ಯಕ್ಷಗಾನ ಕರಾವಳಿಯ ಗಂಡು ಕಲೆ. ಇಂತಹ ಕಲೆಯಲ್ಲಿ ಮಿಂಚಿದ ನವೀನ ಶೆಟ್ಟಿ ಮುಂಡಾಜೆ. ಇವರು ದಿ.ಬಾಬು ಶೆಟ್ಟಿ ಹಾಗೂ ಗೋಪಿ ಶೆಟ್ಟಿ ಅವರ ಪುತ್ರ. ಪ್ರೌಢ ಶಿಕ್ಷಣವನ್ನು ಮುಗಿಸಿ 2002ರಲ್ಲಿ ಧರ್ಮಸ್ಥಳಕ್ಕೆ ಯಕ್ಷಗಾನ ಕಲಾಕೇಂದ್ರ ಸೇರಿ ಯಕ್ಷಗಾನ ಗುರುಗಳಾದ ದಿವಾಣ ಶಿವಶಂಕರ ಭಟ್ ಬಳಿ ಯಕ್ಷಗಾನ ಕಲಿತು 15 ವರ್ಷ ಧರ್ಮಸ್ಥಳ ಮೇಳ, 1 ವರ್ಷ ಎಡನೀರು ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಕಟೀಲು ಮೇಳದಲ್ಲಿ 6 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಹಿರಿಯ ಹಾಗೂ ಅನುಭವ ಯಕ್ಷಗಾನ ಕಲಾವಿದರ ಬಳಿ ಕೇಳಿ, ಭಾಗವತರಿಂದ ಕೇಳಿ, ಜೊತೆ ವೇಷದವರಲ್ಲಿ ಕೇಳಿ, ಪ್ರಸಂಗ ಪುಸ್ತಕ ಓದಿ ರಂಗಕ್ಕೆ ಹೋಗುವ ಮೊದಲು ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ನವೀನ ಶೆಟ್ಟಿ ಮುಂಡಾಜೆ. ಕಾಳಿಂಗ ಮರ್ಧನ, ಸತ್ಯ ಹರಿಶ್ಚಂದ್ರ, ಅಭಿಮನ್ಯು ಕಾಳಗ, ಗದಾಯುದ್ಧ, ಇತ್ಯಾದಿ ನೆಚ್ಚಿನ ಪ್ರಸಂಗಗಳು. ಕೃಷ್ಣ, ಅಭಿಮನ್ಯು, ಬಬ್ರುವಾಹನ, ಭಾರ್ಗವ, ಇತ್ಯಾದಿ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಪ್ರಸ್ತುತ ಹೆಚ್ಚಿನ ಯಕ್ಷಗಾನ ತಿರುಗಾಟದ ಮೇಳಗಳ ಯಕ್ಷಗಾನವು ಕಾಲಮಿತಿಯಾಗಿರುವುದರಿಂದ ಹೆಚ್ಚಿನ ಪ್ರೇಕ್ಷಕರು ಸೇರುತ್ತಾರೆ. ಪೂರ್ತಿ ಯಕ್ಷಗಾನವನ್ನು ವೀಕ್ಷಿಸಿ, ಮರುದಿನ ಅವರವರ ವೃತ್ತಿ ಜೀವನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕಾಲಮಿತಿ ಯಕ್ಷಗಾನ ಒಳ್ಳೆಯ ಅವಕಾಶವನ್ನು ಕೊಟ್ಟಿದೆ. ಕಲಾವಿದರಿಗೂ ಅನುಕೂಲಕರವಾಗಿದೆ. ಬೇರೆ ವೃತ್ತಿಯಲ್ಲಿರುವ ಕಲಾವಿದರಿಗೂ ಕಾಲಮಿತಿ ಅನುಕೂಲಕರವಾಗಿದೆ. ಬೇರೆ ಬೇರೆ ಮಾಧ್ಯಮಗಳಲ್ಲಿ ಯಕ್ಷಗಾನ ನೇರಪ್ರಸಾರ ಇರುವುದರಿಂದ ಯಕ್ಷಗಾನ ಅಭಿಮಾನಿಗಳಿಗೆ ಮನೆಯಲ್ಲಿಯೇ ಕುಳಿತು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ವೀಕ್ಷಿಸುವ ಅವಕಾಶ ಇದೆ. ಹೊರರಾಜ್ಯ, ಹೊರದೇಶದ ಯಕ್ಷಗಾನ ಅಭಿಮಾನಿಗಳಿಗೂ ಮಾಧ್ಯಮಗಳ ಮೂಲಕ ಯಕ್ಷಗಾನ ವೀಕ್ಷಿಸುವಂತಾಗಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಒಬ್ಬ ಕಲಾವಿದ ಬೆಳೆಯುವುದಕ್ಕೆ ಕಾರಣ ಪ್ರೇಕ್ಷಕರು. ಉತ್ತಮವಾದ, ಯಕ್ಷಗಾನದ ಬಗ್ಗೆ ಚೆನ್ನಾಗಿ ಅರಿತಂತಹ ಪ್ರೇಕ್ಷಕರೇ ಈಗ ಯಕ್ಷಗಾನಕ್ಕೆ ಬರುತ್ತಾರೆ. ನಮ್ಮ ಸರಿ ತಪ್ಪುಗಳನ್ನು ತಿಳಿಸಿಕೊಡುತ್ತಾರೆ. ನಮ್ಮ ಯಕ್ಷಗಾನ ವೇಷದ ಭಾವಚಿತ್ರ ಹಾಗೂ ವೀಡಿಯೋ ಚಿತ್ರೀಕರಣ ಇದನ್ನೆಲ್ಲಾ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ಇದರಿಂದ ಕಲಾವಿದರ ಪರಿಚಯ ಹೆಚ್ಚಾಗುತ್ತದೆ. ಯಾವ ಊರಿಗೆ ಹೋದರೂ ನಮ್ಮನ್ನು ಗುರುತಿಸಿ ಬಂದು ಮಾತನಾಡುತ್ತಾರೆ. ಇನ್ನು ಕೆಲವು ಅಭಿಮಾನಿಗಳು ನಾವು ಯಕ್ಷಗಾನದ ಸ್ಥಳಕ್ಕೆ ಹೋಗುವಾಗ ವಾಹನದ ಅಡಚಣೆಗೆ ನಾವು ಸಿಲುಕಿದರೆ ಅವರೇ ನಮ್ಮನ್ನು ಸುರಕ್ಷಿತವಾಗಿ ಯಕ್ಷಗಾನದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಮುಂದಿನ ಯೋಜನೆ:-
ಅಂತಹ ಯೋಜನೆ ಏನೂ ಇಲ್ಲ. ಮೊದಲಿನಿಂದಲೂ ಯಕ್ಷಗಾನದಲ್ಲಿ ದಿಗಿಣದಲ್ಲಿ ಅಪಾರ ಒಲವು ಹಾಗೂ ಪುಂಡುವೇಷಗಳನ್ನೇ ಹೆಚ್ಚಾಗಿ ನಿರ್ವಹಿಸುತ್ತಾ ಬಂದಿರುವುದರಿಂದ ಪುಂಡುವೇಷಗಳಲ್ಲಿಯೇ ಹೆಚ್ಚಿನ ಒಲವು. ಹಾಗೆಂದು ಒಬ್ಬ ಕಲಾವಿದ ಒಂದೇ ವೇಷಕ್ಕೆ ಸೀಮಿತ ಆಗಿರದೆ, ಯಾವ ಪಾತ್ರವನ್ನಾದರೂ ಜವಾಬ್ದಾರಿಯಿಂದ, ಆಸಕ್ತಿಯಿಂದ ನಿಭಾಯಿಸುವ ಶಕ್ತಿ, ಸಾಮರ್ಥ್ಯ ಹೊಂದಿರಬೇಕು. ಕಲಿಯುವಿಕೆ ನಿರಂತರ ಎಂಬ ಮಾತಿನಂತೆ ಕಲಾವಿದನಿಗೆ ಇನ್ನಷ್ಟು ಹೆಚ್ಚಿನ ಅಧ್ಯಯನ ನಿರಂತರವಾಗಿರಬೇಕು.
ಇವರ ಯಕ್ಷಗಾನ ರಂಗದ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕೃಷಿ ಕ್ಷೇತ್ರದ ಕೆಲಸ, ಪ್ರಾಣಿ ಪಕ್ಷಿ ಸಾಕುವುದು ಇತ್ಯಾದಿ ಇವರ ಹವ್ಯಾಸಗಳು. ನವೀನ ಶೆಟ್ಟಿ ಮುಂಡಾಜೆ ಅವರು ಚಿತ್ರಿತಾ ಅವರನ್ನು ಮದುವೆಯಾಗಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ತಂದೆ, ತಾಯಿ, ಹೆಂಡತಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ನವೀನ ಶೆಟ್ಟಿ ಮುಂಡಾಜೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
+91 8317463705
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ