువగ చేయిస్తి రామచంద్ర
నీవు కులుకుచు తిరిగేవు ఎవరబ్బ సొమ్మని రామచంద్ర
ಕಲ್ಕಿ ತುರಾಯಿ ಮೆಲುಕುವಗ ಚೇಯಿಸ್ತಿ ರಾಮಚಂದ್ರ
ನೀವು ಕುಲಕುಚು ತಿರಿಗೇವು ಎವರಬ್ಬ ಸೊಮ್ಮನಿ ರಾಮಚಂದ್ರ.
ನಿನ್ನ ಮುಕುಟದ ಜೊತೆಗೆ ಬಹು ಮೌಲ್ಯದ ಕಿರೀಟ ತುರಾಯಿ ಅಂದರೆ ಮುತ್ತು ವಜ್ರ ಖಚಿತ ನೇತಾಡುವ, ಆಭರಣ ಮಾಡಿಸಿದೆ ರಾಮಚಂದ್ರ ನೀನೋ ತಲೆ ಕುಲುಕಿಸುತ ಮೆರೆದಾಡಿದಿ ಯಾರಪ್ಪನ ಸೊತ್ತು ಎಂದುಕೊಂಡೆ ರಾಮಚಂದ್ರ. 'ಎವರಬ್ಬ ಸೊಮ್ಮನಿ' ಪದ ಗಮನಿಸಿ: ಎವರು- ಯಾರು ಅಬ್ಬ- ಅಪ್ಪ, ಸೊಮ್ಮು- ಸೊತ್ತು. ನಾವು ಬೈಯುವಾಗ, ಉಪಯೋಗಿಸುವ 'ಯಾರಪ್ಪನ ಗಂಟು?' ಎನ್ನುವ ಭಾವ ಪರಿಣಾಮಕಾರಿಯಾಗಿ ಪ್ರಕಟವಾಗಿದೆ.
ನಾನಿಲ್ಲಿ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವೆ. ನನ್ನ ಮೇಲೆ ದಯೆ ತೋರು ಈಗಾಲದರೂ ನನ್ನ ಮೇಲೆ ನಿನ್ನ ಕೃಪಾದೃಷ್ಟಿ ಬೀರು ಎಂದು ಬೇಡುತ್ತಿರುವ ಈ ಕೀರ್ತನೆ ಎಲ್ಲಾ ಕಾಲಕ್ಕೂ ಪ್ರಸಿದ್ಧಿ ಹೊಂದಿದ್ದು ಆಗಿರುವುದು ಗಮನಿಸಬೇಕಾದ ಸಂಗತಿ.
ಈ ರಾಮಭಕ್ತನ ಸ್ವಭಾವವೇ ಹಾಗೆ. ನೇರವಾಗಿ ಹೇಳುವ ಕಲೆ.
ಅವರ ಇನ್ನೊಂದು ಕೃತಿ:
ಇದರಲ್ಲಿ "ಅಮ್ಮಾ ತಾಯಿ ಸೀತಮ್ಮ, ನನ್ನಮೊರೆಯನ್ನು ನಿನ್ನ ಪತಿ ಆ ರಾಮಚಂದ್ರ ಪ್ರಭು ಕೇಳುತ್ತಾ ಇಲ್ಲ. ನೀನಾದರೂ ದಯಮಾಡಿ ನನ್ನು ರಕ್ಷಿಸು ಎಂದು ಹೇಳು" ಎನ್ನುವಲ್ಲಿ ಕರುಣಾ ಮತ್ತು ಭಕ್ಕಿ ರಸಗಳ ಸಮ್ಮಿಲನ ಕೇಳುಗನ ಮನಸ್ಸನ್ನು ಆರ್ದವ ಗೊಳಿಸದೇ ಇರಲಾರದು.
ನನ್ನು ಬ್ರೋವ ಮನಿ ಚೆಪ್ಪವೇ ಸೀತಮ್ಮ ತಲ್ಲಿ
ನನ್ನು ಬ್ರೋವ ಮನಿ ಚೆಪ್ಪವೇ ಸೀತಮ್ಮ ತಲ್ಲಿ
(ನನ್ನನು ರಕ್ಷಿಸೆಂದು ಹೇಳು ಸೀತಾ ಮಾತೆ
ನನ್ನನು ರಕ್ಷಿಸೆಂದು ಹೇಳು ಸೀತಾ ಮಾತೆ)
ನನ್ನು ಬ್ತೋವಮನಿ ಚೆಪ್ಪು ನಾರೀ ಶಿರೋಮಣಿ
ಜನಕುನಿ ಕೂತುರ ಜನನಿ ಜಾನಕಮ್ಮ
ಲೋಕಾಂತ ರಂಗುಡು ಶ್ರೀಕಾಂತ ನಿನು ಗುಡಿ
ಏಕಾಂತ ವೇಳ ಏಕ ಶಯ್ಯನುನ್ನ ವೇಳ.
(ನನ್ನನು ರಕ್ಷಿಸೆಂದು ಹೇಳು ನಾರಿಯರ ಶಿರೋರತ್ನ
ಜನಕನ ಮಗಳೆ ತಾಯಿ ಜಾನಕಮ್ಮ
ಲೋಕದ ಒಡೆಯ ರಂಗನಾಥ, ಶ್ರೀ ಕಾಂತ ನಿನ ಜೊತೆ, ಏಕಾಂತ ಸಮಯದಿ ಒಂದೇ ಮಂಚದಲಿ ಇರುವಾಗ)
ನನ್ನ ಬ್ರೋವಮನಿ ಚೆಪ್ಪವೇ ಸೀತಮ್ಮ ತಲ್ಲಿ.
(ನನ್ನನು ರಕ್ಷಿಸೆಂದು ಹೇಳು ಸೀತಾ ಮಾತೆ)
ಇಲ್ಲಿ ಪದಗಳಿಗಿಂತ ಭಾವ ಹಿರಿಯ ಪಾತ್ರ ವಹಿಸಿದೆ ಎಂದು ಎನಿಸದೆ ಇರಲಾರದು.
ಮುಂದೆ ರಾಮದಾಸ ಜೈಲಿನಿಂದ ಬಿಡುಗಡೆ ಹೊಂದಿ ಭದ್ರಾಚಲಂಗೆ ಹಿಂದಿರುಗಿ ಬಂದರು. ತನ್ನ ಶೇಷಾಯುಷ್ಯವನ್ನು ಪ್ರಭು ರಾಮಚಂದ್ರನ ಸೇವೆಯಲ್ಲಿ ಕಳೆಯುತ್ತ 1688ರಲ್ಲಿ ಸಾಯುಜ್ಯವನ್ನು ಸೇರಿದರು.
ತ್ಯಾಗರಾಜು, ಕ್ಷೇತ್ರಯ್ಯ, ನನ್ನಯ್ಯ, ವೆಂಗಮಾಂಬ, ಮೊದಲಾದ ಮಹಾನ ಕವಿಗಳ ಕವಿಯತ್ರಿಯರ ಸಾಲಿಗೆ ಸೇರುವ ಭಕ್ತ ರಾಮದಾಸು ಅಲಿಯಾಸ್ ಭದ್ರಾಚಲ ರಾಮದಾಸು ಖಂಡಿತವಾಗಿ ತೆಲುಗು ಭಾಷೆಗೆ ಸೇರುವ ಮಹಾನ ಕವಿ ಅಷ್ಟೇ ಅಲ್ಲ; ರಾಮದಾಸ, ತೆಲುಗು ಭಕ್ತಿ ಸಾಹಿತ್ಯದಲ್ಲಿ ಅಜಾರಾಮರವಾಗಿ ಉಳಿಯುವ ಧೃವ ತಾರೆ.
ಅವನ ಕೀರ್ತನೆಗಳನ್ನು ಹಾಡದ ಜನಗಳು, ಸಂಗೀತಗಾರರು, ಭಜನಾ ಮಂಡಳಿಗಳು, ಕರ್ನಾಟಕ, ತಮಿಳುನಾಡು, ತೆಲುಗುನಾಡಿನಲ್ಲಿ ಇಲ್ಲ ಎಂದರೆ ಅದು ಸರಿಯಾದ ಮಾತು.
ಜೈ ಶ್ರೀ ರಾಮ್
- ಗೋನವಾರ ಕಿಶನ್ ರಾವ್
ಲೇಖಕರ ಸಂಕ್ಷಿಪ್ತ ಪರಿಚಯ:
ರಾಯಚೂರು ಜಿಲ್ಲೆಯ, ಗೋನವಾರದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಗೋನವಾರದಲ್ಲಿ ನಂತರ ಮಾಧ್ಯಮಿಕ ಪ್ರೌಢ, ಪದವಿ ಓದು ರಾಯಚೂರಿನ ಹಮದರ್ದ ಶಾಲೆ, ಎಲ್ ವಿ ಡಿ ಕಾಲೇಜು, (ಲಕ್ಷ್ಮೀ ವೆಂಕಟೇಶ ದೇಸಾಯಿ ಕಾಲೇಜು). ಮೈಸೂರಿನ ಮಾನಸ ಗಂಗೋತ್ರಿಯಿಂದ ಎಂ.ಎ.(ಕನ್ನಡ) ಪ್ರಥಮ ದರ್ಜೆ ಹೈದರಾಬಾದ ಉಸ್ಮಾನಿಯಾ ವಿ.ವಿ ದಿಂದ ಎಂ.ಫಿಲ್. ಪಡೆದಿದ್ದಾರೆ. ನಿವೃತ್ತ ಕನ್ನಡ ಉಪನ್ಯಾಸಕರು. ಹೈದರಾಬಾದಿನ ನೃಪತುಂಗ ಕನ್ನಡ ವಿದ್ಯಾಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ನಂತರವೂ, ಎರಡು ವರ್ಷಗಳ ಕಾಲ ಸಂದರ್ಶಕ ಉಪನ್ಯಾಸರಾಗಿ ಉಸ್ಮಾನಿಯಾ ವಿಶ್ವ ವಿ.ದ ಕನ್ನಡ ವಿಭಾಗದಲ್ಲಿ ಸ್ನಾತಕೋತ್ತರ ತರಗತಿಗಳಿಗೆ ಬೋಧನಾ ವೃತ್ತಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ. ಅಂಕಣ ಬರಹ, ಅನುವಾದ, ವಿಮರ್ಶೆ, ನಾಟಕ ರಚನೆಯಲ್ಲಿ ತೊಡಗಿದ್ದಾರೆ. ಕತೆಗಳು, ವಿಮರ್ಶಾ ಬರಹಗಳು ನಾಟಕಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಗರದ ಅಕ್ಷರ ಪ್ರಕಾಶನದಿಂದ ಮಕ್ಕಳ ನಾಟಕ ಝುಕ್ ಝುಕ್ ಭಯ್ಯಾ ತಾಲಮ್ ತಾಲ್ ಪ್ರಕಟ.
ತೆಲುಗು ವಿಪ್ಲವ ಸಾಹಿತಿ ಶ್ರೀ ಶ್ರೀಯವರ ಮಹಾಪ್ರಸ್ತಾನ ಕವಿತೆಗಳ ಸಮಗ್ರ ಅನುವಾದ ಮಾಡಿದ್ದಾರೆ. ಕುಮಾರ ವ್ಯಾಸ ಮಹಾಭಾರತ ಅಧಾರಿತ ಅಂಕಣ ಬರಹಗಳು "ನುಡಿಕಾರಣ" ಶೀರ್ಷಿಕೆಯಡಿ ನಸುಕು.ಕಾಮ್ ನಲ್ಲಿ ಪ್ರಕಟ. ಹೈದರಾಬಾದ್ ನ ಕರ್ನಾಟಕ ಸಾಹಿತ್ಯ ಮಂದಿರಕ್ಕಾಗಿ ಎಂಟು ವರ್ಷಗಳ ಕಾಲ 'ಪರಿಚಯ' ಸಾಹಿತ್ಯ ಪತ್ರಿಕೆ ಸಂಪಾದಿಸಿ ಕೊಟ್ಟ ಹಿರಿಮೆ ಇವರದು.
ಸಂಪರ್ಕ:
Gonwar Kishan Rao
303 Shri Shailaja Manor
16-11-419/1/1
SBI officers colony
Musarambagh
Hyderabad - 500 036
TELANGANA.
ಮೊಬೈಲ್: +91 9441476538
Mail Id. gonwar2007@gmail.com.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ