ಭಾರತವೇ ಏಕೆ ಇಡೀ ಜಗತ್ತೇ ಶತಮಾನಗಳಿಂದ ಎದುರು ನೋಡುತ್ತಿದ್ದ ಅಪೂರ್ವ ಕನಸೊಂದು ಜನವರಿ ಇಪ್ಪತ್ತೆರಡರ ಶುಭದಿನದಂದು ಸಾಕಾರಗೊಂಡಿದೆ. ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮವಿಗ್ರಹ ಪ್ರತಿಷ್ಠಾಪನೆಯಾಗಿದೆ. ಇವೆಲ್ಲವುಗಳಿಗೆ ಆಧಾರ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮ ಹಾಗೂ ಅವನ ಪರಿಪೂರ್ಣವಾದ ಸುಂದರ ವ್ಯಕ್ತಿತ್ವ. ರಾಮ ಯಾವುದೋ ನಿರ್ದಿಷ್ಟ ಜಾತಿ, ಧರ್ಮ, ಸಮುದಾಯಗಳಿಗೆ ಮಾತ್ರ ಸೀಮಿತನಾದವನಲ್ಲ. ಅವನು ಯುಗ ಯುಗಗಳನ್ನು ಪ್ರಭಾವಿಸಬಲ್ಲ ತನ್ನ ಸುಂದರ ವ್ಯಕ್ತಿತ್ವದಿಂದಾಗಿ ಇಡೀ ಮನುಕುಲಕೆ ಆದರ್ಶನಾದವನು, ಮೇಲ್ಪಂಕ್ತಿಯಾದವನು. ಹಾಗಾಗಿಯೇ ಅವನು ವಿಶ್ವವಂದ್ಯ.
ರಾಮಾಯಣದಲ್ಲಿ ಚಿತ್ರಿತವಾದಂತೆ ರಾಮ ತನ್ನ ವ್ಯಕ್ತಿತ್ವದಲ್ಲಿ ಪ್ರಾಮಾಣಿಕತೆ, ಸಮಗ್ರತೆ, ಸಹಾನುಭೂತಿ, ಧೈರ್ಯ ಪರಾಕ್ರಮ, ಕ್ಷಮೆ, ಹಿರಿಯರಲ್ಲಿ ವಿಧೇಯತೆ, ಸ್ತ್ರೀಯರ ಕುರಿತು ಗೌರವ ಇತ್ಯಾದಿ ಎಲ್ಲಾ ಸದ್ಗುಣಗಳನ್ನು ಅವನು ಹೊಂದಿದ್ದಾನೆ. ರಾಮಾಯಣವು ದುಷ್ಟರ ವಿರುದ್ಧ ಸಾತ್ವಿಕತೆಯ ವಿಜಯ, ಧೈರ್ಯದಿಂದ ರಾಮ ಎದುರಿಸಿದ ಕ್ಲಿಷ್ಟ ಸವಾಲುಗಳು, ಅಸಹನೀಯ ಕಷ್ಟಗಳ ನಡುವೆಯೂ ಧರ್ಮ ಮಾರ್ಗ ಬಿಡದ ಅವನ ಧೃಡ ಮನಸು, ಹಾಗೂ ಸದಾಚಾರಗಳ ಕುರಿತ ಅಮರಗಾಥೆಯಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ರಾಮ ಸದ್ಗುಣಗಳ ಸಾಕಾರಮೂರ್ತಿ. ಈ ಜಗತ್ತಿನಲ್ಲಿ ಸದ್ಗುಣ ಮತ್ತು ಬುದ್ಧಿವಂತಿಕೆಯಲ್ಲಿ ಯಾರು ಶ್ರೇಷ್ಠರೆಂದು ಕವಿ ವಾಲ್ಮೀಕಿ ನಾರದ ಮಹರ್ಷಿಗಳನ್ನು ಕೇಳುತ್ತಾರೆ.
ಇದರಲ್ಲಿ ಹದಿನಾರು ಗುಣಗಳಾದ-
1. ಉತ್ತಮ ಗುಣಲಕ್ಷಣಗಳು, 2. ಶೌರ್ಯ, 3. ನಿಗದಿತ ಆಚರಣೆಗಳ ಪಾಲನೆ, 4. ಸದಾಚಾರ, 5.ಉಪಕಾರ ಮತ್ತು ಕೃತಜ್ಞತೆ, 6. ಸುಳ್ಳು ಹೇಳದಿರುವುದು, 7. ಸದಾ ಸತ್ಯವನ್ನೇ ನುಡಿಯುವುದು, 8. ಮಾಡಿದ ಸಂಕಲ್ಪಗಳನ್ನು ನೆರವೇರಿಸುವಲ್ಲಿ ದೃಢತೆ, 9. ಸ್ವಯಂ ಸಾಕ್ಷಾತ್ಕಾರ, 10. ಕ್ರೋಧವನ್ನು ಜಯಿಸುವವನು, 11. ಉತ್ಸಾಹ 12. ಅಸೂಯೆಯನ್ನು ಜಯಿಸಿದವನು, 13. ಅಪಹಾಸ್ಯ ಮಾಡದವನು, 14. ಚತುರತೆ ಮತ್ತು ಬುದ್ಧಿವಂತಿಕೆ, 15. ಶುಭಕಾಲ ಅದೃಷ್ಟವನ್ನು ಹೊಂದಿರುವುದು, 16. ನೈತಿಕತೆ. - ಈ ಗುಣಗಳನ್ನು ಹೊಂದಿದ ಮಹಾಪುರುಷ ಯಾರಾದರೂ ಇದ್ದರೆ ತಿಳಿಸಿ ಎನ್ನುತ್ತಾರೆ ವಾಲ್ಮೀಕಿ ಮಹರ್ಷಿಗಳು.
ಈ ಪ್ರಶ್ನೆಗೆ ಉತ್ತರವಾಗಿ ನಾರದ ಮುನಿ ಯಾವುದೇ ಸಂದೇಹವಿಲ್ಲದೆ 'ಶ್ರೀರಾಮ'ಎಂದು ಉತ್ತರಿಸುತ್ತಾನೆ. ಈ ಸಮಯದಲ್ಲಿ ನಾರದ ಮುನಿಗಳು "ಸಂಕ್ಷಿಪ್ತ ರಾಮಾಯಾಣ" ಎಂಬ ಶೀರ್ಷಿಕೆಯ 100 ಶ್ಲೋಕಗಳನ್ನು ನೀಡಿದರು. ವಾಲ್ಮೀಕಿ ಮಹರ್ಷಿ ನಂತರ ಅದನ್ನು 24 ಸಾವಿರ ಶ್ಲೋಕಗಳಿಗೆ ಅಭಿವೃದ್ಧಿಪಡಿಸಿ ವಿಸ್ತರಿಸಿದರು. ಹೀಗಾಗಿಯೇ ರಾಮ ಗುಣಸಾಗರ.
ರಾಮ ಮತ್ತು ಧರ್ಮ:
ಸಮಸ್ತ ಜೀವಿಗಳ ಕಲ್ಯಾಣದ ಹಾದಿ ತೋರುವುದೇ ಧರ್ಮ.ಭಗವಾನ್ ರಾಮ ಇಂತಹ ಹಾದಿಯಲ್ಲೇ ಸದಾ ಸಾಗಿದವನು. ಈ ದಾರಿಯಲ್ಲಿ ತನಗೆಷ್ಟೇ ಕಷ್ಟಗಳೆದುರಾದರೂ ಅದನ್ನು ಲೆಕ್ಕಿಸದೆ ಧರ್ಮ ಮಾರ್ಗದಲ್ಲಿ ಸಾಗಿದನು. ತನ್ನ ಪ್ರಿಯ ಪತ್ನಿ ಸೀತೆ ಪರಮ ಪಾವನೆಯೆಂದು ತಿಳಿದಿದ್ದರೂ ಅವಳನ್ನು ಅಡವಿಗೆ ಕಳುಹಿಸುವಲ್ಲಿ ರಾಮನ ರಾಜಧರ್ಮ ಪಾಲನೆಯ ಬದ್ಧತೆಯನ್ನು ಕಾಣಬಹುದು.
ಸಹಾನುಭೂತಿ: ರಾಮ ಎಲ್ಲ ಜೀವಿಗಳ ಬಗ್ಗೆ ಸಹಾನುಭೂತಿಯನ್ನು ಹೊಂದಿದ್ದನು. ರಾಮಾಯಣದ ಅನೇಕ ಘಟನೆಗಳಿಂದ ಇದು ಸಾಬೀತಾಗುತ್ತದೆ. ಕೊನೆಗೆ ತನ್ನ ಪ್ರಿಯ ಪತ್ನಿ ಸೀತೆಯನ್ನು ಅಪಹರಿಸಿದ ರಾವಣನನ್ನು ಕೊಂದ ನಂತರ ಅವನ ಅಂತ್ಯ ಕ್ರಿಯೆ ಗೌರವಯುತವಾಗಿ ಆಗುವಂತೆ ಮಾಡುತ್ತಾನೆ. ಹಾಗೂ ಅವನಿಗೆ ಮೋಕ್ಷವನ್ನು ಕರುಣಿಸುತ್ತಾನೆ.
ಶೌರ್ಯ: ಭಗವಾನ್ ರಾಮನು ತನ್ನ ಗುರು ವಿಶ್ವಾಮಿತ್ರನ ಸೂಚನೆಯ ಮೇರೆಗೆ ತಾಟಕಿ, ಮರೀಚ ಮತ್ತು ಸುಬಾಹು ಮೊದಲಾದ ರಾಕ್ಷಸರನ್ನು ಕೊಲ್ಲುವ ಮೂಲಕ, ಹಾಗೂ ರಾಜ್ಯವಿಲ್ಲದಿದ್ದರೂ ತನ್ನ ಪತ್ನಿಗಾಗಿ ಕಪಿಸೈನ್ಯದೊಂದಿಗೆ ಸಾಗರ ದಾಟಿ ರಾವಣನನ್ನು ಕೊಲ್ಲುವಲ್ಲಿ ರಾಮನ ಅಪ್ರತಿಮ ಶೌರ್ಯ ನಮಗೆ ಕಾಣಿಸುತ್ತದೆ.
ನಮ್ರತೆ:
ರಾಮ ರಾಜಕುಮಾರನಾಗಿದ್ದರೂ ನಿಗರ್ವಿ ಹಾಗೂ ಪೂರ್ವಭಾಷಿ.ರಾವಣನನ್ನು ತಾನು ಕೊಂದಾಗ ಅದರ ಯಶಸ್ಸನ್ನು ಯುದ್ಧದಲ್ಲಿ ಪಾಲ್ಗೊಂಡ ಎಲ್ಲರಿಗೂ ನೀಡುತ್ತಾನೆ. ರಾಮನು ಸದಾ ತನ್ನನ್ನು ವೈಭವೀಕರಿಸಿಕೊಳ್ಳದೆ ಯಾವಾಗಲೂ ತನ್ನ ಸುತ್ತಲಿನವರಿಗೆ ಮಾನ್ಯತೆ ನೀಡುತ್ತಾನೆ.
ಕ್ಷಮೆ:ರಾಮನು ಕ್ಷಮೆಗೆ ಹೆಸರುವಾಸಿಯಾಗಿದ್ದಾನೆ. ಅವನು ಎಂದಿಗೂ ಯಾರ ಮೇಲೂ ದ್ವೇಷ ಹೊಂದಿರಲಿಲ್ಲ. ಉದಾಹರಣೆಗೆ ತನ್ನ ಮಲತಾಯಿ ಕೈಕೇಯಿ ತನ್ನನ್ನು ಕಾಡಿಗೆ ಅಟ್ಟಿ ತನ್ನ ಮಗ ಭರತನಿಗೆ ಪಟ್ಟ ಕಟ್ಟಬೇಕೆಂದು ಒತ್ತಾಯಿಸಿದಾಗಲೂ ಆಕೆಯ ಮೇಲೆ ಕೋಪಗೊಳ್ಳದೆ ಅರಣ್ಯವಾಸದ ಶಿಕ್ಷೆಯನ್ನು ಸ್ವೀಕರಿಸಿದನು. ರಾಮನು ಸೇಡು ಮತ್ತು ಅಸಮಧಾನದ ಬದಲಿಗೆ ಶಾಂತಿ ಮತ್ತು ಸಾಮರಸ್ಯವನ್ನು ಯಾವಾಗಲೂ ಗೌರವಿಸಿದನು.
ತಾಳ್ಮೆ:
ರಾಮ ತಾಳ್ಮೆಯ ಸಾಕಾರ ಮೂರ್ತಿ.ಇಡೀ ರಾಮಾಯಣದಲ್ಲಿ ಅವನೆಂದೂ ಧೈರ್ಯಗೆಡದೆ ತಾಳ್ಮೆಗೆಡದೆ ಸಮಾಧಾನದಿಂದ ಸಮಸ್ಯೆಗಳನ್ನು ಪರಿಹರಿಸುವುದನ್ನು ನಾವು ಕಾಣಬಹುದು.ರಾವಣ ದೊಡ್ಡ ಸೈನ್ಯವನ್ನು ಹೊಂದಿದ್ದರೂ ರಾಮ ವಿಚಲಿತನಾಗದೆ ಕಠಿಣ ಪರಿಸ್ಥಿತಿಗಳನ್ನು ಶಾಂತಚಿತ್ತನಾಗಿ ಎದುರಿಸಿ ರಾವಣನನ್ನು ಯುದ್ಧದಲ್ಲಿ ಸೋಲಿಸಿ ಪತ್ನಿ ಸೀತೆಯನ್ನುಮರಳಿ ಪಡೆಯುತ್ತಾನೆ.
ನಾಯಕತ್ವ:
ಭಗವಾನ್ ರಾಮ ಕರುಣಾಮಯಿ ಮತ್ತು ಸದ್ಗುಣಗಳಿಂದ ಕೂಡಿದ ನಾಯಕನಾಗಿ ಕಂಡುಬರುತ್ತಾನೆ. ಅವನು ಪ್ರಾಣಿಗಳೂ ಸೇರಿದಂತೆ ಎಲ್ಲಾ ಜೀವಿಗಳಿಗೆ ಸಹಾನುಭೂತಿ ತೋರುತ್ತಿದ್ದನು. ತನ್ನ ಅಧೀನ ಅಧಿಕಾರಿಗಳನ್ನು ಗೌರವಿಸುತ್ತಿದ್ದನು. ತಂದೆ ತಾಯಿ ಗುರುಗಳ ಮಾತನ್ನು ಶಿರಸಾವಹಿಸಿ ಪಾಲಿಸುತ್ತಿದ್ದನು. ತನ್ನ ತಂದೆಯ ಆಜ್ಞೆಯಂತೆ ಸಿಂಹಾಸನ ತ್ಯಜಿಸಿ 14 ವರ್ಷಗಳ ಅರಣ್ಯ ವಾಸಕ್ಕೆ ತೆರಳಿದನು. ಆ ಮೂಲಕ ಮಗನಾಗಿ, ರಾಜಕುಮಾರನಾಗಿ ತನ್ನ ಕರ್ತವ್ಯವನ್ನು ಎತ್ತಿಹಿಡಿದನು. ಪ್ರಿಯ ಪತ್ನಿ ಸೀತೆಯ ಪಾವಿತ್ರ್ಯತೆಯ ಬಗ್ಗೆ ತಿಳಿದಿದ್ದರೂ ಅವಳನ್ನು ಅಗ್ನಿಪರೀಕ್ಷೆಗೆ ಒಳಪಡಿಸದೆ ಅವಳನ್ನು ಸ್ವೀಕರಿಸುವುದಿಲ್ಲ. ಆ ಮೂಲಕ ಪ್ರಜೆಗಳು ಸದಾ ಸದಾಚಾರಕ್ಕೆ ಬದ್ಧರಾಗಿರುವಂತೆ ಪ್ರೇರೇಪಿಸಿ ರಾಮನು ಜನ ನಾಯಕನಾಗಿ ಮಾದರಿಯಾಗುತ್ತಾನೆ.
ಹೀಗಾಗಿಯೇ ರಾಮನು ಸದ್ಗುಣಗಳ ಮೂಲಕ ದೈವತ್ವಕ್ಕೇರಿದ ಪುಣ್ಯಪುರುಷನಾಗಿ ನಮಗೆಲ್ಲರಿಗೂ ಆದರ್ಶ ವ್ಯಕ್ತಿ ಎನಿಸಿದ್ದಾನೆ.
ರಾಮನ ಪ್ರಸ್ತುತತೆ:
ರಾಮನ ತನ್ನ ಬಗ್ಗೆ ಯೋಚಿಸದೆ, ತನ್ನ ಜನರ ಬಗ್ಗೆ ಯೋಚಿಸುತ್ತಿದ್ದ ನಿಸ್ವಾರ್ಥ ರಾಜ. ಭ್ರಷ್ಟಾಚಾರ, ಸ್ವಾರ್ಥ, ಲಂಚಗುಳಿತನಗಳೇ ತಾಂಡವವಾಡುತ್ತಿರುವ ಇಂದಿನ ರಾಜಕೀಯ, ಸಾಮಾಜಿಕ ಸನ್ನಿವೇಶಗಳಿಗೆ ರಾಮ ಅನುಸರಿಸಿದ ಶ್ರೇಷ್ಠ ಮೌಲ್ಯಗಳೇ ಪರಿಹಾರ. ಹಾಗಾಗಿಯೇ ರಾಮ ಸದಾ ಪ್ರಸ್ತುತನೆನಿಸಿಕೊಳ್ಳುತ್ತಾನೆ. ಆ ಮೂಲಕ ಯುಗಯುಗಗಳನ್ನೂ ಅವನು ಪ್ರಭಾವಿಸುತ್ತಾನೆ ಎಂದರೆ ಅತಿಶಯೋಕ್ತಿಯಲ್ಲ.
ರಾಮನು ಸೀತೆಯನ್ನು ಒಳಗೊಂಡಂತೆ ಸ್ತ್ರೀಯರನ್ನು ಅಪಾರವಾಗಿ ಗೌರವಿಸಿದವನು. ಇಂದು ಸ್ತ್ರೀಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ಕಂಡಾಗ ರಾಮ ಅನುಸರಿಸಿದ ಮೌಲ್ಯಗಳು ಮರೆಯಾಗಿ ರುವುದು ನಿಚ್ಚಳವಾಗಿ ಕಂಡುಬರುತ್ತದೆ. ರಾಮ ನಿಷ್ಪಕ್ಷಪಾತವಾಗಿ ರಾಜ್ಯಭಾರ ನಡೆಸಿದವನು. ಆದರೆ ಇಂದು ರಾಜಕಾರಣ ನಡೆಯುತ್ತಿರುವುದೇ ಜಾತಿ ಧರ್ಮಗಳ ಲೆಕ್ಕಾಚಾರದ ಮೇಲೆ!. ಆದ್ದರಿಂದ ರಾಮನನ್ನು ಹಿಂದೂ ಧರ್ಮದ ಅಸ್ತಿತ್ವದ ಪ್ರತೀಕವಾಗಿ ಕಾಣುವುದರ ಜೊತೆಗೆ ಹಿಂದೂ ಧರ್ಮದ ಉದಾತ್ತ ಮೌಲ್ಯಗಳ ಪ್ರತಿನಿಧಿಯಾಗಿ ಕಂಡು ಅವನನ್ನು ಸಾಧ್ಯವಾದ ಮಟ್ಟಿಗಾದರೂ ಅನುಸರಿಸುವ ಪ್ರಾಮಾಣಿಕ ಪ್ರಯತ್ನ ನಾವೆಲ್ಲ ಮಾಡಬೇಕಿದೆ. ಆಗ ಮಾತ್ರ ನಾವೆಲ್ಲ ನಮ್ಮ ಆರಾಧ್ಯ ಶ್ರೀರಾಮನನ್ನು, ಅವನ ಉದಾತ್ತ ವ್ಯಕ್ತಿತ್ವವನ್ನು ಗೌರವಿಸಿದಂತಾಗುತ್ತದೆ.
- ಎಸ್.ಎಲ್.ವರಲಕ್ಷ್ಮೀಮಂಜುನಾಥ್. ನಂಜನಗೂಡು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ