ಉಡುಪಿ: ಅಯೋಧ್ಯೆ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ಜನವರಿ 22 ರಂದು ಆಗಮೋಕ್ತ ವಿಧಿ ವಿಧಾನ ಪೂರ್ವಕ ಶ್ರೀರಾಮನ ನೂತನ ಶಿಲಾ ಬಿಂಬಕ್ಕೆ ಪ್ರಾಣ ಪ್ರತಿಷ್ಠೆ ನೆರವೇರಲಿದೆ.
ಮರುದಿನ ಜನವರಿ 23 ರಿಂದ ಮಂದಿರದ ಟ್ರಸ್ಟಿಗಳಾಗಿರುವ ಶ್ರೀಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ 48 ದಿನಗಳ ಕಾಲ ಮಂಡಲೋತ್ಸವವು ನಡೆಯಲಿದೆ. ಪ್ರತಿನಿತ್ಯ ವೈದಿಕರಿಂದ ವಿವಿಧ ಹೋಮಹವನಗಳು ಜಪಾನುಷ್ಠಾನ ಪೂರ್ವಕ ಕಲಶಾಭಿಷೇಕಗಳು ನೆರವೇರಲಿವೆ. ರಾಷ್ಟ್ರ ಪುರುಷ, ಪ್ರಜಾಹಿತರತ ಶ್ರೀ ರಾಮನಿಗೆ ಪ್ರಿಯವಾಗುವಂತೆ ಕಲಶ ಪೂಜೆ ನೆರವೇರಿಸಲು ಶ್ರೀಗಳವರು ರಾಮರಾಜ್ಯದ ಕಲ್ಪನೆ ಅನುಸಾರ ಯೋಜನೆ ರೂಪಿಸಿದ್ದು ಅದರ ಸೇವಾದಾರರಾಗ ಬಯಸುವವರು ಪ್ರಸಕ್ತ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 2023 ರಿಂದ ಮೊದಲ್ಗೊಂಡು) ಗೃಹ ನಿರ್ಮಾಣ, ಶಿಕ್ಷಣ, ಆರೋಗ್ಯ, ಗೋಸೇವೆ ಹೀಗೆ ಬಡವರ, ಸಮಾಜೋನ್ನತಿಯ ಸತ್ಕಾರ್ಯಗಳನ್ನು ಕನಿಷ್ಠ 5 ಲಕ್ಷ ರೂ ವೆಚ್ಚದಲ್ಲಿ ನಡೆಸಿರಬೇಕು ಅಥವಾ ಅಂಥಹ ಕಾರ್ಯಗಳಲ್ಲಿ ನಿರತರಾಗಿರುವ ಸಂಸ್ಥೆಗಳಿಗೆ ಅಷ್ಟೇ ಮೊತ್ತದ ದೇಣಿಗೆ ನೀಡಿರಬೇಕು.
ಹೀಗೆ ಒಂದು ರಜತ ಕಲಶಾಭಿಷೇಕದ ಸೇವಾದಾರರಾಗುವವರು ನೇರವಾಗಿ ತಮ್ಮ ಇಚ್ಛೆಯ ಆಭರಣ ಮಳಿಗೆಗಳಿಂದ ಕಲಶವನ್ನು ಖರೀದಿಸಿ ಸೂಚಿತ ಸೇವಾ ದಿನಾಂಕದ ಹಿಂದಿನ ದಿನ ಮಂದಿರಕ್ಕೆ ತಲುಪಿಸಿ, ಆ ದಿನಾಂಕದಂದು ಐತಿಹಾಸಿಕ ರಾಮ ಅಭಿಷೇಕದ ಕಲಶವನ್ನು ಪ್ರಸಾದ ರೂಪವಾಗಿ ಪಡೆಯ ಬಹುದಾಗಿದೆ. ಪ್ರಸ್ತುತ ಕೆಲವು ಕಲಶಗಳನ್ನು ಉಡುಪಿಯ ಪ್ರಸಿದ್ಧ ಗುಜ್ಜಾಡಿ ಸ್ವರ್ಣ ಜ್ಯುವೆಲ್ಲರ್ಸ್ ನವರು ಕೆಲವು ಸೇವಾದಾರರ ಅಪೇಕ್ಷೆಯಂತೆ ಸಿದ್ಧಪಡಿಸಿದ್ದಾರೆ. ತಲಾ ಒಂದು ಕೆ.ಜಿ ತೂಕವಿರುವ ಆಕರ್ಷಕ ವಿನ್ಯಾಸವಿರುವ ಈ ಕಲಶಗಳನ್ನು ಸದ್ಯವೇ ಅಯೋಧ್ಯೆಗೆ ಕಳುಹಿಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


