-ಡಾ. ಆರ್.ಶೈಲಜ ಶರ್ಮ, ಬೆಂಗಳೂರು
ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣವು ಸನಾತನ ಧರ್ಮದ ಅತ್ಯಂತ ಪವಿತ್ರವಾದ ಗ್ರಂಥಗಳಲ್ಲೊಂದು. ಶ್ರೀರಾಮನ ಜೀವನಗಾಥೆಯ ಈ ಮಹಾಕಾವ್ಯಕ್ಕೆ ವಿಶೇಷವಾದ ಸ್ಥಾನವಿದೆ. ಶ್ರೀರಾಮಚಂದ್ರ ಹಾಗೂ ಸೀತಾದೇವಿಯ ಜೀವನ ಚರಿತ್ರೆಯನ್ನು ಒಳಗೊಂಡಿರುವ ಮಹಾ ಗ್ರಂಥದಲ್ಲಿ ಸಕಲವೂ ಅಡಗಿದೆ. ಭಾರತೀಯರ ಮನೆಗಳಲ್ಲಿ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ರಾಮಾಯಣವೂ ಪ್ರಸಿದ್ಧಿಯನ್ನು ಪಡೆದಿದೆ. ಪ್ರಭು ರಾಮನ ಆದರ್ಶ, ಸರಳತೆ, ಆತ್ಮೀಯತೆ, ಬೇಸರಗಳನ್ನು ಒಳಗೊಂಡಿರುವ ಇದು ಜನರು ಜೀವನದ ಮೌಲ್ಯಗಳನ್ನು ತಿಳಿಯಲು ಸಹಕಾರಿಯಾಗಿದೆ. ಅಖಂಡ ಭಾರತದ ಮರ್ಯಾದಾ ಪುರುಷೋತ್ತಮ ಶ್ರೀರಾಮ.
ನಮ್ಮ ಶ್ರೀಮಂತ ಪರಂಪರೆಯಲ್ಲಿನ ಮಹಾಪುರುಷರಲ್ಲಿ ಬಹು ಪೂಜನೀಯ ಶ್ರೀರಾಮಚಂದ್ರ. ಈ ಮಹಾಕಾವ್ಯದ ಕಥಾನಾಯಕ ರಾಮನೇ ಆದರೂ ಅವನೊಂದಿಗೆ ಒಡನಾಟದ ಹಲವಾರು ಪಾತ್ರಗಳು ಸಹ ನಮ್ಮಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸುತ್ತವೆ. ಇದರಲ್ಲಿ ಬರುವ ರಾಮನ ಮಡದಿ, ಸಹೋದರರು, ತಂದೆ- ತಾಯಂದಿರು, ಮಂಥರೆ ಹಾಗೂ ಅಯೋಧ್ಯೆಯ ಪುರ ಜನರು ಒಂದೆಡೆಯಾದರೆ. ಜಟಾಯು, ಸುಗ್ರೀವ, ಜಾಂಬವಂತ, ರಾಮನ ಭಂಟ ಹನುಮಂತ, ಅಂಗದ, ಅಪಾರವಾದ ಕಪಿ ಸೈನ್ಯ. ವಾಲಿ, ಶಬರಿ, ಅಳಿಲು ಹಾಗೂ ರಾವಣ, ವಿಭೀಷಣ, ಶೂರ್ಪಣಖಾ ಹಾಗೂ ರಾವಣನ ಪರಿವಾರದವರೂ, ಇತರರು ನೆನಪಿನಲ್ಲಿ ಉಳಿಯುತ್ತಾರೆ. ತನ್ನವರೆಲ್ಲರ ಜೊತೆಗೆ ಶ್ರೀರಾಮನು ಹೊಂದಿದ್ದ ವಿಶೇಷ ಬಾಂಧವ್ಯದ ಭಾವಸೂಕ್ಷ್ಮಗಳನ್ನು ರಾಮಾಯಣದಲ್ಲಿ ಸವಿಸ್ತಾರವಾಗಿ ವರ್ಣಿಸಲಾಗಿದೆ. ಸ್ನೇಹ- ಸಂಬಂಧಗಳ ಮೌಲ್ಯ ನಮ್ಮ ಮನಸ್ಸಿಗೆ ಸಹಜವಾಗಿ ಆಕರ್ಷಿತವಾಗುತ್ತವೆ.
ರಾಮನ ಪ್ರೀತಿ ಪಾತ್ರನಾದ ಹನುಮಂತನ ಗುಣಗಳನ್ನು, ರಾಮ ಹನುಮರ ಸಂಭಾಷಣೆ, ಮಾತೆ ಸೀತೆಯನ್ನು ಸಂಧಿಸುವುದು, ಅಶೋಕವನವನ್ನು ಹಾಳು ಮಾಡಿದ ನಂತರ ರಾವಣನೊಂದಿಗಿನ ಮೊದಲ ಭೇಟಿ, ಲಂಕಾ ದಹನ ಮತ್ತು ರಾಮನ ಬಳಿಗೆ ಬಂದು ಮಾತೆಯ ವಿಚಾರಗಳನ್ನು ಹೇಳುವ ವಿವರಗಳೆಲ್ಲವೂ "ಸುಂದರಕಾಂಡ"ದಲ್ಲಿದೆ.
ಸುಂದರಕಾಂಡವು ರಾಮಾಯಣದ ಇತರ ಕಾಂಡಗಳಿಗೆ ಹೋಲಿಸದರೆ ಅತ್ಯಂತ ದಿವ್ಯವಾದ ಸುದೀರ್ಘವಾಗಿರುವ ಸನ್ನಿವೇಷಗಳನ್ನು ಒಳಗೊಂಡಿದೆ ಎಂದು ಅನಿಸುತ್ತದೆ. ನಮ್ಮ ಕರುನಾಡಿನ "ಹಂಪಿ"ಗೆ ಆಗಮಿಸಿದ ಶ್ರೀರಾಮ ಲಕ್ಷ್ಮಣರು, ಹನುಮಂತ ಹಾಗೂ ಸುಗ್ರೀವರನ್ನು ಮೊದಲು ಭೇಟಿಯಾದ ಸ್ಥಳ "ಕಿಷ್ಕಿಂದ". ರಾಮನ ಪರಮ ಭಕ್ತನಾದ ಹನುಮಂತನು ಇಲ್ಲಿಂದಲೇ ಲಂಕೆಗೆ ಹಾರಿ, ಸೀತೆಯನ್ನು ಭೇಟಿಯಾಗಿ, ಲಂಕಾ ದಹನವನ್ನು ಮಾಡಿ ರಾಮನ ಬಳಿ ಬಂದು ಮಾತೆ ಸೀತೆಯ ಸಂದೇಶವನ್ನು ಹೇಳುವ ಕಥಾಭಾಗದೊಂದಿಗೆ ಇತರ ಕಥೆಗಳನ್ನು ಒಳಗೊಂಡಿರುವ ಕಾಂಡವಿದು. ಇಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಸೀತೆ ಮತ್ತು ಹನುಮನ ಭೇಟಿ ಹಾಗೂ "ಹನುಮಂತ - ರಾವಣರು" ಮೊದಲ ಬಾರಿಗೆ ಮುಖಾಮುಖಿಯಾಗುವ ಸನ್ನಿವೇಶ.
ರಾವಣ ಮತ್ತು ಹನುಂತನ ಭೇಟಿಗೂ ಮೊದಲು ಹನುಮಂತನು ಲಂಕಾನಗರಿಯ ವೈಭವೋಪೇತ ದಾರಿ, ಕಿರುದಾರಿಗಳಲ್ಲೆಲ್ಲಾ ಸಂಚರಿಸುತ್ತಾ ಈ ಸುಂದರ ದ್ವೀಪದ ಭವ್ಯತೆಯನ್ನು ನೋಡುತ್ತಾ ಬರುತ್ತಿರುತ್ತಾನೆ. ಹನುಮಂತ ಬುದ್ಧಿ ಶಕ್ತಿ ಹಾಗೂ ಬಲಶಾಲಿ. ಇವೆರಡನ್ನು ಸಮವಾಗಿ ಉಪಯೋಗಿಸಿಕೊಂಡು ಜಯಶಾಲಿಯಾದ ನಿದರ್ಶನಕ್ಕೆ ನೈಜ ಸಾಕ್ಷಿಯಾಗಿದ್ದಾನೆ.
ಮಾತೆ ಸೀತೆಯನ್ನು ಭೇಟಿಯಾದ ನಂತರ ಅವರೊಂದಿಗಿನ ಸಂಭಾಷಣೆಗಳೆಲ್ಲ ಮುಗಿದು ಧನ್ಯತಾಭಾವದಿಂದ ರಾಮನ ಬಳಿಗೆ ಹಿಂದಿರುಗಲು ಸಜ್ಜಾಗುತ್ತಾನೆ. ಮಾತೆಯನ್ನು ನೋಡಿ ಆನಂದಭರಿತನಾಗಿದ್ದೇನೆ, ಪ್ರಭುವಿಗೆ ಮಾತೆಯ ವಿಷಯಗಳನ್ನು ತಿಳಿಸಲು ಕಾತರನಾಗಿದ್ದೇನೆ ಆದರೆ ಇಲ್ಲಿ ಮಾಡುವ ಕೆಲಸಗಳು ಸ್ವಲ್ಪ ಬಾಕಿಯಿದೆ ಎಂದು ತನ್ನ ಮನದಲ್ಲಿಯೇ ಹೇಳಿಕೊಳ್ಳುತ್ತಾನೆ.
ನಾನು ಇಲ್ಲಿಯೇ ಶತೃು ಬಲವನ್ನು, ಯುದ್ಧ ನೈಪುಣ್ಯವನ್ನು, ಅದರಲ್ಲಿನ ತಾರತಮ್ಯವನ್ನು ತಿಳಿದುಕೊಳ್ಳುವುದು ಸೂಕ್ತವಾದ. ಮುಂದೆ ಎದುರಾಗಲಿರುವ ಸಮರದ ಹಿನ್ನೆಲೆಯಲ್ಲಿ ಶತೃು ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳಲು ಮುಂದಾಗಿರುತ್ತಾನೆ. ಯುದ್ಧದ ತಯಾರಿಗಾಗಿ ಅಗತ್ಯವಿರುವ ಅತಿಮುಖ್ಯ ಮಾಹಿತಿಯನ್ನು ಒದಗಿಸಬಲ್ಲ ಕಾರ್ಯವನ್ನು ಹನುಮಂತನು ಕೈಗೊಂಡಿದ್ದು, ಈ ಒಂದು ಪ್ರಸಂಗ ಸುಗ್ರೀವನ ಆಪ್ತನ ಹರಿತವಾದ ಶಕ್ತಿಗೆ ಸಾಕ್ಷಿಯಾಗಿದೆ.
ಹನುಮನ ಮುಂದಿನ ನಡೆ ಪರಾಕ್ರಮಿ ರಾವಣನ ಭೇಟಿ. ರಾವಣನನ್ನು, ಅವನ ಮಂತ್ರಿಗಳನ್ನು, ಅಸುರ ಸೈನ್ಯವನ್ನು ಅವರೆಲ್ಲರ ಶಕ್ತಿ ಸಾಮರ್ಥ್ಯವನ್ನು ಹಾಗೂ ಮನಸ್ಸಿನ ಅಭಿಪ್ರಾಯಗಳನ್ನು ತಿಳಿದುಕೊಂಡು ಇಲ್ಲಿಂದ ಹೋಗಬೇಕು ಎಂದು ನಿರ್ಧರಿಸುತ್ತಾನೆ. ತನ್ನ ಧ್ಯೇಯ ಸಾಧಿಸಿದ ನಂತರ ಲಂಕೆಯಿಂದ ತೆರಳುವ ಮುನ್ನ ಧೀರ ರಾವಣನನ್ನು ಸಂಧಿಸಿ ಅವನ ಶೌರ್ಯ, ಬಲಾಬಲಗಳನ್ನು ಪರೀಕ್ಷಿಸಬೇಕೆಂದು ಬಯಸುತ್ತಾನೆ.
ರಾವಣಸೇನೆಯ ಗಮನ ಸೆಳಯಲು ಬುದ್ಧಿವಂತ ಹನುಮಂತನು ಉಪಾಯ ಮಾಡುತ್ತಾನೆ. ಬಹಳ ಸುಂದರವಾಗಿ ಕಂಗೊಳಿಸುತ್ತಿರುವ ಉದ್ಯಾನವನವನ್ನು ನಾಶಮಾಡುತ್ತಾನೆ. ಹನುಮನ ಕಪಿ ಚೇಷ್ಟೆ ಬಹಳ ಬೇಗ ಲಂಕಾಧಿಪತಿಗೆ ತಲುಪುತ್ತದೆ. ದುಷ್ಕೃತ್ಯವೆಸಗಿದ ವಾನರನನ್ನು ಸದೆಬಡಿಯಲು ಒಬ್ಬರ ಹಿಂದೊಬ್ಬರು ಅಸುರ ನಾಯಕರನ್ನು ಕಳುಹಿಸಲಾಗುತ್ತದೆ. ಹನುಮಂತನಿಂದ ದಾನವರ ವಧೆಯಾಗುತ್ತದೆ. ನಡೆಯುತ್ತಿರುವ ವಿಧ್ವಂಸಕ್ಕೆ ನಿಜವಾದ ಕಾರಣವೇನು ಎಂಬುದು ರಾವಣನು ತಿಳಿದುಕೊಳ್ಳಲು ಅಸಮರ್ಥನಾಗುತ್ತಾನೆ. ಇದೆಲ್ಲವೂ ಇಂದ್ರನ ತಂತ್ರಗಾರಿಕೆ ಎಂಬುದೇ ಆತನ ಊಹೆಯಾಗಿರುತ್ತದೆ. ಎಲ್ಲ ಸೇನಾಧಿಪತಿಗಳನ್ನೂ ಘೋರಯುದ್ಧದಲ್ಲಿ ಕೊಂದ ಹನುಮಂತನೊಂದಿಗೆ ಸೆಣಸಲು ಪುತ್ರನಾದ ಅಕ್ಷಯನನ್ನು ಕಳುಹಿಸಬೇಕಾಗುತ್ತದೆ. ಅಕ್ಷಯನ ವಧೆಯೂ ಆಗುತ್ತದೆ. ಇಂತಹ ದುರ್ಭರ ಪರಾಜಯಗಳ ಬಳಿಕ ರಾವಣ ತನ್ನ ಮತ್ತೊಬ್ಬ ಪುತ್ರ ಇಂಇಂದ್ರಜಿತುವಿಗೆ ಹೋಗಲು ಆದೇಶಿಸುತ್ತಾನೆ. ಅಂತಿಮವಾಗಿ, ಇಂದ್ರಜಿತುವು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಹನುಮಂತನನ್ನು ಬಂಧಿಸುತ್ತಾನೆ. ಸ್ವಯಂ ಬ್ರಹ್ಮನೇ ಅಧಿದೇವತೆಯಾಗಿರುವ ಅಸ್ತ್ರದ ಮೂಲಕ ತಾನು ನಿಶ್ಚಲನಾಗಿ ಸೆರೆಯಾಗಿದ್ದೇನೆ ಎಂಬುದನ್ನು ಮನಗಂಡ ಹನುಮಂತ ಬ್ರಹ್ಮನೇ ದಯಪಾಲಿಸಿದ್ದ ವರವನ್ನು ನೆನೆದು ಬ್ರಹ್ಮಾಸ್ತ್ರಕ್ಕೆ ಶರಣಾಗಲು ನಿರ್ಧರಿಸುತ್ತಾನೆ.
ಹನುಮಂತನನ್ನು ಬಂಧಿಸಿ ರಾವಣನ ಎದುರು ಅಸುರರು ಎಳೆದು ತರುತ್ತಾರೆ. ರಾವಣನನ್ನು ಕಂಡು ಅವನ ಶೋಭಾಯಮಾನ ವ್ಯಕ್ತಿತ್ವಕ್ಕೆ ಹನುಮಂತನು ಬೆರಗಾಗುತ್ತಾನೆ. ಕೆಂಡಾಮಂಡಲನಾಗಿದ್ದ ರಾವಣ ಈ ಉದ್ಧಟತನಕ್ಕೆ ಕಾರಣ ತಿಳಿಯಲು ಹನುಮಂತನನ್ನು ವಿಚಾರಣೆಗೆ ಒಳಪಡಿಸಬೇಕೆಂದು ತನ್ನ ಮಂತ್ರಿವರ್ಗಕ್ಕೆ ಆದೇಶ ನೀಡುತ್ತಾನೆ.
ಹನುಮಂತನು ಪ್ರಪ್ರಥಮವಾಗಿ ರಾವಣನನ್ನು ಕಂಡಾಗ, ಆತನ ಹತ್ತು ಮುಖಗಳು, ಕಡಗಗಳಿಂದ ಶೋಭಿಸುತ್ತಿದ್ದ ಕೈಗಳನ್ನು, ತೇಜೋಮಯವಾಗಿದ್ದ ಆತನ ವರ್ಚಸ್ಸು ಎಲ್ಲವನ್ನು ಕಂಡು ಚಕಿತನಾಗುತ್ತಾನೆ. ಮಂತ್ರಿಗಣದಿಂದ ಸುತ್ತುವರೆದ ರಾವಣನು ಗರ್ವದಿಂದ ಮೆರೆಯುತ್ತಿದ್ದುದನ್ನು ಕಂಡು ಹನುಮಂತನು, ಮೇರುಪರ್ವತದ ಶಿಖರದಲ್ಲಿ ವಿಜೃಂಭಿಸುವ ಮೋಡಕ್ಕೆ ಆತನನ್ನು ಹೋಲಿಸುತ್ತಾನೆ.
ತನ್ನನ್ನು ಕಂಡ ರಾವಣನ ಪ್ರತಿಕ್ರಿಯೆ ಹೇಗಿರಬಹುದೆಂಬ ಕುತೂಹಲದಲ್ಲಿ ತದೇಕಚಿತ್ತನಾಗಿ ಅವನನ್ನೇ ಗಮನಿಸುತ್ತಿದ್ದು ದಾನವೇಂದ್ರನ ಶಕ್ತಿಸಾಮರ್ಥ್ಯಗಳನ್ನ, ಆತನ ಉಜ್ವಲ ಶಾರೀರವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾನೆ. ರಾವಣನೇನಾದರೂ ಅಧರ್ಮದ ಹಾದಿಯಲ್ಲಿರದಿದ್ದರೆ ಇಂದ್ರನ ಸುರಲೋಕಕ್ಕೆ ಅಧಿನಾಯಕನಾಗಬಹುದಿತ್ತು ಎಂಬುದಾಗಿ ಹನುಮಂತನು ಕಲ್ಪಿಸಿಕೊಳ್ಳುತ್ತಾನೆ.
ಕ್ರೋಧಾವಿಷ್ಟನಾದ ರಾವಣನಾದರೋ ತನ್ನ ಬಂಧಿಯ ವಿಚಾರಣೆ ನಡೆಸಲು ಮುಂದಾಗಿ ಆತ ವಾನರನೆಂಬುದನ್ನು ಮನಗಂಡು ಹಿಂದೆ ಶಿವಗಣನಾದ ನಂದಿಯು ತನಗಿತ್ತ ಶಾಪವನ್ನು ನೆನೆಯುತ್ತಾನೆ.
ರಾವಣನು ಹನುಮಂತನನ್ನು ನೋಡಿ ಕಸುವಿಸಿಯಾದರೂ ಅದನ್ನು ತೋರ್ಪಡಿಸಿಕೊಳ್ಳದೆ ಅಪಹಾಸ್ಯ ಮಾಡುತ್ತಾನೆ. ರಾವಣನ ದರ್ಪವನ್ನು ಅಡಗಿಸಲು ಅವನ ಸರಿಸಮಾನವಾಗಿ ಕುಳಿತುಕೊಳ್ಳಲು ಹನುಮಂತನು ತನ್ನ ಬಲದಿಂದ ಕಟ್ಟುಗಳನ್ನು ಬಿಚ್ಚಿಕೊಂಡು ಶ್ರೀರಾಮನನ್ನು ನೆನೆಯುತ್ತ ತನ್ನ ಬಾಲವನ್ನು ಅಗಾಧವಾಗಿ ಬೆಳೆಸುತ್ತಾನೆ. ರಾವಣನ ಸಿಂಹಾಸನದ ಸಮವಾಗಿ ತನ್ನ ಬಾಲವನ್ನು ಮಡಚಿ ಅದರ ಮೇಲೆ ಕುಳಿತುಕೊಳ್ಳುತ್ತಾನೆ.
ದೇವಾಧಿ ದೇವತೆಗಳಾಧಿಯಾಗಿ ಯಾವ ಜೀವಿಯೂ ನನ್ನ ಅಪ್ಪಣೆ ಇಲ್ಲದೆ ಇಲ್ಲಿಗೆ ಬರಲಾಗುವುದಿಲ್ಲ. ಸುತ್ತಲೂ ಜಲರಾಶಿಯಿದೆ. ನನ್ನ ಸೇನಾ ನಾಯಕರಿದ್ದಾರೆ. ರಾಕ್ಷಸ ಪಡೆಯೇ ಇಲ್ಲಿದೆ ಸಾಮಾನ್ಯ ಕಪಿಯಾದ ನೀನು ಇಲ್ಲಿಗೆ ಹೇಗೆ ಬಂದೆ? ನೀನು ಯಾರೆಂದು ಹೇಳು ಎಂದು ರಾವಣನು ಕೋಪದಲ್ಲಿ ಕೇಳುತ್ತಾನೆ.
ನಾನು ಪ್ರಭು ಶ್ರೀರಾಮಚಂದ್ರನ ಭಂಟ, ರಾಮ ಧೂತ ಹನುಮಂತ. ಸೀತಾಮಾತೆಯನ್ನು ಶ್ರೀರಾಮನು ಬಂದು ಕರೆದುಕೊಂಡು ಹೋಗುತ್ತಾನೆ ಎಂದು ಹೇಳುತ್ತಾನೆ. ತಾನು ಮಾಡಿದ ಧ್ವಂಸಕಾರ್ಯದ ಮುಖ್ಯ ಉದ್ದೇಶವೇ ಅಸುರಾಗ್ರೇಸರನಾದ ನಿನ್ನನ್ನು ಮುಖಾಮುಖಿ ಭೇಟಿಮಾಡುವುದಾಗಿತ್ತು ಎಂಬುದಾಗಿ ವಿವರಿಸುತ್ತಾನೆ. ರಾವಣನ ಮುಂದೆಯೇ ರಾಮನ ಜೀವನದ ದಿವ್ಯ ಚಿತ್ರಣವನ್ನು ಸಭೆಯಲ್ಲಿ ಇದ್ದವರಿಗೆ ಹೇಳುತ್ತಾನೆ.
ಮಾತೆಯನ್ನು ಹುಡುಕುತ್ತಾ ನಾನಿಲ್ಲಿಗೆ ಬಂದೆ. ನೀನು ಧರ್ಮಾರ್ಥಗಳನ್ನು ಚೆನ್ನಾಗಿ ತಿಳಿದವನು, ಕಠಿಣ ತಪಸ್ಸನ್ನಾಚರಿಸಿ ಅನೇಕ ವರಗಳನ್ನು ಪಡೆದಿರುವೆ. ಅಂತಹ ನಿನಗೆ ಪರಸತಿಯನ್ನು ಬಂಧಿಸಿಡುವುದು ಯೋಗ್ಯವೆನಿಸುವುದಿಲ್ಲ. ಗೌರವಯುತವಾಗಿಯೇ ರಾವಣನ ಕುಕೃತ್ಯವನ್ನು ಖಂಡಿಸುತ್ತಾ ಸೀತೆಯನ್ನು ರಾಮನಿಗೆ ಒಪ್ಪಿಸಬೇಕೆಂದು ಆಗ್ರಹಿಸುತ್ತಾನೆ. ಧರ್ಮಫಲಗಳು ಅಧರ್ಮಫಲಗಳು ಎಂದಿಗೂ ಕೂಡಿರುವುದಿಲ್ಲ. ಧರ್ಮಕಾರ್ಯಕ್ಕೆ ಶುಭಪಲಗಳು, ಅಧರ್ಮಕಾರ್ಯಕ್ಕೆ ಅಶುಭಫಲಗಳು ದೊರಕುವವು. ಧರ್ಮಕಾರ್ಯಾಚರಣೆಯಿಂದ ಅಧರ್ಮಕಾರ್ಯಫಲವು ನಶಿಸಲಾರದು ಎಂದು ಹೇಳುತ್ತಾನೆ.
ಹನುಮಂತನ ಮಾತಿನಿಂದ ಕುಪಿತನಾದ ರಾವಣ ಹನುಮಂತನ ವಧೆಗೆ ಆದೇಶ ಹೊರಡಿಸುತ್ತಾನೆ. ಧೂತನಾಗಿ ಬಂದಿರುವವನನ್ನು ಕೊಲ್ಲುವುದು ಅಪರಾಧವೆಂದು ವಿಭೀಷಣ ಹೇಳುತ್ತಾನೆ. ರಾವಣನ ಸಿಟ್ಟು ಹೆಚ್ಚಾಗುತ್ತದೆ. ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಲು ಹೇಳುತ್ತಾನೆ. ಮಾರುದ್ದದ ಬಾಲಕ್ಕೆ ಬೆಂಕಿ ಹಚ್ಚಲು ಹರಸಾಹಸ ಪಡುತ್ತಾರೆ. ಎಲ್ಲವನ್ನೂ ನಗುತ್ತಲೇ ನೋಡುತ್ತಿದ್ದ ಹನುಮ, ಬೆಂಕಿ ಹಚ್ಚಿದ ಕೂಡಲೆ ಚಂಗನೆ ಹಾರಿ ಇಡೀ ಲಂಕೆಯನ್ನು ತನ್ನ ಬಾಲದಿಂದ ಸುಟ್ಟು ಬಿಡುತ್ತಾನೆ. ಅಶೋಕವನಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸುತ್ತಾನೆ.
ಲಂಕಾದಹನದ ನಂತರ ಸಮುದ್ರದಲ್ಲಿ ತನ್ನ ಬಾಲವನ್ನು ಅದ್ದಿ ಬೆಂಕಿಯನ್ನು ನಂದಿಸಿಕೊಳ್ಳುತ್ತಾನೆ. ಮತ್ತೊಮ್ಮೆ ಸೀತೆಯಿರುವ ಅಶೋಕವನಕ್ಕೆ ಹೋಗಿ ಯಾವುದೇ ಹಾನಿಯಾಗಿಲ್ಲವೆಂದು ಖಚಿತಪಡಿಸಿಕೊಂಡು ತನ್ನ ಪ್ರಭು ರಾಮ ಹಾಗೂ ತನ್ನ ಪರಿವಾರವಿರುವ ಕಿಷ್ಕಿಂದೆಯ ಕಡೆಗೆ ಹಾರುತ್ತಾನೆ. ಸ್ವಾಮಿ ನಿಷ್ಟೆ ಹಾಗೂ ಭಕ್ತಿಯ ಪ್ರತಿರೂಪ ನಮ್ಮ ಹನುಮಂತ.
ಡಾ. ಆರ್. ಶೈಲಜ ಶರ್ಮ
ವಿಳಾಸ-#19, ಶ್ರೀಗಣೇಶನಿಲಯ, 1ನೇ ಅಡ್ಡ ರಸ್ತೆ, ಕತ್ತರಿಗುಪ್ಪೆ ಪೂರ್ವ, ಸಿದ್ಧಾರ್ಥ ಬಡಾವಣೆ, ಬನಶಂಕರಿ 3ನೇ ಹಂತ. ಬೆಂಗಳೂರು-560085.
ಮೊಬೈಲ್ ನಂಬರ್- 9980627041
ಈಮೇಲ್- rshaisharma80@gmail.com
ಲೇಖಕರ ಸಂಕ್ಷಿಪ್ತ ಪರಿಚಯ:
ವಿದ್ಯಾಭ್ಯಾಸ- ಪುರಾತತ್ವ ಪ್ರವಾಸೋದ್ಯಮದಲ್ಲಿ ಪದವಿ, ಎಮ್ ಎ. ಕನ್ನಡ. ಕನ್ನಡ ರತ್ನ.
ಪ್ರವಾಸೋದ್ಯಮ ವಿಷಯದಲ್ಲಿ ಡಾಕ್ಟರೇಟ್.
ಹವ್ಯಾಸ - ಚಿತ್ರ ಕಲೆ, ಪ್ರವಾಸ, ಸಾಹಿತ್ಯ.
ಕತೆ, ಕವನ, ಕಾದಂಬರಿ, ಲೇಖನ, ಪ್ರವಾಸ ಪ್ರಕಾರದ 28 ಕೃತಿಗಳು ಓದುಗರ ಕೈ ಸೇರಿವೆ.
ಸಂಯುಕ್ತ ಕರ್ನಾಟಕ, ಕರ್ಮವೀರ, ಉದಯಕಾಲ, ಇಂದು ಸಂಜೆ, ವಿಶ್ವವಾಣಿ, ವಿಜಯವಾಣಿ, ಬೆಂಕಿಯ ಬಲೆ, ಅಕ್ಷರ ಐಸಿರಿ ಹಾಗೂ ಇನ್ನೂ ಮುಂತಾದ ಪತ್ರಿಕೆಗಳಲ್ಲಿ ಲೇಖನ, ಕವನಗಳು, ಕತೆ ಪ್ರಕಟಣೆಗೊಳ್ಳುತ್ತಿರುತ್ತವೆ.
ಪ್ರಶಸ್ತಿಗಳು- ಕನ್ನಡ ಸೇವಾ ರತ್ನ, ಸ್ತ್ರೀ ಸದ್ಭಾವನಾ, ಕಲಾ ರತ್ನ , ಡಾ. ದೊಡ್ಡ ರಂಗೇಗೌಡ ಪ್ರಶಸ್ತಿ, ವಿಶ್ವ ಕಲಾ ರತ್ನ ಸಿ.ಆರ್.ಸಿಂಹ ಪ್ರಶಸ್ತಿ ಹಾಗೂ ಇನ್ನೂ ಮುಂತಾದವು.
ಶಾಲಾ ಶಿಕ್ಷಕಿಯಾಗಿ, ಆಡಳಿತಾಧಿಕಾರಿಯಾಗಿ ಚೈತನ್ಯ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಿರೂಪಕಿ ಹಾಗೂ ಪತ್ರಕರ್ತೆಯಾಗಿ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.. ಪ್ರಸ್ತುತ ಧಾರವಾಹಿ ಮತ್ತು ಸಿನಿಮಾ ಕಲಾವಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ