ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯನ್ನು ಜಗತ್ತೇ ಹುಬ್ಬೇರಿಸಿ ನೋಡಿತು. ದೇಶಾದ್ಯಂತದ ಜನ ಸಾಗರೋಪಾದಿಯಲ್ಲಿ ಅಯೋಧ್ಯೆಯತ್ತ ಧಾವಿಸುತ್ತಿರಬೇಕಾದರೆ ಅಯೋಧ್ಯಾವಾಸಿಗಳ ಸಂಭ್ರಮ ಹೇಗಿರಬೇಡ? ಹೇಳಿ. ರೈಲು ಬಸ್ಸು ವಿಮಾನ ಹೀಗೆ ಅಯೋಧ್ಯೆಯತ್ತ ಮಾಡಿರುವ ಎಲ್ಲ ಸಾರಿಗೆ ವ್ಯವಸ್ಥೆಗಳೂ ಫುಲ್ ಫುಲ್ ಫುಲ್.
ಹೀಗೆ ಆಗಮಿಸುತ್ತಿರುವ ದೊಡ್ಡ ಸಂಖ್ಯೆಯ ರಾಮಭಕ್ತರಿಗೆ ಮಂದಿರ ಟ್ರಸ್ಟ್ ಒಳ್ಳೆಯ ರೀತಿಯಲ್ಲಿ ರಾಮನ ದರ್ಶನ ಮಾಡಿಸಲು ಎಲ್ಲ ರೀತಿಯ ಶ್ರಮ, ಆಸ್ಥೆ ವಹಿಸುತ್ತಿದೆ. ಅಲ್ಲಲ್ಲಿ ಭಕ್ತರಿಗೆ ತುರ್ತು ಉಚಿತ ಆರೋಗ್ಯ ಸೇವಾ ಕೇಂದ್ರಗಳನ್ನೂ ಟ್ರಸ್ಟ್ ತೆರೆದಿದೆ. ಅಯೋಧ್ಯೆಯಲ್ಲೇ ಬೀಡು ಬಿಟ್ಟಿರುವ ಉತ್ತರ ಪ್ರದೇಶ ರಾಜ್ಯದ ಸಾವಿರಾರು ಪೋಲಿಸರು ನಿಶಿ ಹಗಲೆನ್ನದೇ ಕಣ್ಣಿಗೆ ಎಣ್ಣೆ ಹಚ್ಚಿಕೊಂಡವರಂತೆ ನಿದ್ರೆ ನೀರಡಿಕೆ ಕೊರೆಯುವ ಚಳಿ ಲೆಕ್ಕಿಸದೇ ಸುಸೂತ್ರ ಸುರಕ್ಷಿತ ವ್ಯವಸ್ಥೆ ಮತ್ತು ಕಿಂಚಿತ್ತೂ ಶಾಂತಿಗೆ ಭಂಗ ಬರದಂತೆ ಎಚ್ಚರಿಕೆ ವಹಿಸಿ ಶ್ರಮಿಸುತ್ತಿರುವುದನ್ನು ಬಣ್ಣಿಸಲು ಶಬ್ದಗಳೇ ಸಾಲದು.
ಇತ್ತ ಕಡೆ ಅಯೋಧ್ಯೆಯಲ್ಲಿ ಹತ್ತಾರು ಸಾಧು ಸಂತರ ಆಶ್ರಮಗಳು, ಧಾರ್ಮಿಕ ಸೇವಾ ಟ್ರಸ್ಟ್ ಗಳು ಹಾಗೂ ಕೆಲವಡೆ ಅಯೋಧ್ಯೆಯ ನಿವಾಸಿಗಳಾದ ಯುವಕರು, ಶ್ರದ್ಧಾಳುಗಳು ತಮ್ಮದೇ ತಂಡಗಳನ್ನು ರಚಿಸಿಕೊಂಡು ಅಸಂಖ್ಯ ರಾಮಭಕ್ತರ ಹೊಟ್ಟೆ ತಣಿಸುವ ಕೆಲಸ ಮಾಡಿ ಧನ್ಯತೆ ಅನುಭವಿಸುತ್ತಿದ್ದಾರೆ. ಅಯೋಧ್ಯೆಯ ಮುಖ್ಯ ರಸ್ತೆಗಳಲ್ಲಿ ಅನೇಕ ಕಡೆಗಳಲ್ಲಿ ಇವರೆಲ್ಲ ಭಕ್ತರಿಗೆ ಬೆಳಿಗ್ಗೆ ಬಿಸಿ ಬಿಸಿ ಚಹಾ ಕಾಫಿ ಹಾಲು ಉಪ್ಪಿಟ್ಟು ಅವಲಕ್ಕಿ ಮಧ್ಯಾಹ್ನ ಊಟ, ರಾತ್ರಿ ಚಪಾತಿ ಬಾಜಿ, ಅನ್ನ ಸಾಂಬಾರು, ರೈಸ್ ಬಾತ್ ಹೀಗೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ಯಾವುದೇ ಶುಲ್ಕವಿ ಲ್ಲದೇ ಉಚಿತವಾಗಿ ವಿತರಿಸುತ್ತಿರುವ ಸುಂದರ ದೃಶ್ಯಗಳು ಸಾಮಾನ್ಯವಾಗಿಬಿಟ್ಟಿದೆ.
ವಿತರಣೆಯಲ್ಲಿಯೂ ಯಾವುದೇ ಆತುರ, ಅವಸರಗಳಿಲ್ಲದೇ ಅಷ್ಟೇ ಸೌಜನ್ಯದಿಂದ ವಿತರಿಸುವುದು ಕಂಡಾಗ ಹೃದಯ ತುಂಬಿ ಬರುತ್ತದೆ. ತಮ್ಮ ಇಂಥಹ ಕೌಂಟರ್‌ಗಳ ಬಳಿಯಲ್ಲಿ ಚಿಕ್ಕ ಧ್ವನಿ ವರ್ಧಕಗಳನ್ನು ಅಳವಡಿಸಿ ಮತ್ತು ಬ್ಯಾನರ್‌ಗಳನ್ನು ಹಾಕಿ ಭಕ್ತರನ್ನು ಚಾ, ಕಾಫಿ, ಉಪಾಹಾರ ಊಟಗಳನ್ನು ಸ್ವೀಕರಿಸುವಂತೆ ಆಹ್ವಾನಿಸುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರ ಟ್ರಸ್ಟಿಗೂ ದೊಡ್ಡ ಪ್ರಮಾಣದಲ್ಲಿ ಭಕ್ತರು ಊಟೋಪಚಾರಗಳಿಗೆ ಬೇಕಾದ ಧವಸ ಧಾನ್ಯಗಳನ್ನು ಅರ್ಪಿಸುತ್ತಿದ್ದು ಟ್ರಸ್ಟ್ ವತಿಯಿಂದಲೂ ಭಕ್ತರಿಗೆ ಉಚಿತ ಊಟೋಪಚಾರದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಕರ್ನಾಟಕದಿಂದಲೂ ದಿವಂಗತ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಸ್ಥಾಪಿಸಿದ ಅದಮ್ಯ ಚೇತನ ಫೌಂಡೇಶನ್ ವತಿಯಿಂದಲೂ ಸಾಮಾಜಿಕ ಕಾರ್ಯಕರ್ತೆ ತೇಜಸ್ವಿನಿ ಅನಂತ್ ಕುಮಾರ್ ಅವರೂ ತಮ್ಮ ತಂಡದೊಂದಿಗೆ ಅಯೋಧ್ಯೆಯಲ್ಲಿಯೇ ಬೀಡು ಬಿಟ್ಟಿದ್ದು ನಿತ್ಯ ಸಾವಿರಾರು ಜನರಿಗೆ ಉಪಾಹಾರ ಎರಡು ಹೊತ್ತು ಊಟಗಳನ್ನು ಉಚಿತವಾಗಿ ವಿತರಿಸುವ ಮೂಲಕ ರಾಮಭಕ್ತರ ಸೇವಾಕಾರ್ಯದಲ್ಲಿ ನಿರತರಾಗಿದ್ದಾರೆ. ಅಂತೂ ರಾಮನ ಪ್ರತಿಷ್ಠಾಪನೆಯಿಂದ ಅಯೋಧ್ಯೆಯಲ್ಲಿ ರಾಮಭಕ್ತರ ಸಂಭ್ರಮ ಸಡಗರಗಳಿಗೆ ಪಾರವೇ ಇಲ್ಲ ಎಂಬಂತಾಗಿದೆ.
-ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


