• ಟಿ.ದೇವಿದಾಸ್
ಸಾಹಿತ್ಯದ ಓದಿನಿಂದ ನಮ್ಮ ಮಕ್ಕಳ ಒಟ್ಟೂ ವರ್ತನೆಯಲ್ಲಿ ಏನಾದರೂ ಒಂದು ಮುಖ್ಯ ಬದಲಾವಣೆ ಆಗುವುದೇ ಆದರೆ, ಸೌಜನ್ಯದ ಭಾಷೆ ಅವರಲ್ಲಿ ಹುಟ್ಟುವುದು. ಮಾತಿಗೆ ಒಲಿಸಿಕೊಳ್ಳುವ ಯುಕ್ತಿ ಮತ್ತು ಶಕ್ತಿ ಇದೆಯೆಂಬುದು ಅರಿವಾಗುವುದು ಸಾಹಿತ್ಯದ ಅಧ್ಯಯನದಿಂದ! ಅಷ್ಟೇ ಅಲ್ಲ, ನಿಜವನ್ನೇ ಹೇಳಬೇಕು, ಕೇಳಿದ್ದೂ ಕೂಡ ನಿಜವಿರಬಹುದೇ ಎಂದು ಆಳವಾಗಿ ನಮಗೆ ನಾವೇ ಕೇಳಿಕೊಳ್ಳುವ ಶಕ್ತಿಯನ್ನು ಸಾಹಿತ್ಯದ ಅಧ್ಯಯನ ನಮಗೆ ಕೊಡುತ್ತದೆ. ಆಡುವ ಮಾತಿನಲ್ಲಿ ಯಾವುದು ಸತ್ಯ, ಯಾವುದು ಅಸತ್ಯ, ಮಾತಿನ ಸ್ವರೂಪದ ವಿನ್ಯಾಸವನ್ನೂ, ಆಕೃತಿಯನ್ನೂ ವಿಂಗಡಿಸಿ ಸ್ವ ಅರಿವಿನ ಮೂಲಕ ಅರ್ಥಮಾಡಿಕೊಳ್ಳುವ ಶಕ್ತಿ ನಮ್ಮೊಳಗೇ ಹುಟ್ಟುವಂತೆ ಮಾಡುವ ಶಕ್ತಿ ಸಾಹಿತ್ಯದ ಅಧ್ಯಯನಕ್ಕಿದೆ. ಮಾತು ಕಡಿಮೆಯಾದಂತೆ ಮಾತಿನ ಶಕ್ತಿ ಹೆಚ್ಚುತ್ತದೆ. ಮಾತು ಕಡಿಮೆಯಾದಂತೆ ಅದಕ್ಕೆ ಮಂತ್ರದ ಗುಣ ಬರುತ್ತೆ ಎನ್ನುತ್ತಾರೆ ಯು.ಆರ್.ಅನಂತಮೂರ್ತಿ. ಸಾಹಿತ್ಯದ ಅಭ್ಯಾಸದಿಂದ ಪಡೆಯಬಹುದಾದ ಕೆಲವು ಗುಣಗಳನ್ನು ಡಿವಿಜಿ ಹೀಗೆ ಸೂಚಿಸುತ್ತಾರೆ: ಮೊದಲನೆಯದು; ಯುಕ್ತಾಯುಕ್ತ ವಿವೇಚನೆ, ಎರಡನೆಯದು; ತಾರತಮ್ಯ ಗಣನೆ. ತಾರತಮ್ಯ ಗಣನೆ ಎಂದರೆ, ಬಹುದೊಡ್ಡ ದನಿಯಲ್ಲಿ ಎಲ್ಲರನ್ನೂ ಹೊಗಳಿದರೆ ಅದು ಹೊಗಳಿದಂತೆಯೂ ಆಗುವುದಿಲ್ಲ, ಅಷ್ಟೇ ಅಲ್ಲ ಅದು ಬೈಗುಳದಲ್ಲೂ ನಿಜವೆನಿಸುವಷ್ಟು ಅದು ನಿಜವಾಗಿ ಬಿಡುತ್ತದೆ ಎಂದು ಯು.ಆರ್.ಅನಂತಮೂರ್ತಿ ವಿಶ್ಲೇಷಿಸುತ್ತಾರೆ.
ಮುಂದುವರೆದು ಅವರು ಡಿವಿಜಿಯವರ ಸಾಹಿತ್ಯದ ಅಧ್ಯಯನದಿಂದ ಕಾಣುವ ಇನ್ನೊಂದು ಪ್ರಯೋಜನ- ಪರೇಂಗಿತಂ ಪರಿಜ್ಞಾನ. ನನಗೇನು ಸಿಗುತ್ತದೆ ಎಂದು ತಿಳಿದರೆ ಮಾತ್ರ ಸಾಲದು ನಿಮಗೇನು ಅನ್ನಿಸುತ್ತದೆ ಎಂದು ಗೊತ್ತಾಗಬೇಕು. ಇದು ನನಗೆ ಬಹುಮುಖ್ಯ ಅನಿಸುತ್ತದೆ. ಈ ಪರೇಂಗಿತ ಪರಿಜ್ಞಾನದಿಂದ ನಮ್ಮ ಬೌದ್ಧಿಕ ವೈಚಾರಿಕ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಪರಿಧಿಯ ವ್ಯಾಪ್ತಿ ವಿಸ್ತಾರವಾಗುತ್ತ ಬೆಳೆಯುತ್ತದೆ. ಇದು ವಸುಧೈವ ಕುಟುಂಬಕಂ ಎಂಬ ವಿಶಾಲ ಮತ್ತು ಶ್ರೇಷ್ಠವಾದ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರಜ್ಞೆಯ ನೆಲೆಗೆ ಸಮವಾಗುತ್ತದೆ. ಜಗತ್ತಿನ ಯಾವ ಸಾಹಿತ್ಯವನ್ನೂ ಓದಬಹುದು. ಆಗ ಮನುಷ್ಯ ಸಂಕುಲದ ದೃಷ್ಟಿ ವಿಶಾಲವಾಗುತ್ತ ಈ ಭೂಮಿಯ ಮೇಲಿರುವ ಜೀವಿಗಳ ವಿಸ್ತಾರ ಜಾತಿ ಮತ ಧರ್ಮ ಪಂಥ ಗಡಿಗಳನ್ನು ಎಲ್ಲೆಯನ್ನು ಮೀರಿ ನಿಲ್ಲುತ್ತದೆ. ಸಮಷ್ಡಿಯ ಪ್ರಜ್ಞೆ ಹುಟ್ಡುವುದು ಹೀಗೆಯೇ. ಮಹಾಭಾರತದಲ್ಲಿ ಬರುವ ಭಗವದ್ಗೀತೆಯನ್ನು ಜಗತ್ತಿನ ಯಾರೂ ಓದಬಹುದು. ಅದರಲ್ಲಿರುವ ಘನ ನೈತಿಕ ಮೌಲ್ಯಗಳು ನಮ್ಮ ಬೌದ್ಧಿಕ ಅರಿವಿನ ವಿಸ್ತಾರವನ್ನು ಹೆಚ್ಚಿಸುತ್ತದೆ. ಶಾಸ್ತ್ರೀಯವಾಗಿ, ಮನಃಶಾಸ್ತ್ರೀಯವಾಗಿ, ತತ್ತ್ವಶಾಸ್ತ್ರದ ಹಿನ್ನೆಲೆಯಲ್ಲಿ ಓದಿದರೂ ಭಗವದ್ಗೀತೆ ಹೇಳುವ ಸತ್ಯಗಳು ಮನುಷ್ಯ ಸಂಕುಲದ ಬದುಕಿಗೆ ಬೇಕಾದ ಮೌಲ್ಯಗಳೇ ಆಗಿವೆ. ಯಾವ ಮತೀಯ ಪಠ್ಯದಲ್ಲೂ ಇಲ್ಲದ ಸತ್ಯಗಳನ್ನು ಭಗವದ್ಗೀತೆಯಲ್ಲಿ ಕಾಣಬಹುದು. ಹಾಗೆಯೇ ಭಾರತ ನೆಲದ ಇತಿಹಾಸ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತಗಳಲ್ಲೂ ಇದು ಘನೀಕರಿಸಿದೆ.
ಯಾವ ಸಾಹಿತ್ಯವು ಸಹಿತವನ್ನು ಬಯಸುತ್ತದೋ ಅದು ನಮ್ಮ ಭಾವಪ್ರಪಂಚವನ್ನು ವಿಸ್ತರಿಸುತ್ತದೆ. ಕೇವಲ ನೀತಿಬೋಧನೆ ಮಾತ್ರ ಸಾಹಿತ್ಯದ ಕಲಿಕೆಯ ಉದ್ದೇಶವಲ್ಲ. ಭಾವಪ್ರಪಂಚವನ್ನು ವಿಸ್ತರಿಸುತ್ತ ನಮ್ಮ ಒಳಜಗತ್ತಿನ ಕಲ್ಪನೆಯ ಶಕ್ತಿಯನ್ನೂ ವಿಸ್ತರಿಸುತ್ತ ಬೆಳೆಸುತ್ತದೆ. ಅರಿವು ಮತ್ತು ಸುಖವನ್ನು ಒಟ್ಟಾಗಿ ತರಬಲ್ಲ ದೊಡ್ಡಶಕ್ತಿ ಸಾಹಿತ್ಯಕ್ಕಿದೆ. ಈ ದೃಷ್ಟಿಯಿಂದ ಸಾಹಿತ್ಯದ ಅಧ್ಯಯನ ನಮ್ಮ ಮಕ್ಕಳ ಕಲಿಕೆಯಲ್ಲಿ ಬಾಲ್ಯದಿಂದಲೇ ಆಗಬೇಕು. ಮುಖ್ಯವಾಗಿ ರಾಮಾಯಣ ಮಹಾಭಾರತಗಳು ನಮ್ಮ ಮಕ್ಕಳಿಗೆ ಪಠ್ಯಗಳಾಗಿ ಓದುವಂತಾಗಬೇಕು. ಅವು ಹೇಳುವ ಜೀವನಮೌಲ್ಯಗಳನ್ನು ಎಳವೆಯಿಂದಲೇ ಬದುಕಿನಲ್ಲಿ ರೂಢಿಸಿಕೊಳ್ಳುವ ಹಾಗೆ ಬೋಧನೆಯೂ ಆಗಬೇಕು. ಅಂಥ ಬೋಧನೆಯು ರಚನಾತ್ಮಕವಾಗಿಯೂ ಇರಬೇಕು.
ಸಾಹಿತ್ಯವು ಅಭಿವ್ಯಕ್ತಗೊಳ್ಳುವುದು ಭಾಷೆಯ ಮುಖಾಂತವೇ ಹೌದಾದರೂ ಭಾಷೆ ಪ್ರಧಾನ ಅಂತ ಅನಿಸುವುದೇ ಇಲ್ಲ. ಉದಾಹರಣೆಗೆ, ಎಲ್ಲರಿಗೂ ಅರ್ಥವಾಗುವ ಭಾಷೆಯೆಂದರೆ, ರಾಮಾಯಣ ಮತ್ತು ಮಹಾಭಾರತ. ಎ.ಕೆ.ರಾಮಾನುಜನ್ ಹೇಳಿದ ಒಂದು ಜನಪದ ರಾಮಾಯಣದಲ್ಲಿ, ಸೀತೆ ರಾಮನ ಹತ್ತಿರ ನಾನೂ ಕಾಡಿಗೆ ಬರ್ತೇನೆ ಅಂತಾಳೆ. ಆಗ ರಾಮ, ನೀನು ರಾಜಕುಮಾರಿ, ಕಾಡಿಗೆ ಬರಕೂಡದು ಅಂತಾನೆ. ಜನಪದದ ಸೀತೆ ರಾಮನಲ್ಲಿ ಹೀಗೆ ಹೇಳ್ತಾಳೆ: ನಾನು ಕೇಳಿದ ಎಲ್ಲ ರಾಮಾಯಣಗಳಲ್ಲೂ ಸೀತೆ ಕಾಡಿಗೆ ಹೋಗ್ತಾಳೆ. ನಾನು ಯಾಕೆ ಕಾಡಿಗೆ ಬರಕೂಡದು? ಎಂದು ವಾದಿಸ್ತಾಳೆ. ಇದನ್ನು ಸಾಹಿತ್ಯದಲ್ಲಿ ಅಂತರ್ ಪಠ್ಯ ಅಂತಾರೆ. ಓದು ಬರದ ಸೀತೆಗೂ ವಾಲ್ಮೀಕಿ ರಾಮಾಯಣ ಗೊತ್ತು. ಜಗತ್ತಿನ ಬೇರೆ ಇತಿಹಾಸ ಕಾವ್ಯಗಳನ್ನು ಓದಿದರೆ ಉಂಟು, ಇಲ್ಲ ಅಂದರೆ ಇಲ್ಲ. ಆದರೆ, ನಮಗೆ ರಾಮಾಯಣವನ್ನು ಓದದೆಯೂ ಗೊತ್ತಿರುತ್ತದೆ. ಹೀಗಾಗಿ ನಮ್ಮ ಇತಿಹಾಸ ಮಹಾಕಾವ್ಯಗಳು ಸಾಹಿತ್ಯದ ಪಠ್ಯಗಳೂ ಅಹುದು, ಧಾರ್ಮಿಕ ಪಠ್ಯಗಳೂ ಅಹುದು. ಹೀಗೆ ಧಾರ್ಮಿಕ ಪಠ್ಯಗಳು ಸಾಹಿತ್ಯದ ಪಠ್ಯಗಳೂ ಆಗಿರುವುದು ಜಗತ್ತಿನ ಯಾವ ಮತಧರ್ಮದಲ್ಲೂ ಇಲ್ಲ!
ಸಾಹಿತ್ಯದ ತಾಕತ್ತು ಇರುವುದೇ ಇಲ್ಲಿ: ಅದು ಬದುಕಿನ ಸೂಕ್ಷ್ಮಗಳನ್ನು ಹುಡುಕುವುದಕ್ಕೆ ಪ್ರೇರಣೆಯಾಗುತ್ತದೆ. ನಿಗೂಢಗಳನ್ನು ಶೋಧಿಸಲು ಸಹಾಯ ಮಾಡುತ್ತದೆ. ಬದುಕನ್ನು ಸಮೃದ್ಧಗೊಳಿಸುವ, ಸದೃಢಗೊಳಿಸುವ ಶಕ್ತಿ ಸಾಹಿತ್ಯದ ಅಧ್ಯಯನದಲ್ಲಿದೆ.
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ।
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ॥೨೨॥
ಮನುಷ್ಯ ಹಳೆಯ ಬಟ್ಟೆಬರೆಗಳನ್ನು ಬಿಸುಟು ಬೇರೆ ಹೊಸತಾದುದ್ದನ್ನು ಉಡುತ್ತಾನೆ. ಹಾಗೆಯೇ ಜೀವವು ಒಂದು ದೇಹವನ್ನು ಬಿಟ್ಟು ಬೇರೆ ಹೊಸ ದೇಹವನ್ನು ಪಡೆಯುತ್ತದೆ. ನಾವು ಉಟ್ಟ ಬಟ್ಟೆ ಹಳೆಯದಾದಾಗ ಹೇಗೆ ಅದನ್ನು ಬದಲಿಸುತ್ತೇವೆಯೋ-ಹಾಗೆಯೇ ಜೀವ ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಪಡೆಯುತ್ತದೆ. ಇಲ್ಲಿ ಒಂದು ವಿಶೇಷವೆಂದರೆ ಹೇಗೆ ತಾಯಿ ತನ್ನ ಮಗುವಿಗೆ ತನ್ನಿಚ್ಚೆಯಂತೆ ಬಟ್ಟೆ ಬದಲಿಸುತ್ತಾಳೋ ಹಾಗೆ ಭಗವಂತ ಜೀವದ ದೇಹ ಬದಲಿಸುತ್ತಾನೆ. ಜೀವನಿಗೆ ಸ್ವತಃ ದೇಹ ಬದಲಿಸುವ ಸ್ವಾತಂತ್ರ್ಯ ಇರುವುದಿಲ್ಲ. ಇದಕ್ಕೆ ಒಂದು ಅಪವಾದ ಎಂದರೆ ಆತ್ಮ ಸಾಕ್ಷಾತ್ಕಾರವಾದ ಯೋಗಿಗಳು. ಅವರು ಭಗವಂತನ ಅನುಗ್ರಹದಿಂದ ಸ್ವ ಇಚ್ಚೆಯಂತೆ ದೇಹ ಬದಲಿಸುವ ಶಕ್ತಿಯನ್ನು ಪಡೆದಿರುತ್ತಾರೆ. [ಈ ಬಗ್ಗೆ ಸ್ವಾಮಿರಾಮ್ ಅವರು ಬರೆದಿರುವ Living with Himalayan Masters ಎನ್ನುವ ಪುಸ್ತಕದಲ್ಲಿ ಅನೇಕ ನೈಜ ದೃಷ್ಟಾಂತಗಳನ್ನು ಕಾಣಬಹುದು.] ಇಂತಹ ಮಹಾನ್ ಯೋಗಿಗಳನ್ನು ಬಿಟ್ಟರೆ ಇತರರಿಗೆ ಸ್ವಇಚ್ಛೆಯಂತೆ ದೇಹ ಬದಲಿಸುವ ಸ್ವಾತಂತ್ರ್ಯ ಇರುವುದಿಲ್ಲ. ಆದ್ದರಿಂದ ಭೌತಿಕವಾಗಿ ಹುಟ್ಟು-ಸಾವು ಎಂದರೆ ಉಟ್ಟ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಡಿಸಿದಂತೆ. ಸ್ವರೂಪತಃ ಜೀವಕ್ಕೆ ಎಂದೂ ಹುಟ್ಟು-ಸಾವು ಅನ್ನುವುದಿಲ್ಲ ಹಾಗೂ ಹೊಸ ಶರೀರದಿಂದ ಅದರ ಮೂಲಸ್ವಭಾವ ಬದಲಾಗುವುದಿಲ್ಲ. ಇದೊಂದು ಕಲ್ಪನೆಗೋ, ಅರಿವಿನ ವ್ಯಾಪ್ತಿಗೋ ಸಿಗದ ಪಾರಮಾರ್ಥಿಕವಾದ ಚಿಂತನೆ.
ಭಗವದ್ಗೀತೆಯ ಈ ಉಕ್ತಿಯನ್ನು ಓದು ಬರೆಹ ಬಾರದವರಿಗೂ ಅರ್ಥವಾಗುವಂತೆ ಬೇಂದ್ರೆಯವರು ಹೀಗೆ ಹೇಳುತ್ತಾರೆ: ಉಟ್ಟು ಬಟ್ಟೆಯ ಬಿಟ್ಟು ಇನ್ನೊಂದು ತೊಟ್ಟ ಹಾಗೆ. ಸಾಹಿತ್ಯದ ಪರಿಭಾಷೆ ಗೆಲ್ಲುವುದೇ ಇಂಥ ವಿಶ್ಲೇಷಣೆಯಲ್ಲಿ. ಬದುಕಲ್ಲಿ ಸಾವು ನಿಶ್ಚಿತ. ಹುಟ್ಟಿದ ಎಲ್ಲ ಜೀವಗಳೂ ಸಾಯಲೇಬೇಕೆಂಬುದು ಸತ್ಯ. ಮತ್ತು ಅದು ನೈಸರ್ಗಿಕವಾದ ನಿಯಮ. ಸತ್ತವರು ಮತ್ತೆ ಹುಟ್ಟುತ್ತಾರೆ ಎಂಬುದು ಕಲ್ಪನೆ. ಈ ಕಲ್ಪನೆಯಲ್ಲೂ ಬದುಕಿಗೆ ಬೇಕಾದ ಒಂದು ಭರವಸೆಯಿದೆ. ಹೀಗೆ ಬದುಕಿಗೆ ಬೇಕಾದ ಭರವಸೆಯನ್ನು ಸಾಹಿತ್ಯವು ಕೊಡುತ್ತದೆ. ಸಾಹಿತ್ಯವು ಬದುಕಿನ ಗತಿಬಿಂಬಕ್ಕೆ ಶ್ರೋತೃವನ್ನು ಕರೆದೊಯ್ಯುವುದು ಅಂದರೆ ಇದೇ ಇರಬೇಕು. ಬದುಕು ಭಾವ ಭಾಷೆಯನ್ನು ಸಂಸ್ಕಾರಗೊಳಿಸುವ ಸಾಮರ್ಥ್ಯ ಸಾಹಿತ್ಯದ ಅಧ್ಯಯನಕ್ಕಿದೆ.
ಸಾಹಿತ್ಯವು ಸತ್ಯ ಮತ್ತು ಸೌಂದರ್ಯದ ಸಮಾವೇಶ. ಬಾಳಿನ ಒಳನೋಟಗಳು, ಕಠೋರ ವಾಸ್ತವತೆಯ ದರ್ಶನ, ಭವಿಷ್ಯದ ಬದುಕಿನ ಹೊಳಹು, ವ್ಯಕ್ತಿಗೆ ದೊರೆಯುವುದು ಸಾಹಿತ್ಯದ ಅಧ್ಯಯನದಿಂದ. ಮಾತೃಭಾಷಾ ಭೋಧನೆ ಮಕ್ಕಳಿಗೆ ಸಾಹಿತ್ಯದ ಲೋಕವನ್ನು ಪರಿಚಯಿಸುತ್ತದೆ. ಸಾಹಿತ್ಯದ ಆಸಕ್ತಿ ಹೆಚ್ಚುತ್ತದೆ. ಬದುಕಿನ ಅನ್ವೇಷಣೆಯ ದಿಕ್ಕನ್ನು ಹುಡುಕುವ ಪ್ರವೃತ್ತಿಯನ್ನು ಬೆಳೆಸುತ್ತದೆ. ವಿರಾಮದ ಸದುಪಯೋಗವನ್ನು ಕಲಿಸುತ್ತದೆ. ಮಾತಿನಲ್ಲಿ ಹದ, ಕೃತಿಯಲ್ಲಿ ಸೌಜನ್ಯ, ಚಿಂತನೆಯಲ್ಲಿ ವಿಭಿನ್ನತೆ, ಅಭಿವ್ಯಕ್ತಿಯಲ್ಲಿ ವಿಶಿಷ್ಟತೆ, ಸಮಷ್ಟಿಯ ದೃಷ್ಟಿ, ಜೀವ ಸಂಕುಲದ ಅಸ್ತಿತ್ವದಲ್ಲಿ, ಅಸ್ಮಿತೆಯಲ್ಲಿ ಸಮಗ್ರತೆಯ ಭಾವ ಹರಿದು ಬದುಕು ಮತ್ತು ಭಾವ ಸಂಸ್ಕಾರಗೊಳ್ಳುತ್ತದೆ. ವ್ಯಕ್ತಿತ್ವಗಳು ಪರಿಷ್ಕಾರಗೊಳ್ಳುತ್ತದೆ. ಉತ್ತಮ ಮೌಲ್ಯಗಳು ನಿರ್ಮಾಣಗೊಂಡು ಮಾದರಿ ವ್ಯಕ್ತಿತ್ವಗಳ ವರ್ಧನೆಯಾಗುತ್ತದೆ. ಮನುಷ್ಯ ಜೀವನದಲ್ಲಿ ರೂಪ ಸಾಮಂಜಸ್ಯ (symmetry of form) ಕ್ಕೆ ವಿಶಿಷ್ಟ ಸ್ಥಾನವಿದೆ. ಶಿಲ್ಪಿ ತನ್ನ ಕೆತ್ತನೆಗಳಲ್ಲಿ ಅರಳಿಸಿದಂತೆ, ಸಾಹಿತಿ ತನ್ನ ಕೃತಿಗಳಲ್ಲಿ ಅಭಿವ್ಯಕ್ತಿಸುತ್ತಾನೆ. ಹೀಗೆ ಸಾಹಿತ್ಯದ ನಿಜವಾದ ಅಧ್ಯಯನದಿಂದ ಪ್ರಜ್ಞೆಯ ನೆಲೆಗಳು ವಿಸ್ತಾರಗೊಳ್ಳುತ್ತದೆ. ಭಾವದ ಆಕೃತಿಗಳು ಮತ್ತಷ್ಟು ಸಂಸ್ಕಾರಗೊಳ್ಳುತ್ತ ಹೋಗುತ್ತವೆ. ಸಾಹಿತ್ಯದ ಅಧ್ಯಯನದ ಪರಿಣಾಮ ಮತ್ತು ಪ್ರಭಾವ ಎಂಬುವುದು ಅನುಭವಜನ್ಯವಾಗಬೇಕಾದ ಸತ್ಯ. ಓದಿಯೇ ಅನುಭವಿಸಬೇಕು, ಗಳಿಸಬೇಕು.
ಒಂದು ಕಾಲದಲ್ಲಿ ಸಾಹಿತ್ಯವನ್ನು ಭಾಷಾಬದ್ಧತೆಗಿಂತ ಹೆಚ್ಚಾಗಿ, ಭಾಷಾತೀತ ಗುಣಗಳಿಗಾಗಿ, ಮಾನವನನ್ನು ಮಾನವನನ್ನಾಗಿ ನೋಡುವ, ಅವನ ಅರಿವಿನ ಆಳ, ಹರವು, ಎತ್ತರವನ್ನು ಹೆಚ್ಚಿಸುವ, ವಿಶ್ವಮಾನ್ಯ, ವಿಶ್ವಸಾಮಾನ್ಯ ಗುಣಗಳಿಗಾಗಿ ಮೆಚ್ಚಿ, ಗರಿಮೆ, ಹಿರಿಮೆ ನಿರ್ಣಯಿಸುವ ಪರಿಪಾಠವಿತ್ತು. ಡಿವಿಜಿ, ಬೇಂದ್ರೆ, ಪುತಿನ ಆದಿಯಾಗಿ ಆ ಕಾಲದ ಮಾನದಂಡವಾಗಿತ್ತು. ಬರಬರುತ್ತ ಸಾಹಿತ್ಯವನ್ನು ಶೂದ್ರಪ್ರಜ್ಞೆ, ಬ್ರಾಹ್ಮಣಪ್ರಜ್ಞೆ, ದಲಿತಪ್ರಜ್ಞೆ, ಎಡಪಂಥೀಯ ಪ್ರಜ್ಞೆ- ಇತ್ಯಾದಿ ಕ್ಷುಲ್ಲಕ ನೆಲೆಗಳ ಪ್ರಜ್ಞೆಗಳು ಅಳೆದು ನೋಡುವ ಹೊಗಳುವ, ತೆಗಳುವ, ದಲಿತೀಕರಣ ಯುಗ ಆರಂಭವಾಯಿತು. ಅಲ್ಲಿಂದ ಮೇಲು-ಕೀಳು, ಶ್ರೇಷ್ಠ-ಕನಿಷ್ಟ, ಅಧಮ-ಉತ್ತಮ ಎಂಬ ವಿಂಗಡಣೆಯ ನಂಜು, ವಿಷ, ಹಾಲಾಹಲ ಸಾಹಿತ್ಯವನ್ನು ಸಾಯಿಸುತ್ತ ಸಾಗಿಬಂದುದನ್ನು ಕಾಣುತ್ತಲೇ ಇದ್ದೇವೆ. ಡಿವಿಜಿಯವರಿಗೆ ಶೇಕ್ಸಪಿಯರ್ ಪ್ರಿಯನಾದದ್ದು ಅವನ ಮತದಿಂದಲ್ಲ, ಬೇಂದ್ರೆಯವರಿಗೆ ಖಲೀಲ್ ಗಿಬ್ರಾನ್ ಪ್ರಿಯನಾದದ್ದು ಅವನು ಇಸ್ಲಾಂಗೆ ಸೇರಿದವನೆಂದಲ್ಲ, ಬಸವ, ಅಕ್ಕ, ಅಲ್ಲಮ ಮುಂತಾದ ಶರಣರು ಪ್ರಿಯರಾದದ್ದು ಲಿಂಗಾಯತ ಧರ್ಮದವರೆಂಬ ಕಾರಣಕ್ಕಲ್ಲ. ಕನಕ ಪುರಂದರರು ದೊಡ್ಡವರೆನಿಸುವುದು ಮಧ್ವಮತಕ್ಕಾಗಿಯಲ್ಲ. ವೇದೋಪನಿಷತ್ತುಗಳು ಪ್ರಿಯವಾಗುವುದು ಅವುಗಳ ದರ್ಶನಗಳಿಂದ! ವೇದಗಳನ್ನು ಗೀತೆಯನ್ನು ಉಪನಿಷತ್ತುಗಳನ್ನು ಸಂಸ್ಕೃತವನ್ನು ದ್ವೇಷಿಸುವವರಿಗೆ ಭಾರತೀಯತೆಯೂ ದ್ವೇಷದ ಉರಿಯಲ್ಲಿ ಬೀಳುವಂತಾಯಿತು. ಮನಸು ವಿಕ್ಷಿಪ್ತವಾದಂತೆ ಸಾಹಿತ್ಯದಲ್ಲಿ ಸೀಳು ಕಾಣುತ್ತ ಅದೇ ವಿಕಾರವಾಗಿ ಬೆಳೆಯಿತು. ಡಿವಿಜಿ ಕನ್ನಡ ಸಾಹಿತಿಯಲ್ಲ; ಅವರು ಸಂಸ್ಕೃತನಿಷ್ಠರು.
ಯಾಕೆಂದರೆ ಅವರು ವೇದ, ರಾಮಾಯಣ, ಭಾರತ, ಗೀತೆಗಳ ನೆರಳಲ್ಲಿ ಕೃಷ್ಣಪರೀಕ್ಷಣಂ, ರಾಮಪರೀಕ್ಷಣಂ, ಅಂತಃಅಪುರ ಗೀತೆಗಳು, ಈಶೋಪನಿಷತ್ತು, ಪುರುಷಸೂಕ್ತಗಳ ಅನುವಾದ್, ಗೀತೆಯ ಕುರಿತು ಗ್ರಂಥ ಬರೆದರು. ಕನ್ನಡದಲ್ಲಿ ಬರೆದುದು ಮಂಕುತಿಮ್ಮನ ಕಗ್ಗ, ಮರುಳು ಮುನಿಯನ ಕಗ್ಗ ಇಂಥವು, ಪತ್ರಿಕೋದ್ಯಮ ಪ್ರಕಟನೆಗಳು, ಜೀವನಚರಿತ್ರೆ, ನೆನಪಿನ ಚಿತ್ರಶಾಲೆ ಇವುಗಳಲೆಲ್ಲ ಬ್ರಾಹ್ಮಣಪ್ರಜ್ಞೆಯೇ ಎದ್ದು ಕಾಣುತ್ತದೆ ಎಂದು ನಿರ್ಣಯಿಸಿದರೆ ಡಿವಿಜಿ ಅರ್ಥವಾಗುವುದಿಲ್ಲ. ಈ ಮಾತು ತೀನಂಶ್ರೀ. ಕೃಷ್ಣಶಾಸ್ತ್ರೀ, ರಾಜರತ್ನಂ ಅಂಥವರಿಗೂ ಅನ್ವಯಿಸುತ್ತದೆ. ಸ್ವಪ್ರಜ್ಞೆ ಮತ್ತು ಸ್ವದರ್ಶನದಿಂದ ಬರೆಯುವವನು ಮಾತ್ರ ಸಾಹಿತಿ. ಆಗ ಮಾತ್ರ ಮನುಷ್ಯ ಜಾತಿ ತಾನೊಂದೆ ವಲಂ ಎಂಬುದು ಮುಖ್ಯವಾಗುತ್ತದೆಯೇ ವಿನಾ ಜಾತಿ, ಮತ, ಪಂಥ, ಸಿದ್ಧಾಂತ, ಇಸಂಗಳು ಮುಖ್ಯವಲ್ಲ. ಇಂಥವು ಇದ್ದಲ್ಲಿ ಹುಡುಕಿ ಅಧ್ಯಯನ ಮಾಡಬೇಕಾಗುತ್ತದೆ. ಹಿಂದೆಲ್ಲ ಕುಲ, ಜಾತಿ ಮತಗಳನ್ನು ಆಧರಿಸಿ ಯಾವ ಗ್ರಂಥವೂ ಖ್ಯಾತಿಯನ್ನು ಪಡೆಯಲಿಲ್ಲ. ಯಾವ ಗ್ರಂಥಕಾರನು ಜನಮನ್ನಣೆಯನ್ನು ಗಳಿಸಿದ್ದಲ್ಲ. ಅಂದರೆ ರಾಜಕೀಯ ಸಾಹಿತ್ಯದಲ್ಲಿ ಇರಲಿಲ್ಲ. ಅವರವರ ಪ್ರಜ್ಞೆ ಮತ್ತು ದರ್ಶನ ಮುಖ್ಯವಾಗಿಯೇ ಅವರವರು ಜನಪ್ರೀತಿಯನ್ನು ಗಳಿಸಿದರು.
ವಿಕೃತ ವಿಮರ್ಶೆ, ಜಾತಿಪ್ರಾಧಾನ್ಯ, ಪಂಥೀಯ ಪ್ರಜ್ಞೆ, ಸಮಾಜವಾದ, ಉದಾರವಾದ ರಾಜಕೀಯ ಅಜೆಂಡಾಗಳು ಪ್ರವೃತ್ತಿಯಾಗಿ ಬೆಳೆಯುತ್ತ ಬಂದು ಪ್ರಶಸ್ತಿ ಕಿರೀಟ ಪದವಿ ಅಂತಸ್ತು ಸ್ಥಾನಮಾನದ ದುರಾಸೆಗೆ ಗಂಜಿ ಗಿರಾಕಿಗಳು ವಿಮರ್ಶಕರು, ಲೇಖಕರು ಮುಖ್ಯನೆಲೆಗೆ ಬಂದದ್ದು ಕನ್ನಡ ಭಾಷೆ ಮತ್ತು ಸಾಹಿತ್ಯದ ದುರಂತ! ಕನ್ನಡ ಸಾಹಿತ್ಯದ ದೃಷ್ಟಿಯನ್ನು ತಿರುಗಿಸಿ ಕನ್ನಡವನ್ನು ತ್ಯಜಿಸುವಂತೆ ಮಾಡಿದವರು ಯಾರು? ಯಾರನ್ನು ದೂರುತ್ತೀರಿ? ಮನುಷ್ಯ ಜಾತಿ ತಾನೊಂದೆ ವಲಂ ಎಂದು ಪಂಪ ಹೇಳಿದ್ದರ ಅರ್ಥ ಕಳ್ಳನೂ ಪೋಲಿಸನೂ ನ್ಯಾಯಾಧೀಶನೂ ವಂಚಕನೂ ಭಯೋತ್ಪಾದಕನೂ ಹಂತಕನೂ ಒಂದೇ ಎನ್ನುವ ಮೊಂಡು ಸಮತಾವಾದವೆ? ಧ್ಯೇಯ ಯಾವತ್ತೂ ಉನ್ನತವಾದುದೇ ಆಗಿರುತ್ತದೆ. ಆದರೆ, ವಾಸ್ತವ ಬೇರೆಯೇ ಆಗಿರುತ್ತದೆ. ಸಾಹಿತ್ಯದ ಓದು ಎಲ್ಲ ಬಗೆಯ ಕ್ಷುಲ್ಲಕ ಪ್ರಜ್ಞೆಗಳಿಂದ ನಮ್ಮ ಭಾವವನ್ನು ಕಾಪಿಡುತ್ತದೆ ಎಂಬುದು ಸತ್ಯವೇ ಆದರೂ ಅದಕ್ಕೂ ಅಪವಾದಗಳನ್ನು ನೋಡುವ ಕಾಲಘಟ್ಟ ಈ ಹಿಂದೆಯೂ ಇತ್ತು, ಈಗಲೂ ಇದೆ. ಗೀತೆಯನ್ನು ಡಿವಿಜಿ ಜೀವನಧರ್ಮ ಯೋಗ ಎಂದರು. ಗೀತೆಯನ್ನು ವಿಶ್ವಮಾನ್ಯ ಅಗ್ರಕಾವ್ಯ ಎಂದವನು ಗಯತೆ ಎನ್ನುವ ಜರ್ಮನ್ ಕವಿ. ಗೀತೆಯನ್ನು ಅವಮಾನಿಸಿದ ವಿಘಟನೆಗಳನ್ನು ಈ ನೆಲದಲ್ಲಿ ಸಾಕಷ್ಟು ನೋಡಿದ್ದೇವೆ. ಸಾಹಿತ್ಯವು ಮೌಲ್ಯಗಳಿಂದ ಉನ್ನತಿಗೇರಿದ್ದನ್ನು ಕಂಡಂತೆ ಅವನತಿಗಿಳಿಸಿದ್ದನ್ನೂ ಕಂಡಿದ್ದೇವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ