ನಿಟ್ಟೆ: ‘ವಿದ್ಯಾರ್ಥಿದೆಸೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೋಳ್ಳುವುದನ್ನು ರೂಢಿಸಿಕೊಂಡರೆ ಭವಿಷ್ಯದಲ್ಲಿ ಶಿಸ್ತು, ಏಕಾಗ್ರತೆ ಮುಂತಾದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಕ್ರೀಡೆಯು ದುಶ್ಚಟಗಳಿಂದ ನಮ್ಮನ್ನು ದೂರವಿಟ್ಟು ಉತ್ತಮ ಸಮಾಜದ ನಿರ್ಮಾಣಕ್ಕೆ ಪ್ರೇರೇಪಿಸುತ್ತದೆ’ ಎಂದು ಜಸ್ಟೀಸ್ ಕೆ.ಎಸ್. ಹೆಗ್ಡೆ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ನ ಪ್ರಾಧ್ಯಾಪಕ ಡಾ. ಟಿ. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.
ಅವರು ಜ.31 ರಂದು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಬಿ.ಸಿ.ಆಳ್ವಾ ಕ್ರೀಡಾಸಂಕೀರ್ಣದಲ್ಲಿ ನಡೆದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 38ನೇ ವಾರ್ಷಿಕ ಕ್ರೀಡಾಕೂಟಕ್ಕೆ ಹಾಗೂ ಅಂತರ್ ವಿಭಾಗೀಯ ಕ್ರೀಡಾಕೂಟವಾದ ನಿಟ್ಟೆ ಖೇಲೋತ್ಸವಕ್ಕೆ ಚಾಲನೆನೀಡಿ ಮಾತನಾಡಿದರು. ‘ಕ್ರೀಡೆಯಿಂದ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಉತ್ತಮಗೊಳ್ಳುತ್ತದೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿರುವುದು ವಿದ್ಯಾರ್ಥಿಗಳಿಗೆ ಕ್ರೀಡೆಯ ಬಗೆಗೆ ಇರುವ ಒಲವನ್ನು ತೋರಿಸುತ್ತದೆ’ ಎಂದು ಅವರು ಹೇಳಿದರು.
ಪೂರ್ವನಿಯೋಜಿತ ಕಾರ್ಯಕ್ರಮದ ನಿಮಿತ್ತ ಕ್ಯಾಂಪಸ್ ಗೆ ಆಗಮಿಸಿದ್ದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್ ವಿನಯ ಹೆಗ್ಡೆ ಅವರು ಕ್ರೀಡಾಂಗಣಕ್ಕೆ ಭೇಟಿನೀಡಿ ಕಾರ್ಯಕ್ರಮಕ್ಕೆ ಶುಭಹಾರೈಸುವುದರೊಂದಿಗೆ ವಿದ್ಯಾಸಂಸ್ಥೆಯು ಕ್ರೀಡೆಗೆ ಪ್ರೋತ್ಸಾಹಿಸಲು ಸದಾಸಿದ್ದ ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿನ ವಿವಿಧ ಕ್ರೀಡಾಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ನಿಟ್ಟೆ ಕ್ಯಾಂಪಸ್ ನಲ್ಲಿ ಮುಂದಿನ ದಿನಗಳಲ್ಲಿ ಹಲವಾರು ನವೀನ ಕ್ರೀಡಾ ಸೌಲಭ್ಯಗಳನ್ನು ನಿರ್ಮಿಸುವಲ್ಲಿ ಸಂಸ್ಥೆ ಉತ್ಸುಕವಾಗಿದೆ' ಎಂದರು. ವೇದಿಕೆಯಲ್ಲಿ ಕ್ಯಾಂಪಸ್‌ನ ಮೈಂಟೆನೆನ್ಸ್ & ಡೆವಲಪ್ಮೆಂಟ್ ನ ನಿರ್ದೇಶಕ ಪ್ರೊ. ಯೋಗೀಶ್ ಹೆಗ್ಡೆ, ನಿಟ್ಟೆ ಆಫ್ ಕ್ಯಾಂಪಸ್ ನ ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಡಾ. ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರದಲ್ಲಿ ವಿಭಾಗ ಮುಖ್ಯಸ್ಥರು, ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕೇತರ ವೃಂದ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಪೂಜಾರಿ ಸ್ವಾಗತಿಸಿದರು. ಕ್ರೀಡಾ ತರಬೇತುದಾರ್ತಿ ಸೌಜನ್ಯ ಅತಿಥಿಗಳನ್ನು ಪರಿಚಯಿಸಿದರು. ಕ್ರೀಡಾ ಆಡಳಿತಾಧಿಕಾರಿ ಶ್ಯಾಮ್‌ಸುಂದರ್ ವಂದಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ.ರೋಶನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ