ಶಿವಮೊಗ್ಗ: ಆರ್ಯ ಈಡಿಗ ಸಮಾಜಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಮತ್ತು ಅವರ ಮಗ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಂದ ಯಾವುದೇ ಕೊಡುಗೆ ಇಲ್ಲ ಎಂದು ಎಂದು ಸೊರಬ ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಕೆ.ಅಜ್ಜಪ್ಪ ಆರೋಪಿಸಿದರು.
ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ನಾನು ಸಮಾಜದ ಅಧ್ಯಕ್ಷನಾಗಿ ಆಯ್ಕೆಯಾಗಿ ಬಳಿಕ ಸಂಘಕ್ಕೆ 5 ಎಕರೆ ಜಾಗವನ್ನು ಮಂಜೂರು ಮಾಡಿಸಿದೆ. ನಂತರ 20 ಲಕ್ಷ ರೂ. ಹೊಂದಿಸಿ ಹಕ್ಕುಪತ್ರ ಪಡೆಯಲಾಯಿತು. ಆ ಬಳಿಕ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಮಾಜದ ಅಭಿವೃದ್ಧಿ ಕಾರ್ಯಕ್ಕಾಗಿ 2 ಕೋಟಿ ರೂ. ಮಂಜೂರು ಮಾಡಿದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಿಸಬೇಕು ಎಂಬ ಉದ್ದೇಶದಿಂದ ಕುಮಾರ್ ಬಂಗಾರಪ್ಪ ಶಾಸಕರಾಗಿದ್ದಾಗ 12 ಕೋಟಿ ಯೋಜನೆ ಮಾಡಿ, ನೀಲಿನಕ್ಷೆ ತಯಾರಿಸಲಾಗಿತ್ತು. ಇದಕ್ಕಾಗಿ ರಾಜ್ಯ ಸರ್ಕಾರದಿಂದ ಮಂಜೂರಾಗಿದ್ದ ೨ ಕೋಟಿ ಹಣದಲ್ಲಿ 1.5ಕೋಟಿ ರು.ಅನ್ನು ಸಮಾಜಕ್ಕೆ ಬಿಡುಗಡೆ ಮಾಡಿಸಿದ್ದರು. ಆದರೆ, ಈಗ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರದಿಂದ ಬರಬೇಕಿದ್ದ ಬಾಕಿ 50 ಲಕ್ಷ ರೂ. ಅನುದಾನವನ್ನು ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಕೊಡುಗೆ ಕೊಡದ ಸಚಿವ ಮಧು ಬಂಗಾರಪ್ಪ ಅವರು ಈಗ ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ಸಮಾಜದ ಸಾಮಾನ್ಯ ಸಭೆಯಲ್ಲಿ ಈಗಿರುವ ಸಮಿತಿಯೇ ಮುಂದುವರೆಸಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಆದರೆ, ಫೆ.20ರಂದು ನನ್ನ ಗೈರು ಹಾಜರಾತಿಯಲ್ಲಿ ಸಭೆ ಮಾಡಿ ಬೇರೆಯೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಮಧು ಬಂಗಾರಪ್ಪ ಅವರು ನಾವು ಅವರ ಮಾತು ಕೇಳುತ್ತಿಲ್ಲ ಎಂಬ ಉದ್ದೇಶಕ್ಕೆ ಅವರ ಚೇಲಾಗಳನ್ನು ಇಟ್ಟುಕೊಂಡು ಕಾನೂನು ಬಾಹಿರವಾಗಿ ಸಮಿತಿ ರಚಿಸಿದ್ದಾರೆ ಎಂದರು.
ನಾನೇ ಅಧ್ಯಕ್ಷನಾಗಿದ್ದರೆ ಇನ್ನೊಂದು ವರ್ಷದಲ್ಲಿ 12 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿ ಪೂರ್ಣಗೊಳಿಸುತ್ತಿದ್ದೆ. ಈ ಕೆಲಸವನ್ನು ಈ ಹೊಸ ಸಮಿತಿಯವರು ಮಾಡಬೇಕು. ಇದು ಸಾಧ್ಯವಾಗದೇ ಇದ್ದರೆ ಸಮಾಜದವರ ಬಳಿ ಸಚಿವ ಮಧು ಬಂಗಾರಪ್ಪ ಅವರು ಕ್ಷಮೆಯಾಚಿಸಬೇಕು ಎಂದರು.
ದಿ.ಎಸ್. ಬಂಗಾರಪ್ಪ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ಹಲವು ವರ್ಷ ಅಧಿಕಾರದಲ್ಲಿದ್ದರೂ ಅವರು ಸೊರಬದಲ್ಲಿ ಆರ್ಯ ಈಡಿಗ ಸಮಾಜಕ್ಕೆ ನೀಡಿದ ಕೊಡುಗೆ ಶೂನ್ಯ. ಸಮಾಜ ಒಟ್ಟಾದರೆ ಬೇರವರಿಗೆ ಲಾಭ ಆಗುತ್ತದೆ ಎಂಬ ಕಾರಣಕ್ಕೆ ಅವರು ಸಮಾಜವನ್ನೇ ಒಟ್ಟಾಗಲು ಬಿಡಲಿಲ್ಲ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಜಾಗ ಕೊಡಿಸಿದ್ದಾರೆ. ಕುಮಾರ್ ಬಂಗಾರಪ್ಪ ಅವರು ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತಂದಿದ್ದಾರೆ. ಆದರೆ, ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಈವರೆಗೆ ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.
ಈಗ ನಾನು ಹಣ ದುರುಪಯೋಗ ಮಾಡಿಕೊಂಡಿದ್ದೇನೆ ಎಂದು ಆರೋಪ ಮಾಡಲಾಗುತ್ತಿದೆ. ಹಣ ದುರುಪಯೋಗ ಮಾಡಿದ್ದರೆ ಅದನ್ನು ತನಿಖೆ ಮಾಡಲಿ. ಯಾವುದೇ ರೀತಿಯ ತನಿಖೆಗೆ ನಾನು ಸಿದ್ಧ ಎಂದು ಸವಾಲು ಎಸೆದರು.
ಪತ್ರಿಕಾಗೋಷ್ಠಿಯಲ್ಲಿ ಹುಚ್ಚಪ್ಪ, ಲಿಂಗಪ್ಪ, ನೀಲಕಂಠಪ್ಪ, ನಾಗರಾಜ್ ಮತ್ತಿತರರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ