ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಮಾರ್ಚ್ 23 ರಂದು ಶಾಲೆಯ ಅಂಗ ಸಂಸ್ಥೆಯಾದ ಸುದಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸಂಸ್ಥೆಯ ಆಶ್ರಯದಲ್ಲಿ ಶಾಲೆಯ ಕನ್ನಡ ಶಿಕ್ಷಕಿ ಶ್ರೀಮತಿ ಕವಿತಾ ಅಡೂರು ಅವರು ಬರೆದ 'ಎಲ್ಲರೊಳಗೊಂದಾಗು' ಎಂಬ ಕೃತಿಯ ಲೋಕಾರ್ಪಣೆ ನಡೆಯಿತು. ಈ ಪುಸ್ತಕದಲ್ಲಿ ಮಂಕು ತಿಮ್ಮನ ಕಗ್ಗದ ವ್ಯಾಖ್ಯಾನವುಳ್ಳ ಕಗ್ಗದ ಬೆಳಕು ಅಂಕಣ ಬರೆಹಗಳ ಸಂಗ್ರಹವಿದೆ.
ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಡಾ ಪೀಟರ್ ವಿಲ್ಸನ್ ಪ್ರಭಾಕರ್ ಅವರು, "ಬದುಕಿನ ನೋವು-ನಲಿವು ಸಮಸ್ಯೆಗಳಲ್ಲಿ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿಸುತ್ತಾ ನಮ್ಮೊಳ ಹೊಕ್ಕು ಪರಿಶೀಲಿಸಿಕೊಳ್ಳುವುದಕ್ಕೆ ಕಗ್ಗದ ಓದು ಸಹಕಾರಿಯಾಗುತ್ತದೆ' ಎಂದು ಅಭಿಪ್ರಾಯ ಪಟ್ಟರು.
ಕೃತಿಕಾರರಾದ ಕವಿತಾ ಅಡೂರು ಅವರು "ಮಂಕುತಿಮ್ಮನ ಕಗ್ಗವು ನೊಂದವರ ಬದುಕಿಗೆ ನೆಮ್ಮದಿಯನ್ನು ನೀಡಲಿ ಎಂಬ ಡಿವಿಜಿಯವರ ಆಶಯವು ಸಾಕಾರಗೊಳ್ಳಲಿ" ಎಂದು ಹಾರೈಸಿದರು.
ಕೃತಿ ಸಮೀಕ್ಷೆಯನ್ನು ಮಾಡಿ ಮಾತನಾಡಿದ ಮಡಿಕೇರಿ ಆಕಾಶವಾಣಿಯ ಉದ್ಘೋಷಕ ಸುಬ್ರಾಯ ಸಂಪಾಜೆಯವರು "ಎಲ್ಲರೊಳಗೊಂದಾಗು ಎಂಬ ಈ ಪುಸ್ತಕದಲ್ಲಿ ಸಾಹಿತ್ಯ, ವಿಜ್ಞಾನ, ಸಾಮಾಜಿಕ ಬದುಕಿನ ಚಿತ್ರಣ,ವೇದಾಂತ ಮುಂತಾದವುಗಳಿವೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ನೊಂದ ಮನಸ್ಸಿಗೆ ಸಾಂತ್ವನವಿದೆ, ಸಮಸ್ಯೆಗಳಿಗೆ ಪರಿಹಾರ ಇದೆ." ಎಂದು ನುಡಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿಗಳಾದ ಫ್ರೊ ವಿ.ಬಿ ಅರ್ತಿಕಜೆಯವರು "ಈ ಪುಸ್ತಕದಲ್ಲಿ ಮಂಕುತಿಮ್ಮನ ಕಗ್ಗದ ಚೌಪದಿಗಳ ಧ್ವನ್ಯಾರ್ಥವನ್ನು ಗದ್ಯ ರೂಪದಲ್ಲಿ ಬರೆದಿರುವುದರಿಂದ ಸಾಮಾನ್ಯ ಜನರೂ ಕಗ್ಗದ ಆಶಯವನ್ನು ಅರ್ಥ ಮಾಡಿಕೊಳ್ಳುವ ಹಾಗಾಗಿದೆ. ಶ್ಲಾಘನೀಯ ಕಾರ್ಯ ಇದು" ಎಂದು ನುಡಿದರು.
ಕವಿಗಳಲ್ಲಿ ಎರಡು ವಿಧ. ಸಿದ್ಧಿ ಇರುವವರು ಮತ್ತು ಬುದ್ಧಿ ಇರುವವರು ಅಂತ. ಈಗಿನ ಕವಿಗೋಷ್ಠಿಗಳಲ್ಲಿ ಸಿದ್ಧಿ ಇರುವವರು ಬಹಳ ಕಡಿಮೆ. ಬುದ್ಧಿವಂತ ಕವಿಗಳು ಜಾಸ್ತಿ.
-ಅರ್ತಿಕಜೆ
ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಹಿರಿಯ ವಿದ್ವಾಂಸರಾದ ಮಂಜುಳಗಿರಿ ವೆಂಕಟರಮಣ ಭಟ್ ರವರು "ತಮ್ಮ ಆಶ್ರಯದಲ್ಲಿರುವ ಉದ್ಯೋಗಿಯೊಬ್ಬರ ಪ್ರತಿಭೆಯನ್ನು ಗುರುತಿಸಿ ಪೋಷಿಸುವ, ಪ್ರೋತ್ಸಾಹಿಸುವ ಸುದಾನ ಸಂಸ್ಥೆಯ ಉದಾತ್ತಗುಣವು ಶ್ಲಾಘನೀಯ" ಎಂದು ನುಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ರವರು "ಶಿಕ್ಷಕರು ಮಕ್ಕಳಿಗೆ ಆದರ್ಶವಾಗಬೇಕು, ಪಠ್ಯೇತರ ಚಟುವಟಿಕೆಗಳು ಮಕ್ಕಳ ಮನೋವಿಕಾಸಕ್ಕೆ ಅತ್ಯಗತ್ಯ" ಎಂದು ನುಡಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್ ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಹಶಿಕ್ಷಕಿ ಅನಿತಾ ಕೃತಿಕಾರರನ್ನು ಪರಿಚಯಿಸಿದರು. ಸಹಶಿಕ್ಷಕಿ ಅಮೃತವಾಣಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳಾದ ಅಕ್ಷರ ಕೆ ಸಿ, ಮಾನ್ವಿ ವಿಶ್ವನಾಥ, ಗ್ರೀಷ್ಮಾ ಡಿವಿಜಿ ರಚನೆಯ ವನಸುಮದೊಲೆನ್ನ ಪದ್ಯದ ಮೂಲಕ ಪ್ರಾರ್ಥನೆ ನೆರವೇರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ