ಕುಂಜತ್ತೂರು ಶಿವಶಕ್ತಿ ಸೀತಾರಾಮ ಭಜನಾ ಮಂದಿರದ ವಾರ್ಷಿಕೋತ್ಸವ
ಮಂಜೇಶ್ವರ: 'ಸಾರ್ವಜನಿಕರು ಒಟ್ಟುಗೂಡಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ದುಡಿಯುವುದರಿಂದ ಸಮಾಜದಲ್ಲಿ ಶಾಂತಿ ಸಮೃದ್ಧಿ ನೆಲೆಗೊಳ್ಳುತ್ತದೆ. ಪರಸ್ಪರ ಸಹಕಾರ ಮನೋಭಾವನೆ ಬೆಳೆದು ಏನೇ ಗಲಭೆ ಗೊಂದಲಗಳಿದ್ದರೂ ನಿವಾರಣೆಯಾಗುತ್ತವೆ' ಎಂದು ಮುಂಬೈ ಉದ್ಯಮಿ, ಹೇರಂಭ ಕೆಮಿಕಲ್ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.
ಕುಂಜತ್ತೂರಿನ ಶಿವಶಕ್ತಿ ಸೀತಾರಾಮ ಭಜನಾ ಮಂದಿರ ಮತ್ತು ಶಿವಶಕ್ತಿ ಸೀತಾರಾಮ ಮಹಿಳಾ ಸಂಘದ 19ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 'ಮಠ ಮಂದಿರಗಳಲ್ಲಿ ನಿರಂತರ ನಡೆಯುವ ಭಜನೆ ಮತ್ತು ಪೂಜೆಗಳು ಜನರಲ್ಲಿ ಸುವಿಚಾರಗಳು ಬೆಳೆಯಲು ಪ್ರೇರಕವಾಗಿವೆ' ಎಂದವರು ಹೇಳಿದರು.
ಭಜನಾ ಸತ್ಸಂಗದಿಂದ ಸಂಸ್ಕಾರ:
ಸಮಾರಂಭದಲ್ಲಿ ಧಾರ್ಮಿಕ ಭಾಷಣ ಮಾಡಿದ ಯಕ್ಷಗಾನ ವಿದ್ವಾಂಸ ಮತ್ತು ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ 'ಚಿಕ್ಕಂದಿನಲ್ಲಿ ಬೆಳಿಗ್ಗೆ ಹಾಗೂ ಸಾಯಂಕಾಲ ದೇವರಿಗೆ ದೀಪ ಹಚ್ಚುವ ಸಂಪ್ರದಾಯ ಹಳ್ಳಿಗಳಲ್ಲಿ ಸಾಮಾನ್ಯವಾಗಿತ್ತು. ಸೂರ್ಯಾಸ್ತದ ಬಳಿಕ ಭಜನೆ ಮಾಡದೆ ತಾಯಂದಿರು ಮಕ್ಕಳಿಗೆ ಊಟ ಹಾಕುತ್ತಿರಲಿಲ್ಲ. ಇದರಿಂದ ಮನೆ ಮನೆಗಳಲ್ಲಿ ದಿನ ನಿತ್ಯ ಭಜನೆ ರೂಢಿಯಾಗಿತ್ತು. ಆದರೆ ಈಗಿನ ಯಾಂತ್ರಿಕ ಬದುಕಿನಲ್ಲಿ ಅದು ಕಣ್ಮರೆಯಾಗುತ್ತಿದೆ. ಹಾಗಾಗಿ ವಾರಕ್ಕೊಂದು ದಿನವಾದರೂ ನಮ್ಮ ಹತ್ತಿರದ ಭಜನಾ ಮಂದಿರದ ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುವುದರಿಂದ ಯುವಜನರಿಗೆ ಯೋಗ್ಯ ಸಂಸ್ಕಾರ ದೊರೆತಂತಾಗುತ್ತದೆ' ಎಂದರು.
'ಭಜನೆಯಿಂದ ವಿಭಜನೆಯ ಭಾವ ತೊಲಗಿ ಸಹನೆ- ಸಹಬಾಳ್ವೆಯ ಮನೋಭಾವನೆ ತಾನಾಗಿ ಮೂಡುತ್ತದೆ. ಹೀಗೆ ಮಾಡುವುದರಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾದುದು' ಎಂದವರು ನುಡಿದರು.
ಸಭೆಯಲ್ಲಿ ಮಕ್ಕಳಿಗಾಗಿ ನಡೆದ ಆಟೋಟ ಸ್ಪರ್ಧೆಗಳ ಬಹುಮಾನ ವಿತರಣೆ ಜರಗಿತು. ಉದ್ಯಮಿ ಪಾರ್ಥಸಾರಥಿ ಕಿನ್ಯಾ, ಸೋಮಪ್ಪ ಸಾಲಿಯಾನ್ ಕುಚ್ಚಿಕಾಡು, ಬಿಜೆಪಿ ಮುಖಂಡ ಹರಿಶ್ಚಂದ್ರ ಮತ್ತಿತರರು ಅತಿಥಿಗಳಾಗಿದ್ದರು.
ಶಿವಶಕ್ತಿ ಸೀತಾರಾಮ ಭಜನಾ ಮಂದಿರದ ಅಧ್ಯಕ್ಷ ಜಯರಾಮ ಶೆಟ್ಟಿ ಸ್ವಾಗತಿಸಿದರು. ಸಮಾಜಸೇವಕ ಹರೀಶ ಶೆಟ್ಟಿ ಮಾಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅರ್ಚಕರಾದ ಪ್ರೇಮಚಂದ್ರ ಪ್ರಭು, ಯಶವಂತ ಕುಚ್ಚಿಗುಡ್ಡೆ, ಗೌರವಾಧ್ಯಕ್ಷ ಶ್ರೀನಿವಾಸ ಭಟ್, ಮಹಿಳಾ ಸಂಘದ ಅಧ್ಯಕ್ಷೆ ರಮಣಿ ಕುಚ್ಚಿಕಾಡು, ಕಾರ್ಯದರ್ಶಿಗಳಾದ ಪ್ರಶಾಂತ್ ಕೆ., ಕಿರಣ್ ಕುಮಾರ್, ಅವಿನಾಶ್ ಅಮೀನ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಂಜೇಶ್ವರ ಶ್ರೀ ಶನೈಶ್ಚರ ಮಂದಿರದ ಧರ್ಮದರ್ಶಿ ಶ್ರೀಕೃಷ್ಣ ಭಟ್ ಅವರ ನೇತೃತ್ವದಲ್ಲಿ ಶನೀಶ್ವರ ಪೂಜೆ, ಅನ್ನಸಂತರ್ಪಣೆ, ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ದತ್ತಾಂಜನೇಯ ಸೇವಾ ಬಳಗ ರಾಮಾಡಿ ಕಣ್ವತೀರ್ಥ ಇವರಿಂದ 'ತುಳುನಾಡ ವೈಭವ' 75 ಕಲಾವಿದರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ