ಮಂಗಳೂರು: ಮಾತಾ ಅಮೃತಾನಂದಮಯಿ ಮಠದಲ್ಲಿ ಎ .ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಪ್ರತಿ ಶನಿವಾರದಂದು ಪೂರ್ವಾಹ್ನ ಉಚಿತ ವೈದ್ಯಕೀಯ ಸೇವೆ ನೀಡುವ ಯೋಜನೆಗೆ ಚಾಲನೆ ನೀಡಲಾಯಿತು. ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಜ್ಯೋತಿ ಬೆಳಗಿಸಿ ಮಾತನಾಡಿ ಮಠದ ವೈದ್ಯಕೀಯ ವಿಭಾಗದ ವೈದ್ಯರು ಮತ್ತು ತಂಡವು ಕಳೆದ 25 ವರ್ಷಗಳಿಂದ ಹಲವರ ಬಾಳಿಗೆ ಚೈತನ್ಯ ತುಂಬಿದ್ದಾರೆ. ಈಗ ಎ ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದವರು ಈ ಯೋಜನೆಗೆ ಕೈಜೋಡಿಸಿದ್ದಾರೆ. ಇಲ್ಲಿನ ಅವರ ಸೇವೆಯಿಂದ ನಮ್ಮ ಇಷ್ಟು ವರ್ಷಗಳ ಪ್ರಯತ್ನಕ್ಕೆ ಶಕ್ತಿ ತುಂಬಿದಂತಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎ ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನ ಡೀನ್ ಪ್ರೊ. ಡಾ. ಅಶೋಕ್ ಹೆಗ್ಡೆ ಮಾತನಾಡಿ "ಎಲ್ಲರಿಗೂ ಉತ್ತಮ ಆರೋಗ್ಯ" ನೀಡಬೇಕೆಂಬ ಸರಕಾರದ ಆಶಯವನ್ನು ಸಾಕಾರಗೊಳಿಸಲು ನಮ್ಮ ಅಧ್ಯಕ್ಷರಾದ ಎ ಜೆ ಶೆಟ್ಟಿಯವರು ಮತ್ತು ಉಪಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿಯವರು 21 ವರ್ಷಗಳ ಹಿಂದೆ ಸ್ಥಾಪಿಸಿದ ವೈದ್ಯಕೀಯ ಸೇವೆಯು ಹಲವಾರು ಸಮಾಜಮುಖಿ ಕಾರ್ಯಗಳನ್ನು ಸೇರಿಸಿಕೊಂಡು ಬೆಳೆದು ಬಂದಿದೆ. ನಮ್ಮ ಸಂಸ್ಥೆಯು ತಜ್ಞವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಉತ್ತಮ ದಾದಿಯರನ್ನು ಹೊಂದಿದ್ದು ಶ್ರೇಷ್ಠ ಮಟ್ಟದ ಸೇವೆಯೊಂದಿಗೆ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಆರೋಗ್ಯ ಸೇವೆಗಳ ಜೊತೆಗೆ ಜನರಿಗೆ ಅಗತ್ಯವಾದ ವ್ಯಾಯಾಮ, ಆಹಾರ ಸೇವನೆ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಎಸ್ ಸಿ ಎಸ್ ಆಸ್ಪತ್ರೆಯ ಡಾ.ಜೀವರಾಜ್ ಸೊರಕೆಯವರು ಅಮೃತಾನಂದಮಯಿ ಮಠದ ಮೂಲಕ ಕೈಗೊಂಡ ಆರೋಗ್ಯ ಮತ್ತು ಸಾಮಾಜಿಕ ಯೋಜನೆಗಳನ್ನು ತಿಳಿಸಿದರು. ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತಕುಮಾರ ಪೆರ್ಲ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ದೇವದಾಸ್ ಪುತ್ರನ್ ನಿರೂಪಿಸಿದರು. ಉಪಾಧ್ಯಕ್ಷ ಸುರೇಶ್ ಅಮೀನ್ ವಂದಿಸಿದರು.
ವೇದಿಕೆಯಲ್ಲಿ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಯೋಜನೆಗಳಲ್ಲಿ ತೊಡಗಿಸಿಕೊಂಡ ಎ.ಜೆ. ಸಂಸ್ಥೆಯ ಡಾ.ಸಂಜೀವ ಬಡಿಗೇರ, ಡಾ. ಪ್ರದೀಪ್ ಸೇನಾಪತಿ, ಡಾ. ವರುಣ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಗಣ್ಯರಾದ ಎನ್.ಜಿ.ಮೋಹನ್, ಉಷಾರಾಣಿ, ಅಮೃತ ವಿದ್ಯಾಲಯಂ ಪ್ರಾಂಶುಪಾಲೆ ಅಕ್ಷತಾ ಶೆಣೈ, ಕ್ಯಾಂಪಸ್ ಡೈರೆಕ್ಟರ್ ಯತೀಶ್ ಬೈಕಂಪಾಡಿ, ಅಯುಧ್ ಹಾಗೂ ಸೇವಾ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ