ಹಾಸನ: ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್ ಮಕ್ಕಳ ಮನಮೋಹಕ ನೃತ್ಯ ಪ್ರದರ್ಶನ

Upayuktha
0


ಹಾಸನದ ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ವಿದುಷಿ ಸಮಿಕ್ಷ ಮನುಕುಮಾರ್ ಅವರ ಶಿಷ್ಯೆಯರು ಸ್ಮೃತಿ 2024ರಡಿ ನಡೆಸಿಕೊಟ್ಟ ಭರತ ನಾಟ್ಯ ನೃತ್ಯ ಪ್ರದರ್ಶನ ಮನಮೋಹಕವಾಗಿತ್ತು. ದಿವಂಗತ ಎ.ವಿ.ಪ್ರಕಾಶ್ ಅವರ ಪುಣ್ಯ ಸ್ಮರಣೆಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದವರು ನಾಟ್ಯ ನಿರ್ದೇಶಕಿ ಸಮಿಕ್ಷಾ ಕೆ.ಎಂ. ಇಂಜಿನಿಯರಿಂಗ್ ಪದವೀಧರೆಯಾದ ಇವರು ಚಿಕ್ಕ ವಯಸ್ಸಿನಿಂದಲೇ ಸಂಗೀತ ಮತ್ತು ಕೊಳಲುವಾದನವನ್ನು ಹೆಸರಾಂತ ಕಲಾವಿದರಾಗಿದ್ದ ವಿದ್ವಾನ್ ಎ.ವಿ.ಪ್ರಕಾಶ್ ಅವರಲ್ಲಿ ಕಲಿತವರು. ಭರತನಾಟ್ಯ ವಿದ್ವತ್ ಪೂರ್ಣಗೊಳಿಸಿ ಕ್ಲಾಸ್ ನಡೆಸುತ್ತಿದ್ದಾರೆ. 

ನೃತ್ಯ ಕಾರ್ಯಕ್ರಮವು ಪುಷ್ಪಾಂಜಲಿಯೊಂದಿಗೆ ಆರಂಭಗೊಂಡಿತು. ಪುಷ್ಪ ಮತ್ತು ಅಂಜಲಿಗಳೆಂಬ 2 ಪದಗಳ ಸಂಯೋಗದಿಂದ ಸಿದ್ಧಿಸುವ ಪುಷ್ಪಾಂಜಲಿಯ ಸಾರ ಭಕ್ತಿ ಸಮರ್ಪಣೆ. ಬೊಗಸೆಯಲ್ಲಿ ಹೂವು ಹಿಡಿದು ಭಕ್ತಿ ಭಾವದಿಂದ ಇಷ್ಟ ದೈವ, ಗುರುಹಿರಿಯರು, ನೆರೆದ ಸಭೆಗೆ ವಂದಿಸುವುದು ದೈವೀ ನೃತ್ಯಬಂಧ. ಇದು ಗಂಭೀರ ನಾಟ ರಾಗದಲ್ಲಿ ಆದಿತಾಳಕ್ಕೆ ನಿಬದ್ಧವಾಗಿತ್ತು.


ಮುಂದಿನದು ಮುದಾಕರಾತ್ತ ಮೋದಕಂ ತಿಶ್ರ ಏಕತಾಳಕ್ಕೆ ನಿಬದ್ಧವಾಗಿ ವಿನಾಯಕ ತನ್ನ ಕೈಗಳಲ್ಲಿ ತನ್ನ ಪ್ರಿಯವಾದ ಮೋದಕವನ್ನು ಹಿಡಿದು ತನ್ನ ಭಕ್ತರಿಗೆ ಸದಾ ದಿವ್ಯಾನಂದ ಕರುಣಿಸುವನು ಎಂಬುದನ್ನು ನೃತ್ಯದಲ್ಲಿ ತೋರಿಸಲಾಯಿತು. ಅಲರಿಪು ನೃತ್ಯ ಸೊಗಸಾಗಿತ್ತು. ಅಲರಿಪು ಎಂದರೆ ಅರಳುವುದು. ಮೈಮನಸ್ಸು ಅರಳಿ ದೇವ ಸೇವೆ ಕಲಾ ಸೇವೆಗೆ ಮುಡಿಪಾಗಿ ಪಾರಮಾರ್ಥಿಕ ಭಾವಾಭಿವ್ಯಕ್ತಿ ಬಿಂಬಿಸಿತ್ತು. ನಂತರದ ಜತಿ ಸ್ವರದಲ್ಲಿ ಜತಿಗಳ ಮತ್ತು ಸ್ವರಗಳ ಆಕರ್ಷಕ ಜೋಡಣೆ ಕಂಡುಬಂತು. ಸಾಹಿತ್ಯಾಭಿನಯವು ಜತಿಸ್ವರದಲ್ಲಿ ಕಂಡು ಬರುವುದಿಲ್ಲ. ಬೇರೆ ಬೇರೆ ವಿಧದ ಅಡವುಗಳನ್ನು ಜತಿ ಮತ್ತು ಸ್ವರಗಳಿಗನುಗುಣವಾಗಿ ಹೆಣೆದಿದ್ದು, ಇದು ರಸಿಕಪ್ರಿಯ ರಾಗದಲ್ಲಿ ಆದಿತಾಳದಲ್ಲಿ ಪ್ರದರ್ಶಿತವಾಯಿತು. ನಂತರ ನೃತ್ಯವು ಮೂಷಿಕವಾಹನ ಆದಿತಾಳದಲ್ಲಿ ವಿಘ್ನ ನಿವಾರಕನ ಪಾದಕಮಲಗಳಿಗೆ ಸಮರ್ಪತವಾಯಿತು. ಕರ್ನಾಟಕ ಸಂಗೀತದಲ್ಲಿ ಮುತ್ತುಸ್ವಾಮಿ ದೀಕ್ಷಿತರಿಂದ ರಚಿತ ಸಾಹಿತ್ಯಕ್ಕೆ ಪ್ರದರ್ಶಿತ ನೃತ್ಯವು ಶಂಕರಭರಣ ರಾಗದಲ್ಲಿ ಶೋಭಿಸಿತು.


ನಂತರದ್ದು ಕೌತ್ವಂ ನೃತ್ಯ. ಮೂಲದೇವರ ಉತ್ಸವ ಮೆರವಣಿಗೆ ವೇಳೆ ಕೌತ್ವಂಗಳನ್ನು ಪ್ರಸ್ತುತಪಡಿಸುತ್ತಿದ್ದರೆಂಬುದು ಐತಿಹ್ಯ. ಪಾಠಾಕ್ಷರಗಳು ಸೊಲ್ಲುಕಟ್ಟುಗಳಿಂದ ಕೂಡಿದ ದೇವತಾ ವಿಷಯಾತ್ಮಕವಾದ ಶೋಭಾಯಮಾನವಾದ ಕಿತ್ತಾಂ ಮುಂತ್ತಾದ ಸೊಲ್ಲುಗಳಿಂದ ಸಮಾಪ್ತವಾಗುವ ಪ್ರಾರ್ಥನಾ ನೃತ್ಯಬಂಧಗಳೇ ಕೌತ್ವಂಗಳು. ಇದು ಗಂಭೀಕ ನಾಟರಾಗದಲ್ಲಿ ತಾಳ ಮಾಲಿಕೆಯಲ್ಲಿತ್ತು. ಇನ್ನು ವರ್ಣವು ನೃತ್ಯ ಸಂಪ್ರದಾಯದಲ್ಲಿ ವಿವರಣಾತ್ಮಕ ವರ್ಣಮಯ ಅಲಂಕಾರಿಕ ಚಲನೆಗಳ ಮತ್ತು ಅಭಿನಯದ ರಸಪಾಕ. ಇಲ್ಲಿ ಭಾವ ರಾಗ ತಾಳಗಳೆಲ್ಲವೂ ಉತ್ಕೃಷ್ಟ ರೀತಿಯಲ್ಲಿ ಒಟ್ಟುಗೂಡಿ ಆಂಗೀಕ ಚಲನೆಗಳು ಮನೋಜ್ಞ ಅಭಿನಯ ಒಳಗೊಂಡು ಬಹುಮುಖಿ ವರ್ಣದ ಸಂಚಾರಿ ಭಾಗದಲ್ಲಿ ಶ್ರೀ ಕೃಷ್ಣನ ಜನನ, ಕಂಸನ ಆದೇಶಕ್ಕೆ ಪೂತನಿ ವೇಷಧಾರಿಯಾಗಿ ಬಾಲಕೃಷ್ಣನಿಗೆ ಹಾಲುಣಿಸುವ ಕಥಾಭಾಗವು ಬಾಲೆಯರ ಅಭಿನಯದಿ ರಂಜಿಸಿತು.


ದೇವರನಾಮಗಳಲ್ಲಿ ಭಕ್ತಿ, ನೀತಿ ನಿರೂಪಿತವಾಗಿರುತ್ತದೆ. ಭಕ್ತ ಮತ್ತು ಪರಮಾತ್ಮನ ನಡುವೆ ಸೇತುವೆಯಾಗಿ ಆಡಿದನೋ ರಂಗ.. ಆದಿತಾಳ ಆರಭಿರಾಗದಲ್ಲಿ ಮೂಡಿಬಂತು. ಆಧ್ಯಾತ್ಮಿಕ ವಿಚಾರಗಳನ್ನು ಹೊಂದಿರುವ ಭಕ್ತಿ ಸಾಗರದ ಹಾಡುಗಳೇ ಭಜನ್. ಶಂಕರಾಭರಣಂ ರಾಗದಲ್ಲಿ ಆದಿತಾಳದಲ್ಲಿ ಪ್ರಸ್ತುತಿಯಾದ ಭಜನೆಯು ಗಣೇಶನ ಭಜಿಸಿತ್ತು. ಕವಡಿ ಹಬ್ಬವು ಧರ್ಮ ತ್ಯಾಗ ಭವ್ಯತೆ ಸಂಪ್ರದಾಯಗಳ ಸಂಮಿಶ್ರಣ. ಕಾವಡಿ ಭಕ್ತನು ಭಗವಂತ ಮುರುಗನಿಗೆ ತನ್ನ ಭಕ್ತಿಯನ್ನು ಸಮರ್ಪಿಸುವ ಹಾಡುಗಾರಿಕೆಯಲ್ಲಿ ಕೇರಳದ ವಿದ್ವಾನ್ ಮುರಳಿ ಹಾಡುಗಾರಿಕೆ ಮನಸ್ಸಿಗೆ ನಾಟಿತು. ನಟ್ಟುವಾಂಗದಲ್ಲಿ ವಿದುಷಿ ಸಮೀಕ್ಷ, ಮೃದಂಗದಲ್ಲಿ ವಿದ್ವಾನ್ ನಾಗೈ ಪಿ. ಶ್ರೀರಾಮ್, ಚೆನ್ನೈ ಮತ್ತು ಕೊಳಲು ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್ ಮೈಸೂರು ಇವರ ಸಂಗೀತ ಸಾಂಗತ್ಯದಲ್ಲಿ ನೃತ್ಯ ಪ್ರದರ್ಶನದಲ್ಲಿ ಮಕ್ಕಳು ಭೇಷ್ ಎನ್ನಿಸಿಕೊಂಡರು. ಮೈಸೂರಿನ ರಾಜೇಶ್ವರಿ ವಸ್ತ್ರಾಲಂಕಾರ, ಪ್ರಸಾಧನದಲ್ಲಿ ಮಕ್ಕಳು ರಂಗಾಗಿ ಕಂಡರು. ಹಾಸನದ ವಿಜಯ ಇಂಗ್ಲೀಷ್ ಶಾಲೆಯ ಸಂಸ್ಥಾಪಕ ನಿರ್ದೇಶಕರು ತಾರಾ ಸುಬ್ಬಸ್ವಾಮಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಿರೂಪಕಿ ಸಹನ ಓದಿದ ನೃತ್ಯ ವಿಶೇಷಗಳು ಈ ಬರಹಕ್ಕೆ ಪೂರಕ ಮಾಹಿತಿ ಒದಗಿಸಿದವು. 

 

- ಗೊರೂರು ಅನಂತರಾಜು, ಹಾಸನ. 

ಮೊ: 9449462879

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, 

ಹಾಸನ-573201

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top