ಎಸ್.ಡಿ.ಎಂ ಪ್ರಾಧ್ಯಾಪಕರಿಗೆ ಪ್ರತಿಷ್ಠಿತ ಅಮೆರಿಕನ್ ಪೇಟೆಂಟ್
ಉಜಿರೆ: ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ನೆಫಿಸತ್ ಪಿ, ಸಹಾಯಕ ಪ್ರಾಧ್ಯಾಪಕಿ ಡಾ.ಶಶಿಪ್ರಭಾ ಅವರ ಸಂಶೋಧನೆಗೆ ಪ್ರತಿಷ್ಠಿತ ಅಮೆರಿಕನ್ ಪೇಟೆಂಟ್ ಲಭಿಸಿದೆ. ಪ್ರಪ್ರಥಮ ಬಾರಿಗೆ ಎಸ್.ಡಿ.ಎಂ ಕಾಲೇಜು ಅಮೆರಿಕದ ಪೇಟೆಂಟ್ ಮನ್ನಣೆ ಪಡೆದ ಹೆಗ್ಗಳಿಕೆಗೆ ಭಾಜನವಾಗಿದೆ.
ಈ ಹಿಂದೆ ಇದೇ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾರಾಯಣ ಹೆಬ್ಬಾರ್ ಅವರ ಸಂಶೋಧನೆಗೆ ಆಸ್ಟ್ರೇಲಿಯಾದ ಪೇಟೆಂಟ್ ಲಭಿಸಿತ್ತು. ಇದೀಗ ಈ ವಿಭಾಗದ ಇನ್ನಿಬ್ಬರು ಪ್ರಾಧ್ಯಾಪಕರು ನಡೆಸಿದ ಸಂಶೋಧನೆಯು ಅಮೇರಿಕನ್ ಪೇಟೆಂಟ್ ಪಡೆಯುವುದರ ಮೂಲಕ ಮತ್ತೊಂದು ವಿಶ್ವ ಮನ್ನಣೆ ಪಡೆದಂತಾಗಿದೆ. ಉಳಿದೆಲ್ಲ ದೇಶಗಳ ಪೇಟೆಂಟ್‌ಗಿಂತ ಅಮೆರಿಕನ್ ಪೇಟೆಂಟ್‌ಗೆ ವಿಶೇಷ ವಿಶ್ವಮಾನ್ಯತೆ ಇದೆ. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತçದ ಸಂಶೋಧನಾ ಪ್ರಯೋಗಾಲಯದಲ್ಲಿಯೇ ಈ ಇಬ್ಬರು ಪ್ರಾಧ್ಯಾಪಕರು ಸಂಶೋಧನೆ ಕೈಗೊಂಡು ಯಶಸ್ವಿಯಾಗಿದ್ದಾರೆ.
‘ಬೆಂಝಿಲಿಡೀನ್ ಡಿರೈವೆಟೀಸ್ ಆಫ್ ಫಿನೊಬಾಮ್ ಆ್ಯಸ್ ಆ್ಯಂಟಿ-ಇನ್‌ಫ್ಲಮೇಟರಿ ಏಜೆಂಟ್’ ಎಂಬ ವಿಷಯದ ಮೇಲೆ ಈ ಸಂಶೋಧನೆಯನ್ನು ಕೈಗೊಳ್ಳಲಾಗಿತ್ತು. ದೈಹಿಕ ನೋವು ನಿವಾರಕ ಔಷಧೀಯ ಪ್ರಯೋಜನಗಳನ್ನು ವಿಸ್ತರಿಸುವುದಕ್ಕೆ ಬೇಕಾದ ಪ್ರಾಯೋಗಿಕ ಮಾರ್ಗದರ್ಶಿ ಪರಿಕಲ್ಪನೆಯಾಗಿ ಈ ಸಂಶೋಧನೆಗೆ ಮಹತ್ವವಿದೆ. ವೈದ್ಯಕೀಯ ರಂಗದ ಚಿಕಿತ್ಸೆಯ ವಿಧಾನಗಳನ್ನು ಮರುರೂಪಿಸುವುದಕ್ಕೆ ಪ್ರಸಕ್ತ ಸಂಶೋಧನೆಯ ಫಲಿತಗಳು ಪ್ರಯೋಜನಕಾರಿಯಾಗಲಿವೆ. ಇದನ್ನು ಪರಿಗಣಿಸಿ ಅಮೆರಿಕದ ಪ್ರತಿಷ್ಠಿತ ಪೇಟೆಂಟ್‌ನ ಮನ್ನಣೆ ನೀಡಲಾಗಿದೆ.
ಸೌದಿ ಅರೇಬಿಯಾದ ‘ಕಿಂಗ್ ಫೈಸಲ್’ ವಿಶ್ವವಿದ್ಯಾಲಯದ ಸಹಭಾಗಿತ್ವದೊಂದಿಗೆ ಕೈಗೊಳ್ಳಲಾಗಿದ್ದ ಈ ಸಂಶೋಧನೆಗೆ ಲಭಿಸಿದ ಅಮೆರಿಕನ್ ಪೇಟೆಂಟ್‌ನ ರಕ್ಷಣೆಯು 20 ವರ್ಷಗಳ ಸುಧೀರ್ಘಾವಧಿಯದ್ದಾಗಿದೆ. ಈ ನಿರ್ದಿಷ್ಟ ಸಂಶೋಧನಾ ಫಲಿತಗಳ ಆಧಾರದ ಆವಿಷ್ಕಾರ, ಬಳಕೆ ಮತ್ತು ಮಾರಾಟದ ಹಕ್ಕುಸ್ವಾಮ್ಯವು ಕಾಲೇಜಿನ ಈ ಇಬ್ಬರು ಪ್ರಾಧ್ಯಾಪಕರದ್ದಾಗಿದೆ. ಈ ಫಲಿತಗಳನ್ನು ಅನ್ವಯಿಸಿ ಉತ್ಪನ್ನ ತಯಾರಿಕೆ, ಬಳಕೆ ಮತ್ತು ಮಾರಾಟದಿಂದ ಇತರರನ್ನು ಅಮೆರಿಕನ್ ಪೇಟೆಂಟ್ ನಿರ್ಬಂಧಿಸುತ್ತದೆ.
ಡಾ.ನೆಫಿಸತ್ ಮತ್ತು ಡಾ.ಶಶಿಪ್ರಭಾ ಅವರು ವಿಭಾಗದ ಪ್ರಯೋಗಾಲಯದಲ್ಲಿಯೇ ಸಂಶೋಧನೆ ಕೈಗೊಂಡು ಅಮೆರಿಕನ್ ಪೇಟೆಂಟ್‌ನ ವಿಶ್ವಮಾನ್ಯತೆ ಪಡೆದಿರುವುದು ಹೆಮ್ಮೆಯ ವಿಷಯ. ಪ್ರತಿಷ್ಠಿತ ಅಮೆರಿಕನ್ ಪೇಟೆಂಟ್‌ನ ಮನ್ನಣೆಯಿಂದ ಭವಿಷ್ಯದ ವಿನೂತನ ಸಂಶೋಧನಾ ಹೆಜ್ಜೆಗಳಿಗೆ ಹೊಸದೊಂದು ಮಾದರಿ ಸೃಷ್ಟಿಯಾದಂತಾಗಿದೆ ಎಂದು ರಸಾಯನಶಾಸ್ತç ವಿಭಾಗದ ಮುಖ್ಯಸ್ಥ, ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್, ಡಾ.ಸತೀಶ್ಚಂದ್ರ ಎಸ್, ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ್ ಹೆಗ್ಡೆ ಅವರು ಪ್ರಾಧ್ಯಾಪಕರ ಸಂಶೋಧನಾ ಸಾಧನೆ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ