ವಿಶ್ವಾಸಾರ್ಹತೆ ಪ್ರಶ್ನಿಸುವಂತಿದೆ ‘ಪೂನಂ’ ಸುದ್ದಿ: ಸಂಯುಕ್ತ ಕರ್ನಾಟಕ ಸಂಪಾದಕ ವಸಂತ ನಾಡಿಗೇರ ಆತಂಕ

Upayuktha
0


ದಾವಣಗೆರೆ: ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಪ್ರಕಟಗೊಂಡ ‘ಪೂನಂ ಪಾಂಡೆ’ ನಿಧನ ಎಂಬ ಒಂದು ಸಣ್ಣ ಸುದ್ದಿ ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಪ್ರಶ್ನಿಸುವಂತಿದೆ ಎಂದು ಸಂಯುಕ್ತ ಕರ್ನಾಟಕ ಸಂಪಾದಕ ವಸಂತ ನಾಡಿಗೇರ ಆತಂಕ ವ್ಯಕ್ತಪಡಿಸಿದರು.


ದಾವಣಗೆರೆ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ೩೮ನೇ ಪತ್ರಕರ್ತರ ಸಮ್ಮೇಳನದಲ್ಲಿ ಭಾನುವಾರ ಆಯೋಜಿಸಿದ್ದ ‘ಸಾಮಾಜಿಕ ಮಾಧ್ಯಮ ಮತ್ತು ವೃತ್ತಿ ವಿಶ್ವಾಸಾರ್ಹತೆ’ ಕುರಿತು ನಡೆದ ನಾಲ್ಕನೇ ಗೋಷ್ಠಿಯಲ್ಲಿ ಅವರು ಮಾತನಾಡಿದರು.


ಪೂನಂ ಪಾಂಡೆ ನಿಧನರಾದರು ಎಂಬ ಒಂದೇ ಸುದ್ದಿಯಿಂದ ನಾವು ಯಾವ ರೀತಿ ವೃತ್ತಿಧರ್ಮ ಕಾಪಾಡುತ್ತಿದ್ದೇವೆ ಮತ್ತು ಸಾಮಾಜಿಕ ಮಾಧ್ಯಮಗಳು, ಬೇರೆ ಎಲ್ಲಾ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ರಾಜೀಯಾಗುವಂತ ಸ್ಥಿತಿಗೆ ಬಂದಿದ್ದೇವೆ ಎಂದರು. ಒಂದು ಸುದ್ದಿಯನ್ನು ಪ್ರಕಟಿಸುವಾಗ ನೈಜವೋ ಅಥವಾ ಸುಳ್ಳೋ ಎಂದು ಪರಾಮರ್ಶೆ ಮಾಡುವುದಿಲ್ಲ. ಆ ಸುದ್ದಿಯನ್ನು ಖಚಿತ ಪಡಿಸಿಕೊಂಡು ಹಾಕಬೇಕೆಂಬ ವ್ಯವದಾನವನ್ನೂ ಕಳೆದುಕೊಂಡಿದ್ದೇವೆ. ಇದಕ್ಕೆ ಉತ್ತಮ ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ಬಂದ ಪೂನಂ ಪಾಂಡೆ ನಿಧನ ಸುದ್ದಿಯೇ ನಿದರ್ಶನವಾಗಿದೆ ಎಂದು ತಿಳಿಸಿದರು.


ಸಾಮಾಜಿಕ ಮಾಧ್ಯಮಗಳು ಬಂದಾಗ ಸಾರ್ವತ್ರಿಕವಾಗಿ ಎಲ್ಲಾ ಮಾಧ್ಯಮಗಳಿಗೆ ಪ್ರಶ್ನಾರ್ಹ ಚಿಹ್ನೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳನ್ನು ಬಿಂಬಿಸುವ ಮೂಲಕ ಸಾಮಾಜಿಕ ವ್ಯವಸ್ಥೆ ಅಸ್ತವ್ಯಸ್ತವಾಗುವ ಸನ್ನಿವೇಶಕ್ಕೆ ಬಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. 


ಮಂಗಳೂರು ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕರಾದ ರವೀಂದ್ರ ಶೆಟ್ಟಿ ಮಾತನಾಡಿ, 2006ರಲ್ಲಿ ಬಂದ ಫೇಸ್‌ಬುಕ್, ಯೂಟೂಬ್, ಟ್ವೀಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ಕೂಡ ಮುದ್ರಣ ಮತ್ತು ದೃಶ್ಯ ಮಾಧ್ಯಮಕ್ಕೂ ಸಾಕಷ್ಟು ಪೈಪೋಟಿ ನೀಡುತ್ತಿದೆ. ಸಾಮಾಜಿಕ ಮಾಧ್ಯಮ ವರವೂ, ಶಾಪವೂ ಹೌದು. ತಂತ್ರಜ್ಞಾನ ಬರಲಿ, ಅದನ್ನು ನಾವು ಹೇಗೆ ಬಳಸಿಕೊಳ್ಳಬೇಕೆಂಬ ಅರಿವು ಮುಖ್ಯವಾಗಿರುತ್ತದೆ ಎಂದರು.


ವೃತ್ತಿಯಲ್ಲಿ ವಿಶ್ವಾಸಾರ್ಹತೆ ಇಲ್ಲದೇ ಹೋದಾಗ ಯಾವುದೇ ಗಟ್ಟಿತನ ಇರುವುದಿಲ್ಲ. ಸೋಷಿಯಲ್ ಮೀಡಿಯಾ ಬಂದ ಮೇಲೆ ನಮ್ಮ ಗಟ್ಟಿತನ ನಾವು ಕಳೆದುಕೊಳ್ಳುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.


ಸಾಮಾಜಿಕ ಜಾಲತಾಣ ಬಂದು ಬೇಕಾದದ್ದನ್ನು ಬರೆಯುವುದು ಆಗಿದ್ದು, ಇದು ಕಲಿಯುಗವಲ್ಲ, ವೈರಲ್ ಯುಗವಾಗಿದೆ. ವೈರಲ್ ಯುಗದಿಂದ ಸತ್ಯ ಯಾವುದು, ಸುಳ್ಳು ಯಾವುದು ಗೊತ್ತಾಗುತ್ತಿಲ್ಲ. ಸುಳ್ಳಿನಲ್ಲಿ ಸತ್ಯವನ್ನೇ ಹುಡುಕುವುದು ದೊಡ್ಡ ಸವಾಲಾಗಿದೆ ಎಂದರು. ವೈರಲ್ ಸುದ್ದಿಗಳಿಗೆ ಕಡಿವಾಣ ಹಾಕದಿದ್ದರೆ ಅಥವಾ ವ್ಯಾಕ್ಸಿನ್ ಕಂಡು ಹಿಡಿಯದಿದ್ದರೆ ಮುಂದಿನ ದಿನಗಳಲ್ಲಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಿಗೆ ಭವಿಷ್ಯವಿಲ್ಲ ಎಂಬ ಎಚ್ಚರಿಕೆ ನೀಡಿದರು.


ಬೆಂಗಳೂರು ವಿಜಯವಾಣಿ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ ಮಾತನಾಡಿ, ಮಾಧ್ಯಮಗಳು ರೋಚಕತೆ ಬಿಟ್ಟು ಅಭಿವೃದ್ಧಿ ಹಾಗೂ ಜನರ ಒಳಿತಿನ ಸುದ್ದಿಗೆ ಆದ್ಯತೆ ನೀಡಬೇಕು. ಪತ್ರಕರ್ತರ ಸಂಘಗಳು ಯುವ ಪತ್ರಕರ್ತರಿಗೆ ಹೆಚ್ಚಿನ ತರಬೇತಿ ನೀಡಿ, ಜಿಲ್ಲಾ ಮಟ್ಟದಲ್ಲಿ ಶಿಬಿರ ಆಯೋಜಿಸಬೇಕು ಎಂದು ಹೇಳಿದರು.


ದಾವಣಗೆರೆ ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ಹಿರಿಯ ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ, ಕನ್ನಡಪ್ರಭದ ಶೇಷಮೂರ್ತಿ ಅವಧಾನಿ ಮಾತನಾಡಿದರು. ರಾಜ್ಯ ಸಮಿತಿ ಪದಾಧಿಕಾರಿಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top