ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಅನೇಕ ರಾಮಾಯಣಗಳು ಹಾಗೂ ರಾಮಾಯಣದಿಂದ ಆಯ್ದ ಅನೇಕ ಪ್ರಸಂಗಗಳು ವಿವಿಧ ರೂಪಗಳಲ್ಲಿ ಕಿಂಚಿತ್ ಬದಲಾವಣೆಗಳೊಂದಿಗೆ ಸ್ವಾರಸ್ಯಕರವಾಗಿ ಮೂಡಿಬಂದಿರುವುದು ನಮಗೆಲ್ಲಾ ಗೊತ್ತೇ ಇದೆ. ‘ಕುಂದಮಾಲೆ’ಯೂ ಸಹ ಅಂತಹುದೇ ಒಂದು ಪ್ರಯತ್ನ. ಇದು ರಾಮಾಯಣದಲ್ಲಿ ಬರುವ ಸೀತಾಪರಿತ್ಯಾಗದ ಪ್ರಸಂಗವನ್ನು ಆಧರಿಸಿ 'ದಿಙ್ನಾಗ" ಎಂಬ ಕವಿ ಸುಮಾರು ಐದನೇ ಶತಮಾನದಲ್ಲಿ ರಚಿಸಿದ ಸಂಸ್ಕೃತ ನಾಟಕ.
‘ಕುಂದ’ ಎಂದರೆ ಮೊಲ್ಲೆ ಹೂವು (ಮಲ್ಲಿಗೆ ಹೂವು), ಅವುಗಳನ್ನು ಬಳಸಿ ಹೆಣೆದ ಮಾಲೆ ‘ಕುಂದಮಾಲೆ’. ಈ ಮಾಲೆಯ ಮೂಲಕವೇ ಸೀತೆ ಮತ್ತು ಶ್ರೀ ರಾಮನ ಮರುಮಿಲನವನ್ನು ಕಟ್ಟಿಕೊಡುವ ಕವಿಯ ಕಲ್ಪನೆ ತುಂಬಾ ಸುಂದರ ಮತ್ತು ಆಸಕ್ತಿಕರವಾಗಿದೆ.
ಮೂಲ ರಾಮಾಯಣದಿಂದ ಸ್ವಲ್ಪ ವಿಶಿಷ್ಟವಾದ ಬದಲಾವಣೆಗಳನ್ನು ಮಾಡಿರುವ ಕವಿ ಈ ನಾಟಕ ಸುಖಾಂತ್ಯವಾಗುವಂತೆ ಮಾಡಿದ್ದಾನೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ದಿಟವಾಗಿ ಅರಿಯಲು ಸಾಧ್ಯವಾಗುವಂತಹ ಸಂದರ್ಭಗಳನ್ನು ಈ ನಾಟಕದಲ್ಲಿ ಸೃಷ್ಟಿಸಿ ಅದನ್ನು ತುಂಬಾ ಸಮರ್ಪಕವಾಗಿ, ರಸವತ್ತಾಗಿ ಪಾತ್ರಗಳ ಮಾತು ಮತ್ತು ನಡೆಗಳಲ್ಲಿ ತೋರಿಸುವ ಮೂಲಕ ನಿರ್ಮಲ ಪ್ರೀತಿಯನ್ನು ಆವರಿಸಿಕೊಂಡಿದ್ದ ಅಪನಂಬಿಕೆ, ಸಂಶಯ, ಕೋಪ ಇತ್ಯಾದಿಗಳನ್ನು ಚದುರಿಸಿ ಮತ್ತೆ ಪ್ರೀತಿಯ ಹೊಸ ಬೆಳಕನ್ನು ಕಾಣಿಸುವುದರಲ್ಲಿ ಕವಿ ಯಶಸ್ವಿಯಾಗಿದ್ದಾನೆ.
ಆರು ಅಂಕಗಳಿರುವ ಈ ನಾಟಕ ಸೀತಾ ಪರಿತ್ಯಾಗದಿಂದ ಆರಂಭಗೊಂಡು ಮತ್ತೆ ರಾಮ ಸೀತೆಯರ ಮರುಮಿಲನದೊಂದಿಗೆ ಮುಕ್ತಾಯ ಹೊಂದುತ್ತದೆ. ಇದರ ವಿವರಗಳನ್ನು ಈಗ ನೋಡೋಣ.
ಗರ್ಭಿಣಿಯಾಗಿದ್ದ ಸೀತೆಯನ್ನು ಲಕ್ಷ್ಮಣನು ರಾಮನ ಆಜ್ಞೆಯಂತೆ ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ. ಅಲ್ಲಿಗೆ ಬಂದ ವಾಲ್ಮೀಕಿ ಮಹರ್ಷಿಗಳು ಸೀತೆಯನ್ನು ತಮ್ಮ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಗೆ ಹೋಗುವ ಮೊದಲು ಸೀತೆ ತನಗೆ ಸುಖವಾದ ರೀತಿಯಲ್ಲಿ ಪ್ರಸವವಾದರೆ ಪ್ರತಿ ದಿನವೂ ಕುಂದಮಾಲೆಯನ್ನು ಕಟ್ಟಿ ನಿನಗೆ ಅರ್ಪಿಸುವೆನೆಂದು ಅಲ್ಲಿಯೇ ಹರಿಯುತ್ತಿರುವ ಗಂಗಾನದಿಗೆ ಹರಸಿಕೊಂಡಿರುತ್ತಾಳೆ.
ಮುಂದೆ ಲವಕುಶರು ಹುಟ್ಟಿ ಬೆಳೆದು ರಾಮಾಯಣವನ್ನು ಹಾಡಲು ಕಲಿಯುತ್ತಾರೆ. ಆದರೆ ಅವರಿಗೆ ತಾವು ಹಾಡುವ ರಾಮಾಯಣದ ಆ ರಾಮ ಮತ್ತು ಸೀತೆಯೇ ತಮ್ಮ ತಂದೆತಾಯಿ ಎಂದು ಗೊತ್ತಿರುವುದಿಲ್ಲ. ಏಕೆಂದರೆ, ಸೀತೆಯನ್ನು ಆಶ್ರಮದಲ್ಲಿ "ವಧೂ", "ದೇವೀ" ಎಂದೆಲ್ಲ ಬೇರೆ ಬೇರೆ ಹೆಸರಿನಿಂದ ಕರೆದರೆ, ಸೀತೆಯೂ ಸಹ ರಾಮನ ವಿಷಯ ಬಂದಾಗಲೆಲ್ಲ ಅವನನ್ನು "ನಿರನುಕ್ರೋಶ" (ನಿರ್ದಯಿ) ಎಂದೇ ಹೇಳುತ್ತಿರುತ್ತಾಳೆ. ಮಕ್ಕಳೂ ಸಹ ಹೆಚ್ಚು ವಿಚಾರಿಸಿರುವುದಿಲ್ಲ.
ಇತ್ತ ರಾಮನು ಅಶ್ವಮೇಧ ಯಜ್ಞವನ್ನು ಕೈಗೊಳ್ಳುತ್ತಾನೆ. ಅದಕ್ಕಾಗಿ ವಾಲ್ಮೀಕಿಯ ಆಶ್ರಮಕ್ಕೆ ಸನಿಹದ ಒಂದು ಅರಣ್ಯಭಾಗದಲ್ಲಿ ಸಿದ್ಧತೆ ನಡೆದಿರುತ್ತದೆ. ಈ ಸಮಯದಲ್ಲಿ ಆಶ್ರಮದ ಸುತ್ತ ಮುತ್ತ ಪರ ಜನರು ಓಡಾಡುತ್ತಿರುವುದರಿಂದ ಆಶ್ರಮದ ಸ್ತ್ರೀಯರಿಗೆ ಹೂ ಕುಯ್ಯಲು ಅಥವಾ ನೀರು ತರಲು ಹೋಗುವಾಗ ಈ ಪರ ಜನರಿಂದ ಮುಜುಗರವಾಗದಿರಲೆಂದು ವಾಲ್ಮೀಕಿ ಮಹರ್ಷಿಗಳು ಸೀತೆಯನ್ನೂ ಒಳಗೊಂಡಂತೆ ಆಶ್ರಮದ ಸ್ತ್ರೀಯರಿಗೆಲ್ಲ ತಮಗೆ ಬೇಕಾದಾಗ ಅದೃಶ್ಯವಾಗಿರುವಂತಹ ವರ ನೀಡಿರುತ್ತಾರೆ.
ಇಂತಿರಲು ಒಂದು ದಿನ ರಾಮಲಕ್ಷ್ಮಣರು ಯಜ್ಞ ಸ್ಥಳಕ್ಕೆ ಬರುತ್ತಿರುವಾಗ ದಾರಿಯಲ್ಲಿ ಹೊಳೆಯಲ್ಲಿ ತೇಲಿ ಬರುತ್ತಿರುವ ಕುಂದಮಾಲೆಯನ್ನು ನೋಡುವರು. ಅದು ರಾಮನ ಪಾದಪೂಜೆ ಮಾಡಲೋ ಎಂಬಂತೆ ರಾಮನ ಕಾಲಿಗೆ ಬಂದು ಸಿಲುಕುತ್ತದೆ. ಅದನ್ನು ತೆಗೆದುಕೊಂಡ ರಾಮನು ಅದರ ರಚನೆಯನ್ನು ನೋಡಿ ಅದು ಸೀತೆಯಿಂದಲೇ ಕಟ್ಟಲ್ಪಟ್ಟಿದ್ದು ಎಂದು ಗುರುತಿಸುತ್ತಾನೆ. ಅಲ್ಲಿಂದ ಹಾಗೆ ಮುಂದೆ ಹೋಗಿ ಅವಳ ಹೆಜ್ಜೆಯ ಗುರುತನ್ನೂ ಸಹ ಕಂಡುಹಿಡಿಯುತ್ತಾನೆ. ಸೀತೆಯ ನೆನಪು ತೀವ್ರವಾಗಿ ರಾಮನು ವಿಲಪಿಸತೊಡಗುತ್ತಾನೆ. ಅದೇ ಸಮಯದಲ್ಲಿ ಹೂ ಕುಯ್ಯಲು ಬಂದಿದ್ದ ಸೀತೆ ಅಲ್ಲಿಯೇ ಅದೃಶ್ಯವಾಗಿದ್ದುಕೊಂಡು ರಾಮನ ಮಾತುಗಳನಾಲಿಸುತ್ತ ಅವನ ಸಂತಾಪದ ದಿಟ ತಾಪವನ್ನು ಅರಿಯುತ್ತಾಳೆ. ಈ ಸಂದರ್ಭ ದಿಟವಾಗಿಯೂ ಕವಿಯ ಅದ್ಭುತ ಕಲ್ಪನೆ.
ಸೀತೆಯನ್ನು ನೆನಪಿನಲ್ಲಿ ರಾಮ ಅವಳ ಬಗೆಗಿನ ತನ್ನ ನಿಜವಾದ ಭಾವನೆಗಳನ್ನು, ವನವಾಸದ ನೆನಪುಗಳನ್ನು, ಅವಳನ್ನು ಪರಿತ್ಯಾಗ ಮಾಡಬೇಕಾಗಿ ಬಂದ ಸಂದರ್ಭ, ಅವಳ ಬಗೆಗಿನ ತನ್ನ ಪ್ರೀತಿಯ ಭಾವ ಎಲ್ಲವನ್ನೂ ಹೇಳಿಕೊಳ್ಳುತ್ತಾ ಹೋಗುವಾಗ ಸೀತೆ ಅಲ್ಲಿಯೇ ಇದ್ದರೂ ರಾಮನಿಗೆ ಕಾಣಿಸಿಕೊಳ್ಳದೆ ಅವನ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುತ್ತಾ ಪ್ರತ್ಯುತ್ತರವನ್ನು ಸ್ವಗತದಲ್ಲಿ ವ್ಯಕ್ತಪಡಿಸುತ್ತಾ ಹೋಗುತ್ತಾಳೆ. ಹಾಗೆಯೇ ಅವಳಲ್ಲಿ ಭಾವಪರಿವರ್ತನೆಯಾಗುತ್ತಾ ಹೋಗುತ್ತದೆ.
ನಮ್ಮೆದುರಿಗೆ ಇಲ್ಲದವರ ಬಗೆಗೆ ನಾವು ಹೇಗೆ ಮಾತನಾಡುತ್ತೇವೆ, ಏನನ್ನು ಮಾತನಾಡುತ್ತೇವೆ ಎಂಬುದೇ ಅವರ ಬಗೆಗಿನ ನಮ್ಮ ನಿಜ ಅಭಿಪ್ರಾಯವನ್ನು ಸೂಚಿಸುವುದಷ್ಟೆ? ತನ್ನ ಪರಿತ್ಯಾಗವು ಹಠಾತ್ತಾಗಿ ಲಕ್ಷ್ಮಣನ ಮೂಲಕ ಗೊತ್ತಾದಾಗ ಸೀತೆ ತುಂಬಾ ದುಃಖ ಮತ್ತು ತುಂಬಾ ಕಳವಳಪಟ್ಟಿರುತ್ತಾಳೆ. ಆದರೆ ರಾಮನ ನಿಜ ಭಾವವನ್ನು ಅರಿತ ನಂತರ ಅವಳ ದುಗುಡವೆಲ್ಲಾ ಪರಿಹಾರವಾಗುತ್ತದೆ. ಅವಳಿಗೆ ದುಃಖದಲ್ಲಿರುವ ರಾಮನ ಕಣ್ಣೀರು ಒರೆಸುವ ಆಸೆ. ಅವನ ಮುಂದೆ ಕಾಣಿಸಿಕೊಂಡು ಮಾತನಾಡಿಸಬೇಕೆಂಬ ಆಸೆ.. ಆದರೆ ಮತ್ತೆ ಎಲ್ಲಿ ಜನಾಪವಾದೀತೋ ಎಂಬ ಅಳುಕು. ಹೀಗಾಗಿ ದುಃಖದಿಂದ ಆಶ್ರಮಕ್ಕೆ ಹೊರಟು ಹೋಗುತ್ತಾಳೆ.
ರಾಮನ ದುಃಖವನ್ನು ಈ ಒಂದು ಮಾತಿನಲ್ಲಿ ಕವಿ ಎಷ್ಟು ಸುಂದರವಾಗಿ ಹಿಡಿದಿಟ್ಟಿದ್ದಾನೆ ನೋಡಿ.
“ಸಮತಟ್ಟಾದ ಸ್ಥಳದಲ್ಲಿ ಕೂಡ
ಎಡಹುವನೀ ರಾಘವ ರಾಮ…”
ನಂತರ ಮತ್ತೆ ರಾಮ ಮತ್ತು ಸೀತೆ ಮುಖಾಮುಖಿಯಾಗುವ ಸಂದರ್ಭ. ಈ ಬಾರಿ ರಾಮನು ಕಣ್ಣು ತೊಳೆದುಕೊಳ್ಳುವುದಕ್ಕೆಂದು ಆಶ್ರಮದ ಹತ್ತಿರವಿದ್ದ ಒಂದು ಕೊಳಕ್ಕೆ ಹೋಗುತ್ತಾನೆ. ನೀರು ತರಲು ಬಂದ ಸೀತೆಯೂ ಅಲ್ಲೇ ಇದ್ದಾಳೆ. ರಾಮ ಅವಳನ್ನು ನೇರವಾಗಿ ಕಾಣಲಾರ... ಆದರೆ ಆ ಕೊಳದಲ್ಲಿ ಅವನಿಗೆ ಸೀತೆಯ ಪ್ರತಿಬಿಂಬವು ಕಾಣಿಸುತ್ತದೆ! ಪ್ರತಿಬಿಂಬಕ್ಕೆ ಬಿಂಬವಿರಲೇಬೇಕು ಎಂದು ತಿರುಗಿ ದಡದ ಮೇಲೆ ನೋಡಿದರೆ ಸೀತೆ ಕಾಣುತ್ತಿಲ್ಲ… ದುಃಖದಿಂದ ರಾಮ ಮೂರ್ಛಿತನಾಗುತ್ತಾನೆ. ಆಗ ಸೀತೆ ಅದೃಶ್ಯವಾಗಿದ್ದುಕೊಂಡೇ ಅವನನ್ನು ಉಪಚರಿಸಿ ಎಚ್ಚರಗೊಳಿಸುತ್ತಾಳೆ. ಸೀತೆಯನ್ನು ಕಾಣದ ರಾಮ ಮತ್ತೆ ಸೀತೆಯ ನೆನಪಲ್ಲಿ ತನ್ನ ಪ್ರೀತಿಯನ್ನು ತೋಡಿಕೊಳ್ಳತ್ತಾ ವಿಲಪಿಸತೊಡಗುತ್ತಾನೆ. ರಾಮನ ಹೃದಯದ ಸ್ಪಷ್ಟ ಪರಿಚಯವನ್ನು ಸೀತೆಗೆ ಮಾಡಿಕೊಡುವುದು ಕವಿಯ ಉದ್ದೇಶ! ಜನಶಂಕೆ ರಾಮಶಂಕೆಯಲ್ಲ ಎಂದು ಸೀತೆಗೆ ಮನವರಿಕೆಯಾಗುವ ಸಂದರ್ಭಗಳ ಕವಿ ಸೃಷ್ಟಿ!
ಇತ್ತ ರಾಮ ಮತ್ತೆ ಮೂರ್ಛಿತನಾಗುತ್ತಾನೆ. ಈಗ ಸೀತೆ ತನ್ನ ಮೇಲುದದಿಂದ ಗಾಳಿಬೀಸಿ ಅವನನ್ನು ಎಚ್ಚರಿಸುತ್ತಾಳೆ. ಹೀಗೆ ಗಾಳಿ ಬೀಸುವಾಗ ಆ ಮೇಲುದ ರಾಮನ ಕೈಗೆ ತಗುಲಿದಾಗ ಅವನು ಆ ಮೇಲುದವನ್ನು ಎಳೆದುಕೊಂಡು ಅದು ಸೀತೆಯದೆಂದು ಗುರುತಿಸುತ್ತಾನೆ… ಅವನಿಗೆ ಆಶ್ಚರ್ಯ! ಈ ಸ್ಥಿತಿಯಲ್ಲೇ ಅವನು ಮೇಲುದದ ಬದಲಾಗಿ ತನ್ನ ಉತ್ತರೀಯವನ್ನು ಎಸೆಯುತ್ತಾನೆ. ಅದು ನೆಲಕ್ಕೆ ಬೀಳುವ ಮೊದಲೇ ಸೀತೆ ಅದನ್ನು ತೆಗೆದುಕೊಂಡು ಹೋಗುತ್ತಾಳೆ. ಪ್ರಿಯೆಯ ಗುರುತು ಕಾಣಿಸುತ್ತದೆ. ಆದರೆ ಅವಳು ಸ್ವತಃ ಕಾಣಿಸುವುದಿಲ್ಲ! ರಾಮನೋ ಇದೆಲ್ಲಾ ಏನೆಂದು ತಿಳಿಯಲಾಗರದೆ ಸೀತೆ ಕಾಣಿಸಿಕೊಂಡಾಳು ಎಂಬ ಆಸೆಯಲ್ಲಿ ಬೇಡಿಕೊಳ್ಳುವನು. ಆದರೆ ಅವಳು ಕಾಣಿಸಿಕೊಳ್ಳುವುದಿಲ್ಲ. ಇದ್ಯಾವುದೋ ಮಾಯೆ ಇರಬಹುದೆಂದು ಎಂದು ಸಾಂತ್ವನ ಮಾಡಿಕೊಳ್ಳುತ್ತಾನೆ.
ಇಲ್ಲಿಂದ ಮುಂದೆ ವಾಲ್ಮೀಕಿಯ ಅಪ್ಪಣೆಯಂತೆ ಲವಕುಶರು ರಾಮನ ಮುಂದೆ ರಾಮಾಯಣವನ್ನು ಗಾನಮಾಡುವ ಸಂದರ್ಭ. ಇಲ್ಲಿ ರಾಮನ ಜೊತೆ ಅವನ ತಾಯಂದಿರಾದ ಕೌಸಲ್ಯೆ, ಸುಮಿತ್ರೆ, ಮತ್ತು ಕೈಕೇಯಿ ಸಹ ಈ ಕಥೆಯನ್ನು ಕೇಳುತ್ತಿದ್ದಾರೆ.
ರಾಮನ ಮದುವೆಯಾಗುವ ಕಥೆ ಮುಗಿದು ಇನ್ನೇನು ರಾಮನ ಪಟ್ಟಾಭಿಷೇಕದ ಸಿದ್ದತೆ ನಡೆದಿರುವ ಕಥೆ ಶುರುವಾಗಬೇಕು... ಅಷ್ಟರಲ್ಲಿ ರಾಮ, “ಈಗ ಇವರು ಹಿಂದೆ ನಡೆದ ಕಹಿ ಘಟನೆಗಳನ್ನು ಹೇಳುವಾಗ ನಮ್ಮ ತಾಯಿ (ಕೈಕೇಯಿ)ಯನ್ನು ದೂರುತ್ತಾರೆ" ಎಂದು ಯೋಚಿಸಿ ಕೂಡಲೇ ಲವ ಕುಶರಿಗೆ ಈ ಪ್ರಸಂಗವನ್ನು ಬಿಟ್ಟು ಸೀತಾಪಹರಣದ ನಂತರದ ಕಥೆಯನ್ನು ಹೇಳಿ ಎಂದು ಕೇಳಿಕೊಳ್ಳುತ್ತಾನೆ.
ಹಿಂದೆ ಆದ ಕಹಿ ಪ್ರಸಂಗವನ್ನು ನೆನಪಿಸುವುದರಿಂದ ತನ್ನ ಜೊತೆಯಲ್ಲಿರುವ ಇತರರ ಮನಸ್ಸಿಗೆ ನೋವುಂಟಾಗಬಹುದು ಎಂದು ತಿಳಿದು ಅದನ್ನು ತಪ್ಪಿಸುವ ರಾಮನ ಸಂವೇದನಾಶೀಲತೆಗೆ ಏನು ಹೇಳುವುದು!
ಮುಂದೆ ಲವಕುಶರಿಗೂ ತಮ್ಮ ತಾಯಿ ತಂದೆಯರು ಯಾರೆಂದು ಗೊತ್ತಾಗುವುದು. ಸೀತೆಯನ್ನು ಸ್ವೀಕರಿಸಬೇಕೆಂದು ವಾಲ್ಮೀಕಿ ಹೇಳಲು ರಾಮನು ಅವನ ಮಾತನ್ನು ಅಲಕ್ಷಿಸುತ್ತಾನೆ. ಆಗ ಸೀತೆಯು ತಾನು ಪತಿವ್ರತೆಯೆಂದು ಪ್ರಕಟಿಸಲು ಭೂಮಿ ತಾಯಿಯನ್ನು ಪ್ರಾರ್ಥಿಸುವಳು. ಆಗ ಭೂಮಿತಾಯಿಯು ಪ್ರತ್ಯಕ್ಷಳಾಗಿ ಸೀತೆಯನ್ನು ತನ್ನ ಜೊತೆ ಕರೆದುಕೊಂಡು ಹೋಗದೆ ಅಲ್ಲಿ ಸೇರಿದ್ದ ಎಲ್ಲ ಜನರೆದಿರು ಸೀತೆಯ ಪಾತಿವ್ರತ್ಯವನ್ನು ಘೋಷಿಸಿ ಹೋಗುತ್ತಾಳೆ. ರಾಮನು ಸೀತೆಯನ್ನು ಯಜ್ಞದಲ್ಲಿ ಭಾಗಿನಿಯಾಗಿ ಸ್ವೀಕರಿಸುತ್ತಾನೆ. ನಂತರ ಕುಶಲವರಿಗೆ ರಾಜ್ಯವನ್ನು ವಹಿಸಿಕೊಡುತ್ತಾನೆ.
ಹೀಗೆ ಸುಂದರವಾದ ವೃತ್ತಾಂತಗಳಿಂದೊಡಗೂಡಿ ಕುಂದಮಾಲೆಯ ನೆಪದಲ್ಲಿ ರಾಮ ಸೀತೆಯರ ಮರುಮಿಲನದ ಸಂತೋಷದಲ್ಲಿ ಮುಗಿಯುವ ಉತ್ತರ ರಾಮಾಯಣದ ಕಥೆಯ ನಾಟಕವಿದು.
ಆಕರಗಳು:
೧. ಕವಿ ದಿಙ್ನಾಗ ವಿರಚಿತ “ಕುಂದಮಾಲಾ” ಎಂಬ ಸಂಸ್ಕೃತ ನಾಟಕ.
೨. “ಕುಂದಮಾಲೆ” ಸಂಸ್ಕೃತ ನಾಟಕದ ಕನ್ನಡ ಅನುವಾದ, ಬಿ. ಎಚ್. ಶ್ರೀಧರ್.
೩. “ಸಂಸ್ಕೃತ ನಾಟಕ”, ಎಂ. ಆರ್. ಕೃಷ್ಣಶಾಸ್ತ್ರಿ.
- ರಾಜೇಶ್ ಅಕ್ಕಿಹಾಳ್
ಲೇಖಕರ ಕಿರು ಪರಿಚಯ:
ಲೇಖಕರು ಹವ್ಯಾಸಿ ಬರಹಗಾರರೂ ಹಾಗೂ ಸಾಹಿತ್ಯದ ಓದುಗರೂ ಆಗಿದ್ದಾರೆ. ಚಿತ್ರಕಲೆ ಹಾಗೂ ಶಿಲ್ಪಶಾಸ್ತ್ರಗಳ ಅಧ್ಯಯನ ನಡೆಸುತ್ತಿದ್ದಾರೆ. ಬೆಂಗಳೂರಿನ ನಿವಾಸಿಯಾದ ಇವರು ಸಾಫ್ಟವೇರ್ ಉದ್ಯೋಗಿಯಾಗಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಗಣಿತಕ್ಕಾಗಿಯೇ ಮೀಸಲಾಗಿರುವ “ಭಾವನಾ” ಎಂಬ ತ್ರೈಮಾಸಿಕ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿ ಕೆಲಸ ನಿರ್ವಹಿತ್ತಿದ್ದಾರೆ.
ದೂರವಾಣಿ: 98866 27738
ಈ-ಮೇಲ್: alpharo1411@gmail.com
ವಿಳಾಸ:
#1194, ವಸುಧಾ,
ಸರ್. ಎಂ. ವಿಶ್ವೇಶ್ವರಯ್ಯ ನಗರ, 8ನೇ ಬ್ಲಾಕ್,
ಬೆಂಗಳೂರು - 560091
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ