ಲೋಕಸಭೆ ಚುನಾವಣೆ: ಬಿಜೆಪಿಯ 195 ಸ್ಪರ್ಧಿಗಳ ಮೊದಲ‌ಪಟ್ಟಿ ಪ್ರಕಟ

Upayuktha
0


ಹೊಸದಿಲ್ಲಿ: ಬಹು ನಿರೀಕ್ಷೀತ ಲೋಕಸಭೆ ಚುನಾವಣೆಯ ಅಧಿಕೃತ ದಿನಾಂಕ ಘೋಷಣೆಗೂ ಮುನ್ನವೇ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ವಾರಣಾಸಿಯಿಂದ ಸ್ಪರ್ಧಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ನ ಗಾಂಧಿ ನಗರದಿಂದ ಸ್ಪರ್ಧಿಸಲಿರುವ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖರ ಹೆಸರು ಪಟ್ಟಿಯಲ್ಲಿದೆ.


ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ವಾರಣಾಸಿಯಿಂದ ಕಣಕ್ಕಿಳಿಯಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಗುಜರಾತ್‌ನ ಗಾಂಧಿ ನಗರದಿಂದ ಸ್ಪರ್ಧಿಸಲಿದ್ದಾರೆ. ಇನ್ನುಳಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಕ್ನೋದಿಂದ ಸ್ಪರ್ಧಿಸಲಿದ್ದು, 2019 ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಗೆಲುವು ಸಾಧಿಸಿದ್ದ ಉತ್ತರ ಪ್ರದೇಶದ ಅಮೇಥಿಯಿಂದ ಸಚಿವೆ ಸ್ಮೃತಿ ಇರಾನಿ ಕಣಕ್ಕಿಳಿಯಲಿದ್ದಾರೆ.


ಮೊದಲ ಪಟ್ಟಿಯಲ್ಲಿ 34 ಹಾಲಿ ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಸರಿದೆ. ಒಟ್ಟು 28 ಮಹಿಳೆಯರು, 50 ವರ್ಷದೊಳಗಿನ 47 ನಾಯಕರು ಮತ್ತು ಒಬಿಸಿ ಸಮುದಾಯದ 57 ಮಂದಿಗೆ ಮೊದಲ ಹಂತದಲ್ಲಿ ಟಿಕೆಟ್ ನೀಡಲಾಗಿದೆ. 195 ಅಭ್ಯರ್ಥಿಗಳ ಪೈಕಿ ಪ್ರಮುಖ ರಾಜ್ಯವಾದ ಉತ್ತರ ಪ್ರದೇಶದ 51, ಪಶ್ಚಿಮ ಬಂಗಾಳದ 20 ಮತ್ತು ದೆಹಲಿಯ ಐದು ಮಂದಿ ಇದ್ದಾರೆ.


ಈ ಹಿಂದೆ ರಾಜ್ಯಸಭೆಯಿಂದ ಆಯ್ಕೆಯಾಗಿದ್ದ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಬಾರಿ ಗುಜರಾತ್‌ನ ಪೋರಬಂದರ್‌ನಿಂದ ಸ್ಪರ್ಧಿಸಲಿದ್ದಾರೆ. ಕೇರಳದ ತಿರುವನಂತಪುರಂನಿಂದ ಮತ್ತೊಬ್ಬ ರಾಜ್ಯಸಭಾ ಸದಸ್ಯ ಹಾಗೂ ಸಚಿವ ರಾಜೀವ್ ಚಂದ್ರಶೇಖರ್ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ ನಾಯಕ ಶಶಿ ತರೂರ್ ಈ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಅವರು ಮತ್ತೊಮ್ಮೆ ಇಲ್ಲಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಹಾಗಾಗಿ, ಕುತೂಹಲಕಾರಿ ಸ್ಪರ್ಧೆ ನಿರೀಕ್ಷಿಸಲಾಗಿದೆ.


ಇತರ ಸಚಿವರ ಪೈಕಿ, ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದ ಗುನಾದಿಂದ ಸ್ಪರ್ಧಿಸಲಿದ್ದಾರೆ ಮತ್ತು ರಾಜ್ಯಸಭಾ ಸಂಸದ ಭೂಪೇಂದರ್ ಯಾದವ್ ರಾಜಸ್ಥಾನದ ಆಳ್ವಾರ್‌ನಿಂದ ಕಣಕ್ಕಿಳಿಯಲಿದ್ದಾರೆ.


ಬಿಜೆಪಿಯ ಅದ್ಭುತ ಗೆಲುವಿನ ಹೊರತಾಗಿಯೂ ಮಧ್ಯ ಪ್ರದೇಶದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ವಿದಿಶಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಮೂಲಕ ಅವರು ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top