ಬಸವನಗುಡಿ ಪುತ್ತಿಗೆ ಮಠದಲ್ಲಿ ಶ್ರೀ ತ್ಯಾಗರಾಜರ ಮತ್ತು ಶ್ರೀ ಪುರಂದರದಾಸರ ಆರಾಧನೋತ್ಸವ

Upayuktha
0

  ಬೆಂಗಳೂರು ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ- ಭಕ್ತಿ ಸನ್ನುತಿ- ಭಾಗ 2 ಲೋಕಾರ್ಪಣೆ


ಬೆಂಗಳೂರು
: ಸಾಮಾಜಿಕ ಶಾಂತಿ ಮತ್ತು ಸೌಹಾರ್ದಕ್ಕೆ ಶಾಸ್ತ್ರೀಯ ಸಂಗೀತ ಕೊಡುಗೆ ಅನನ್ಯ ಎಂದು  ಭಂಡಾರಕೇರಿ ಮಹಾಸಂಸ್ಥಾನ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.



 ಅವರು ಬಸವನಗುಡಿಯ ಪುತ್ತಿಗೆ ಮಠದ ಸಭಾಂಗದಲ್ಲಿ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ಭಾನುವಾರ ಹಮ್ಮಿಕೊಂಡಿದ್ದ ಸಂತ ಶ್ರೀ ತ್ಯಾಗರಾಜರ ಮತ್ತು ಶ್ರೀ ಪುರಂದರದಾಸರ ಆರಾಧನಾ ಸಂಗೀತೋತ್ಸವದಲ್ಲಿ ‘ಹರಿದಾಸರ ಪ್ರಚಲಿತ ದೇವರನಾಮಗಳ ಪುಸ್ತಕ ‘ಭಕ್ತಿ ಸನ್ನುತಿ- ಭಾಗ 2’ ಲೋಕಾರ್ಪಣೆಗೊಳಿಸಿ ಆಶೀರ್ವಚನ ಸಂದೇಶ ನೀಡಿದರು. 



ಯಾವ ದೇಶದಲ್ಲಿ ಸಂಗೀತ ಮತ್ತು ಸಾಹಿತ್ಯಗಳು ಸಮೃದ್ಧವಾಗಿರುತ್ತವೆಯೋ ಅಲ್ಲಿ ಸುಭಿಕ್ಷೆ ನೆಲೆಸಿರುತ್ತದೆ. ಈ ರಂಗದ ವಿದ್ವಾಂಸರನ್ನು, ತಜ್ಞರನ್ನು ಗೌರವಿಸುವುದು, ಆದರಿಸುವುದು ಒಂದು ಶ್ರೇಷ್ಠ ಕಾರ್ಯವೇ ಆಗಿದೆ ಎಂದರು.



ಬಹುಮುಖೀ ಸೇವೆ:

ಸಂಗೀತ ಪಾಠ, ಉಚಿತ ಶಿಬಿರ, ಆರಾಧನಾ ಉತ್ಸವ, ಸಂಕೀರ್ತನೆ ಮತ್ತಿತರ ಚಟುವಟಿಕೆಗಳೊಂದಿಗೆ ಕೃತಿ ಬಿಡುಗಡೆಯನ್ನೂ ಅನುಗ್ರಹ ಸಂಗೀತ ವಿದ್ಯಾಲಯ ಮಾಡುತ್ತಿರುವುದು ಮಾದರಿಯಾಗಿದೆ. ಒಂದು ಸಂಸ್ಥೆ ಒಂದು ಸೇವೆ ಮಾಡುವುದು ಸಹಜ. ಆದರೆ ವಿದ್ವಾನ್ ಶ್ರೀಕಂಠ ಭಟ್ಟರ ನೇತೃತ್ವದ ಈ ಸಂಸ್ಥೆ ಬಹುಮುಖೀ ಸೇವೆಯಲ್ಲಿರುವುದು ಶ್ಲಾಘನೀಯ ಎಂದು ಶ್ರೀಗಳು ಪ್ರಶಂಸೆ ವ್ಯಕ್ತಪಡಿಸಿದರು.



ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್ ಮಾತನಾಡಿ, ಹತ್ತಾರು ದಶಕದಿಂದ ಸಾಧನೆ ಮಾಡಿದವರನ್ನು ಇಂದು ವಿದ್ಯಾಲಯ ಗೌರವಿಸಿದೆ. ಜ್ಞಾನಿಗಳನ್ನು ಸನ್ಮಾನಿಸಿದರೆ ಸಮಾಜದಲ್ಲಿ ಇನ್ನಷ್ಟು ಶ್ರೇಷ್ಠ ಕೆಲಸಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.



ಕಲಾ ಬದ್ಧತೆ ದೊಡ್ಡದು:

ಹಿರಿಯ ಮೃದಂಗ ವಿದ್ವಾಂಸ ಎಚ್.ಎಸ್. ಸುಧೀಂದ್ರ ಮಾತನಾಡಿ, ವಿದ್ವಾನ್ ಶ್ರೀಕಂಠ ಭಟ್ ಮತ್ತು ಅವರ ಗುರುಗಳು ದೇಶದ ವಿವಿಧೆಡೆ ಸಂಗೀತ ವಿದ್ಯಾಲಯದ ಶಾಖೆ ಸ್ಥಾಪಿಸಿ, ವಿದೇಶೀಯ ವಿದ್ಯಾರ್ಥಿಗಳಿಗೂ ಪಾಠ ಮಾಡುವ ಪರಿ ಅನನ್ಯ. ಅವರ ಕಾರ್ಯಕ್ಷಮತೆ ಮತ್ತು ಕಲಾ ಬದ್ಧತೆಗೆ ನನ್ನ ನಮನಗಳು ಎಂದರು.



ಸನ್ಮಾನ:

ನಾಡಿನ ಹಿರಿಯ ಮೃದಂಗ ವಿದ್ವಾಂಸ ಎಚ್.ಎಸ್. ಸುಧೀಂದ್ರ,  ಖ್ಯಾತ ತಬಲಾ ವಾದಕ ಪಂಡಿತ್ ಗುರುಮೂರ್ತಿ ವೈದ್ಯ, ಪಂಡಿತ ಪವಮಾನಾಚಾರ್ಯ ಕಲ್ಲಾಪುರ ಅವರನ್ನು ವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್ ಅಧ್ಯಕ್ಷತೆ ವಹಿಸಿದ್ದರು.



ಸಂಗೀತ ಸಮಾರಾಧನೆ:

ಆರಾಧನಾ ಮಹೋತ್ಸವದ  ಅಂಗವಾಗಿ ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ಹರಿದಾಸರ ದೇವರನಾಮ ಗೋಷ್ಠಿ , ಹಿರಿಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಗಾಯನ, ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್ ನೇತೃತ್ವದಲ್ಲಿ ಶ್ರೀ ಪುರಂದರದಾಸರ ನವರತ್ನ ಮಾಲಿಕೆ, ತ್ಯಾಗರಾಜರ ಪಂಚರತ್ನ ಕೃತಿಗಳ  ಗೋಷ್ಠಿ ಗಾಯನ ನೆರವೇರಿತು. ಹಿರಿಯ ಗಾಯಕರು, ವಿದ್ವಾಂಸರು ಕೃತಿಗಳನ್ನು ಹಾಡಿ ಧನ್ಯತೆ ಮೆರೆದರು. ವಿದ್ವಾನ್ ಮೈಸೂರು ಸಂಜೀವ್ ಕುಮಾರ್ (ವಯೋಲಿನ್) ವಿದ್ವಾನ್ ಮೈಸೂರು ಪಿ.ಎಸ್. ಶ್ರೀಧರ್ (ಮೃದಂಗ) ಮತ್ತು ಪಂಡಿತ್ ಗುರುಮೂರ್ತಿ ವೈದ್ಯ (ತಬಲಾ) ಸಹಕಾರ ನೀಡಿದ್ದು ವಿಶೇಷವಾಗಿತ್ತು.



ಸಂಕೀರ್ತನ ಉತ್ಸವ:

ಭಾನುವಾರ ಬೆಳಗ್ಗೆ 7.30 ಕ್ಕೆ ಗೋವರ್ಧನ ಗಿರಿಯ ಶ್ರೀ ಕೃಷ್ಣ ದೇವರಿಗೆ ದೇವರನಾಮಗಳ ಸಂಕೀರ್ತನ ಉತ್ಸವ  ವಿಶೇಷವಾಗಿ ಸಮರ್ಪಣೆಯಾಯಿತು. ವಿದ್ಯಾರ್ಥಿಗಳು, ದೇವರನಾಮ ಉಚಿತ ಶಿಬಿರದ ಶಿಬಿರಾರ್ಥಿಗಳು ಭಾಗವಹಿಸಿದ್ದರು.

 


ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ಭಾನುವಾರ ಬಸವನಗುಡಿ ಪುತ್ತಿಗೆ ಮಠದಲ್ಲಿ ಹಮ್ಮಿಕೊಂಡಿದ್ದ ಸಂತ ಶ್ರೀ ತ್ಯಾಗರಾಜ ಸ್ವಾಮಿಗಳ ಮತ್ತು ಶ್ರೀ ಪುರಂದರದಾಸರ ಆರಾಧನಾ ಸಂಗೀತೋತ್ಸವದಲ್ಲಿ ಹಿರಿಯ ಮೃದಂಗ ವಿದ್ವಾಂಸ ಎಚ್.ಎಸ್. ಸುಧೀಂದ್ರ, ಖ್ಯಾತ ತಬಲಾ ವಾದಕ ಪಂಡಿತ್ ಗುರುಮೂರ್ತಿ ವೈದ್ಯ, ಪಂಡಿತ ಪವಮಾನಾಚಾರ್ಯ ಕಲ್ಲಾಪುರ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್, ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ, ಎಂ.ಆರ್. ವಿ. ಪ್ರಸಾದ್, ವಸುಮತಿ ಭಟ್, ಸುಬ್ಬುಕೃಷ್ಣ ಇತರರು ಇದ್ದರು.



ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಸಂತ ಶ್ರೀ ತ್ಯಾಗರಾಜ ಸ್ವಾಮಿಗಳ ಮತ್ತು ಶ್ರೀ ಪುರಂದರದಾಸರ ಆರಾಧನಾ ಸಂಗೀತೋತ್ಸವದಲ್ಲಿ ಹರಿದಾಸರ ಪ್ರಚಲಿತ ದೇವರನಾಮಗಳ ಪುಸ್ತಕ ‘ಭಕ್ತಿ ಸನ್ನುತಿ- ಭಾಗ 2’ ನ್ನು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.  ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್,   ಎಂ.ಆರ್. ವಿ. ಪ್ರಸಾದ್, ವಿದ್ವಾನ್ ಸುಧೀಂದ್ರ, ವಸುಮತಿ ಭಟ್, ಸುಬ್ಬುಕೃಷ್ಣ ಹಾಜರಿದ್ದರು.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top