ಶಾಲೆಯಿಂದ ಮನೆಗೆ ಬಂದ ಪುಟ್ಟ ಪ್ರಣತಿ ಒಂದೇ ಸಮನೆ ಅಳುತ್ತಿದ್ದಳು ಆಕೆಯ ತಾಯಿ ತಂದೆ ಅದೆಷ್ಟೇ ಸಮಾಧಾನ ಮಾಡಿದರೂ ಆಕೆಯ ಅಳು ನಿಲ್ಲಲಿಲ್ಲ. ಬಹಳ ಹೊತ್ತು ಬಿಕ್ಕಳಿಸಿ ಬಿಕ್ಕಳಿಸಿ ಅತ್ತ ಪ್ರಣತಿ ಅಮ್ಮನ ತೊಡೆಯ ಮೇಲೆ ಹಾಗೆಯೇ ನಿದ್ದೆ ಹೋದಳು. ಆಕೆಯ ತಲೆ ಸವರುತ್ತಾ ತಂದೆ ತಾಯಿ ಆಕೆ ಏಳುವವರೆಗೆ ಆಕೆಯ ಹಾಸಿಗೆಯನ್ನು ಬಿಟ್ಟು ಸರಿಯಲಿಲ್ಲ. ಮಗಳ ಅಳುವಿನ ಕಾರಣ ಕಗ್ಗಂಟಾಗಿತ್ತು.
ಸಂದೀಪ್ ತಾಲೂಕು ಕೇಂದ್ರದಲ್ಲಿ ವಾಸವಾಗಿದ್ದ ಹೈಸ್ಕೂಲು ಶಿಕ್ಷಕ. ಹತ್ತಿರದ ಹಳ್ಳಿಯ ಸರಕಾರಿ ಪ್ರೌಢಶಾಲೆಗೆ ಪ್ರತಿದಿನ ತನ್ನ ಬೈಕ್ನಲ್ಲಿ ಹೋಗಿ ಬರುತ್ತಿದ್ದನು. ಆತನ ಸೋದರತ್ತೆಯ ಮಗಳು ಪ್ರತಿಮಾಳನ್ನು ಮೆಚ್ಚಿ ವಿವಾಹವಾಗಿದ್ದನು. ಸುಮಧುರ ದಾಂಪತ್ಯ ಅವರದಾಗಿತ್ತು. ಸಂದೀಪ್ ಮತ್ತು ಪ್ರತಿಮಾ ದಂಪತಿಗಳಿಗೆ ಒಬ್ಬಳೇ ಪುಟ್ಟ ಮಗಳು 10 ವರ್ಷದ ಪ್ರಣತಿ.ತುಂಬು ಪ್ರೀತಿಯಿಂದ ಆಕೆಯನ್ನು ಬೆಳೆಸಿದ್ದ ತಂದೆ ತಾಯಿಗೆ ಇದೀಗ ಮಗಳು ಶಾಲೆಯಿಂದ ಅಳುತ್ತಾ ಬಂದದ್ದು ಅಚ್ಚರಿಯ ವಿಷಯ.
ಸ್ವಲ್ಪ ಹೊತ್ತಿನ ನಂತರ ಎಚ್ಚರವಾದ ಮಗಳಿಗೆ ಮುಖ ತೊಳೆದು ಬರಲು ಕಳುಹಿಸಿ ಪ್ರತಿಮಾ ಹಾಲನ್ನು ಕಾಯಿಸಿ ಒಂದು ಲೋಟದಲ್ಲಿ ಬೋರ್ನ್ ವಿಟಾ ಬೆರೆಸಿ ಮಗಳ ಕೈಗೆ ತಂದುಕೊಟ್ಟರು. ಆಕೆ ಹಾಲು ಕುಡಿಯುವವರೆಗೆ ಸುಮ್ಮನಿದ್ದ ತಂದೆ ಮಗಳ ತಲೆ ನೇವರಿಸುತ್ತಾ ಏನಾಯ್ತು ಪ್ರತಿ ಎಂದು ಕೇಳಿದಾಗ ಪುಟ್ಟ ಪ್ರಣತಿ ಮತ್ತೊಮ್ಮೆ ನಡೆದ ವಿಷಯವನ್ನು ನೆನಪಿಸಿಕೊಂಡು ಸಂತಪ್ತಳಾದಳು.ಸಂದೀಪ್ ಮತ್ತು ಪ್ರತಿಮಾ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು.
ಕೊನೆಗೊಮ್ಮೆ ಬಿಕ್ಕಳಿಸುತ್ತಾ ಪ್ರಣತಿ ಇಂದು ಬುಧವಾರ ಅಲ್ವೇ, ಶಾಲೆಗೆ ಕಲರ್ ಡ್ರೆಸ್ ಹಾಕಿಕೊಂಡು ಹೋಗಿದ್ದೆ. ಕಳೆದ ಮೂರು ಬುಧವಾರ ಹಾಕಿದ ನೀಲಿ ಬಣ್ಣದ ಕುರ್ತಾ ಹಾಕಿಕೊಂಡು ಹೋಗಿದ್ದೆ.... ಅಯ್ಯೋ ಪ್ರತಿವಾರನೂ ಅದೇ ಡ್ರೆಸ್ ಹಾಕೊಂಡು ಬರ್ತೀಯಾ ನಿನ್ನತ್ರ ಬೇರೆ ಬಟ್ಟೆ ಇಲ್ವಾ ಅಂತ ಸ್ನೇಹಿತರೆಲ್ಲ ತಮಾಷೆ ಮಾಡಿದ್ರು ಎಂದು ಮತ್ತೊಮ್ಮೆ ಜೋರಾಗಿ ಅತ್ತಳು.
ಆಗ ಅಪ್ಪ ಹೌದಲ್ವಾ ಪುಟ್ಟ, ಯಾಕೆ ನೀನು ಬೇರೆ ಡ್ರೆಸ್ ಹಾಕಿಕೊಂಡು ಹೋಗಲಿಲ್ಲ!? ಅಂತ ಕೇಳಿದಾಗ ಪುಟ್ಟ ಪ್ರಣತಿ ಅಪ್ಪ ನನ್ ಹತ್ರ ಕೇವಲ ಫ್ರಾಕ್ ಇವೆ, ಆದರೆ ಇನ್ಮೇಲೆ ಶಾಲೆಗೆ ಫ್ರಾಕ್ ಹಾಕಿಕೊಂಡು ಬರಬೇಡಿ ಅಂತ ಟೀಚರ್ ಹೇಳಿದ್ದಾರೆ. ನನ್ನತ್ರ ಇರೋದು ಒಂದೇ ಕುರ್ತಾ ಸೆಟ್. ಅದಕ್ಕೆ ಅದನ್ನೇ ಪದೇ ಪದೇ ಹಾಕೊಂಡು ಹೋಗ್ತಾ ಇದೀನಿ ಎಂದು ಉತ್ತರಿಸಿದಳು.
ಈ ವಿಷಯ ಮೊದಲೇ ಹೇಳಬಾರದ ಪುಟ್ಟ, ಅಮ್ಮನಿಗೆ ಹೇಳಿದ್ರೆ ಅಮ್ಮ ನಿನಗೆ ಬಟ್ಟೆ ಕೊಡಿಸ್ತಾ ಇರ್ಲಿಲ್ವಾ? ಎಂದು ಮರು ಪ್ರಶ್ನಿಸಿದರು. ಅದಕ್ಕೆ ಪ್ರಣತಿ ಈ ವರ್ಷ ನಾವು ಮನೆ ಕಟ್ತಾ ಇದೀವಿ ಮನೆಗೆ ತುಂಬಾ ಖರ್ಚಾಗ್ತಾ ಇದೆ ಅದಕ್ಕೆ ಅನಾವಶ್ಯಕ ಖರ್ಚುಗಳ್ನ ಮಾಡಬಾರದು ಅಂತ ಪಕ್ಕದ್ಮನೆ ಆಂಟಿ ಹತ್ರ ಅಮ್ಮ ಹೇಳ್ತಾ ಇದ್ರು. ನಾನು ದೊಡ್ಡವಳಾಗ್ತಾ ಇದೀನಿ ಅಪ್ಪ ಮನೆಯ ತೊಂದರೆಗಳು ನನಗೂ ಗೊತ್ತಾಗ್ತಾ ಇದೆ, ಅದಕ್ಕೆ ಹೊಸ ಡ್ರೆಸ್ ಕೇಳಬಾರದು ಅಂತ ಸುಮ್ನೆ ಇದ್ದೆ.... ಆದ್ರೆ ಇವತ್ತು ಸ್ನೇಹಿತರು ತಮಾಷೆ ಮಾಡಿದ ಮೇಲೆ ನಂಗೆ ಅಳು ಬಂತು ಎಂದು ಹೇಳುತ್ತಾ ಸಣ್ಣದಾಗಿ ಮತ್ತೊಮ್ಮೆ ಬಿಕ್ಕಳಿಸಿದಳು.
ದಂಪತಿಗಳಿಗೆ ಈಗ ಸ್ಪಷ್ಟವಾಯಿತು. ತಾವಿಬ್ಬರು ಮನೆ ಕಟ್ಟಿಸುವ ಖರ್ಚು ವೆಚ್ಚಗಳನ್ನು ಬರೆಯುತ್ತಾ ಅದರ ಕುರಿತೆ ಮಾತನಾಡುವುದನ್ನು ಕೇಳಿಸಿಕೊಂಡಿರುವ ಪುಟ್ಟ ಪ್ರಣತಿ ಮನೆಯಲ್ಲಿ ತುಂಬಾ ತೊಂದರೆ ಇರುವುದರಿಂದ ಅನವಶ್ಯಕ ಖರ್ಚು ಮಾಡಬಾರದು ಎಂಬುದನ್ನು ಅರಿತು ಬೇರೆ ಬಟ್ಟೆ ತೆಗೆಯಲು ಕೇಳಿಲ್ಲ ಎಂಬುದರ ಅರಿವಾಯಿತು.
ಕೂಡಲೇ ಪತ್ನಿ ಮತ್ತು ಮಗಳಿಗೆ ಹೊರಗೆ ಹೋಗಲು ತಯಾರಾಗಲು ತಿಳಿಸಿದ ಸಂದೀಪ್ ತಮ್ಮ ಬೈಕ್ ಗೆ ಪೆಟ್ರೋಲ್ ಹಾಕಿಸಿಕೊಂಡು ಬಂದರು. ಪತ್ನಿ ಮತ್ತು ಮಗಳನ್ನು ಮಾರುಕಟ್ಟೆಗೆ ಕರೆತಂದ ಸಂದೀಪ್ ತಾವು ಯಾವಾಗಲೂ ಬಟ್ಟೆ ಖರೀದಿಸುತ್ತಿದ್ದ ರೆಡಿಮೇಡ್ ಬಟ್ಟೆ ಅಂಗಡಿಯ ಒಳಹೊಕ್ಕು ಮಗಳಿಗೆ ಸರಿಹೊಂದುವ ಮೂರು ನಾಲ್ಕು ವಿಧದ ಡ್ರೆಸ್ ಗಳನ್ನು ಖರೀದಿಸಿದರು. ಮಗಳು ಆಕ್ಷೇಪಿಸಿದಾಗ ಮನೆಗೆ ಹೋಗಿ ಹೇಳುವೆನೆಂದು ತಿಳಿಸಿದ ಸಂದೀಪ್ ಅಲ್ಲಿಯೇ ಇದ್ದ ಚಾಟ್ ಸೆಂಟರ್ ಗೆ ಹೆಂಡತಿ ಮಗಳನ್ನು ಕರೆದೊಯ್ದು ಅವರಿಷ್ಟದ ಪಾನಿಪುರಿ ಮತ್ತು ಭೇಲ್ಪುರಿಗಳನ್ನು ಗಳನ್ನು ಆರ್ಡರ್ ಮಾಡಿ ತಿಂದು ಮನೆಗೆ ಬಂದರು.
ಮನೆಗೆ ಬಂದ ನಂತರ ಪ್ರಣತಿ ಅಪ್ಪ, ಮನೆ ಕಟ್ಟಿಸುವುದಕ್ಕೆ ತುಂಬಾ ಖರ್ಚಾಗುತ್ತೆ, ಆದ್ದರಿಂದ ಕೊಂಚ ಹಿಡಿತ ಮಾಡಬೇಕು ಅಂತ ಅಮ್ಮ ಹೇಳ್ತಾ ಇದ್ರು. ನೀವು ನೋಡಿದ್ರೆ ನನಗೆ ಎಷ್ಟೊಂದು ಬಟ್ಟೆ ಕೊಡಿಸಿದಿರಿ ಅಂತ ಕೇಳಿದ್ಲು. ಪುಟ್ಟ ಪ್ರಣತಿಯ ಮಾತಿಗೆ ನಸುನಕ್ಕ ತಂದೆ ಪುಟ್ಟ, ಖರ್ಚುಗಳಲ್ಲಿ ಎರಡು ವಿಧ.. ಒಂದು ಅವಶ್ಯಕವಾದದ್ದು, ಇನ್ನೊಂದು ಅನವಶ್ಯಕವಾದದ್ದು ಪ್ರತಿದಿನ ನಮ್ಮ ಮೂಲಭೂತ ಅವಶ್ಯಕತೆಗಳನ್ನು ನಾವು ಹೊಂದಲೇಬೇಕು. ಒಳ್ಳೆಯ ಆಹಾರ, ಬಟ್ಟೆಗಳು, ವಾಸಿಸುವ ಮನೆ, ಶಾಲೆ ಕಾಲೇಜುಗಳ ಪುಸ್ತಕ ನೋಟ್ ಪುಸ್ತಕಗಳು, ಪೆನ್ನು ಪೆನ್ಸಿಲ್ ಗಳು, ಔಷಧಿ ಮಾತ್ರೆಗಳು ಅವಶ್ಯಕ ಖರ್ಚುಗಳಲ್ಲಿ ಬರುತ್ತವೆ. ಇದನ್ನು ಮೀರಿದ ಖರ್ಚುಗಳನ್ನು ನಾವು ಅನವಶ್ಯಕ ಎಂದು ಪರಿಗಣಿಸುತ್ತೇವೆ.
ಅವಶ್ಯಕ ಮತ್ತು ಅನವಶ್ಯಕಗಳ ಮಧ್ಯದ ಕೂದಲೆಳೆಯ ಅಂತರವನ್ನು ಅರಿತು ಖರ್ಚು ಮಾಡೋಣ ಎಂಬುದು ನಿಮ್ಮಮ್ಮನ ಮಾತಿನ ಉದ್ದೇಶವಾಗಿತ್ತು. ಅದನ್ನೇ ನೀನು ತಪ್ಪು ತಿಳಿದು ನಿನ್ನ ಅವಶ್ಯಕತೆಯನ್ನು ನಮ್ಮಿಂದ ಮುಚ್ಚಿಟ್ಟೆ. ಅವಶ್ಯಕ ವಸ್ತುಗಳು ಅದೆಷ್ಟೇ ಹೆಚ್ಚು ಖರ್ಚಿನದಾದರೂ ತೆಗೆದುಕೊಳ್ಳಲೇಬೇಕು ಅನವಶ್ಯಕವಾದದ್ದು ಅದೆಷ್ಟೇ ಕಡಿಮೆ ಖರ್ಚಿನದಾದರೂ ಅವಾಯ್ಡ್ ಮಾಡಬೇಕು ಎಂದು ತಿಳಿಹೇಳಿದರು. ಇದೀಗ ಪ್ರಣತಿಯ ಶಂಕೆ ದೂರವಾಗಿ ಮನೆಯ ಎಲ್ಲ ಸದಸ್ಯರ ಮನಸ್ಸು ನಿರಾಳವಾಗಿತ್ತು.
ದುಬಾರಿ ಎಂದು ಆರೋಗ್ಯ ಸಂಬಂಧಿ ಖರ್ಚುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ, ಮಕ್ಕಳ ಶಾಲೆ ಕಾಲೇಜುಗಳ ಖರ್ಚುಗಳ ಮೇಲೆ ದೂರಲು ಸಾಧ್ಯವಿಲ್ಲ ಹಿತಮಿತವಾದ ಖರ್ಚು ನಮ್ಮ ಜೇಬಿನ ಆರೋಗ್ಯಕ್ಕೂ ಮನಸ್ಸಿನ ಆರೋಗ್ಯಕ್ಕೂ ಒಳ್ಳೆಯದು ಎಂಬ ಅಪ್ಪನ ಮಾತು ಪುಟ್ಟ ಪ್ರಣತಿಯ ಮನದ ಅಂಗಳದಲ್ಲಿ ಹಣದ ಉಪಯೋಗದ ಕುರಿತ ಒಳ್ಳೆಯ ಬೀಜ ಬಿತ್ತಿತು.
- ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ