ಭಾಷೆ ನಮಗೆ ಅನಿವಾರ್ಯ ಮತ್ತು ಅಗತ್ಯ: ಹೆಚ್.ಕೆ. ಪುಷ್ಪಲತಾ

Upayuktha
0


ಹಾಸನ: ಶಾಲೆಗಳಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಭಾಷೆಯ ಕಲಿಕೆಯನ್ನು ಉಂಟುಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವವೆನಿಸಿದೆ. ಇಪ್ಪತ್ತೊಂದನೇ ಶತಮಾನದ ಸಮಕಾಲೀನ ಜಗತ್ತು ವಿಶ್ವಗ್ರಾಮವೆನಿಸಿದ್ದು ಇಂದು ಎಲ್ಲರನ್ನು ಸಂಪರ್ಕಿಸಬಹುದಾದ ವ್ಯವಸ್ಥೆ ನಮ್ಮಲ್ಲಿದೆ. ಆದ್ದರಿಂದ ಸಂಪರ್ಕ ಭಾಷೆಯಾದ ಇಂಗ್ಲಿಷ್ ಕಲಿಕೆ ಅನಿವಾರ್ಯ ಹಾಗೂ ಅಗತ್ಯವೆನಿಸಿದೆ ಎಂದು ಹಾಸನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಆದ ಹೆಚ್.ಕೆ. ಪುಷ್ಪಲತಾ ಹೇಳಿದರು.


ಸರಿಸುಮಾರು ಎರಡೂವರೆ ವರ್ಷಗಳಿಂದ ಪ್ರತಿ ಶನಿವಾರ ವಿದ್ಯಾ ಪ್ರವೇಶ ಮತ್ತು ನಲಿ-ಕಲಿ ಜಿಲ್ಲಾ ತಂಡವು ಆಯೋಜಿಸಿ ಡಯಟ್ ವತಿಯಿಂದ ನಡೆಸಲಾಗುತ್ತಿರುವ ಆನ್ಲೈನ್ ವಿಶೇಷ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಮಾರ್ಗದರ್ಶಕರಾಗಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಭಾಷೆಯನ್ನು ಬಳಸಿದಷ್ಟೂ ಅದರ ಉಳಿವು ಹೆಚ್ಚಾಗುತ್ತದೆ. ಭಾಷೆಯ ಸ್ವರೂಪ ಮತ್ತು ಸೌಂದರ್ಯ ಹೆಚ್ಚುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಒಂದು ಸಂಪರ್ಕ ಭಾಷೆಯಾಗಿದ್ದು ಅದನ್ನು ವಿದ್ಯಾರ್ಥಿಗಳು ಕಲಿಯುವುದು ಮತ್ತು ಶಿಕ್ಷಕರು ಕಲಿಸುವುದು ಪ್ರಮುಖ ಜವಾಬ್ದಾರಿಯಾಗಿದೆ. ನಿತ್ಯದ ಬದುಕಿನಲ್ಲಿ ಮಗು ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುವಂತೆ ಪ್ರೇರೇಪಿಸಬೇಕು. ಈ ನಿಟ್ಟಿನಲ್ಲಿ ಇಂದು ಸಂಪನ್ಮೂಲ ವ್ಯಕ್ತಿಗಳಾದ ಕೆ.ಎನ್. ಚಿದಾನಂದ ರವರು ಅತ್ಯುತ್ತಮವಾಗಿ ಸರಣಿ ತರಗತಿಗಳನ್ನು ನಿರ್ವಹಣೆ ಮಾಡಿದ್ದು ಇಂಗ್ಲಿಷ್ ಭಾಷಾ ಕಲಿಕೆಯನ್ನು ಅತ್ಯಂತ ಸರಳವಾಗಿ ಸುಲಭವಾಗಿ ಕಲಿಸುವ ವಿಧಾನಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಹೇಳಿಕೊಡುತ್ತಾರೆ ಎಂದು ಹೇಳಿದರು.


ನಗರದ ಆರ್.ಸಿ. ರಸ್ತೆಯಲ್ಲಿರುವ ಜಿಜಿಜೆಸಿ ಪ್ರಧಾನ ಪ್ರೌಢಶಾಲೆಯ ಸಹ ಶಿಕ್ಷಕರಾದ ಕೆ.ಎನ್. ಚಿದಾನಂದ ರವರು ಸಂಪನ್ಮೂಲ ವ್ಯಕ್ತಿಯಾಗಿ ಆನ್ ಲೈನ್ ಕ್ಲಾಸ್ ನ್ನು ನಿರ್ವಹಣೆ ಮಾಡುತ್ತ ಶಿಕ್ಷಕರನ್ನು ಕುರಿತು ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯದ ಅಂತಃಸತ್ವ ಹೆಚ್ಚಾಗಿಯೇ ಇರುತ್ತದೆ. ಅದನ್ನು ಶಿಕ್ಷಕರು ಗುರ್ತಿಸಿ ಸರಿಯಾದ ಮಾರ್ಗದರ್ಶನ ಮತ್ತು ಸೂಕ್ತ ಸಲಹೆ ನೀಡಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷೆಯ ಕಲಿಕೆಯಲ್ಲಿ ಮತ್ತು ಬಳಕೆಯಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಇಂಗ್ಲಿಷ್ ಭಾಷಾ ಕಲಿಕೆಗೆ ಸಂಬಂಧಿಸಿದಂತೆ ವ್ಯಾಕರಣಾಂಶಗಳನ್ನು ಅನುಕೂಲಿಸಿ ಕಲಿಸಬೇಕು. ಇಂದಿನ ತರಗತಿಯಲ್ಲಿ ವಿವಿಧ ಕಾಲಗಳಲ್ಲಿ ಯಸ್ ಅಥವಾ ನೋ (YES OR NO) ಪ್ರಶ್ನೆಗಳನ್ನು ಅರ್ಥಗರ್ಭಿತವಾಗಿ ಹೇಗೆ ಉಪಯೋಗಿಸಬೇಕು ಎಂಬುದನ್ನು ಉದಾಹರಣೆಗಳೊಂದಿಗೆ ತಿಳಿಸಿದರು. ಭಾಷೆಯ ಪರಿಶುದ್ಧತೆಯನ್ನು ಮಗು ಕಲಿಯಲು ಇಂಗ್ಲಿಷ್ ನ ಈ ಅಧ್ಯಾಯಗಳು ಬಹಳ ಪ್ರಮುಖವಾಗಿದೆ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸ್ಪಷ್ಟತೆ, ನಿರ್ದಿಷ್ಟತೆ ಹಾಗೂ ನಿರರ್ಗಳತೆಯು ಹೆಚ್ಚು ಪರಿಣಾಮಕಾರಿ ಕಲಿಕೆಯನ್ನು ಉಂಟು ಮಾಡುತ್ತದೆ ಎಂದರು.


ಹಾಸನ ತಾಲ್ಲೂಕಿನ ಜಿ.ಎಲ್.ಪಿ.ಎಸ್, ಕಣಜನಹಳ್ಳಿ ಶಾಲಾ  ಶಿಕ್ಷಕರಾದ ಲೋಕೇಶ್ ರವರು ತಾಂತ್ರಿಕವಾಗಿ ಆಯೋಜನೆ ಮಾಡಿದರು. ಶಿಕ್ಷಕಿ ರಮ್ಯ ಎಲ್ಲರನ್ನು ವಂದಿಸಿದರು. ಜಿ.ಹೆಚ್.ಪಿ.ಎಸ್ ಪೇಟೆ ಬಾಣಾವರ ಅರಸಿಕೆರೆ ತಾಲೂಕಿನ ಶಿಕ್ಷಕರಾದ ರಾಧಾಮಣಿ ರವರು ಕಾರ್ಯಕ್ರಮವನ್ನು ನಿರೂಪಿಸಿದರೆ, ಶಿಕ್ಷಕಿ ನೂತನ ರವರು ಪ್ರಾರ್ಥಿಸಿದರು ಮತ್ತು ಶಿಕ್ಷಕಿ ಹೆಚ್.ಎನ್. ಮಧು ರವರು ಎಲ್ಲರನ್ನು ವಂದಿಸಿದರು. ರಾಜ್ಯದ ವಿವಿಧ ತಾಲ್ಲೂಕುಗಳು ಹಾಗೂ ಜಿಲ್ಲೆಗಳಿಂದ ಶಿಕ್ಷಕರು ಆನ್ ಲೈನ್ ಟೆಲಿಗ್ರಾಂ ಗ್ರೂಪ್ ನಲ್ಲಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top