ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳ ಸುಧಾಮಂಗಲೋತ್ಸವ ಸಂಪನ್ನ

Upayuktha
0

ಬಾಲರಾಮನಿಗೆ ಜ್ಞಾನ ಕುಸುಮ ಅರ್ಪಣೆ



ಅಯೋಧ್ಯೆ: ಬಾಲರಾಮನ ಪ್ರತಿಷ್ಠೆಯ ಬಳಿಕ 48 ದಿನಗಳ ಮಂಡಲೋತ್ಸವದ ಮೂಲಕ ಅಯೋಧ್ಯೆಯಲ್ಲಿ ನಿತ್ಯೋತ್ಸವವನ್ನು ವೈಭವದಿಂದ ನಡೆಸುತ್ತಿರುವ ಶ್ರೀಪೇಜಾವರ ಶ್ರೀಗಳು ಗುರುವಾರದಂದು ತಮ್ಮ ವಿದ್ಯಾರ್ಥಿಗಳಿಗೆ ಶ್ರೀ ಮನ್ನ್ಯಾಯ ಸುಧಾ ಮಂಗಲೋತ್ಸವ ನಡೆಸಿ ರಾಮನಿಗೆ ಜ್ಞಾನ ಪುಷ್ಪವನ್ನು ಸಮರ್ಪಿಸಿದರು.‌


ಅಯೋಧ್ಯೆಯ ತೀರ್ಥಕ್ಷೇತ್ರಪುರಮ್ ನ ಟೆಂಟ್ ಸಿಟಿ ಸಭಾಂಗಣದಲ್ಲಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಘಟಿಕೋತ್ಸವವು ನಡೆಯಿತು.  ವಿದ್ಯಾಪೀಠದಲ್ಲಿ 13 ವರ್ಷಗಳ ವ್ಯಾಸಂಗ ಮುಗಿಸಿದ 14 ವಿದ್ಯಾರ್ಥಿಗಳು ಗುರುಮುಖೇನ ನಡೆಸಿದ ಶ್ರೀ ಮನ್ನ್ಯಾಯ ಸುಧಾಧ್ಯಯನದ ಮಂಗಲೋತ್ಸವವನ್ನು ರಾಮನಿಗೆ ಅರ್ಪಿಸಿದರು.‌


ಶ್ರೀ ಪಲಿಮಾರು ಉಭಯ ಶ್ರೀಗಳು, ಪೇಜಾವರ ಶ್ರೀಗಳು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥರು ಸಾನ್ನಿಧ್ಯವಹಿಸಿ ಶ್ರೀ ಜಯತೀರ್ಥ ಗುರುವಿರಚಿತ ಶ್ರೀ ಮನ್ನ್ಯಾಯ ಸುಧಾನುವಾದ ಹಾಗೂ ಜಗದ್ಗುರು ಮಧ್ವಾಚಾರ್ಯರ ತತ್ವವಾದದ ಹಿನ್ನೆಲೆಯಲ್ಲಿ ಸಂದೇಶ ನೀಡಿದರು.



ಹಿರಿಯ ವಿದ್ವಾಂಸರುಗಳಾದ ಪ್ರೊ ಎ ಹರಿದಾಸ ಭಟ್, ರಾಮವಿಠಲಾಚಾರ್ಯ, ಸತ್ಯಧ್ಯಾನಾಚಾರ್ಯ ಕಟ್ಟಿ, ಜಿ.ಪಿ ನಾಗರಾಜ ಆಚಾರ್ಯ, ರಘುಪತಿ ಉಪಾಧ್ಯಾಯ, ತಿರುಮಲ ಕುಲಕರ್ಣಿ, ಬ್ರಹ್ಮಣ್ಯಾಚಾರ್ಯ, ಮೊದಲಾದವರು ಸೇರಿದಂತೆ ಅನೇಕ‌ ವಿದ್ವಾಂಸರು, ವಿವಿಧ ಕ್ಷೇತ್ರಗಳ ಗಣ್ಯರು, ಕರ್ನಾಟಕ ಆಂಧ್ರ ತಮಿಳುನಾಡು, ತೆಲಂಗಾಣ ಮೊದಲಾದೆಡೆಗಳಿಂದ ಆಗಮಿಸಿದ್ದ ಸುಮಾರು ಒಂದು ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು.‌


ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.‌


ಸುಧಾಧ್ಯಯನ ಮುಗಿಸಿದ ವಿದ್ಯಾರ್ಥಿಗಳು ಶ್ರೀಗಳ ಪಟ್ಡದ ದೇವರಿಗೆ  ಸ್ವರ್ಣ ಪೀಠ ಸಮರ್ಪಿಸಿದರು. ಶ್ರೀಗಳು ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಗೆ ಅನುಸಾರವಾಗಿ ಸ್ವರ್ಣ ಪದಕ, ಬೆಳ್ಳಿಯ ತುಲಸಿ ಮಾಲೆ, ರೇಷ್ಮೆ ಪಟ್ಟೆ, ಶಾಲು, ಬೆಳ್ಳಿಯ ಲೋಟ ಸಹಿತ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು. 

ಉಡುಪಿಯ ಜಿಜ್ಞಾಸು ಶ್ರೀನಿವಾಸ ಪೆಜತ್ತಾಯರು ಎಲ್ಲ ವಿದ್ಯಾರ್ಥಿಗಳಿಗೆ ತಲಾ ಒಂದೂವರೆ ಗ್ರಾಂ ಸ್ವರ್ಣ ಪದಕ ನೀಡಿ ಅಭಿನಂದಿಸಿದರು.


ಗುರುವಾರ ನಡೆದ ಮಂಡಲೋತ್ಸವದಲ್ಲಿ ಕರ್ನಾಟಕದ ಮಾಜಿ ಸಚಿವ ಆನಂದ್ ಸಿಂಗ್ ಮತ್ತು ಕುಟುಂಬದವರು ಹಾಗೂ ಬೆಂಗಳೂರಿನ ಶ್ರೀನಿವಾಸ ರೆಡ್ಡಿ‌, ಮೈಸೂರಿನ ಆರ್ ವಾಸುದೇವ ಭಟ್ ಮತ್ತು ಬಳಗದವರಿಂದ ರಜತ ಕಲಶಾಭಿಷೇಕ ನಡೆಯಿತು. ವಿಹಿಂಪ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ಜಿ, ಶ್ರೀಗಳ ಆಪ್ತರಾದ ಶ್ರೀನಿವಾಸ ಪ್ರಸಾದ್ ಹಾಗೂ ಪೂರ್ಣಪ್ರಜ್ಞ ವಿದ್ಯಾಪೀಠದ ಅಧ್ಯಾಪಕರು, ಸಿಬಂದಿಗಳು, ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ವಿಶೇಷವಾಗಿ ಸಹಕರಿಸಿದರು.‌


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top