ಲೋಕಸಭಾ ಚುನಾವಣೆ-2024: ಪುತ್ತೂರು ತಾಲೂಕು ಸ್ವೀಪ್‌ ಸಮಿತಿಯಿಂದ ತರಬೇತಿ ಕಾರ್ಯಾಗಾರ

Upayuktha
0

ಯುವ ಮತದಾರರಿಗೆ ಮತದಾನದ ಪ್ರಾಮುಖ್ಯತೆ ತಿಳಿಯಪಡಿಸಿ: ಪುರಂದರ



ಪುತ್ತೂರು: ಪ್ರತಿ ಐದು ವರ್ಷಕ್ಕೊಮ್ಮೆ ಲೋಕಸಭೆ, ವಿಧಾನಸಭೆ ಚುನಾವಣೆಗಳು ನಡೆಯುತ್ತಿರುತ್ತದೆ. ಚುನಾವಣಾ ಪೂರ್ವದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಭವಿಷ್ಯದ ಹಾಗೂ ಯುವ ಮತದಾರರಿಗೆ ಮತದಾನದ ಶಿಕ್ಷಣ, ಪ್ರಾಮುಖ್ಯತೆ, ಜಾಗೃತಿ ಮತ್ತು ಅರಿವು ಮೂಡಿಸುವ ಸಂಬಂಧ ಶೈಕ್ಷಣಿಕ ಸಂಸ್ಥೆಗಳ ಮತದಾರ ಸಾಕ್ಷರತಾ ಸಂಘಗಳ ಸಂಚಾಲಕರಿಗೆ ಹಾಗೂ ಕ್ಯಾಂಪಸ್‌ ರಾಯಭಾರಿಗಳು ತರಬೇತಿಯನ್ನು ಹಮ್ಮಿಕೊಂಡಿದ್ದು ಯುವ ಮತದಾರರು ಮತದಾನ ಮಾಡುವಂತೆ ಜಾಗೃತಗೊಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಪುತ್ತೂರು ತಹಶೀಲ್ದಾರರು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಯಾದ ಪುರಂದರ ಅಭಿಪ್ರಾಯಪಟ್ಟರು.


ಅವರು ಫೆ.28 ರಂದು ಪುತ್ತೂರು ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ ಸಮಿತಿ, ಪುತ್ತೂರು ತಾಲೂಕು ಸ್ವೀಪ್‌ ಸಮಿತಿ ಇದರ ಆಶ್ರಯದಲ್ಲಿ 206 ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ರ ಸಂಬಂಧ ಸ್ವೀಪ್‌ ಕಾರ್ಯಕ್ರಮಗಳಡಿಯಲ್ಲಿ ಮತದಾರರ ಸಾಕ್ಷರತಾ ಸಂಘಗಳ ಸಂಚಾಲಕರಿಗೆ, ಕ್ಯಾಂಪಸ್‌ ರಾಯಭಾರಿಗಳಿಗೆ ಹಾಗೂ ಬಿ.ಎಲ್.ಒ ಗಳಿಗೆ ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 


ಪುತ್ತೂರು ತಾಲೂಕು ಪಂಚಾಯತ್‌ ಸಹಾಯಕ ನಿರ್ದೇಶಕರು (ಗ್ರಾ.ಉ.) ಶೈಲಜ ಭಟ್‌ ಮಾತನಾಡಿ, ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆಯೆಂದು ಗುರುತಿಸಿಕೊಂಡಿದ್ದರೂ, ಯುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿಲ್ಲ, ಬದಲಾಗಿ ಮತದಾನದ ದಿನವನ್ನು ಮನೋರಂಜನೆಗಾಗಿ ಕಳೆಯುತ್ತಿದ್ದಾರೆ. ಆದರೆ 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಹಾಗೂ ವಿಶೇಷ ಚೇತನರು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚು ಭಾಗವಹಿಸುತ್ತಿರುವುದು ಕಂಡು ಬಂದಿರುತ್ತದೆ. ಹಾಗಾಗಿ ಎಳೆಯ ಪ್ರಾಯದಲ್ಲೇ ಶಿಕ್ಷಕರು ಮಕ್ಕಳಿಗೆ ಮತದಾನದ ಪ್ರಾಮುಖ್ಯತೆಯನ್ನು ತಿಳಿಸುವ ಕೆಲಸಗಳಾಗಬೇಕು ಹಾಗೂ ಇದರಿಂದ ಮತ ಚಲಾಯಿಸುವ ಮತದಾರರ ಸಂಖ್ಯೆ ಹೆಚ್ಚಾಗಬೇಕು ಎಂದು ಆಶಿಸಿದರು.


ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್‌ ಮಾತನಾಡಿ, ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಮತ ಚಲಾಯಿಸುವ ಹಕ್ಕು ಭಾರತದ ಪ್ರಜೆಗಳದ್ದು, ಆದರೆ ಅದನ್ನು ಚಲಾಯಿಸುವ ಕುರಿತು ಅಥವಾ ಈ ಬಗ್ಗೆ ಜಾಗೃತಿ ಮೂಡಿಸಲು ಸ್ವೀಪ್‌ ಕಾರ್ಯಕ್ರಮದ ಮೂಲಕ ಪ್ರತಿ ಚುನಾವಣೆ ಸಂದರ್ಭ ಮತದಾನ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಚುನಾವಣಾ ಆಯೋಗ ಹಮ್ಮಿಕೊಳ್ಳುತ್ತಿದೆ. ಆದರೆ ಈ ಮತದಾನದ ಪ್ರಾಮುಖ್ಯತೆ ಎಲ್ಲರಿಗೂ ತಿಳಿದರೆ ಈ ಸ್ವೀಪ್‌ ಕಾರ್ಯಕ್ರಮಗಳ ಅವಶ್ಯಕತೆಯೇ ಇಲ್ಲ. ಹಾಗಾಗಿ ಪ್ರತಿಯೊಬ್ಬ ಪ್ರಜೆಯು ತನ್ನ ಮತದ ಹಕ್ಕು ಹಾಗೂ ಅದರ ಪ್ರಮುಖ್ಯತೆಯನ್ನು ಅರಿತು ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.


ಈ ಸಂದರ್ಭ ಪ್ರಧಾನ ಮಂತ್ರಿ ಪೋಷಣ್‌ ಅಭಿಯಾನದ ಸಹಾಯಕ ನಿರ್ದೇಶಕರಾದ ವಿಷ್ಣುಪ್ರಸಾದ್‌, ಶಿಕ್ಷಣ ಇಲಾಖೆಯ ತಾಲೂಕು ಸಂಪನ್ಮೂಲ ವ್ಯಕ್ತಿ ಹರಿಪ್ರಸಾದ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢ ಶಾಲೆ,ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಇಎಲ್‌ ಸಿ ಸಂಚಾಲಕರಿಗೆ ತಾಲೂಕು ಸ್ವೀಪ್‌ ತರಬೇತುದಾರರಾದ ರತ್ನ ಕುಮಾರಿ, ಪ್ರಕಾಶ್‌, ಲಕ್ಷ್ಮೀಕಾಂತ್‌, ಭರತ್‌ ಕುಮಾರ್‌ ತರಬೇತಿ ನಡೆಸಿಕೊಟ್ಟರು. ಸ್ವೀಪ್‌ ಜಿಲ್ಲಾ ಮಟ್ಟದ ಸಂಪನ್ಮೂಲ ತರಬೇತುದಾರ ಹಾಗೂ ಪುತ್ತೂರು ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ನಂದಕಿಶೋರ್‌ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.


ತಾಲೂಕು ಸ್ವೀಪ್‌ ತರಬೇತುದಾರರು ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ವಂದಿಸಿದರು. ತಾಲೂಕು ಸ್ವೀಪ್‌ ತರಬೇತುದಾರರು ಹಾಗೂ ವಿವೇಕಾನಂದ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕ ಲಕ್ಷೀ ಕಾಂತ್‌ ಕಾರ್ಯಕ್ರಮ ನಿರೂಪಿಸಿದರು. ಮಣಿಕ್ಕಾರ ಶಾಲಾ ಶಿಕ್ಷಕಿ ಪ್ರಾರ್ಥಿಸಿದರು. ತಾಲೂಕು ಪಂಚಾಯತ್‌ ವ್ಯವಸ್ಥಾಪಕರಾದ ಜಯಪ್ರಕಾಶ್‌, ವಿಷಯನಿರ್ವಾಹಕರಾದ ತುಳಸಿ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top