-ಸೀತಾ ವಿಠಲ್
ನಿಷ್ಕಳಂಕ ಚರಿತನಾದ ಆದರ್ಶಪ್ರಾಯನಾದ, ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರನಲ್ಲೂ ಜಗತ್ತು ದೋಷಾರೋಪ ಮಾಡುವುದಿದೆ. ವಾಲಿಯನ್ನು ಮರಗಳ ಮರೆಯಲ್ಲಿ ನಿಂತು ಕೊಂದದ್ದು, ಸೀತಾ ದೇವಿಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ್ದು, ಸೀತಾ ದೇವಿಯನ್ನು ಪರಿತ್ಯಾಗ ಮಾಡಿದ್ದು - ಇಂತಹ ಪ್ರಸಂಗಗಳತ್ತ ದುರ್ಜನರು ಬೆಟ್ಟು ತೋರಿಸಿ ಆಕ್ಷೇಪಿಸುತ್ತಾರೆ. ಇವೆಲ್ಲವುಗಳಿಗೂ ಶ್ರೀಮಧ್ವಾಚಾರ್ಯರು ಸೂಕ್ತ ಉತ್ತರವನ್ನು ಕೊಟ್ಟು ಶ್ರೀರಾಮಚಂದ್ರಪ್ರಭುವಿನ ನಿರ್ದೋಷತ್ವವನ್ನು ನಿರೂಪಿಸಿದ್ದಾರೆ. ಅವುಗಳ ಪೈಕಿ ವಾಲಿಯ ಪ್ರಸಂಗವನ್ನು ಈಗ ನೋಡೋಣ.
ವಾಲಿ ಮತ್ತು ಸುಗ್ರೀವರು ಅಣ್ಣ ತಮ್ಮಂದಿರು; ವಾನರ ರಾಜ್ಯದ ವೀರರಾಜಕುಮಾರರು. ಒಮ್ಮೆ ಒಂದು ಬಿಲದೊಳಗೆ ವಾಲಿಯು ಮಾಯಾವಿಯಾದ ರಾಕ್ಷಸನೊಡನೆ ಯುದ್ಧಮಾಡುತ್ತಿದ್ದನು. ಬಿಲದ ಹೊರಗೆ ಕಾಯುತ್ತಿದ್ದ ಸುಗ್ರೀವಾದಿಗಳಿಗೆ ರಾಕ್ಷಸನ ಗರ್ಜನೆ ಕೇಳಿಸಿತು; ಜೊತೆಗೆ ಬಿಲದ್ವಾರದಿಂದ ರಕ್ತ ಪ್ರವಾಹವು ಹರಿಯತೊಡಗಿತು. ವಾಲಿಯೇ ಮೃತನಾಗಿರಬಹುದೆಂದು ತಪ್ಪು ತಿಳಿದ ಸುಗ್ರೀವನು, ರಾಕ್ಷಸನು ಬಿಲದಿಂದ ಹೊರಕ್ಕೆ ಬರದಿರಲೆಂದು ಬಿಲದ ಬಾಯನ್ನು ಬಂಡೆ ಕಲ್ಲುಗಳಿಂದ ಮುಚ್ಚಿಸಿದ. ನಿಜವಾಗಿ ರಾಕ್ಷಸ ಹತನಾಗಿದ್ದ. ಹೊರಬಂದ ವಾಲಿಯು ಸುಗ್ರೀವನನ್ನು ದ್ವೇಷಿಸತೊಡಗಿದ. ಸುಗ್ರೀವನ ಸರ್ವಸ್ವವನ್ನೂ ಕಸಿದುಕೊಂಡು, ಕೊನೆಗೆ ಅವನ ಹೆಂಡತಿಯನ್ನೂ ಅಪಹರಿಸಿ ಉಟ್ಟಬಟ್ಟೆಯಲ್ಲಿ ರಾಜ್ಯದಿಂದ ಹೊರಗೆ ಅಟ್ಟಿದ. ಪ್ರಾಣ ಭಯದಿಂದ ಸುಗ್ರೀವ ಋಷ್ಯಮೂಕ ಪ್ರದೇಶಕ್ಕೆ ಬಂದು ವಾಸಮಾಡತೊಡಗಿದ.
ಇತ್ತ ಸೀತಾನ್ವೇಷಣೆ ಮಾಡುತ್ತಾ ಬಂದ ಶ್ರೀರಾಮ ಸುಗ್ರೀವನ ಸಹಾಯವನ್ನು ಬಯಸಿ ಬರುತ್ತಾನೆ. ಸುಗ್ರೀವ ಶ್ರೀರಾಮರು ಕೈಹಿಡಿದು ಅಗ್ನಿಪ್ರದಿಕ್ಷಿಣೆ ಮಾಡಿ ಸಖ್ಯದ ಪ್ರತಿಜ್ಞೆ ಮಾಡುತ್ತಾರೆ. ಶ್ರೀರಾಮಚಂದ್ರನು ವಾಲಿಯನ್ನು ಸಂಹಾರಮಾಡಿ ಸುಗ್ರೀವನಿಗೆ ರಾಜ್ಯ ಕೊಡಿಸಬೇಕು; ಪ್ರತಿಯಾಗಿ ಸುಗ್ರೀವನು ತನ್ನ ಕಪಿಸೈನ್ಯದೊಂದಿಗೆ ಸೀತಾ ದೇವಿಯನ್ನು ಅನ್ವೇಶಿಸುವುದರಲ್ಲಿ ಸಹಾಯಮಾಡಬೇಕು - ಹೀಗೆ ಇಬ್ಬರಲ್ಲೂ ಒಪ್ಪಂದವಾಗುತ್ತದೆ.
ವಾಲಿಯು ಮಹಾಪರಾಕ್ರಮಶಾಲಿ. ರಾಮನು ವಾಲಿಯನ್ನು ಸಂಹರಿಸಬಲ್ಲನೇ ಎಂದು ಸುಗ್ರೀವನಿಗೆ ಸಣ್ಣ ಸಂದೇಹ. ವಾಲಿಯ ಶಕ್ತಿಯನ್ನು ವಿವರಿಸಿ ಶ್ರೀರಾಮನನ್ನು ಪರೀಕ್ಷಿಸುತ್ತಾನೆ- ಸುಗ್ರೀವ. ವಾಲಿಯು ಸಂಹರಿಸಿ ಒಂದು ಯೋಜನ ದೂರಕ್ಕೆ ಎಸೆದಿದ್ದ ಕೋಣನ ರೂಪದ ದುಂದುಭಿ ಎಂಬ ಬಲಿಷ್ಠ ದೈತ್ಯನ ಶರೀರವನ್ನು ಶ್ರೀರಾಮ ಕೇವಲ ತನ್ನ ಕಾಲಿನ ಹೆಬ್ಬೆಟ್ಟಿನ ಚಲನೆಯಿಂದ ನೂರು ಯೋಜನ ದೂರಕ್ಕೆ ಎಸೆದ. ಆದರೂ ಸುಗ್ರೀವನಿಗೆ ಸಮಾಧಾನವಾಗಲಿಲ್ಲ. ವಜ್ರಕ್ಕಿಂತಲೂ ಗಟ್ಟಿಯಾದ ಅಭೇದ್ಯವಾದ ಏಳು ತಾಳೇ ಮರಗಳನ್ನು ಶ್ರೀರಾಮ ಒಂದೇ ಬಾಣದಿಂದ ಹೊಡೆದುರುಳಿಸಿದ. ಆ ಏಳು ಮರಗಳು ಒಂದೇ ಸರಳರೇಖೆಯಲ್ಲಿ ನಿಂತಿರಲಿಲ್ಲ. ವಕ್ರ-ವಕ್ರವಾಗಿ ಒಂದೊಂದು ಮೂಲೆಯಲ್ಲಿ ಇತ್ತು. ಚಮತ್ಕಾರವೇನೆಂದರೆ ರಾಮಬಾಣ ಮೂಲೆಮೂಲೆಯಲ್ಲಿರುವ ಎಲ್ಲ ಮರಗಳನ್ನೂ ಬುದ್ಧಿಯುಳ್ಳ ಮನುಷ್ಯನಂತೆ ಹುಡುಕಿ ಹುಡುಕಿ ಛೇದಿಸಿತು. ಈಗ ಸುಗ್ರೀವನಿಗೆ ಶ್ರೀರಾಮನ ಬಲದಮೇಲೆ ನಂಬಿಕೆ ಬಂತು. ಅವು ಬ್ರಹ್ಮಪದವಿ ಪಡೆಯುವುದಕ್ಕಾಗಿ ವೃಕ್ಷಗಳ ರೂಪದಲ್ಲಿ ನಿಶ್ಚಲವಾಗಿ ನಿಂತು ತಪಸ್ಸು ಮಾಡುತ್ತಿದ್ದ ದೈತ್ಯರು.
ಶ್ರೀರಾಮನ ಬಲವನ್ನು ಕಣ್ಣಾರೆ ಕಂಡ ಸುಗ್ರೀವ, ರಾಮನನ್ನು ಮುಂದಿರಿಸಿಕೊಂಡು ವಾಲಿಯ ನಗರಕ್ಕೆ ಬಂದನು. ಸುಗ್ರೀವನ ಗರ್ಜನೆಯನ್ನು ಕೇಳಿ ವಾಲಿಯು ಬಿಲದಿಂದ ಹೊರಬಂದು ಸುಗ್ರೀವನನ್ನು ಯುದ್ಧದಲ್ಲಿ ಎದುರಿಸಿದನು. ಸುಗ್ರೀವನು ವಾಲಿಯ ಮುಷ್ಟಿಗಳಿಂದ ಹೊಡೆಸಿಕೊಳ್ಳುತ್ತಿದ್ದರೂ, ಶ್ರೀರಾಮನು ವಾಲಿಯನ್ನು ಸಂಹಾರ ಮಾಡುವ ಪ್ರಯತ್ನವನ್ನು ಮಾಡಲೇ ಇಲ್ಲ. ಸುಗ್ರೀವ ನಿತ್ರಾಣನಾಗಿ ಹಿಂದಿರುಗಿದ. ಮತ್ತು ಸುಗ್ರೀವನಿಗೆ ಹೇಳಿದ - ನೀವು ಅಣ್ಣ-ತಮ್ಮಂದಿರು ಒಂದೇ ರೀತಿ ಕಾಣುತ್ತೀರಿ. ಆದುದರಿಂದ ನನಗೆ ವಾಲಿಯಾರು, ಸುಗ್ರೀವ ಯಾರು ಎಂದು ಗುರುತಿಸಲಾಗಲಿಲ್ಲ. ಹಾಗಾಗಿ ನಾನು ವಾಲಿಯನ್ನು ಕೊಲ್ಲಲಾಗಲಿಲ್ಲ ಎಂದು ಸುಗ್ರೀವನನ್ನು ಸಮಾಧಾನ ಪಡಿಸಿದ. ಮರುದಿನ, ಸುಗ್ರೀವ ಬಂದು ಹೇ ರಾಮ ! ನಿನ್ನ ಪ್ರತಿಜ್ಞೆಯನ್ನು ಉಳಿಸಿಕೊಳ್ಳಲು ಇಂದು ನೀನು ವಾಲಿಯನ್ನು ಕೊಲ್ಲಲೇಬೇಕು ಎಂದು ರಾಮನನ್ನು ಆಗ್ರಹಪಡಿಸಿದ. ವಾಲಿಗಿಂತ ಬೇರೆಯಾಗಿ ಕಾಣುವಂತೆ ಮಾಡಲು ಹನುಮಂತ ಸುಗ್ರೀವನ ಕೊರಳಿಗೆ ಗಜಪುಷ್ಪಮಾಲೆಯನ್ನು ಹಾಕಿದ. ವಾಲಿ ಸುಗ್ರೀವರಿಗೆ ಘನಘೋರಯುದ್ಧ ನಡೆಯುತ್ತದೆ. ಶ್ರೀರಾಮನು ಮರದ ಮರೆಯಲ್ಲಿ ನಿಂತು ವಜ್ರಾಯುಧ ಸದೃಶವಾದ ಬಾಣವನ್ನು ಎಸೆದು ವಾಲಿಯನ್ನು ಸಂಹಾರ ಮಾಡಿದ.
ಇವಿಷ್ಟು ಕಥೆ. ಇದರಮೇಲೆ ಅನೇಕ ಪ್ರಶ್ನೆಗಳು, ಸಂದೇಹಗಳು ಹುಟ್ಟಿಕೊಳ್ಳುತ್ತವೆ. ಅನೇಕ ಜ್ಞಾನಿಗಳು, ಸ್ವತಃ ವಾಲ್ಮೀಕಿಗಳೂ ತಮ್ಮತಮ್ಮ ಗ್ರಂಥಗಳಲ್ಲಿ, ಅದರಲ್ಲಿಯೂ ಪ್ರಮುಖವಾಗಿ ಶ್ರೀಮದಾಚಾರ್ಯರು ತಮ್ಮ ತಾತ್ಪರ್ಯನಿರ್ಣಯ ಗ್ರಂಥದಲ್ಲಿ ಈ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿದ್ದಾರೆ. ಅದರ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ.
1) ವಾಲಿ ರಾಮನಿಗೆ ಯಾವ ಅಪಕಾರವನ್ನೂ ಮಾಡಿಲ್ಲ. ಅವನು ರಾಮನ ಶತ್ರುವೂ ಅಲ್ಲ. ಹಾಗಿರುವಾಗ ರಾಮ ವಾಲಿಯನ್ನು ಏಕೆ ಕೊಂದ ?
ಉತ್ತರ:-
1) ವಾಲಿಗೂ ರಾಮನಿಗೂ ವೈಯುಕ್ತಿಕವಾಗಿ ಯಾವ ವೈರತ್ವವೂ, ಶತ್ರುತ್ವವೂ ಇಲ್ಲ, ನಿಜ. ಆದರೂ ವಾಲಿಯು ವಧೆಗೆ ಅರ್ಹನಾಗಿದ್ದಾನೆ
- ವಾಲ್ಮೀಕಿಗಳ ಉತ್ತರ ಹೀಗಿದೆ- ವಾಲಿ ಒಂದು ಕಾಡು ಕಪಿ. ಶ್ರೀರಾಮ ತನ್ನ ರಾಜ್ಯದ ಸಾಮ್ರಾಟ. ಕಾಡು ಪ್ರಾಣಿಗಳ ಉಪಟಳ ಜಾಸ್ತಿಯಾದಾಗ, ಅವುಗಳನ್ನು ಬೇಟೆಯಾಡುವುದು ರಾಜನ ಕರ್ತವ್ಯ. ಅದರಿಂದ ರಾಮನಿಗೆ ದೋಷವಿಲ್ಲ.
ಅಥವಾ
- ವಾಲಿ ಸುಗ್ರೀವನ ಹೆಂಡತಿಯನ್ನು ಅಪಹರಿಸಿದ್ದಾನೆ. ಸೀತೆಯನ್ನು ಅಪಹರಿಸಿದ ರಾವಣ, ತಾರಾಳನ್ನು ಅಪಹರಿಸಿದ ವಾಲಿ ಇಬ್ಬರೂ ಸಮಾನ ದಂಡಾರ್ಹರು.
2) ಸರ್ವಜ್ಞ ಶಿಖಾಮಣಿಯಾದ ಶ್ರೀರಾಮನಿಗೆ ವಾಲಿ-ಸುಗ್ರೀವರನ್ನು ಗುರುತಿಸಲು ಒಂದು ಹಾರದ ಸಹಾಯ ಬೇಕಾಯಿತೆ ?
ಉತ್ತರ:- ವಾಲಿ-ಸುಗ್ರೀವರಲ್ಲಿ ವಾಲಿ ಯಾರು ಎಂದು ಗುರುತಿಸುವುದಕ್ಕೆ ಆಗಲಿಲ್ಲ ಎಂದಲ್ಲ. ಒಂದೇರೀತಿ ಕಾಣುವ ಸೋದರರನ್ನು ವಿಶೇಷ ಚಿಹ್ನೆಯಿಂದ ಸರಿಯಾಗಿ ಗುರುತಿಸಿ ವ್ಯವಹರಿಸಬೇಕು ಎಂಬ ಲೋಕನೀತಿಯನ್ನು ತಿಳಿಸಬೇಕಾಗಿದೆ. ಮೊದಲ ದಿನದ ಯುದ್ಧದಲ್ಲಿ ವಾಲಿಯನ್ನು ಸಂಹರಿಸದೇ ಸುಮ್ಮನೆ ಇದ್ದಿದ್ದಕ್ಕೆ ಸುಗ್ರೀವನನ್ನು ಸಮಾಧಾನ ಪಡಿಸಲು ಒಂದು ಕಾರಣ ಹೇಳಬೇಕಿತ್ತಷ್ಟೆ. ಎರಡನೆಯ ದಿನ, ಯುದ್ಧಕ್ಕೆ ಹೊರಡುವಮುನ್ನ, ಸುಗ್ರೀವನಿಗೆ "ವಿಜಯ ನಿನ್ನದೇ" ಎಂದು ಉತ್ಸಾಹ , ಆತ್ಮ ವಿಶ್ವಾಸ ತುಂಬುವುದಕ್ಕಾಗಿ ಗಜಪುಷ್ಪಮಾಲೆಯನ್ನು ತೊಡಿಸಿದ.
3) ಮೊದಲ ದಿನದ ಯುದ್ಧದಲ್ಲೇ ವಾಲಿಯನ್ನು ಸಂಹರಿಸದೇ ಬಿಟ್ಟಿದ್ದೇಕೆ ?
ಉತ್ತರ:- ಇಬ್ಬರು ಬಂಧು ಜನರೊಳಗೆ ವೈಮನಸ್ಯ ಉಂಟಾದಾಗ ಮೂರನೆಯವರು ವಿಚಾರಮಾಡದೇ ಒಬ್ಬನ ವಧ ಮಾಡಬಾರದು. ಸೋದರರೊಳಗಿರುವ ಕೋಪ ಬಹುಕಾಲವಿರುವುದಿಲ್ಲ. ಇಬ್ಬರೂ ಪರಸ್ಪರ ಒಂದಾಗಲು ಅವಕಾಶವನ್ನು ಕೊಡಬೇಕು. ಶ್ರೀರಾಮ ದುಡುಕಿದನೆಂದು ಅಪವಾದ ಬರಬಾರದು. ಈ ಧರ್ಮಸೂಕ್ಷ್ಮಗಳನ್ನರಿತೇ ಮೊದಲನೆಯ ದಿನ ವಾಲಿಯನ್ನು ಸಂಹರಿಸಲಿಲ್ಲ. ಸುಗ್ರೀವ ಪುನಃ ಬಂದು ವಾಲಿಯನ್ನು ಕೊಲ್ಲಲೇಬೇಕೆಂದು ಬಲು ದೃಢವಾಗಿ ಒತ್ತಾಯಮಾಡಿದಬಳಿಕವೇ, ಅಣ್ಣನ ವಿಯೋಗದಿಂದ ತಮ್ಮ ಸುಗ್ರೀವನಿಗೆ ಮುಂದೆ ದುಃಖ ಬರುವುದಿಲ್ಲ ಎಂದು ತಿಳಿದಬಳಿಕವೇ, ಇವರಿಬ್ಬರ ವೈರ ಅಪರಿಹಾರ್ಯ ಎಂಬುದನ್ನು ಲೋಕಕ್ಕೆ ತಿಳಿಸಿದ ನಂತರವೇ ವಾಲಿಯನ್ನು ಸಂಹರಿಸಿದ.
4) ವಾಲಿಯು ಸುಗ್ರೀವನಿಗಿಂತ ಅತ್ಯಂತ ಬಲಶಾಲಿ. ಶ್ರೀರಾಮನು ಸೀತಾನ್ವೇಷಣೆ ಮತ್ತು ರಾವಣಸಂಹಾರ ಕಾರ್ಯಕ್ಕೆ ಸುಗ್ರೀವನಿಗೆ ಬದಲಾಗಿ ವಾಲಿಯ ಸಹಾಯವನ್ನೇ ಪಡೆಯಬಹುದಿತ್ತಲ್ಲವೇ?
ಉತ್ತರ:- ನಿಜ. ವಾಲಿ ತನ್ನ ಸ್ವಸಾಮರ್ಥ್ಯದಿಂದ ಕ್ಷಣಾರ್ಧದಲ್ಲಿ ರಾವಣನನ್ನು ಕೊಂದು ಸೀತೆಯನ್ನು ಕೊಡಿಸುತ್ತಿದ್ದ. ಆದರೆ ಆಗ ಶ್ರೀರಾಮನ ಪೌರುಷವು ಲೋಕಕ್ಕೆ ತಿಳಿಯುತ್ತಿರಲಿಲ್ಲ. ಅಲ್ಲದೇ, ರಾವಣನಂತೆ ವಾಲಿಯೂ ಪರಸ್ತ್ರೀಯನ್ನು ಅಪಹರಿಸಿದ ದುಷ್ಟ. ಶ್ರೀರಾಮ ಒಬ್ಬ ದುಷ್ಟನ ಸಹಾಯ ಪಡೆಯುವುದೇ ? ಅಲ್ಲದೆ, ಶ್ರೀರಾಮ ಮೊದಲು ಭೇಟಿಯಾಗಿದ್ದು ಸುಗ್ರೀವನನ್ನು. ಸುಗ್ರೀವನು ಶ್ರೀರಾಮನಿಗೆ ಶರಣು ಬಂದಿದ್ದಾನೆ. ಸುಗ್ರೀವನ ಪ್ರಾರ್ಥನೆಯಂತೆ ವಾಲಿಯನ್ನು ಸಂಹಾರ ಮಾಡಿ ರಾಜ್ಯ ಕೊಡಿಸುವುದಾಗಿ ಮಾತು ಕೊಟ್ಟಾಗಿದೆ. ಈಗ, ಬಲಿಷ್ಟನೂ ದುಷ್ಟನೂ ಆದ ವಾಲಿಯ ಸಹಾಯ ಪಡೆದು ತನ್ನ ಕಾರ್ಯ ಸಾಧಿಸಿಕೊಂಡು, ಹನುಮಂತನ ಆಶ್ರಯದಲ್ಲಿರುವ ದೀನನಾದ ಸುಗ್ರೀವನನ್ನು ಕೈಬಿಡುವುದು ಶ್ರೀರಾಮನಂಥ ಧರ್ಮಿಷ್ಟನಿಂದ ಸಾಧ್ಯವೇ ? ಶಿಷ್ಟರಕ್ಷಣ, ದುಷ್ಟಶಿಕ್ಷಣ - ಇದಲ್ಲವೇ ಶ್ರೀರಾಮನ ಪರಮ ಧ್ಯೇಯ ?
5) ಇವೆಲ್ಲಕ್ಕಿಂತ ಹೆಚ್ಚಾಗಿ, ರಾಮನು ಮರೆಯಲ್ಲಿ ನಿಂತು ವಾಲಿಯನ್ನು ಏಕೆ ಕೊಂದ ? ಕ್ಷತ್ರಿಯರಿಗೆ ಉಚಿತವಾದ ಯುದ್ಧ ಧರ್ಮದಂತೆ, ಎದುರಿಗೆ ನಿಂತು ಯುದ್ಧಮಾಡಿ ಕೊಲ್ಲಬೇಕಿತ್ತಲ್ಲವೇ ?
ಉತ್ತರ:- ವಾಲ್ಮೀಕಿ ರಾಮಾಯಣದಲ್ಲಿ, ಶ್ರೀರಾಮನ ಬಾಣಾಘಾತದಿಂದ ಮರಣಮುಖನಾಗಿದ್ದ ವಾಲಿಯೇ ಸ್ವತಃ ಈ ಮಾತನ್ನು ರಾಮನಿಗೆ ಕೇಳುತ್ತಾನೆ. ಶ್ರೀ ರಾಮ ಹೇಳುತ್ತಾನೆ- ನೀನು ಶಾಸ್ತ್ರದ ವಿಧಿನಿಷೇಧಗಳಿಲ್ಲದ ಸಾಮಾನ್ಯ ಕಪಿ ಎನ್ನುವಿಯಾದರೆ ನಿನ್ನನ್ನು ನಾನು ಬೇಟೆಯಾಡಿದೆ ಎಂದುಕೊ. ಬೇಟೆಯಲ್ಲಿ ಎದುರಿಗೆ ನಿಲ್ಲಬೇಕೆಂಬ ನಿಯಮವಿಲ್ಲ. ಶಾಸ್ತ್ರ ವಿಧಿನಿಷೇಧಗಳಿಗೆ ಬದ್ಧನೆನ್ನುವಿಯಾದರೆ ತಮ್ಮನ ಹೆಂಡತಿಯನ್ನು ಅಪಹರಿಸಿ ಅಪರಾಧಿಯಾಗಿರುವೆ. ಅಪರಾಧಿಗೆ ಶಿಕ್ಷೆನೀಡುವಾಗ ಎದುರಿಗೆ ಪ್ರತ್ಯಕ್ಷ ನಿಲ್ಲಬೇಕೆಂಬ ನಿಯಮವಿಲ್ಲ. ಈ ಉತ್ತರದಿಂದ ಸ್ವತಃ ವಾಲಿಗೆ ಸಮಾಧಾನವಾಯಿತು. ಆದರೂ ಶ್ರೀರಾಮ ಮರೆಯಲ್ಲಿ ಏಕೆ ನಿಲ್ಲಬೇಕಿತ್ತು ಎನ್ನುವ ಪ್ರಶ್ನೆ ಹಾಗೇ ಉಳಿಯುತ್ತದೆ. ಇಂದ್ರಾವತಾರನಾದ ವಾಲಿ ಸ್ವಭಾವತಃ ವಿಷ್ಣುಭಕ್ತ. ಆ ವಿಷ್ಣುವೇ ಈ ಶ್ರೀರಾಮ. ಶ್ರೀರಾಮ ವಾಲಿಯ ಎದುರಿಗೆ ಬಂದರೆ, ವಾಲಿ ರಾಮನಪಾದಗಳಿಗೆ ಮಣಿಯುತ್ತಿದ್ದ. ಆಗ ಶ್ರೀರಾಮ ಅವನನ್ನು ಕೊಲ್ಲಲಾಗುತ್ತಿರಲಿಲ್ಲ. ಕೊಲ್ಲುವುದಾಗಿ ಸುಗ್ರೀವನಿಗೆ ಮಾತುಕೊಟ್ಟಾಗಿದೆ. ಇಂಥ ಉಭಯಸಂಕಟದಿಂದ ಪಾರಾಗಲು ಶ್ರೀರಾಮ ವಾಲಿಯ ಮುಂದೆ ಬರಲಿಲ್ಲ.
ವಾಲಿ ಶ್ರೀರಾಮನನ್ನೇ ನೋಡುತ್ತಾ ಶರೀರ ತ್ಯಾಗ ಮಾಡಿ ತನ್ನ ಮೂಲ ರೂಪವಾದ ಇಂದ್ರನಲ್ಲಿ ಐಕ್ಯ ಹೊಂದಿದ.
-ಸೀತಾ ವಿಠಲ್
ಲೇಖಕರ ಸಂಕ್ಷಿಪ್ತ ಪರಿಚಯ
ವೀಣಾ ವಿದುಷಿ ಚೊಕ್ಕಮ್ಮ, ಮೈಸೂರು ಇವರಲ್ಲಿ ಕರ್ನಾಟಕ ಸಂಗೀತ -ವೀಣೆ ಮತ್ತು ವೋಕಲ್ ಅಭ್ಯಾಸ ಮಾಡುತ್ತಿದ್ದಾರೆ.
ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದಿಂದ BA, MA (ದಾಸ ಸಾಹಿತ್ಯ), Diploma (ಹರಿಕಥಾಮೃತ ಸಾರ),, Diploma (ಭಗವದ್ಗೀತ)
ಹವ್ಯಾಸ: -ಹರಿದಾಸ ಕೃತಿಗಳ ಗಾಯನ, You Tuber (ಸೀತಾ ಹಾಡು seetha haadu - channel)-ಪತ್ರಿಕೆಗಳಿಗೆ ದಾಸಸಾಹಿತ್ಯದ ಬಗ್ಗೆ ಲೇಖನಗಳು.
Address:
Seetha Vittal
#19, 3rd Cross, JSS School Road,
Teacher’s Colony, Konanakunte,
Bengaluru - 560062
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ