ಶ್ರೀರಾಮ ಕಥಾ ಲೇಖನ ಅಭಿಯಾನ- 75: ರಾಮ ದೇವನೋ ಮಾನವನೋ

Upayuktha
0


-ಅನುರಾಧಾ ಶಿವಪ್ರಕಾಶ್


ರಾಮ ದೇವನೋ ಮಾನವನೋ ಹೀಗೊಂದು ಪ್ರಶ್ನೆ ನಮ್ಮೆಲ್ಲರ ಮನದಲ್ಲಿ ಹುಟ್ಟಿರಲೇಬೇಕು. ನಿಜ ಈ ನಿಟ್ಟಿನಲ್ಲಿ ಪುರುಷೋತ್ತಮನಾದ ಶ್ರೀರಾಮನನ್ನು ನಾವು ಹೇಗೆ ಹೃದಯಕ್ಕೆ ಹತ್ತಿರವಾಗಿಸಿ ಕೊಳ್ಳಬಹುದು ಇದು ನಮ್ಮ ನಮ್ಮ ವಿವೇಚನೆಗೆ ಬಿಟ್ಟದ್ದು. ರಾಮನನ್ನು ಆತ್ಮಬಂಧುವಾಗಿಸಿ ಅವನೆಡೆಗೆ ಶರಣಾಗಿ ಅವನೇನೆಂಬುವುದನರಿಯುವ ಶ್ರದ್ಧಾಪೂರ್ವಕ ತುಡಿತ ಅಂತರಂಗದಲ್ಲಿ ಉದಿಸಿದಾಗಲಷ್ಟೇ ರಾಮನೆಂಬ ಮಾನವ ಅವತಾರಿಯ ದೈವತ್ವದ ವಿಶ್ವರೂಪ ತನ್ನಿಂತಾನಾಗಿಯೇ ಅರಿವಾಗುವುದು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವಿಸಿದಾಗಲಷ್ಟೇ ಮಾನವ ಮಾತ್ರರ ಮನಸ್ಸಿಗೆ ಬಲು ಹತ್ತಿರವಾಗಿ ಅವರೊಳಗಿನ ಅಂಧಕಾರವನ್ನು ತೊಡೆದು ಬಾಳ ಬೆಳಗಬಹುದೆಂಬ ಸಂಕಲ್ಪ ಹೊತ್ತು ಅವತರಿಸಿದ ಕರುಣಾಮೂರ್ತಿಯೇ ನಮ್ಮೆಲ್ಲರ ಆರಾಧ್ಯ ದೈವ ಶ್ರೀರಾಮಚಂದ್ರ.


ಹಲವು ದೃಷ್ಠಿಕೋನಗಳಿಂದ ಶ್ರೀರಾಮನನ್ನು ಬಲುಹತ್ತಿರದಿಂದ ನೋಡಿದಾಗ ಮಾನವನಾಗಿ ಸಾಮಾನ್ಯರೊಳಗೊಂದಾಗಿ ಇದ್ದುದರಿಂದಲೇ ಅವನ ಆದರ್ಶಗಳು ಬಹಳ ಹತ್ತಿರವಾದುವು. ಮಾನವರಂತೆಯೇ ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದುಕೊಂಡು ಅಸಾಮಾನ್ಯನೆನಿಸಿಕೊಂಡವನು. ಹಲವು ಆಯಾಮಗಳಲ್ಲಿ ಇದನ್ನು ನಾವು ವಿಶ್ಲೇಷಿಸಿದಾಗ ಮಾನವನ ಅವತಾರಿಯಾಗಿಯೇ ಬದುಕಿನಲ್ಲಿ ಹೀಗಿರಬೇಕೆಂದು ಬೋಧಿಸಿದ. ಮಗುವಾಗಿ, ಚೈತನ್ಯವಾಗಿ, ಶಿಷ್ಯನಾಗಿ, ಮಗನಾಗಿ, ಜನಾನುರಾಗಿಯಾಗಿ, ಪುರುಷೋತ್ತಮನಾಗಿ ಸಕಲ ಚರಾಚರಗಳನ್ನೂ ಪ್ರೀತಿಸುತ್ತಾ, ಬೋಧಿಸುತ್ತಾ, ಮಾನವನಂತೆ ಜೀವಿಸಿ ಲೋಕಗುರುವಾದ, ಆರಾಧ್ಯದೈವವಾದ ಶ್ರೀರಾಮ.


ಮಗುವಾಗಿ: ದಶರಥ ಕೌಸಲ್ಯೆಯರ ಕಣ್ಮಣಿಯಾದ  ರಾಮನು ಕೇವಲ ಅಯೋಧ್ಯೆ ಕೋಸಲಕ್ಕಷ್ಟೇ ಅಲ್ಲ, ತ್ರೇತಾಯುಗಕ್ಕಷ್ಟೇ  ಯುಗಯುಗಾಂತರಗಳಿಗೂ ಮೂರ್ಲೋಕಗಳಿಗೂ ಪ್ರತಿಯೊಬ್ಬ ತಾಯಿಗೂ ಮಗುವಾಗಿ ಬಿಟ್ಟಿದ್ದಾನೆ. ಇಂದಿಗೂ ರಾಮನ ಬಾಲ್ಯದ ಆಟ ಪಾಠಗಳು. ಆತನ ತೊದಲು ನುಡಿಗಳ ಗುಣಗಾನವನ್ನು ಆಲಿಸಿದಾಗ ಪ್ರತಿ ತಾಯಂದಿರ ಹೃದಯದಲ್ಲಿ ಮಾತೃ ವಾತ್ಸಲ್ಯದ ರಸಧಾರೆ ಹಾಗೇ ಸ್ಫುರಿಸುತ್ತದೆ. ಪ್ರತಿಯೊಬ್ಬ ತಾಯಿಯಲ್ಲೂ ರಾಮನ ಬಿಂಬವೇ ಪ್ರತಿಷ್ಠಾಪಿಸಲ್ಪಟ್ಟು ಆ ಚೈತನ್ಯವೇ ಗರ್ಭಸ್ಥ ಶಿಶುವಿನಲಿ ಮೈಗೂಡಿದಾಗ ಸುಪ್ರಜೆಗಳು ಜನ್ಮಿಸಿ ರಾಮರಾಜ್ಯವೇ ಅಲ್ಲಿ ಮೈದಳೆಯಬೇಕು.


ಇಂತಹದೊಂದು ಅಂತಃಪ್ರಜ್ಞೆಯು ಚಿಗುರೊಡೆದು ಸಕಲರ ಅಂತರಂಗದಲ್ಲಿ ವ್ಯಾಪಿಸಿ ಮೂರ್ತರೂಪಗೊಳಿಸಲು ಸಾಮಾನ್ಯ ಶಿಶುವಿನಿಂದೆಲ್ಲಿ ಸಾಧ್ಯ. ಮಾನವ ರೂಪದಲ್ಲಿ ಧರೆಗಿಳಿದ ದೇವ ಶಿಶು ಶ್ರೀರಾಮನಿಂದಷ್ಟೇ ಸಾಧ್ಯ ಮಾನವ ರೂಪದಿಂದಲೇ ಅಂತಹ ಅನುಭೂತಿಯೊನ್ನು ರಾಮ ನಮಗೆಲ್ಲ ಕೊಟ್ಟಿರುವುದೇ ನಮ್ಮ ಸೌಭಾಗ್ಯ.


ರಾಜಧರ್ಮ: ಜಗತ್ತಿನ ರಾಜಮಹಾರಾಜರುಗಳೆಲ್ಲಾ ತಿರುತಿರುಗಿ ನೋಡಬೇಕನ್ನುವಂತಹ ರಾಜ್ಯಭಾರ. ರಾಮರಾಜ್ಯದ ಪರಿಕಲ್ಪನೆಯು ಪ್ರತಿ ರಾಜನ ರಾಜ್ಯದಲ್ಲಿ ರೂಪುರಗೊಳ್ಳಬೇಕು. ಒಬ್ಬ ರಾಜ ಧರ್ಮಭೀರುವಾಗಿ ತನ್ನ ಪ್ರಜೆಗಳ ಮನ ಮಾತ್ರವಲ್ಲ ಮೂರ್ಲೋಕಗಳಲ್ಲೂ ಕೀರ್ತಿ ಹೊಂದಿದ್ದಾನೆ ಎಂಬುದಾದರೆ ಆತನ ವ್ಯಕ್ತಿತ್ವ ಸಾಮಾನ್ಯ ರಾಜರಲ್ಲೂ ಪ್ರಭಾವ ಬೀರದಿದ್ದೀತೇ? ಭೂಲೋಕದಲ್ಲಿ ದೇವನೇ ಸಿಂಹಾಸನವೇರಿ ರಾಜ್ಯವಾಳಿ ರಾಜನೆಂದರೆ ಹೇಗಿರಬೇಕೆಂದು ತೋರಿಸಿಕೊಟ್ಟ.


ವಿಧೇಯ ಶಿಷ್ಯನಾಗಿ: ದೇವರ ದೇವನಿಗೇ ಭೂಲೋಕದಲ್ಲಿ ಹೊಸದಾಗಿ‌ ಕಲಿಯುವುದೇನಿದೆ. ಆದರೂ ಗುರುವಿಗೆ ಶರಣಾಗಿ ಶಸ್ತ್ರ ಶಾಸ್ತ್ರಗಳನ್ನು ಅಭ್ಯಸಿಸಿ ಗುರುವಿನ ಆಣತಿಯಂತೆ ಸಮಾಜದಲ್ಲಿರುವ ದುಷ್ಟತನಗಳನ್ನು ದಮನಿಸಿ ಶಿಷ್ಟರಕ್ಷಣೆಗೈಯುವ ಕ್ಷತ್ರಿಯ ಧರ್ಮವನ್ನು ಇಂಚು ಇಂಚಾಗಿ ತೋರಿಸಿದನಲ್ಲ. ಬರಿಯ ದೇವರಲ್ಲ ಪ್ರತಿ ಕ್ಷತ್ರಿಯನೂ ಕೆಚ್ಚೆದೆಯಿಂದ ಕಾದಾಡಿ ಕ್ಷಾತ್ರಧರ್ಮವನ್ನು ಪಾಲಿಸಬೇಕೆಂಬ ನೀತಿಯನರುಹಲು ಜನಸಾಮಾನ್ಯರೊಡನೆ ಬೆರೆತರಷ್ಟೇ ಸಾಧ್ಯವೆಂಬುದನ್ನು ರಾಮ ತೋರಿಸಿಕೊಟ್ಟ. ಲೋಕಗುರು ಭಗವಂತನಿಗೇ ಗುರುವಾಗುವುದು ಸುಕೃತವಲ್ಲದೇ ಇನ್ನೇನು. ಮಾನವನನ್ನು ಮಾಧವನನ್ನಾಗಿಸುವಲ್ಲಿ ಗುರುವಿನ ಪಾತ್ರ ಅತ್ಯಂತ ಹಿರಿದು. ಆದರಿಲ್ಲಿ ದೇವರಿಗೇ ಗುರುವಾಗಿ ವಿದ್ಯೆ ಕಲಿಸಿ ರಾಜಧರ್ಮವನ್ನು ಉಪದೇಶಿಸಿದ ವಸಿಷ್ಠರದೂ ಶಸ್ತ್ರ ಶಾಸ್ತ್ರಗಳನ್ನು ಬೋಧಿಸಿದ ವಿಶ್ವಾಮಿತ್ರರದು ಪಾವನ ಜನ್ಮ. ಇಚ್ಛಾಶಕ್ತಿಯ ಮೇರುಪರ್ವತ ಶ್ರೀರಾಮ.


ಪಿತೃವಾಕ್ಯ ಪರಿಪಾಲಕನಾಗಿ: ಜಗದಲ್ಲಿ ಮರೆಯಾಗುತ್ತಿರುವ ಪಿತೃಭಕ್ತಿ ಗುರುಭಕ್ತಿ, ಸಂಬಂಧಗಳಲ್ಲಿನ ಬಂಧ ಸವಕಲಾಗುತ್ತಿದೆ ಎಂಬುದನ್ನು ಮನಗಂಡೇ ರಾಮ ತನ್ನ ಅವತಾರವೆತ್ತಿ ಮಗನೆಂದರೆ ಹೀಗಿರಬೇಕೆಂಬುದನ್ನು ತೋರಿಸಿಕೊಟ್ಟ. ಸಾಮಾನ್ಯ ಮಾನವನಾಗಿ ರಾಜಪುತ್ರನಾಗಿ ಸುಖ ವೈಭೋಗಗಳಲ್ಲಿ ಬೆಳೆದರೂ ಕೂಡಾ ತಂದೆಯ ವಚನ ಪಾಲನೆಗಾಗಿ ಸಕಲ ಸುಖಭೋಗಗಳನ್ನೂ ರಾಜ್ಯಕೋಶಗಳನ್ನು ತ್ಯಜಿಸಿ‌ ನಾರುಮುಡಿಯುಟ್ಟು ಸಪತ್ನೀಕನಾಗಿ ಅಡವಿಗೆ ತೆರಳಿ ತಂದೆಯ ಮಾತನ್ನುಳಿಸಿಕೊಟ್ಟನು. ಆದರ್ಶಪ್ರಾಯನೆನಿಸಿಕೊಂಡನು. ಬರಿದೇ ಮಾನವ ಮಾತ್ರರಲ್ಲಿ ಇಂತಹ ತ್ಯಾಗ, ಸ್ಥಿತಪ್ರಜ್ಞೆ ಹೇಗೆ ಹುಟ್ಟೀತು? 


ಏಕಪತ್ನೀವ್ರತಸ್ಥನಾಗಿ: ನೈತಿಕ ಬದುಕಿನ ಉನ್ನತ ಸ್ತರದಲ್ಲಿ ಶ್ರೀರಾಮನಿದ್ದಾನೆ. ಹಿಂದೆ ರಾಜ ಮಹಾರಾಜರು, ಮಹಿಮರೆನಿಸಿಕೊಂಡವರೂ ಕೂಡಾ ಧರ್ಮಪತ್ನಿಯರಲ್ಲದೇ ಉಪಪತ್ನಿಯರನ್ನು ಹೊಂದಲು ಅವಕಾಶವಿತ್ತು. ಹೊಂದಿರುತ್ತಿದ್ದರೂ ಕೂಡಾ. ಆದರೂ ಶ್ರೀರಾಮ ಏಕಪತ್ನೀವ್ರತಸ್ಥನಾಗಿ ಆದರ್ಶನಾಗಿ ಮೆರೆದ. ಮಾನವ ಮಾತ್ರರಲ್ಲಿರುವ ಕಾಮ ಕ್ರೋಧಗಳನ್ನು ಜಯಿಸಿದನು. ಮಾನವ ಮಾಧವನೆನಿಸಿಕೊಳ್ಳಲು ಇನ್ನೇನು ಬೇಕು?


ದುಷ್ಟ ಶಿಕ್ಷಕನಾಗಿ: ಮೂರು ಲೋಕಗಳ ಎದೆ ನಡುಗಿಸುವ ವೀರ ದಶಕಂಠ ರಾವಣನ ಸಂಹಾರಕ್ಕೆಂದೇ ಮಾನವನಾಗಿ ಅವತಾರವೆತ್ತಿದ ಪರಮಾತ್ಮನಲ್ಲವೇ ಶ್ರೀರಾಮ. ದೇವಾನುದೇವತೆಗಳನ್ನೇ ಊಳಿಗಕ್ಕೆ ಇಟ್ಟುಕೊಂಡ ಆ ದೈತ್ಯನನ್ನು ಸಾಮಾನ್ಯ ರಾಜ ಕೊಲ್ಲಬಲ್ಲನೇ. ಖಂಡಿತಾ ಸಾಧ್ಯವಿಲ್ಲ ಅಲ್ಲವೇ. ಆದರೆ ವರಬಲದಿಂದ ಕೊಬ್ಬಿದ ಆತನನ್ನು ದಮನಿಸುಲು ಯಾರಿಂದ ಸಾಧ್ಯ. ದೇವರ ದೇವ ಶ್ರೀರನಿಂದಷ್ಟೇ ಸಾಧ್ಯವಾಯಿತು. ರಾಮನಾಮದ ಉಚ್ಚರಣೆಯಿಂದ ನಮ್ಮೊಳಿರುವ ರಾವಣ ಕ್ಷಣಕ್ಷಣಕ್ಕೂ ಸಾಯುತ್ತಿರುವಾಗ ರಾಮ ನಾಮದ ಮಹತ್ವ ಅರಿವಾಗುತ್ತದೆ. 


ಶಿಷ್ಟ ಪಾಲಕನಾಗಿ: ರಾಮನ ದರುಶನಕಾಗಿ ಹಗಲಿರುಳೂ ಕಾದು ಕಾದು ಕೊನೆಗೂ ರಾಮ ದರ್ಶನದಿಂದ ಪುನೀತಳಾದ ಶಬರಿ ಮಹಾತಪಸ್ವಿನಿ. ಆಕೆಯ ಎಂಜಲುಗೊಳಿಸಿದ ಹಣ್ಣನ್ನೇ ಭಕ್ತಿಭಾವದ ನೈವೇದ್ಯವೆಂದೇ ಭಾವಿಸಿ ಸೇವಿಸಿ ಶಿಷ್ಯಮಾತ್ರಳ ಆಸೆ ಪೂರೈಸಿದ ರಾಮನದು ಉನ್ನತ ವ್ಯಕ್ತಿತ್ವ. ರಾಮ ಸ್ಪರ್ಶಕ್ಕಾಗಿ ಪರಿತಪಿಸುತ್ತಿದ್ದ ಅಹಲ್ಯೆಯ ಉದ್ಧಾರಗಳಿಸಿದ. ಹೀಗೆ ಭಕ್ತಿಭಾವದಿಂದ ಬಳಲಿ ಬೆಂಡಾಗಿ ಶರಣಾದ ಭಕ್ತರನ್ನು ಹರಸಿ ಪಾಲಿಸುತ್ತಲೇ ಬಂದಿದ್ದಾನೆ. ನಮ್ಮಂತ ಪಾಮರರ ಬದುಕಲ್ಲೂ ಕೂಡಾ ಹಾಗೇ. ರಾಮನಾಮವಷ್ಟೇ ಸಾಕು ಸಕಲ ಪಾಪಗಳ ತೊಳೆಯಲು.


ಈಗಲೂ ನಮ್ಮಲ್ಲಿ ಪ್ರಶ್ನೆಯಾಗಿಯೇ ಉಳಿಯುವ ಪ್ರಶ್ನೆ ದೇವನೇ ಮಾನವನೇ..

ಖಂಡಿತಾ ಹೀಗೆಂದು ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ. ಮಾನವನಂತೆಯೇ ಬದುಕಿ ತೋರಿಸಿದಾಗಾಲಷ್ಟೇ ಆತನ ಆದರ್ಶಗಳು ಹೆಚ್ಚು ಪರಿಣಾಮಕಾರಿಯಾಗಿ ಉಳಿಯಬಹುದು ಎಂಬುದೇ ರಾಮಾವತಾರದ ಮೂಲ ಉದ್ದೇಶವಾಗಿದ್ದಿರಬಹುದು. ಮಾನವ ರೂಪದಲ್ಲಿ ಅವತರಿಸಿ ಮನುಜರನು ಉದ್ಧರಿಸಿ, ಸಾಮಾನ್ಯ ಮನುಷ್ಯನಾಗಿಯೇ ಹೇಗೆ ಮಾಧವನಾಗಿ ಬದುಕಬಹುದೆಂದು ತೋರಿಸಿಕೊಟ್ಡ ಮಾನವ ಅವತಾರಿ ದೇವ ನಮ್ಮೆಲ್ಲರ ಆರಾಧ್ಯ ದೈವ ಶ್ರೀರಾಮ.


ಅವನ ಆದರ್ಶಗಳೇ ಉಸಿರುಸಿರಿನಲ್ಲೂ ನಡೆ ನುಡಿಯಲ್ಲಿ ತುಂಬಿಕೊಂಡಾಗಲಷ್ಟೇ ರಾಮನೆಂಬ ಮೂರ್ತಿಯು ಹೃದಯದೊಳಗೆ ಪ್ರತಿಷ್ಠಾಪಿಸಲ್ಪಡುವುದು. ದೇವನೇ ಮಾನವನಾಗಿ ಜನಿಸಿ ಲೋಕೋದ್ಧಾರಕನಾದ.ನಿಜಕ್ಕೂ ರಾಮ ಬರಿದೇ ಮಾನವನಲ್ಲ. ಧರೆಗಿಳಿದ ಭಗವಂತ‌. 




ಅನುರಾಧಾ ಶಿವಪ್ರಕಾಶ್, ಸುಳ್ಯ

91647 72535


ಲೇಖಕರ ಸಂಕ್ಷಿಪ್ತ ಪರಿಚಯ:


ಅನುರಾಧಾ ಶಿವಪ್ರಕಾಶ್ ಅವರು ಗೃಹಿಣಿಯಾಗಿ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಸಾಹಿತ್ಯ, ಸಂಗೀತದ ಚಟುವಟಿಕೆಗಳು, ಕೈತೋಟ ನಿರ್ವಹಣೆಯಂತಹ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿದ್ಯಾಭ್ಯಾಸ: ಎಂಕಾಂ. 

ಹವ್ಯಾಸ: ಕತೆ, ಕವನ, ಲೇಖನ ಬರೆಯುವುದು, ಕೈತೋಟ, ಸಂಗೀತ. ಪ್ರಕಟಿತ ಕೃತಿಗಳು: (ಕವನ ಸಂಕಲನಗಳು) 1.ಅನುಮೋದ 2. ಭಾವಬಂಧು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top