ಆಧಾರ್ ಪಹಣಿ ಸೀಡಿಂಗ್ 'ಪಾಣಿಗ್ರಹಣ ಮುಹೂರ್ತ' ಎರಡ್ಮೂರು ದಿನ ಮುಂದೂಡಲಾಗಿದೆ!!

Upayuktha
0


ಪಹಣಿ ಆಧಾರ್ ಸೀಡಿಂಗ್ ಮಾಡೋಕೆ ಕೊಟ್ಟಿರುವ ಲಿಂಕ್‌ಗೆ ಹೋಗಿ ಆಧಾರ್, ಕ್ಯಾಪ್ಚಾ (Captcha), OTP ಕೊಟ್ಟರೆ, ಫ್ರೂಟ್ ತಂತ್ರಾಂಶದಿಂದ ಜಮೀನಿನ ಸರ್ವೇ ನಂಬರ್, ವಿಸ್ತೀರ್ಣ, ಹಿಸ್ಸಾ ಎಲ್ಲ ವಿವರಗಳ ಸ್ಕ್ರೀನ್ ಬರುತ್ತೆ.  


ಸ್ಕ್ರೀನಿನ ಎಡಭಾಗದಲ್ಲಿ ವೃತ್ತಾಕಾರದ ಖಾಲಿ ಗುಂಡಿ (ಬಾಕ್ಸ್‌) ಇರುತ್ತೆ. ಅದನ್ನು ಆಯ್ಕೆ ಮಾಡಿ, ಬಲ ಭಾಗದ ತುದಿಯಲ್ಲಿ ಲಿಂಕ್ ಬಟನ್ ಒತ್ತಿ ಸೀಡಿಂಗ್ ಮಾಡಬೇಕು.


ಆದರೆ.....


ಗುಂಡಿ ರೆಡಿ ಇದೆ, ಇನ್ನೇನು ಬೀಜ ಬಿತ್ತಬೇಕು ಅನ್ನುವಾಗ ಭಯಂಕರ ಒಂದು ಮಳೆ ಬಂದು ಎಲ್ಲ ಕೆಲಸ ಹಾಳಾಗುವ ಹಾಗೆ.... ಅರ್ಜಿದಾರ ಮತ್ತು ಆರ್ಟಿಸಿ ನಡುವೆ ಹೆಸರು ಹೊಂದಾಣಿಕೆ ಆಗುವುದಿಲ್ಲ ಅಂತ ಟಿವಿ ಜೋತಿಷಿಗಳು ಕುಂಡಲಿ ನೋಡಿ ಹೇಳುವ ಹಾಗೆ, ಒಂದು ಕುಜ ದೋಷದ ಸ್ಕ್ರೀನ್ ಬಂದು ನಿಲ್ಲುತ್ತೆ!!!


ಅರೆ, ಹೆಸರು ಆಧಾರ್‌ನಲ್ಲಿ ಸರಿ ಇಲ್ಲವಾ? ಪಹಣಿಯಲ್ಲಿ ಹೆಸರು ಬದಲಾಗಿದೆಯಾ? ಅಂತ ರೀಡಿಂಗ್ ಕನ್ನಡಕವನ್ನು ಕ್ಲೀನ್ ಮಾಡಿ, ಹಾಕಿಕೊಂಡು ನೋಡಿದರೆ... ಇಲ್ಲ ಎರಡೂ ಕಡೆ ಸರಿ ಇದೆ!!! 


ಒಂದು ಸಣ್ಣ ಬದಲಾವಣೆ ಅಂದ್ರೆ ಆಧಾರ್‌ನಲ್ಲಿ ಹೆಸರು ಫಸ್ಟ್, ಇನಿಷಿಯಲ್ ನಂತರ ಇದೆ. ವೇರ‌್ಯಾಸ್, ಪಹಣಿಯಲ್ಲಿ ಇನಿಷಿಯಲ್ ಫಸ್ಟ್ ಹೆಸರು ಆಮೇಲೆ ಇದೆ.


ಅಷ್ಟೆ. ಹೀಗಾಗಿ ಅರ್ಜಿದಾರ ಮತ್ತು ಆರ್ಟಿಸಿ ನಡುವೆ ಹೆಸರು ಹೊಂದಾಣಿಕೆ ಆಗುವುದಿಲ್ಲ ಅಂತ ಆನ್‌ಲೈನಲ್ಲಿ ಜಾತಕ ರಿಜೆಕ್ಟ್ ಆಗಿದೆ!!!


ಆಧಾರ್ ಪಹಣಿ ಸೀಡಿಂಗ್ ಆಗ್ತಾ ಇಲ್ಲ.


ಆನ್‌ಲೈನ್ ಜೋತಿಷ್ಯರು ಬೇಡಾಂತ, ಗಿಳಿ ಶಾಸ್ತ್ರದ ಕಂದಾಯ ಇಲಾಖೆಯ ಒಬ್ಬ ಅಧಿಕಾರಿಗೆ ಫೋನ್ ಮಾಡಿದರೆ, ಅಲ್ಲಿಯ ಪ್ರಭೂತಿ ಪಂಡಿತರೊಬ್ಬರು ಆಧಾರ್ ಕಾರ್ಡಿ‌ನಲ್ಲಿ ಪಹಣಿಯಲ್ಲಿರುವಂತೆ ಹೆಸರು ಬದಲಿಸಲು ಹೇಳ್ತಾರೆ!!! 


ಹನ್ನೆರಡು ವರ್ಷಗಳ ಹಿಂದೆ ರಾತ್ರಿ ಎರಡುವರೆಗೆ (ಆಧಾರ್ ಪದ್ದತಿ ಜಾರಿಗೆ ಬಂದಾಗ, ಅರ್ಧ ರಾತ್ರಿಯಲ್ಲಿ ಹೋಗಿ ಕಾರ್ಡ್ ಮಾಡಿಸಬೇಕಿತ್ತು)  ಜನಿಸಿದ ಆಧಾರ್ ಕಾರ್ಡಿನ ಜಾತಕದಲ್ಲಿ ಹೆಸರು ಸರಿ ಇಲ್ಲ, ದೋಷ ಇದೆ, ಪಹಣಿ ಜತೆ ಪಾಣಿಗ್ರಹಣ ಆಗಬೇಕಾದರೆ ಆಧಾರ್ ಕಾರ್ಡ್ ಜಾತಕ ಬದಲಿಸಬೇಕು!! ಅಂದ್ರೆ ಇದೆಂತ ಸಾಡೇ ಸಾತ್ ಶನಿ ಹಿಡಿದಿದೆ ವ್ಯವಸ್ಥೆಗೆ ಅಂತ!!! 


ಮಲೆನಾಡು ಕರಾವಳಿ ರೈತರಿಗೆ ಸಾಡೇ ಸಾತ್ ಶನಿ ಬರಿ ಆಧಾರ್-ಪಹಣಿ ಸೀಡಿಂಗ್‌ಗೆ ರೂಪದಲ್ಲಿ ಮಾತ್ರ ಇಲ್ಲ, ಬೆಳೆ ಸರ್ವೆ ಸಮಸ್ಯೆ,, ಫ್ರೂಟ್ ಐಡಿ ಸಮಸ್ಯೆ, NPCI ಲಿಂಕ್ ಸಮಸ್ಯೆ, ಸಬ್ಸಿಡಿ ದೋಖಾ, ಮಂಗ-ಕಾಡುಕೋಣ, YLD-LSD ರೋಗ, ಬರ, ಅರಣ್ಯ ನೀತಿ, ಒತ್ತು'ವರಿ', ಜನಪ್ರತಿನಿಧಿಗಳ ಸುಳ್ಳು ಭರವಸೆ, ಅಧಿಕಾರಿಗಳ ಭ್ರಷ್ಟತೆ, ಬೆಳೆ ಹಾನಿಕಾರಕ, ಅಸ್ಥಿರ ಬೆಲೆ, ವಿದೇಶಿ ಕಳ್ಳ ಆಮದು.... (ಪಟ್ಟಿಯ ಉದ್ದ ಗುಂಟೆಯಲ್ಲಿಲ್ಲ, ಎಕರೆಯಲ್ಲಿದೆ!!) ರೂಪಗಳಲ್ಲಿ ಇವೆ.


**


ಅರ್ಥ ಆಗದೇ ಇರುವುದು: 


ಆಧಾರ್ ನಂಬರ್ರೂ ಕಂದಾಯ ಇಲಾಖೆಯ ಫ್ರೂಟ್ ತಂತ್ರಾಂಶದಲ್ಲಿದೆ. 


ಸರ್ವೇ ನಂಬರ್ರು-ವಿಸ್ತೀರ್ಣ-ಹಿಸ್ಸಾ ಇತ್ಯಾದಿ ಎಲ್ಲ ವಿವರವೂ ಅದೇ ಫ್ರೂಟ್ ತಂತ್ರಾಂಶದಲ್ಲಿದೆ.


ಒಂದೇ ತಂತ್ರಾಂಶದಲ್ಲಿ ಆಧಾರ್, ಪಹಣಿ ಒಟ್ಟಿಗೇ ಲಿವಿಂಗ್ ಟುಗೇದರ್ ಇದ್ದರೂ... ಮತ್ತೆ ಈ ಲಿಂಕಿ‌‌ಗ್ ಕಲ್ಯಾಣ ಕಾರ್ಯಕ್ರಮ ಯಾಕೆ? ಅದರ ಜವಾಬ್ದಾರಿ ರೈತರ ತಲೆಮೇಲೇ ಯಾಕೆ? 


"ಅಧಿಕ ಮಾಸದಲ್ಲಿ ಬರಗಾಲ ಬಂದ ಹಾಗೆ" ಎಂಬಂತೆ, ಈ ಬರಗಾಲದಲ್ಲೇ ಆನ್‌ಲೈನ್ ಲಿಂಕೇಜ್‌ಗಳ ಅಧಿಕ ಕೆಲಸಗಳೇಕೆ?


ಆಯ್ತು, ಉರಿ ಬಿಸಿಲಲ್ಲಿ ತೋಟ ಗದ್ದೆಗೆ ಇಳಿಯೋಕಾಗ್ತಿಲ್ಲ, ದೊಡ್ಡ ದಾಸಿವಾಳದ ಗಿಡದ ಕೆಳಗೆ ಕೂತು, ಈ ಲಿಂಕೇಜ್ ವೆಡ್ಡಿಂಗ್ ವೆಲ್ಡಿಂಗ್ ಕೆಲಸನಾದರೂ ಮಾಡೋಣ ಅಂದ್ರೆ... ನೆಟ್ವರ್ಕ್ ಇಲ್ಲ. ನೆಟ್ವರ್ಕ್ ಇದ್ರೆ.... ಆಧಾರ್ ಪಹಣಿ ಸೀಡಿಂಗ್ ಜಾತಕ ಕೇಂದ್ರದ ವೆಬ್ಸೈಟ್‌ನಲ್ಲಿ ಅರ್ಜಿದಾರ ಮತ್ತು ಆರ್ಟಿಸಿ ನಡುವೆ ಹೆಸರು ಹೊಂದಾಣಿಕೆ ಆಗುವುದಿಲ್ಲ ಅಂತ ರಿಜೆಕ್ಟ್ ಆಗುತ್ತೆ!!!


ಸರಿ, ಏನಾದರು ಆಗಲಿ, ಎರಡು ಬಸ್ ಬದಲಿಸಿ, 32 ಕಿಮೀ ಸುತ್ತಿ, ಗ್ರಾಮ ಲೆಕ್ಕಾಧಿಕಾರಿಗಳ ಛತ್ರಕ್ಕೆ ಹೋಗಿ ಆಧಾರ್ ಪಹಣಿ ಸೀಡಿಂಗ್ ಮಾಡಿಸೋಣ ಅಂತ VA ಗೆ ಫೋನ್ ಮಾಡಿದರೆ "ಆ ಆ್ಯಪ್ ವರ್ಕ್ ಆಗ್ತಾ ಇಲ್ಲ, ಎರಡು ದಿನದಲ್ಲಿ ಹೊಸಾ ಅಪ್‌ಡೇಟೆಡ್ ಆ್ಯಪ್ ಬಿಡ್ತಾರಂತೆ, ಎರಡು ದಿನ ಆದ ಮೇಲೆ, ಫೋನ್ ಮಾಡಿಕೊಂಡು ಬನ್ನಿ" ಅಂತ ಮುಹೂರ್ತ ಮುಂದಕ್ಕೆ ಹಾಕಿ ಮಾಹಿತಿ ಕೊಟ್ಟಿದ್ದಾರೆ.


ಆಧಾರ್-ಪಹಣಿ ಪಾಣಿಗ್ರಹಣದ ಮುಹುರ್ತ ಇನ್ನೂ ಕೂಡಿ ಬಂದಿಲ್ಲ. ತೋರಣವು ಒಣಗಿ ಹೋಯ್ತು, ಅಕ್ಷತೆಗೆ ಕಾಲ ಬಂದಿಲ್ಲ!!


ದಾಸಿವಾಳ ಗಿಡದ ಕೆಳಗೆ ಕುಳಿತವನ ಕಿವಿ ಮೇಲೆ ಒಂದು ಹೂ ಕಳಚಿ ಬಿತ್ತು!!!


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top