ಸುರತ್ಕಲ್: ಆಧುನಿಕ ಜಗತ್ತಿನ ಹೊಸ ಸಮಸ್ಯೆಗಳನ್ನು ಅನುಸಂಧಾನ ಮಾಡುತ್ತಾ ಹೆಣ್ಣಿನ ಅಂತರಂಗದ ತಲ್ಲಣಗಳನ್ನು ಕಟ್ಟಿಕೊಡುವ ಅಕ್ಷತಾರ ರಂಗ ಪ್ರಯೋಗ ಅನನ್ಯವಾದುದು ಎಂದು ಹಿರಿಯ ರಂಗಭೂಮಿ ಕಲಾವಿದೆ ಹಾಗೂ ನಿರ್ಮಾಪಕಿ ಗೀತಾ ಸುರತ್ಕಲ್ ನುಡಿದರು.
ಅವರು ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ, ಕಲಾಬ್ಧಿ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಹಿಳಾ ವೇದಿಕೆಗಳ ಆಶ್ರಯದಲ್ಲಿ ನಟಿ ಅಕ್ಷತಾ ಪಾಂಡವಪುರ ಅವರ ಕಥೆ, ವಿನ್ಯಾಸ ಮತ್ತು ಅಭಿನಯದ ಸ್ತ್ರೀ ಸಂವೇದನೆಯ ಸೂಕ್ಷ್ಮ ಭಾವನೆಗಳನ್ನು ಅಭಿವ್ಯಕ್ತಿಸುವ ಆಪ್ತ ರಂಗಪ್ರಯೋಗ ‘ಲೀಕ್ ಔಟ್’ – ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಿರಿಯ ನಟ ಡಾ. ಆರ್. ನರಸಿಂಹ ಮೂರ್ತಿ ಮಾತನಾಡಿ, ಆಪ್ತ ರಂಗಭೂಮಿ ಪ್ರಯೋಗಗಳಲ್ಲಿ ವಿಶಿಷ್ಟವಾಗಿ ಪ್ರೇಕ್ಷಕರನ್ನು ಪಾತ್ರಗಳನ್ನಾಗಿಸಿಕೊಂಡು ಸಮಸ್ಯೆಗಳ ಕುರಿತು ಸಂವಾದಿಸಲು ಪ್ರೇರೇಪಿಸುವ ರಂಗಭೂಮಿಗೆ ಹೊಸ ಆಯಾಮ ನೀಡುವ ಪ್ರಯೋಗ ಇದಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಸಾಂಪ್ರದಾಯಿಕ ಚೌಕಟ್ಟಿನ ಮನೋಭೂಮಿಕೆ ಯಿಂದ ಹೊರಬಂದು ಸವಾಲುಗಳನ್ನು ಎದುರಿಸಲು ಅವಕಾಶ ಕಲ್ಪಿಸುವ ಪ್ರಯೋಗ ಇದಾಗಿದ್ದು ಕಥೆಗಾರ್ತಿ ಹಾಗೂ ನಟಿಯಾಗಿ ಅಕ್ಷತಾ ಪಾಂಡವಪುರ ಯಶಸ್ಸು ಗಳಿಸಿದ್ದಾರೆ ಎಂದರು.
ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೋತಿ ಚೇಳಾರು ಮಾತನಾಡಿ ಹೆಣ್ಣಿನ ವಿವಿಧ ಸಂವೇದನೆಗಳನ್ನು ನಟಿ ಅಕ್ಷತಾ ಸೊಗಸಾಗಿ ತೆರೆದಿಡುತ್ತಾರೆ. ವಿದ್ಯಾರ್ಥಿನಿಯರು ಸಮಾಜದ ಕುರಿತು ಚಿಂತಿಸಲು ಅವಕಾಶ ಕಲ್ಪಿಸಿಕೊಡುವ ಪ್ರಯೋಗ ಇದಾಗಿದೆ ಎಂದರು.
ಸಾಹಿತಿ ಮಹೇಶ್ ಆರ್. ನಾಯಕ್, ದೇವಿಕಾ ನಾಗೇಶ್, ಸ್ವರ್ಣ, ರಾ.ಸೇ.ಯೋಜನಾಧಿಕಾರಿ ಅಕ್ಷತಾ ವಿ., ಪ್ರಾಧ್ಯಾಪಕ ಕುಮಾರ ಮಾದರ, ರಾ.ಸೇ.ಯೋಜನೆಯ ಕಾರ್ಯದರ್ಶಿ ಹಿತಾ ಉಮೇಶ್ ಉಪಸ್ಥಿತರಿದ್ದರು.
ಅಕ್ಷತಾ ಪಾಂಡವಪುರ ‘ಲೀಕ್ ಔಟ್’ ನಾಟಕ ಪ್ರಯೋಗವನ್ನು ನಡೆಸಿಕೊಟ್ಟರು. ರಂಗನಟ ಓಂಕಾರ್ ಮೇಗಳಾಪುರ ಸಹರಿಸಿದರು. ವಿನೋದ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ