ಮೀನುಗಾರರು ದೇಶದ ಜಲಸೈನಿಕರು: ಕ್ಯಾಪ್ಟನ್ ಬೃಜೇಶ್ ಚೌಟ

Upayuktha
0

ಬಿಜೆಪಿ ಮೀನುಗಾರರ ಪ್ರಕೋಷ್ಠದ ಸಮಾವೇಶ



ಮಂಗಳೂರು: ಮೊಗವೀರ ಸಮುದಾಯದವರು ದೇಶದ ಸಾಗರ ಗಡಿಯ ನಿಜವಾದ ರಕ್ಷಕರು. ಭಾರತೀಯ ನೌಕಾಪಡೆ ರಚನೆಗೂ ಮೊದಲೇ ಜಲಪ್ರದೇಶದ ಗಡಿಯನ್ನು ರಕ್ಷಿಸುತ್ತ ಬಂದವರು ಮೀನುಗಾರ ಸಮುದಾಯದವರು. ಸಮುದಾಯದ ದೇಶಭಕ್ತಿ, ಹಿಂದುತ್ವದ ನಿಷ್ಠೆ ಅಪಾರವಾದುದು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದರು.

ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಪಕ್ಷದ ಮೀನುಗಾರರ ಪ್ರಕೋಷ್ಠದ ಸಮಾವೇಶದಲ್ಲಿ ಮಾತನಾಡಿದರು.


ಮೀನುಗಾರರು ನಿಜವಾದ ಅರ್ಥದಲ್ಲಿ ಹಿಂದೂ ಸೈನಿಕರು. ಮೊಗವೀರ ಸಮಾಜದ ಬಂಧುಗಳು ಈ ಮಣ್ಣಿದ ದೈವ-ದೇವರುಗಳನ್ನು ನಂಬಿರುವವರು ಮತ್ತು ರಾಷ್ಟ್ರಾಭಿಮಾನ ಇಟ್ಟುಕೊಂಡವರು. ಎಂತಹ ಸವಾಲು ಬಂದರೂ ದಿಟ್ಟವಾಗಿ ಎದುರಿಸುವ ಸೈನಿಕನ ಮನಸ್ಥಿತಿ ಉಳ್ಳವರು. ರಾಷ್ಟ್ರದ ಹಿತಾಸಕ್ತಿ ಕಾಪಾಡುವಲ್ಲಿ ಕಾಯಾ ವಾಚಾ ಮನಸಾ ಹೋರಾಟ ನಡೆಸುವವರು ಮೀನುಗಾರ ಸಮಾಜದ ಬಂಧುಗಳು ಎಂದು ಕ್ಯಾಪ್ಟನ್ ಚೌಟ ನುಡಿದರು.


ಕರಾವಳಿಯಲ್ಲಿ ಬಿಜೆಪಿಗೆ ಶಕ್ತಿ ಕೊಟ್ಟ ಸಮುದಾಯವಿದು. ವಿಶ್ವವೇ ಮೆಚ್ಚಿ ಗೌರವಿಸುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಅಗತ್ಯವಿದೆ ಎಂದು ಕ್ಯಾ. ಚೌಟ ಮನವಿ ಮಾಡಿದರು.


ಕಾರ್ಯಕರ್ತರ ಸಹಾಯವಿಲ್ಲದೆ ಯಾವುದೇ ಪಕ್ಷ ಗೆಲ್ಲುವುದು ಸಾಧ್ಯವಿಲ್ಲ. ಪ್ರಧಾನಿ ಮೋದಿ ಅವರು ಮೀನುಗಾರ ಸಮುದಾಯದ ಬಗ್ಗೆ ವಿಶೇಷ ಪ್ರೀತಿ ಅಭಿಮಾನ ಇಟ್ಟುಕೊಂಡವರು. ಮೀನುಗಾರ ಸಮುದಾಯದ ಅಭಿವೃದ್ಧಿಗಾಗಿ ಅವರು ಜಾರಿಗೊಳಿಸಿದ ಮತ್ಸ್ಯ ಸಂಪದ ಯೋಜನೆ, ಬಂದರುಗಳ ಅಭಿವೃದ್ಧಿ ಯೋಜನೆಗಳೆಲ್ಲ  ಲಕ್ಷಾಂತರ ಮಂದಿಗೆ ಅನುಕೂಲಗಳನ್ನು ಕಲ್ಪಿಸಿಕೊಟ್ಟಿವೆ ಎಂದು ಚೌಟ ಹೇಳಿದರು.


ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2004ರಲ್ಲಿ ವೈಬ್ರೆಂಟ್ ಗುಜರಾತ್ ಸಮ್ಮಿಟ್ ಆಯೋಜಿಸಿ, ಅಲ್ಲಿನ ಕರಾವಳಿಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ಹೊಸದಾಗಿ ಐದು ಬಂದರುಗಳನ್ನು ಅಭಿವೃದ್ಧಿಪಡಿಸಿದರು. ಈ ಯೋಜನೆ ಜಾರಿಗೆ ಬಂದು 20 ವರ್ಷಗಳಾದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ವಿಶೇಷ ಸಮಾರಂಭ ಆಯೋಜಿಸಲಾಗಿತ್ತು.


ಗುಜರಾತ್ ಮಾದರಿಯಲ್ಲೇ ಕರ್ನಾಟಕದ ಕರಾವಳಿಯ ಸಮಗ್ರ ಅಭಿವೃದ್ಧಿಗೂ ಯೋಜನೆಗಳನ್ನು ರೂಪಿಸಬಹುದಾಗಿದೆ. ಇದುವರೆಗೂ ದೇಶದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಕರ್ನಾಟಕದ ಕರಾವಳಿಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿಲ್ಲ. ಮುಂದಿನ ಹಂತದಲ್ಲಿ ಈ ಕಾರ್ಯವನ್ನು ಮಾಡಲು ನನ್ನ ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಕ್ಯಾ. ಚೌಟರು ಭರವಸೆ ನೀಡಿದರು.


ಸಮುದ್ರ ನಮ್ಮ ಆಸ್ತಿ:

ಸಮುದ್ರ ನಮ್ಮ ಆಸ್ತಿ. ದೇಶದ ಸರ್ವಾಂಗೀಣ ಪ್ರಗತಿಗೆ ಇದನ್ನು ಬಳಸಿಕೊಳ್ಳಬೇಕಿದೆ. ಮಂಗಳೂರು-ಬೆಂಗಳೂರು ನಡುವೆ ರಸ್ತೆ ಮತ್ತು ರೈಲು ಸಂಪರ್ಕ ಇನ್ನಷ್ಟು ಅಭಿವೃದ್ಧಿಗೊಳ್ಳಬೇಕಿದೆ. ಎಕ್ಸ್ಪ್ರೆಸ್ ಹೆದ್ದಾರಿ, ವೇಗದ ರೈಲು ಸಂಪರ್ಕ ಅರಂಭವಾಗಬೇಕಿದೆ. ಪರಿಸರಕ್ಕೆ ಹಾನಿಯಾಗದೆ ಈ ಕಾರ್ಯವನ್ನು ಸಾಧಿಸುವುದು ಹೇಗೆ ಎಂಬುದು ಯೋಜನೆ ಮಾಡಬೇಕಿದೆ. ಕರ್ನಾಟಕದ ಕರಾವಳಿ ಅಭಿವೃದ್ಧಿಯಾದರೆ ರಾಜ್ಯ, ದೇಶದ ಅಭಿವೃದ್ಧಿ ಕೂಡ ಸಾಧ್ಯ. ಇದಕ್ಕಾಗಿ ನಮ್ಮ ಜನರ ಯೋಚನೆ, ಮಾನಸಿಕತೆ ಬದಲಾಗಬೇಕಿದೆ ಎಎಂದು ಚೌಟರು ನುಡಿದರು.


ದಕ್ಷಿಣ ಕನ್ನಡ ಕರಾವಳಿಯಲ್ಲಿ ಸಸಿಹಿತ್ಲು ಬೀಚ್ನಲ್ಲಿ ಸಾಹಸ ಜಲಕ್ರೀಡೆಗೆ (ಅಡ್ವೆಂಚರ್ ಸ್ಪೋರ್ಟ್ಸ್)  ವಿಪುಲ ಅವಕಾಶವಿದೆ. ಇದನ್ನು ನಾವು ಇನ್ನಷ್ಟು ವ್ಯವಸ್ಥಿತವಾಗಿ ಕೈಗೊಳ್ಳಬೇಕಿದೆ. ಬಿಜೆಪಿಯನ್ನು ಕಟ್ಟಿ ಬೆಳಸುವಲ್ಲಿ ಮೀನುಗಾರ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದ ಕ್ಯಾಪ್ಟನ್ ಚೌಟ, ಹಿಂದುತ್ವಕ್ಕೆ ತಮ್ಮ ಬದ್ಧತೆ, ಅಭಿವೃದ್ಧಿಗೆ ಆದ್ಯತೆ ಎಂದು ಸಾರಿದರು.


ನಮ್ಮ ನೆಲದ ಸಂಸ್ಕೃತಿ ಉಳಿಸೋಣ, ರಾಷ್ಟ್ರ ನಿರ್ಮಾಣಕ್ಕೆ ವಿಕಸಿತ ಭಾರತದ ನಿರ್ಮಾಣಕ್ಕೆ ವಿಕಸಿತ ದಕ್ಷಿಣ ಕನ್ನಡವನ್ನು ನಿರ್ಮಿಸೋಣ, ಪ್ರಧಾನಿ ಮೋದಿ ಅವರ ಪ್ರೇರಣೆಯಂತೆ ನಡೆಯೋಣ ಎಂದು ಅವರು ಕರೆ ನೀಡಿದರು.


ಏಪ್ರಿಲ್ 4ರಂದು ತಾವು ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸುವುದಾಗಿ ಇದೇ ಸಂದರ್ಭದಲ್ಲಿ ಕ್ಯಾ. ಚೌಟರು ತಿಳಿಸಿದರು.


ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ತಮ್ಮ ಅವಧಿಯಲ್ಲಿ  ಮೀನುಗಾರರ ಸೊಸೈಟಿ ಮೂಲಕ ಮೀನುಗಾರ ಸಮುದಾಯಕ್ಕೆ ನೀಡಲಾದ ನೆರವನನ್ನು ನೆನಪಿಸಿಕೊಂಡರು. ಮೀನುಗಾರರು ಕಷ್ಟಪಟ್ಟು ಹಿಡಿದು ತಂದ ಮೀನನ್ನು ಮಾರಾಟ ಮಾಡಲು ತಮ್ಮದೇ ಆದ ವ್ಯವಸ್ಥೆಯನ್ನು ಮಾಡಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೀನು ಹಿಡಿದು ತರುವವರು ಮೀನುಗಾರರು, ಅದನ್ನು ಮಾರಿ ಲಾಭ ಗಳಿಸುವವರು ಅನ್ಯರು ಎಂಬಂತಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಬೇಕಿದೆ ಎಂದು ನಾಗರಾಜ ಶೆಟ್ಟರು ಹೇಳಿದರು.


ರಾಷ್ಟ್ರೀಯ ಮೀನುಗಾರ ವೇದಿಕೆಯ ಸಹ ಸಂಚಾಲಕ ರಾಮಚಂದ್ರ ಬೈಕಂಪಾಡಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.


ಮೀನುಗಾರರ ಪ್ರಕೋಷ್ಠದ ಅಧ್ಯಕ್ಷ ಗಿರೀಶ್ ಕರ್ಕೇರ, ಮಂಡಲ ಅಧ್ಯಕ್ಷ ಯಶವಂತ ಅಮೀನ್, ಪ್ರಮುಖರಾದ ಅನಿಲ್, ಶೋಭೇಂದ್ರ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ, ರಮೇಶ್ ಅಮೀನ್ ಮುಕ್ಕ, ಹರೀಶ್ ಹೊಸಬೆಟ್ಟು, ಸತೀಶ್ ಸುವರ್ಣ ಪಣಂಬೂರು, ರೂಪೇಶ್ ಕರ್ಕೇರ ಬೆಂಗ್ರೆ, ಪ್ರದೀಪ್ ಮೆಂಡನ್ ಬೊಕ್ಕಪಟ್ಣ ಅವರನ್ನು ಮೀನುಗಾರ ಪ್ರಕೋಷ್ಠದ ಸಹ ಸಂಚಾಲಕರನ್ನು ಹೊಸದಾಗಿ ನೇಮಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top