ಅಡ್ಡ ಮತದಾನ ಬರೇ ಕನಾ೯ಟಕದಲ್ಲಿ ಮಾತ್ರವಲ್ಲ ಉತ್ತರ ಪ್ರದೇಶ ಹಿಮಾಚಲ ಪ್ರದೇಶದಲ್ಲಿಯೂ ಆಗಿದೆ.ಇದುಇಂದು ಮಾತ್ರವಲ್ಲ ಹಿಂದೆಯೂ ಆಗಿದೆ. ಬರೇ "ಈ" ಪಕ್ಷದಿಂದ ಮಾತ್ರವಲ್ಲ"ಆ" ಪಕ್ಷದಿಂದಲೂ ಆಗಿದೆ. ಹಾಗಾಗಿ ಇದೊಂದು ಸಾರ್ವತ್ರಿಕ ಸಾರ್ವಕಾಲಿಕ ಸಾಂಕ್ರಾಮಿಕ ಪಿಡುಗು ಅನ್ನುವುದರಲ್ಲಿ ಎರಡು ಮಾತಿಲ್ಲ. ಈಗ ನಮ್ಮ ಚರ್ಚೆಗೆ ಗ್ರಾಸವಾಗಬೇಕಾದ ವಿಚಾರವೆಂದರೆ ಇವರನ್ನು ಅನರ್ಹಗೊಳಿಸಬೇಕಾ ಅಮಾನತುಗೊಳಿಸಬೇಕಾ ಅನ್ನುವುದಕ್ಕಿಂತ ಇನ್ನೊಂದು ಪ್ರಶ್ನೆ ಮೂಲ ಭೂತವಾಗಿ ಉದ್ಭವಿಸುತ್ತದೆ.
1. ಜನರಿಂದ ಆಯ್ಕೆಯಾದ ಶಾಸಕರುಗಳಿಗೆ ತಮ್ಮ ಮತವನ್ನು ಚಲಾಯಿಸುವಾಗಲೂ ವೈಯುಕ್ತಿಕ ಸ್ವಾತಂತ್ರ್ಯವಿಲ್ಲವೇ? ಎಲ್ಲವೂ ಪಕ್ಷದ ನಿರ್ಣಯದಂತೆ ನಡೆದು ಕೊಳ್ಳಬೇಕು ಅನ್ನುವುದಾದರೆ ನಮ್ಮದು ಸಂಸದೀಯ ಪ್ರಜಾಪ್ರಭುತ್ವ ವಾಗುವುದಾರೂ ಹೇಗೆ? ಜನರಿಂದ ಚುನಾಯಿತ ಜನಪ್ರತಿನಿಧಿಗಳನ್ನು "ವಿಪ್" ಅನ್ನುವ ಅಸ್ತ್ರ ಬಳಸಿ ಪಕ್ಷದ ಶಿಸ್ತಿಗೆ ಒಳಪಡಿಸಿ ಅಭಿಪ್ರಾಯ ನೀಡಬೇಕು. ಇಲ್ಲವಾದರೆ ಶಾಸಕತ್ವ ಕಳೆದುಕೊಳ್ಳಬೇಕು ಅನ್ನುವ ಪಕ್ಷಾಂತರ ಕಾಯಿದೆ ಹೇರುವುದು ಎಷ್ಟು ಸೂಕ್ತ?. ಇದನ್ನು ಕೂಡಾ ನಮ್ಮ ಘನವೆತ್ತ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು. ಬೇಕಾದರೆ ಪಕ್ಷಕ್ಕೆ ರಾಜೀನಾಮೆ ನೀಡಲಿ ಶಾಸಕತನಕ್ಕೆ ರಾಜೀನಾಮೆ ನೀಡಬೇಕು ಅನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ. ನಮ್ಮ ಶಾಸಕರು ಕ್ಷೇತ್ರದ ಜನಪ್ರತಿನಿಧಿಗಳಾಗುವುದಾರು ಹೇಗೆ?ಅಂದರೆ ಅವರನ್ನು ಪಕ್ಷಗಳ ಪ್ರತಿನಿಧಿಗಳೆಂದು ಕರೆಯುವುದು ಸೂಕ್ತ.
2. ರಾಜ್ಯ ಸಭಾ ಚುನಾವಣಾ ಪ್ರಕ್ರಿಯೆ ಸರಿ ಇಲ್ಲ. ಯಾಕೆ ಕೇಳಿದರೆ ಪ್ರಜಾಪ್ರಭುತ್ವದಲ್ಲಿ ಮತದಾನವೆಂದರೆ ಗೌಪ್ಯ ಮತದಾನಕ್ಕೆ ಅವಕಾಶವಿರಬೇಕು. ಅದು ಬಿಟ್ಟು ಪಕ್ಷದ ಎಜೆಂಟಿಗೆ ತೇೂರಿಸಿ ಮತ ಚಲಾಯಿಸ ಬೇಕು ಅನ್ನುವುದ ಪ್ರಜಾಪ್ರಭುತ್ವದ ಚುನಾವಣಾ ಪರಿಕಲ್ಪನೆಗೆ ವಿರುದ್ಧ ನೀತಿ.
3. ಪ್ರತಿಯೊಬ್ಬ ಶಾಸಕನಿಗೂ ಸದನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಧ್ವನಿ ಎತ್ತುತ್ತಾರೆ. ಅದಕ್ಕೆ ಅಡ್ಡಿಪಡಿಸಿದರೆ ಹಕ್ಕು ಚ್ಯುತಿ ಮಂಡಿಸುವ ನಮ್ಮ ಶಾಸಕರುಗಳು ಮತದಾನದ ಹಕ್ಕು ಬಂದಾಗ ಅದಕ್ಕೆ ನಿರ್ಬಂಧ ಹೇರುವುದು ಹಕ್ಕು ಚ್ಯುತಿ ಅಡಿಯಲ್ಲಿ ಬರುವುದಿಲ್ಲವೇ?
ಒಟ್ಟಿನಲ್ಲಿ ಅಡ್ಡ ಮತದಾನದ ಪಾವಿತ್ರ್ಯದ ಕುರಿತಾಗಿ ಚರ್ಚೆ ಬರುವಾಗ ಶಾಸಕರುಗಳ ಮತದಾನದ ಹಕ್ಕು ಅಡ್ಡ ಮತದಾನ. ಮುಂತಾದ ವಿಷಯಗಳು ನ್ಯಾಯಾಲಯದಲ್ಲಿ ಮತ್ತು ಸಾರ್ವಜನಿಕವಾಗಿ ಹೆಚ್ಚು ಚರ್ಚೆಯಾಗಬೇಕು ಅನ್ನುವುದು ನನ್ನ ಅಭಿಪ್ರಾಯ. ಅಡ್ಧ ಮತದಾನದ ವ್ಯವಸ್ಥೆಗೆ ಬೇಕಾದ ವಾತಾವರಣ ನಾವೇ ಸೃಷ್ಟಿ ಮಾಡಿಕೊಂಡು ನಮಗೆ ಅಡ್ಡ ಮತದಾನ ಮಾರಕವಾದಾಗ ಅದೊಂದು ಅನೈತಿಕ ಅಸಂವಿಧಾನಿಕ ಕ್ರಮವೆಂದು ಟೀಕಿಸುವುದು ಅದೇ ಅಡ್ಡ ಮತದಾನ ನಮಗೆ ಪೂರಕವಾದಾಗ ಅದೊಂದು ಆತ್ಮ ಸಾಕ್ಷಿ ಮತದಾನವೆಂದು ವಾದಿಸುವುದು ಎಷ್ಟು ನ್ಯಾಯ ಸಮ್ಮತ ಅನ್ನುವುದು ಇನ್ನೊಂದು ಮೂಲಭೂತವಾದ ಪ್ರಶ್ನೆ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ