ಹಾಸನ : 2023 - 24 ನೇ ಶೈಕ್ಷಣಿಕ ವರ್ಷವನ್ನು ಗುಣಾತ್ಮಕ ಶೈಕ್ಷಣಿಕ ವರ್ಷ ಎಂದು ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶವು ಉತ್ತಮ ಗುಣಮಟ್ಟದ್ದಾಗಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಮನೋಭಾವ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಬೇಕು ಎಂದು ಜಿಲ್ಲಾ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ತಮ್ಮಣ್ಣ ಗೌಡ ಹೇಳಿದರು.
ನಗರದ ಆರ್. ಸಿ. ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಪ್ರಧಾನ ( ಗಂಧದ ಕೋಠಿ ) ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಹತ್ತನೇ ತರಗತಿ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಪ್ರಗತಿಯ ಕುರಿತು ಸಂವಾದ ನಡೆಸಿದರು. ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಗುಣಮಟ್ಟದ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಆ ಮೂಲಕ ಶಾಲೆಯು ಉತ್ತಮ ಗುಣಮಟ್ಟದ ಫಲಿತಾಂಶವನ್ನು ಪಡೆಯುತ್ತದೆ. ಪ್ರಧಾನ ಶಾಲೆಯಲ್ಲಿ ಒಳ್ಳೆಯ ಕಲಿಕಾ ವಾತಾವರಣವಿದ್ದು ಉತ್ತಮ ಶಿಕ್ಷಕರಿಂದ ಕೂಡಿದೆ. ಇಲ್ಲಿ ಎಲ್ಲಾ ಮಕ್ಕಳು ಉತ್ತಮ ಸಾಧನೆಗಳನ್ನು ಮಾಡಬಹುದು ಎಂದರು.
ಜಿಲ್ಲಾ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಪ್ರಗತಿಯ ಕುರಿತು ಮಾತನಾಡಿ, ಮುಂಬರುವ ಪಬ್ಲಿಕ್ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಎ+ ಮತ್ತು ಎ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕೆಂದು ತಿಳಿಸಿದರು. ನಂತರ ಶಿಕ್ಷಕರ ಜೊತೆ ಸಂವಾದ ನಡೆಸಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯ ಫಲಿತಾಂಶ ವಿಶ್ಲೇಷಣೆಯನ್ನು ಪರಿಶೀಲಿಸಿ, ಮುಂಬರುವ ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಇನ್ನೂ ಉತ್ತಮ ಫಲಿತಾಂಶ ನೀಡುವಂತೆ ಸಲಹೆ ನೀಡಿದರು. ಹತ್ತನೇ ತರಗತಿ ಮುಖ್ಯ ಪರೀಕ್ಷೆಯಲ್ಲಿ ಫಲಿತಾಂಶವನ್ನು ಉತ್ತಮ ಪಡಿಸುವ ಬಗ್ಗೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಗಳಿಸಲು ಶಿಕ್ಷಕರೆಲ್ಲರೂ ಮುಂದಾಗಬೇಕು ಎಂದು ಮನವರಿಕೆ ಮಾಡಿಕೊಟ್ಟರು.
ಪ್ರತೀ ವಿಷಯದಲ್ಲಿಯೂ ಮಗು ಹೆಚ್ಚಿನ ಅಂಕಗಳನ್ನು ಗಳಿಸಲು ಶಿಕ್ಷಕರು ಹೆಚ್ಚು ಗಮನ ನೀಡಬೇಕು ಎಂದರು. ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಸಮಾಲೋಚನೆ ನಡೆಸಿ ಧನಾತ್ಮಕ ಮನೋಭಾವವನ್ನು ಬೆಳೆಸಬೇಕು. ಈ ಹಿನ್ನೆಲೆಯಲ್ಲಿ ಎಸ್.ಡಿ.ಎಂ.ಸಿ. ಸಮಿತಿ ಮತ್ತು ಪೋಷಕರ ಸಹಕಾರವನ್ನು ಪಡೆದುಕೊಳ್ಳುವಂತೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಮಂಜುನಾಥ್ ರವರು ಮಾತನಾಡಿ ಹತ್ತನೇ ತರಗತಿ ಫಲಿತಾಂಶವನ್ನು ಉತ್ತಮ ಪಡಿಸುವಲ್ಲಿ ಪರಿಪೂರ್ಣವಾಗಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು. ಶಿಕ್ಷಕರಾದ ಜಿ.ಆರ್. ಶೇಷಗಿರಿ, ಹೆಚ್. ಪಿ. ಮಂಜಳ , ಎ.ವಿ. ಗೀತಾರಾಣಿ, ಎಂ.ಆರ್. ರಂಗಾಮಣಿ, ಕೆ. ಎನ್. ಚಿದಾನಂದ, ಎಸ್. ಕೆ. ಪೂರ್ಣಿಮಾ , ಮಧು. ಪಿ. , ಚಿದಾನಂದ , ತೈಬಾ ಕೌಸರ್, ಸಂಗೀತ ಶಿಕ್ಷಕರಾದ ಸತ್ಯನಾರಾಯಣ ಮುರಳಿ, ಕೇಶವ ಮೂರ್ತಿ ಹಾಗೂ ಶಾಲಾ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ